ಬೆಂಗಳೂರು: ನ್ಯಾಯಕ್ಕಾಗಿ ಕಾಯುವುದಲ್ಲ, ‘ನ್ಯಾಯ ಈಗಲೇ ಬೇಕು’ ಎಂದು ನಾವು ಆಗ್ರಹಿಸಬೇಕಿದೆ. ಧರ್ಮಸ್ಥಳದಲ್ಲಿ ನಡೆದ ದೌರ್ಜನ್ಯಗಳು ಕೇವಲ ಒಂದಿಬ್ಬರು ವ್ಯಕ್ತಿಗಳ ವಿಷಯವಲ್ಲ, ಇದು ಇಡೀ ವ್ಯವಸ್ಥೆಯ ವಿರುದ್ಧದ ಹೋರಾಟವಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರ ನಿಕಟವರ್ತಿ ಕ್ಯಾಪ್ಟನ್ ಲಕ್ಷ್ಮಿ ಸೆಹಗಲ್ ಅವರ ಪುತ್ರಿ ಮತ್ತು ಹಿರಿಯ ಕಮ್ಯುನಿಸ್ಟ್ ನಾಯಕಿ ಸುಭಾಷಿಣಿ ಅಲಿ ಅವರು ಘಂಟಾಘೋಷವಾಗಿ ಹೇಳಿದ್ದಾರೆ.
ಇಂದು (ಸೆಪ್ಟೆಂಬರ್ 25) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ಆಯೋಜಿಸಿದ್ದ ‘ನ್ಯಾಯ ಸಮಾವೇಶ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವೇದವಲ್ಲಿ, ಪದ್ಮಲತಾ ಮತ್ತು ಸೌಜನ್ಯಾ ಅವರ ಮೇಲಿನ ಅತ್ಯಾಚಾರ ಮತ್ತು ಹತ್ಯೆಗಳಂತಹ ಬರ್ಬರ ಕೃತ್ಯಗಳಿಗೆ ನ್ಯಾಯ ಒದಗಿಸಬೇಕು ಹಾಗೂ ನೂರಾರು ಕುಟುಂಬಗಳು ನಲುಗಿರುವ ಈ ಪ್ರದೇಶದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಹಾಸನದ ಹೋರಾಟವೇ ಸ್ಪೂರ್ತಿ
ಹಾಸನದಲ್ಲಿ ನಡೆದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣದ ವಿರುದ್ಧ ನಡೆದ ಹೋರಾಟವನ್ನು ಸ್ಮರಿಸಿದ ಸುಭಾಷಿಣಿ ಅಲಿ, “ಆಗ ನೂರಾರು ಸಾವಿರಾರು ಜನ ನಾವು ನ್ಯಾಯಕ್ಕಾಗಿ ಹೋರಾಟ ಮಾಡಿದೆವು. ಆಗ ನಮ್ಮ ಧ್ವನಿ ಜಾಮೀನು ಕೊಡುವುದಲ್ಲ, ಆತನಿಗೆ ಜೈಲು ಶಿಕ್ಷೆಯಾಗಬೇಕು, ಕೇವಲ ಜೈಲು ಮಾತ್ರವಲ್ಲ, ಜೀವಿತಾವಧಿಯ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದೆವು. ಪ್ರಜಾಸತ್ತಾತ್ಮಕ ಶಕ್ತಿಗಳ ಹೋರಾಟದ ಫಲವಾಗಿ ಒಂದು ರೀತಿಯಲ್ಲಿ ನ್ಯಾಯವನ್ನು ಪಡೆದಿದ್ದೇವೆ. ಅದೇ ಸ್ಫೂರ್ತಿಯನ್ನು ನಾವು ಧರ್ಮಸ್ಥಳದ ವಿಚಾರಕ್ಕೂ ಮುಂದುವರಿಸಬೇಕಿದೆ,” ಎಂದು ಕರೆ ನೀಡಿದರು.
ಹಾಸನದಲ್ಲಿ ಒಬ್ಬ ವ್ಯಕ್ತಿಯ ವಿಚಾರವಾಗಿ ಹೋರಾಟ ಮಾಡಿದ್ದರೆ, ಧರ್ಮಸ್ಥಳದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧದ ಈ ಹೋರಾಟವು ಇಡೀ ವ್ಯವಸ್ಥೆಯನ್ನೇ ಪ್ರಶ್ನಿಸುವ ವಿಚಾರವಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಮನುವಾದದ ವಿರುದ್ಧ, ಸಮಾನತೆಗಾಗಿ ಹೋರಾಟ
ಕಳೆದ ಐದಾರು ದಶಕಗಳಿಂದ ಧರ್ಮಸ್ಥಳದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ಬೆಳಕು ಚೆಲ್ಲಿದ ಅಲಿ, ಆ ಪ್ರದೇಶದಲ್ಲಿ ದೊಡ್ಡ ರೀತಿಯಲ್ಲಿ ಮನುವಾದವನ್ನು ಅನುಷ್ಠಾನ ಮಾಡಲು ಹೊರಟಿದ್ದಾರೆ. “ಈ ಮನುವಾದದ ವಿರುದ್ಧ ನಾವು ಸಮಾನತೆಗಾಗಿ ಮತ್ತು ನ್ಯಾಯಕ್ಕಾಗಿ ಹೋರಾಟ ಮಾಡಬೇಕಿದೆ,” ಎಂದರು.
- ಭೂ ಕಬಳಿಕೆ ಮತ್ತು ಶೋಷಣೆ: “ಹಣ ಬಲ ಮತ್ತು ಧರ್ಮದ ಹೆಸರಿನಲ್ಲಿ ದಲಿತರ ಭೂಮಿಯನ್ನು ಕಿತ್ತುಕೊಳ್ಳುತ್ತಿದ್ದಾರೆ. ಮಹಿಳೆಯರ ಮೇಲೆ, ನಮ್ಮ ಸಹೋದರಿಯರ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡುತ್ತಾ ಇರುವ ವಿಚಾರಕ್ಕಾಗಿ ನಾವು ನ್ಯಾಯ ಕೇಳುತ್ತಿದ್ದೇವೆ. ಅವರು ಶಿಕ್ಷಣವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಮಹಿಳೆಯರನ್ನು ಶೋಷಣೆ ಮಾಡುತ್ತಿದ್ದಾರೆ,” ಎಂದು ಆರೋಪಿಸಿದರು.
- ಧ್ವನಿ ಅಡಗಿಸುವ ಯತ್ನ: “ಯಾರಾದರೂ ನ್ಯಾಯಕ್ಕಾಗಿ ಧ್ವನಿ ಎತ್ತಿದರೆ ಅವರ ಧ್ವನಿ ಅಡಗಿಸುವುದು ಮಾತ್ರವಲ್ಲದೆ, ಅವರನ್ನೇ ನಿರ್ನಾಮ ಮಾಡಲಾಗುತ್ತಿದೆ. ಇದರ ವಿರುದ್ಧ ಕಮ್ಯುನಿಸ್ಟರು ಸೇರಿದಂತೆ ಹಲವಾರು ಶಕ್ತಿಗಳು ದೊಡ್ಡ ರೀತಿಯಲ್ಲಿ ಹೋರಾಟ ಮಾಡುತ್ತಿರುವುದು ಹೆಮ್ಮೆಯ ಸಂಗತಿ,” ಎಂದು ಹೇಳಿದರು.
ಪದ್ಮಲತಾ ಅವರು ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದಾಗ ಅವರನ್ನು ಅಪಹರಿಸಿ, ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆ. ಅದೇ ರೀತಿ ಸೌಜನ್ಯಾ ಎಂಬ ಪುಟ್ಟ ಹುಡುಗಿಯನ್ನೂ ಅಪಹರಿಸಿ, ಅತ್ಯಾಚಾರ ಮತ್ತು ಹತ್ಯೆ ಮಾಡಿದ್ದಾರೆ. ಮಗಳ ಮೇಲಿನ ಕಲೆಗಳನ್ನು ಗುರುತಿಸಿ, ಅಂದಿನಿಂದ ಕುಗ್ಗಿ ಹೋಗಿರುವ ಸೌಜನ್ಯಾಳ ತಾಯಿ ಕುಸುಮಾವತಿ ಅವರು ದೃತಿಗೆಡದೆ ನಮ್ಮ ಜೊತೆ ಹೋರಾಟಕ್ಕೆ ನಿಂತಿದ್ದಾರೆ. “ಧರ್ಮಸ್ಥಳದ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಹೇಳಬೇಕಿರುವುದು, ಅಲ್ಲಿ ಅಧರ್ಮ ನಡೆಯುವುದಿಲ್ಲ ಮತ್ತು ನಡೆಯುವುದಕ್ಕೆ ಬಿಡುವುದಿಲ್ಲ,” ಎಂದು ಅಲಿ ಗುಡುಗಿದರು.
ಮನುವಾದದ ವಿಸ್ತರಣೆ ಮತ್ತು ದೇಶದ್ರೋಹಿಗಳ ಹಿನ್ನೆಲೆ
ಕೆಲವರು ಇದು 50-60 ವರ್ಷಗಳ ಹಿಂದಿನ ವಿಚಾರ ಎಂದು ಈಗ ಏಕೆ ಪ್ರಸ್ತಾಪ ಎಂದು ಪ್ರಶ್ನಿಸಬಹುದು. ಆದರೆ, ಈಗ ಅಲ್ಲಿ ನಡೆಯುತ್ತಿರುವುದನ್ನು ಇಡೀ ದೇಶಕ್ಕೆ ವಿಸ್ತರಿಸಲಿಕ್ಕೆ ಮನುವಾದಿಗಳು ಹೊರಟಿದ್ದಾರೆ. “ತುಳಿತಕ್ಕೊಳಗಾದ ಜನ, ಹಿಂದುಳಿದ ಜನ, ಮಹಿಳೆಯರು ಯಾರಿಗೂ ಹಕ್ಕು ಪ್ರಾಪ್ತಿಯಾಗಬಾರದು ಎಂದು ಅವರು ಪ್ರಯತ್ನಿಸುತ್ತಿದ್ದಾರೆ. ದಲಿತರು, ಹಿಂದುಳಿದವರು, ಮಹಿಳೆಯರಿಗೆ ಯಾವುದೇ ರೀತಿಯ ಹಕ್ಕು, ಯಾವುದೇ ಭೂಮಿಯ ಹಕ್ಕು ಇರಬಾರದು ಎಂಬ ಮನುವಾದವನ್ನು ಧರ್ಮಸ್ಥಳದಲ್ಲಿ ಮತ್ತು ಅದನ್ನು ಪೋಷಿಸುತ್ತಿರುವ ಆರ್‌ಎಸ್‌ಎಸ್, ಆರ್‌ಎಸ್‌ಎಸ್ ಪೋಷಿತ ರಾಜಕೀಯ ಪಕ್ಷಗಳು ಮಾಡುತ್ತಿವೆ,” ಎಂದು ನೇರವಾಗಿ ದೂರಿದರು.
“ಇವತ್ತು ಆ ದೇವಸ್ಥಾನದ ಒಡೆತನವನ್ನು ಇಟ್ಟುಕೊಂಡಿದ್ದಾರೆ. ಅಲ್ಲಿರುವ ಸಾವಿರಾರು ಎಕರೆಯ ಭೂಮಿಯ ಒಡೆತನವನ್ನು ಇಟ್ಟುಕೊಂಡಿದ್ದಾರೆ. ಯಾರು ಇವರು ಎಂದು ಹೇಳಿದರೆ, ಇವರು ದೇಶದ್ರೋಹಿಗಳಾಗಿದ್ದರು, ಬ್ರಿಟಿಷರಿಗೆ ಅಡಿಯಾಳು ಆಗಿದ್ದರು,” ಎಂದು ಆರೋಪಿಸಿದ ಅವರು, ಸ್ವಾತಂತ್ರ್ಯದ ನಂತರವೂ ಅದೇ ಪಾಳೆಗಾರಿಕೆ ಮನೋಭಾವವನ್ನು ಇಟ್ಟುಕೊಂಡು ಶಿಕ್ಷಣ ಮತ್ತು ಭೂಮಿಯ ಒಡೆತನದಲ್ಲಿ ಹಿಡಿತ ಇಟ್ಟುಕೊಂಡು ಯಾರೇ ಸೊಲ್ಲೆತ್ತಿದರೂ ಅವರನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

ನ್ಯಾಯಕ್ಕಾಗಿ ಒಟ್ಟಾರೆ ವ್ಯವಸ್ಥೆಯ ತನಿಖೆ ಅಗತ್ಯ
ಭೂಮಿ ಹಕ್ಕಿಗಾಗಿ ಹೋರಾಡಿದ ರೈತರಿಗೆ ಇಂದಿಗೂ ಭೂಮಿಯ ಹಕ್ಕು ಸಿಕ್ಕಿಲ್ಲ. ಖಾಸಗಿಯಾಗಿ ಹಲವು ರೀತಿಯ ದಾಖಲೆಗಳು, ಒಡವೆಗಳನ್ನು ಸಂಗ್ರಹ ಮಾಡುತ್ತಾರೆ. ಇದನ್ನು ಪ್ರಶ್ನೆ ಮಾಡಿದರೆ ಕೊಲೆಯ ಬೆದರಿಕೆ ಹಾಕಲಾಗುತ್ತದೆ ಮತ್ತು ಸಂದರ್ಭ ಬಂದರೆ ಹತ್ಯೆಯನ್ನು ಮಾಡುತ್ತಾರೆ. ಇಂತಹ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಬೇಕಿದೆ. ಈ ಇಡೀ ಧರ್ಮಸ್ಥಳದ ನಡೆಯನ್ನು ಭಾರತಕ್ಕೆ ಹಬ್ಬಿಸಬೇಕು ಎಂಬುದು ಇವರ ನಿಲುವಾಗಿದೆ ಎಂದು ಅಲಿ ಆತಂಕ ವ್ಯಕ್ತಪಡಿಸಿದರು.
“ಕೇವಲ ಗೌರಿ ಲಂಕೇಶ್, ಎಂ.ಎಂ.ಕಲ್ಬುರ್ಗಿಯಂತಹ ವಿಚಾರವಾದಿಗಳನ್ನು ಯಾಕೆ ಕೊಂದರು? ಅವರ ವಿಚಾರಧಾರೆಗಳು ಮನುವಾದಕ್ಕೆ ಸಹಮತವಿರಲಿಲ್ಲ ಎಂಬುದು ಇವರ ಹತ್ಯೆಗೆ ಕಾರಣವಾಗಿದೆ,” ಎಂದರು.
400ಕ್ಕೂ ಹೆಚ್ಚು ಅಸಹಜ ಸಾವುಗಳ ಬಗ್ಗೆ ತನಿಖೆ ಅಗತ್ಯ
“ಕೇವಲ ಈ ಮೂರು ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮಾತ್ರವಲ್ಲ, ಇದಕ್ಕೂ ನ್ಯಾಯ ಸಿಗಬೇಕು. ಅದೇ ರೀತಿ 400ಕ್ಕೂ ಹೆಚ್ಚು ಅಸಹಜವಾದ ಸಾವುಗಳು ಈ ಪ್ರದೇಶದಲ್ಲಿ ನಡೆದಿವೆ. ಮಹಿಳೆಯರ ಮೇಲೆ ಅತ್ಯಾಚಾರಗಳು ಏನಾಗಿವೆಯೋ, ಮಹಿಳೆಯರು ಏನೂ ಕಾಣೆಯಾಗಿದ್ದಾರೆ ಇವೆಲ್ಲದರ ಬಗ್ಗೆ ಕೂಡ ನ್ಯಾಯ ಬೇಕಿದೆ. ಭೂಮಿಗಾಗಿ ಇನ್ಯಾವುದೋ ಕಾರಣಕ್ಕಾಗಿ ಮಾತ್ರವಲ್ಲ, ಅಲ್ಲಿ ಭೂಮಿಯನ್ನು ಅಗೆಯಬೇಕಾದರೆ 4 ವರ್ಷದ ಒಂದು ಮಗುವಿನ ಮೃತದೇಹವು ಸಿಕ್ಕಿದೆ. ಅಲ್ಲಿ ಸಣ್ಣ ಸಣ್ಣ ದೀಪಗಳು ಉರಿದಿವೆ. ಇಲ್ಲಿ ಕೊಲೆ, ಅಪಹರಣಗಳ ಜೊತೆಗೆ ಮಾನವ ಬಲಿಗಳು ಕೂಡ ನಡೆಯುತ್ತಾ ಇವೆ. ಹಾಗಾಗಿ ಎಲ್ಲ ವಿಚಾರದಲ್ಲಿಯೂ ಕೂಡ ನಾವು ನ್ಯಾಯಕ್ಕಾಗಿ ಹೋರಾಟ ಮಾಡಬೇಕಿದೆ,” ಎಂದು ಅವರು ಆತಂಕಕಾರಿ ಸಂಗತಿಗಳನ್ನು ಬಹಿರಂಗಪಡಿಸಿದರು.
ಪೌರ ಕಾರ್ಮಿಕರ ಶೋಷಣೆ ಮತ್ತು ಸತ್ಯ ಹೇಳಲು ಬಂದವರ ಮೇಲೆ ದೂರು ದಾಖಲಿಸುವ ಬಗ್ಗೆಯೂ ಅವರು ಧ್ವನಿ ಎತ್ತಿದರು.
ಎಚ್ಚರಿಕೆ: ಇದು ಕೆಂಪು ಸಾಗರ
ಪ್ರಸ್ತುತ ಧರ್ಮಸ್ಥಳದ ವಿಚಾರವಾಗಿ ಎಸ್‌ಐಟಿ ತಂಡ ರಚನೆಯಾಗಿದೆ. ಆದರೆ, ಒಬ್ಬರು ಮುಂದಕ್ಕೆ ಎಳೆದರೆ, ಇನ್ನೊಬ್ಬರು ಹಿಂದಕ್ಕೆ ಎಳೆಯುತ್ತಿದ್ದಾರೆ. ಎಸ್‌ಐಟಿಯಲ್ಲಿ ಸರಿಯಾದ, ಸಮಗ್ರವಾದ, ನ್ಯಾಯಸಮ್ಮತವಾದ ತನಿಖೆ ನಡೆಯಬೇಕು ಎಂಬುದು ನಮ್ಮ ಆಗ್ರಹ ಎಂದರು.
ಸರ್ಕಾರದಲ್ಲಿ ನಡೆಯುತ್ತಿರುವ ಹಗ್ಗಜಗ್ಗಾಟವನ್ನು ಉಲ್ಲೇಖಿಸಿ, “ಕೆಲವೊಬ್ಬರು ಧರ್ಮಸ್ಥಳ ಒಳ್ಳೆಯದು ಎನ್ನುತ್ತಿದ್ದಾರೆ, ಕೆಲವರು ಕೆಟ್ಟದ್ದು ಎನ್ನುತ್ತಿದ್ದಾರೆ. ಇದು ಒಂದು ರೀತಿ ಯೆಲ್ಲೋ ಅಲರ್ಟ್ ಅಲ್ಲ ಅಥವಾ ಸಣ್ಣ ರೀತಿಯಲ್ಲಿ ಮಳೆ ಬಂದು ಹೋಗುವ ರೀತಿಯದೂ ಅಲ್ಲ. ಇದು ಒಂದು ದೊಡ್ಡ ಪ್ರವಾಹ ರೀತಿಯಲ್ಲಿ ಬರುವಂತಹ ಕೆಂಪು ಸಾಗರ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ಕೊಡುವುದಕ್ಕೆ ಬಯಸುತ್ತಿದ್ದೇನೆ,” ಎಂದು ಸುಭಾಷಿಣಿ ಅಲಿಯವರು ಖಡಕ್ ಎಚ್ಚರಿಕೆ ನೀಡಿದರು.
“ಇಂದು ನಾವು ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕವಾದಂತಹ ಸಂವಿಧಾನವನ್ನು ಕಾಪಾಡಿಕೊಳ್ಳಬೇಕಿದೆ. ಮನುವಾದ ಸೋಲಬೇಕಾಗಿದೆ,” ಎಂದು ಕರೆ ನೀಡಿದರು. ಕೊನೆಯಲ್ಲಿ, “ನೀವು ಎಲ್ಲಿಯೇ ಕರೆಯಿರಿ, ಯಾವಾಗಲೇ ಕರೆಯಿರಿ, ನಾವೆಲ್ಲೆ ಇದ್ದರೂ ಕೂಡ ನಿಮ್ಮ ಹೋರಾಟದ ಜೊತೆಗೆ ನಾವು ಬರುತ್ತೇವೆ. ಕೆಂಬಾವುಟ ಇರಲಿ, ಇಲ್ಲದೆ ಇರಲಿ, ಯಾರೆಲ್ಲಾ ನ್ಯಾಯಕ್ಕಾಗಿ ಹೋರಾಟ ಮಾಡುತ್ತಾರೋ ಅವರ ಜೊತೆಗೆ ಇರುತ್ತೇವೆ,” ಎಂದು ಸುಭಾಷಿಣಿ ಅಲಿ ಅವರು ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ಈ ಸಮಾವೇಶವು ಧರ್ಮಸ್ಥಳದ ದೌರ್ಜನ್ಯ ವಿರೋಧಿ ಹೋರಾಟಕ್ಕೆ ಮತ್ತಷ್ಟು ಬಲ ತುಂಬಿದ್ದು, ನ್ಯಾಯ ಸಿಗುವವರೆಗೂ ಹೋರಾಟವನ್ನು ಮುಂದುವರೆಸುವ ಸಂಕಲ್ಪವನ್ನು ಪ್ರದರ್ಶಿಸಿದೆ.
ಕಾರ್ಯಕ್ರಮದಲ್ಲಿ ಪ್ರೊ. ಎಸ್ ಜಿ ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಮೂಡ್ನಾಕೂಡ ಚಿನ್ನಸ್ವಾಮಿ, ಡಾ. ಕೆ ಪ್ರಕಾಶ್, ಎಸ್ ಬಾಲನ್, ಸಿದ್ದನಗೌಡ ಪಾಟೀಲ್, ವೇದವಲ್ಲಿ ಮತ್ತು ಪದ್ಮಲತಾ ಕುಟುಂಬ ಸದಸ್ಯರು ಸೇರಿದಂತೆ ನೂರಾರು ಹೋರಾಟಗಾರರು ಭಾಗಿಯಾಗಿದ್ದರು. ಸಾವಿರಾರು ಜನರು ಬೆಂಬಲ ಸೂಚಿಸಿ ಸಮಾವೇಶಕ್ಕೆ ಆಗಮಿಸಿದ್ದರು.
ವರದಿ: ಮಹೇಶ್ ಕಣಸೋಗಿ


