ಸ್ವತಂತ್ರ ಭಾರತದ ಮಾಜಿ ರಾಜಪರಿವಾರಗಳು ‘ಜನತಾಂತ್ರಿಕ’ ರಾಜಕಾರಣದಲ್ಲೂ ರಾಜ್ಯವಾಳುತ್ತ ಬಂದಿವೆ. ಅಂತಹ ಪರಿವಾರಗಳ ಪೈಕಿ ಮಧ್ಯಪ್ರದೇಶದ ಗ್ವಾಲಿಯರ್-ಗುಣಾದ ಸಿಂಧ್ಯಾ ಪರಿವಾರ ಎದ್ದು ಕಾಣುವಂತಹುದು. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಕಾನ್ಹರಖೇಡ ಗ್ರಾಮದ ಪಾಟೀಲ ಜನಕೋಜೀರಾವ್ ವಂಶಜರು 27 ಬಾರಿ ಸಂಸದರಾಗಿದ್ದಾರೆ. ಒಂಬತ್ತು ಬಾರಿ ವಿಧಾನಸಭೆಗಳಿಗೆ ಆರಿಸಿಬಂದಿದ್ದಾರೆ. ರಾಜಮಾತಾ ವಿಜಯರಾಜೇ ಸಿಂಧ್ಯಾ ಅವರಿಂದ ಆಕೆಯ ಮೊಮ್ಮಗ ಜ್ಯೋತಿರಾದಿತ್ಯ ಸಿಂಧ್ಯ ಅವರ ತನಕ ಈ ಕುಟುಂಬದ ರಾಜಕೀಯ ಮಹತ್ವಾಕಾಂಕ್ಷೆಗಳು ರಾಜಕೀಯ ಪಕ್ಷಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತ ಬಂದಿವೆ.
ರಾಜಮಾತೆ ವಿಜಯರಾಜೇ ಸಿಂಧ್ಯ ಅವರು 1957ರಲ್ಲಿ ಗುಣಾ ಮತ್ತು 1962ರಲ್ಲಿ ಗ್ವಾಲಿಯರ್ ನಿಂದ ಕಾಂಗ್ರೆಸ್ ಸಂಸದರಾಗಿ ಆರಿಸಿ ಬಂದಿದ್ದರು. 1967ರ ಲೋಕಸಭಾ ಉಪಚುನಾವಣೆಯಲ್ಲಿ ಪಕ್ಷೇತರರಾಗಿ ಗುಣಾದಿಂದ ಗೆದ್ದರು. 1971ರಲ್ಲಿ ಜನಸಂಘ, 1989,1991, 1996, 1998ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಆರಿಸಿ ಬಂದರು.
ಜ್ಯೋತಿರಾದಿತ್ಯ ಅವರ ತಂದೆ ಮಾಧವರಾವ್ ಸಿಂಧ್ಯ 1971ರಲ್ಲಿ ಗುಣಾದಿಂದ ಜನಸಂಘದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು, 1977ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ, 1980, 1984, 1989, 1991ರಲ್ಲಿ ಕಾಂಗ್ರೆಸ್ ಪಕ್ಷದಿಂದ ಸಂಸದರಾದರು. 1996ರಲ್ಲಿ ಮಧ್ಯಪ್ರದೇಶ ವಿಕಾಸ ಕಾಂಗ್ರೆಸ್ ಸ್ಥಾಪಿಸಿ ಆಯ್ಕೆ ಹೊಂದಿದರು. 1998 ಮತ್ತು 1999ರಲ್ಲಿ ಪುನಃ ಕಾಂಗ್ರೆಸ್ ನಿಂದ ಆಯ್ಕೆ ಹೊಂದಿದರು.
ವಸುಂಧರಾ ರಾಜೇ ಅವರು ಐದು ಬಾರಿ ಸಂಸದೆ ಮತ್ತು ಐದು ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವೆಯಾಗಿದ್ದೇ ಅಲ್ಲದೆ ಎರಡು ಬಾರಿ ರಾಜಸ್ತಾನದ ಮುಖ್ಯಮಂತ್ರಿಯಾಗಿದ್ದರು.
ಯಶೋಧರಾ ರಾಜೇ ಐದು ಬಾರಿ ಶಾಸಕಿ ಮತ್ತು ಒಮ್ಮೆ ಸಂಸದೆಯಾಗಿದ್ದರು. ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ನಾಲ್ಕು ಬಾರಿ ಸಂಸದರು ಮತ್ತು ಎರಡು ಬಾರಿ ಕೇಂದ್ರ ಮಂತ್ರಿಯಾಗಿದ್ದರು.
ಹದಿನೆಂಟು ವರ್ಷಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ಸಿನಲ್ಲಿದ್ದ ಜ್ಯೋತಿರಾದಿತ್ಯ ಬಿಜೆಪಿಯತ್ತ ನಡೆದಿದ್ದಾರೆ. ಸಿಂಧ್ಯಾ ಕುಟುಂಬದ ಅಧಿಕಾರದಾಹದ ಹೊಸ ಅಧ್ಯಾಯದ ಪುಟಗಳು ತೆರೆಯತೊಡಗಿವೆ. ಜ್ಯೋತಿರಾದಿತ್ಯ ಅವರ ಅತ್ತೆಯರಾದ (ತಂದೆ ಮಾಧವರಾವ್ ಸಿಂಧ್ಯಾ ಅವರ ಸೋದರಿಯರು) ವಸುಂಧರಾರಾಜೇ ಸಿಂಧ್ಯ ಮತ್ತು ಯಶೋಧರರಾಜೇ ಸಿಂಧ್ಯಾ ಈಗಾಗಲೇ ಬಿಜೆಪಿಯಲ್ಲಿ ಬೇರು ಬಿಟ್ಟ ತಲೆಯಾಳುಗಳು. ಜ್ಯೋತಿರಾದಿತ್ಯ ಅವರ ಹಾಲಿ ನಡೆಯನ್ನು ಇವರಿಬ್ಬರೂ ಸ್ವಾಗತಿಸಿದ್ದಾರೆ. ಜ್ಯೋತಿರಾದಿತ್ಯ ತವರಿಗೆ ಮರಳುತ್ತಿದ್ದಾನೆ ಎಂಬ ಅವರ ಮಾತು ನಿಜ.
ಜ್ಯೋತಿರಾದಿತ್ಯ ಅವರ ಅಜ್ಜಿ ರಾಜಮಾತಾ ವಿಜಯರಾಜೇ ಸಿಂಧ್ಯ ಅವರು ಹಿಂದೂ ಮಹಾಸಭಾದಲ್ಲಿ ಎತ್ತರದ ಸ್ಥಾನದಲ್ಲಿದ್ದವರು. ಆನಂತರ ಜನಸಂಘಕ್ಕೆ ಸೇರಿದ್ದರು. ಆನಂತರ ಬಿಜೆಪಿಯ ಸ್ಥಾಪಕ ಸದಸ್ಯರಷ್ಟೇ ಅಲ್ಲದೆ ಈ ಪಕ್ಷದ ಅಧ್ಯಕ್ಷರೂ ಆಗಿದ್ದವರು. ತಂದೆ ಮಾಧವರಾವ್ ಸಿಂಧ್ಯಾ ಕೂಡ 1972ರಲ್ಲಿ ಜನಸಂಘದಿಂದ ಲೋಕಸಭೆಗೆ ಆರಿಸಿ ಬಂದಿದ್ದವರು. ಇಂದಿರಾಗಾಂಧೀ ಅವರ ಕೃಪೆಯಿಂದಾಗಿ ತುರ್ತುಪರಿಸ್ಥಿತಿಯಲ್ಲಿ ಜೈಲು ತಪ್ಪಿಸಿಕೊಂಡಿದ್ದರು. 1977ರಲ್ಲಿ ಪಕ್ಷೇತರ ಸಂಸದ. 1980ರಲ್ಲಿ ಕಾಂಗ್ರೆಸ್ ಸೇರಿ 1996ರಲ್ಲಿ ಪ್ರಾದೇಶಿಕ ಪಕ್ಷ ಕಟ್ಟಿ ಪುನಃ ಕಾಂಗ್ರೆಸ್ ಸೇರಿದ್ದವರು. 2001ರಲ್ಲಿ ಅಪಘಾತದಲ್ಲಿ ನಿಧನರಾಗುವ ತನಕ ಕಾಂಗ್ರೆಸ್ಸಿನಲ್ಲೇ ಇದ್ದರು.
ಮಧ್ಯಪ್ರದೇಶದ ರಾಜಕಾರಣವನ್ನೇ ಗಣನೆಗೆ ತೆಗೆದುಕೊಳ್ಳುವುದಾದರೆ ಸಿಂಧ್ಯಾ ಕುಟುಂಬ 53 ವರ್ಷದ ಹಳೆಯ ಇತಿಹಾಸದ ದಾಳವನ್ನು ಪುನಃ ಉರುಳಿಸಿದೆ. 1967ರಲ್ಲಿ ವಿಜಯರಾಜೇ ಸಿಂಧ್ಯಾ ಅವರ ಕಾರಣ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಬೇಕಾಗಿತ್ತು. ಇದೀಗ ಅವರ ಮೊಮ್ಮಗನ ಕಾಂಗ್ರೆಸ್ ಸರ್ಕಾರವನ್ನು ಪತನದ ಅಂಚಿಗೆ ನೂಕಿದ್ದಾರೆ.
2018ರ ಡಿಸೆಂಬರ್ ನಲ್ಲಿ ಮಧ್ಯಪ್ರದೇಶದ ಮತದಾರರು ಅತಂತ್ರ ವಿಧಾನಸಭೆಯನ್ನು ಆಯ್ಕೆ ಮಾಡಿಕೊಂಡಿದ್ದರು. ಬಹುಮತದ ಅಂಚಿಗೆ ಬಂದಿದ್ದ ಕಾಂಗ್ರೆಸ್ ಪಕ್ಷ ಬಿ.ಎಸ್.ಪಿ., ಪಕ್ಷೇತರರು ಮತ್ತು ಎಸ್.ಪಿ. ಬೆಂಬಲದೊಂದಿಗೆ ಸರ್ಕಾರ ರಚಿಸಿದಾಗ ಜ್ಯೋತಿರಾದಿತ್ಯ ಮುಖ್ಯಮಂತ್ರಿ ಸ್ಥಾನಕ್ಕೆ ಹಾತೊರೆದಿದ್ದರು. ಆದರೆ ಕಾಂಗ್ರೆಸ್ ಪಕ್ಷ ಹಳೆಯ ಪಂಟ ಕಮಲನಾಥ್ ಅವರಿಗೆ ಮಣೆ ಹಾಕಿತು. ಆಗಲೇ ಮುನಿದಿದ್ದ ಜ್ಯೋತಿರಾದಿತ್ಯ ಅವರಿಗೆ ಬಿಜೆಪಿ ಬಲೆ ಬೀಸಿತ್ತು. ಕಮಲನಾಥ್ ಮತ್ತು ಸಿಂಧ್ಯ ನಡುವಣ ಕಂದಕ ಹಿರಿದಾಗುತ್ತಲೇ ಹೋಯಿತು. ಸೋನಿಯಾಗಾಂಧೀ-ರಾಹುಲ್ ಗಾಂಧೀ- ಪ್ರಿಯಾಂಕಾ ಗಾಂಧೀ ಈ ಕುರಿತು ತಲೆ ಕೆಡಿಸಿಕೊಳ್ಳಲಿಲ್ಲ. ಅದರ ಫಲಿತಾಂಶ ಇಂದು ಅನಾವರಣಗೊಂಡಿದೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಮೋದಿ ಸರ್ಕಾರದ ಕ್ರಮವನ್ನು ಜ್ಯೋತಿರಾದಿತ್ಯ ಸ್ವಾಗತಿಸಿದ್ದರು. ಹೈದರಾಬಾದಿನಲ್ಲಿ ಅತ್ಯಾಚಾರದ ಆರೋಪಿಗಳನ್ನು ಪೊಲೀಸರು ಎನ್ಕೌಂಟರ್ ಮಾಡಿ ಕೊಂದ ನಡೆಯನ್ನೂ ಅವರು ಬೆಂಬಲಿಸಿದ್ದರು. ಈ ನಡುವೆ ಸಾಮಾಜಿಕ ಜಾಲತಾಣದ ಅವರ ಅಕೌಂಟುಗಳಿಂದ ಕಾಂಗ್ರೆಸ್ ಬಾವುಟ ಕಾಣೆಯಾಗಿತ್ತು. ಈ ಎಲ್ಲ ಸುಳಿವು ಸಂಕೇತಗಳನ್ನು ಕಾಂಗ್ರೆಸ್ ಓದಲಾರದಾಯಿತು.
ಗ್ವಾಲಿಯರ್ ಸಂಸ್ಥಾನವನ್ನು ಆಳಿದ ಸಿಂಧ್ಯ ಪೂರ್ವಜರು ಬ್ರಿಟಿಷರೊಂದಿಗೆ ಗೆಳೆತನ ಹೊಂದಿದ್ದವರು. ಅವರಿಂದ ಬಿರುದು ಬಾವಲಿಗಳನ್ನು ಸ್ವೀಕರಿಸಿದ್ದವರು. 1857ರಲ್ಲಿ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮತ್ತು ಬ್ರಿಟಿಷರ ನಡುವೆ ನಡೆದ ಯುದ್ಧದಲ್ಲಿ ಲಕ್ಷ್ಮೀಬಾಯಿಯನ್ನು ಬೆಂಬಲಿಸಲಿಲ್ಲ ಎಂಬ ಆರೋಪ ಹೊತ್ತವರು. ಸಂಕಟದಲ್ಲಿದ್ದ ಲಕ್ಷ್ಮೀಬಾಯಿಗೆ ನಿಶ್ಯಕ್ತ ಕುದುರೆ ನೀಡಿ ಆಕೆಯ ಸಾವಿಗೆ ಕಾರಣನಾಗಿದ್ದ ಗ್ವಾಲಿಯರ್ ಮಹಾರಾಜ ಎಂಬ ಆರೋಪವನ್ನು ಬಿಜೆಪಿಯೇ ಮಾಡಿರುವುದುಂಟು.
ಜ್ಯೋತಿರಾದಿತ್ಯ ಸಿಂಧ್ಯ ಅವರನ್ನು ಬಿಜೆಪಿ ಮುಂಬರುವ ಕೆಲ ಕಾಲ ಹೆಗಲ ಮೇಲೆ ಹೊತ್ತು ಮೆರೆಸಿ ಡೋಲು ಬಾರಿಸೀತು. ಇತ್ತ ಕಾಂಗ್ರೆಸ್ಸು ಬಿಜೆಪಿ ಮಾಡಿದ್ದ ಆಪಾದನೆಯನ್ನೇ ಮಾಡಿ ರಾಣಿ ಲಕ್ಷ್ಮೀಬಾಯಿಯ ಬೆನ್ನಿಗೆ ಚೂರಿ ಹಾಕಿದ ವಂಶಸ್ಥನಿಂದ ಇನ್ನೇನು ನಿರೀಕ್ಷಿಸಲಾದೀತು ಎಂದು ಬಾಯಿ ಬಡಿದುಕೊಳ್ಳಲಿದೆ. ಎರಡೂ ಪಕ್ಷಗಳು ಆಷಾಢಭೂತಿಗಳು.


