Homeಮುಖಪುಟಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯ ಸಾಹಿತ್ಯ ಮತ್ತು ಚಳವಳಿಯ ದಾರಿ

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು.

- Advertisement -
- Advertisement -

| ಹುಲಿಕುಂಟೆ ಮೂರ್ತಿ |

ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು.

ದು.ಸರಸ್ವತಿ ಅಕ್ಕನ ‘ಜೀವಸಂಪಿಗೆ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನಾನೂ ಪದ್ಯ ಓದಬೇಕಿತ್ತು. ಪದ್ಯ ಓದುವ ಮೊದಲು ‘ನಾನು ಕವಿಯಲ್ಲ’ ಅಂದು ‘ಎಬಿಸಿಡಿ ಎಂದರೆ..’ ಪದ್ಯ ಓದಿದೆ. ಆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಯ್ಯನವರು ‘ಕವಿಯಲ್ಲ ಅಂತನೇ ಒಳ್ಳೇ ಪದ್ಯ ಓದ್ದಲ್ಲೋ’ ಎಂದು ನಕ್ಕಿದ್ದರು. ಅದಾದಮೇಲೆ ಅವರು ಅಧ್ಯಕ್ಷತೆ ವಹಿಸಿದ್ದ, ಕವಿತೆ ಓದಿದ ಅನೇಕ ಕವಿಗೋಷ್ಟಿಗಳಲ್ಲಿ ನಾನೂ ಪದ್ಯ ಓದಿದೆ. ಓದಿದ ನಂತರ ‘ಗುಡ್ ಕಣೋ’ ಅಂದು ಅಷ್ಟಗಲ ನಕ್ಕು ಬೆನ್ನು ತಟ್ಟುತ್ತಿದ್ದರು. ಅವರು ವೇದಿಕೆಯಲ್ಲಿದ್ದ ಕಾರ್ಯಕ್ರಮಗಳಲ್ಲಿ ನಾನು ಮಾತನಾಡಿದ ಮೇಲೆ ಹತ್ತಿರ ಕರೆದು ‘ಗುಡ್’ ಹೇಳದೆ ಇರುತ್ತಿರಲಿಲ್ಲ. ಕನ್ನಡದ ದಲಿತ ಸಾಹಿತಿಗಳೆಲ್ಲರಿಗಿಂತ ಅವರೊಂದಿಗೆ ಹೆಚ್ಚು ವೇದಿಕೆ ಹಂಚಿಕೊಂಡ ಖುಷಿ ನನ್ನದು.

ಕೆ.ಬಿ.ಸಿದ್ದಯ್ಯ ಎಂದರೆ ಥಟ್ಟನೆ ನೆನಪಿಗೆ ಬರುವುದು ‘ಅಲ್ಲಮ’. ಅಲ್ಲಮ ಪ್ರಭು ಕುರಿತು ಅವರು ಮಾತನಾಡಲು ಶುರು ಮಾಡಿದರೆ ನಾವೆಲ್ಲಾ ಬಹಳ ಹಿಂದುಳಿದಿದ್ದೇವೆ ಅನ್ನಿಸುತ್ತಿತ್ತು. ಶರಣ ಚಳವಳಿ ಮತ್ತು ಅಲ್ಲಮನನ್ನು ಅವರು ಅರ್ಥೈಸುತ್ತಿದ್ದ ಕ್ರಮವೇ ವಿಶಿಷ್ಟವಾಗಿತ್ತು. ಅಲ್ಲಮನ ಕುರಿತು ಆಲೋಚಿಸುತ್ತಿದ್ದ ಕೆಲವೇ ವಿದ್ವಾಂಸರಲ್ಲಿ ಕೆ.ಬಿ.ಎಸ್ ವಿಭಿನ್ನವಾಗಿದ್ದರು. ಅವರು ಯಾವ ವಿಷಯವನ್ನಾದರೂ ಮಾತನಾಡುವಾಗ ನೀಳ ಉಸಿರೆಳೆದುಕೊಂಡು ಕಣ್ಮುಚ್ಚಿ ಧ್ಯಾನಿಸಿ ತೂಕ ಹಾಕಿದಂತೆ ಮಾತಾಡುತ್ತಿದ್ದರು. ಅವರ ಮಾತುಗಳನ್ನು ಅವರೇ ಮೆಚ್ಚಿಕೊಳ್ಳುವ ಹಾಗೆ.. ಬೆಳ್ಳಗಿನ ಬಟ್ಟೆ, ಬೆಳ್ಳಗಿನ ಗಡ್ಡ ಮತ್ತು ಬೆಳ್ಳಗಿನ ನಗು ಸಿದ್ದಯ್ಯನವರ ಗುರುತುಗಳು. ಆ ಗುರುತುಗಳೇ ನಮ್ಮಂಥವರನ್ನು ಅವರೆಡೆಗೆ ಸೆಳೆಯುತ್ತಿದ್ದವು.

ಎಪ್ಪತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕಟ್ಟಿದ ಎಚ್ಚರದ ಹಾದಿಯಲ್ಲಿ ಸ್ವಾಭಿಮಾನದ ಅಕ್ಷರಗಳ ಕೆಂಡ ಹಾದವರಲ್ಲಿ ಕೆ.ಬಿ.ಸಿದ್ದಯ್ಯ ಒಬ್ಬರು. ಸಿದ್ದಲಿಂಗಯ್ಯ, ದೇವನೂರ ಮಹಾದೇವ, ಕೋಟಿಗಾನಹಳ್ಳಿ ರಾಮಯ್ಯ, ಇಂದೂಧರ ಹೊನ್ನಾಪುರ, ಎಚ್.ಗೋವಿಂದಯ್ಯ ಮುಂತಾದವರೊಟ್ಟಿಗೆ ದಲಿತ ಹೋರಾಟಕ್ಕೆ ಅಗತ್ಯವಿದ್ದ ಸಾಹಿತ್ಯವನ್ನು ಒದಗಿಸುವ ಕೆಲಸವನ್ನು ಮಾಡಿದರು. ಅವರ ‘ಈ ನಾಡ ಮಣ್ಣಿನಲ್ಲಿ ಮಣ್ಣಾದ ಜನಗಳ ಕತೆಯ..’ ಹಾಡು ದಲಿತರ ಬದುಕಿನ ನೋವನ್ನು ಚಿತ್ರಿಸಿತ್ತು. ಕೋಲಾರ ಶೇಷಗಿರಿಯಪ್ಪನ ಕೊಲೆ ಪ್ರಕರಣ, ಬೆಂಡಿಗೇರಿ ಮಲ ತಿನ್ನಿಸಿದ ಪ್ರಕರಣಗಳಲ್ಲಿ ಇಡೀ ರಾಜ್ಯದ ಮೂಲೆಮೂಲೆಯಲ್ಲಿ ಹೋರಾಟ ಕಟ್ಟಿದ ದಸಂಸ ಹಿಂದೆ ಸಿದ್ದಯ್ಯನವರೂ ಇದ್ದರು. ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಗೆ ಈ ಮಹನೀಯರು ಸೃಷ್ಟಿಸಿದ ಸಾಹಿತ್ಯ ನಾಡಿನ ದಲಿತೇತರರ ಎದೆಗಳಲ್ಲೂ ಜಾತಿವಿನಾಶದ ಕಿಡಿಯನ್ನು ಹೊತ್ತಿಸಿದ್ದು ಸುಳ್ಳಲ್ಲ.

ಇಂಥಾ ಹಾದಿಯಲ್ಲಿ ನಡೆದುಬಂದ ಕೆ.ಬಿ.ಸಿದ್ದಯ್ಯನವರು ತೊಂಬತ್ತರ ದಶಕದಿಂದೀಚೆಗೆ ಅಕ್ಷರಮುಖಿ ಅಭಿವ್ಯಕ್ತಿಗೆ ಒಡ್ಡಿಕೊಂಡರು. ಅವರ ಈ ಅಕ್ಷರಮುಖಿ ನಡಿಗೆ ದಲಿತ ಜಾನಪದ ಲೋಕದ ಬೇರುಗಳ ಜತೆ ಇದ್ದಿದ್ದರಿಂದ ಅವರೊಟ್ಟಿಗೆ ಕನ್ನಡಕ್ಕೊಂದು ಹೊಸ ದಿಕ್ಕು ತೆರೆದುಕೊಂಡಿತು. ಅವರ ಬಕಾಲ, ದಕ್ಲಕಥಾ ದೇವಿ, ಗಲ್ಲೇಬಾನಿ ಮತ್ತು ಅನಾತ್ಮ ಕಾವ್ಯಗಳು ಕನ್ನಡ ಪ್ರಜ್ಞೆಯ ಅಂತರ್ಮುಖಿ ಧಾರೆಯಾಗಿದ್ದ ಜನಪದಕ್ಕೆ ದಲಿತ ಕಣ್ಣೋಟವನ್ನೂ, ದಲಿತ ಬದುಕಿನ ಆದಿಮ ಘನತೆಯನ್ನೂ ಕಸಿ ಮಾಡುವಲ್ಲಿ ಯಶಸ್ವಿಯಾದವು. ಅದಾಗಲೇ ಸದ್ದು ಮಾಡುತ್ತಿದ್ದ ಮಂಟೇಸ್ವಾಮಿ, ಮಾದಪ್ಪ, ಮೈಲಾರಲಿಂಗ ಮೊದಲಾದ ಜನಪದ ಮಹಾಕಾವ್ಯಗಳ ಮರು ಓದಿನ ಜೊತೆಗೆ ಸಿದ್ದಯ್ಯನವರ ಸಂಶೋಧನಾತ್ಮಕ ಜನಪದ ಸಂಕಥನಗಳು ಸೇರಿಕೊಂಡವು. ಇದರಿಂದಾಗಿ ದಲಿತ ಬದುಕುಗಳ ಸಾಂಸ್ಕೃತಿಕ ಅಧ್ಯಯನಕ್ಕೆ ಹೊಸ ದಿಕ್ಕು ಗೋಚರಿಸಿತು. ಈ ಮೂಲಕ ಸಿದ್ದಯ್ಯನವರ ಅಭಿಮಾನಿ ಬಳಗವೂ ಹುಟ್ಟಿಕೊಂಡಿತು. ಆ ನಂತರದಲ್ಲಿ ಕರ್ನಾಟಕದ ಸಾಹಿತ್ಯ, ಹೋರಾಟ ಮತ್ತು ರಾಜಕಾರಣದಲ್ಲಿ ಸಿದ್ದಯ್ಯನವರು ಸೇರಿಹೋದರು.

ದಲಿತ ಸಂಘರ್ಷ ಸಮಿತಿಯ ಬಣಗಳು ಹೆಚ್ಚಿದಂತೆ ದಲಿತ ಪ್ರಜ್ಞೆಯ ಮೆದುಳಿನಂತೆ ಕೆಲಸ ಮಾಡುತ್ತಿದ್ದ ದಲಿತ ಹಿರಿಯರೂ ಅಲ್ಲಲ್ಲಿ ಚದುರಿಹೋದರು. ಸಿದ್ದಯ್ಯನವರೂ ದಲಿತರೊಳಗಿನ ಮಾದಿಗ ಸಮುದಾಯಕ್ಕೆ ಸೇರಿದವರಾದ್ದರಿಂದ ‘ಮಾದಿಗ ಮೀಸಲಾತಿ ಹೋರಾಟ ಸಮಿತಿ’ ಪ್ರಾರಂಭಿಸಿದ ‘ಒಳ ಮೀಸಲಾತಿ’ ಹೋರಾಟದ ಭಾಗವಾಗಬೇಕಾಯಿತು. ಅಲ್ಲಿಯವರೆಗೆ ನಂಬಿಕೊಂಡು ಬಂದಿದ್ದ ‘ದಲಿತ’ ಅನ್ನುವ ಶಬ್ಧವನ್ನೇ ‘ದಾರಿ ತಪ್ಪಿಸುವ ಶಬ್ದ’ ಎಂದರು. ಅವರ ಮಾತು ನಿಜವೂ ಆಗಿತ್ತು. ದಲಿತ ಸಾಹಿತಿಗಳ ಸಾಲಿನಲ್ಲಿ ಗುರುತಿಸಿಕೊಳ್ಳುವುದರಿಂದ ಅದಲಿತ ಬಂಧುಗಳಿಗೆ ಬೇಸರವಾಗುತ್ತದೆಂದು ವಾದಿಸಿದರು. ಅವರ ಈ ವಾದಕ್ಕೂ ಇತರ ದಲಿತ ಸಾಹಿತಿಗಳೊಂದಿಗಿನ ಅವರ ಮುನಿಸಿಗೂ ಸಂಬಂಧ ಕಲ್ಪಿಸಲಾಯಿತು. ಅದು ನಿಜವೇನೋ ಎಂಬಂತೆ ತಮ್ಮೊಂದಿಗೆ ಸಂಘಟನೆ ಕಟ್ಟಿ, ಬರೆದು, ದಲಿತ ಪ್ರಜ್ಞೆಯನ್ನು ಹಿಗ್ಗಿಸಿದ ಹಿರಿಯರ ಕುರಿತು ಅಸಹನೆ ವ್ಯಕ್ತಪಡಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಮನುಷ್ಯ ವಿರೋಧಿ ಮನುಧರ್ಮ ಶಾಸ್ತ್ರದ ಪ್ರತಿಪಾದಕ ಪೇಜಾವರ ಶ್ರೀ ಸಿದ್ದಯ್ಯನವರ ಮನೆಗೆ ಬಂದುಹೋದರು.

ಇದೆಲ್ಲದರ ಜೊತೆಗೆ ಸಿದ್ದಯ್ಯನವರು ತುಮಕೂರಿನಲ್ಲಿ ನೆಲೆಯೂರಿದ್ದು ಒಂದು ರೀತಿಯ ಸೀಮಿತ ವಾತಾವರಣವನ್ನು ಸೃಷ್ಟಿಸಿತು. ಅವರು ತುಮಕೂರನ್ನೇ ನಂಬಿ ಕೂತುಬಿಟ್ಟರು ಅಥವಾ ತುಮಕೂರು ಅವರನ್ನು ಕಟ್ಟಿಹಾಕಿಬಿಟ್ಟಿತು. ಅಲ್ಲಿನ ಕಾಲೇಜೊಂದರಲ್ಲಿ ಅವರು ಉಪನ್ಯಾಸಕ ವೃತ್ತಿ ಮಾಡುತ್ತಿದ್ದುದು ಅದಕ್ಕೆ ಕಾರಣವಾಗಿತ್ತು. ರಾಜಕೀಯ ನಾಯಕ ಸಿದ್ಧರಾಮಯ್ಯನವರ ಸ್ನೇಹ, ದಲಿತ ಲೋಕದ ಸಾಹಿತ್ಯಕ ಘನತೆ, ಕನ್ನಡ ಕಾವ್ಯದ ದಿಕ್ಕು ಬದಲಿಸಿದ ಖಂಡಕಾವ್ಯ… ಇದ್ಯಾವುದೂ ಸಿದ್ದಯ್ಯನವರನ್ನು ಅವರು ಏರಬೇಕಿದ್ದ ಎತ್ತರಕ್ಕೆ ಬೆಳೆಸಲಿಲ್ಲ; ಬೇರೆ ಯಾರಿಗಾದರೂ ಇಂಥಾ ಒಂದೇ ಒಂದು ಸಾಧ್ಯತೆ ಇದ್ದರೂ ಪ್ರಾಧಿಕಾರಗಳ ಅಧ್ಯಕ್ಷಗಿರಿ, ಎಂಎಲ್‍ಸಿ ಪಟ್ಟ ಸಿಕ್ಕಿಬಿಡುತ್ತಿತ್ತು. ಸಿದ್ದಯ್ಯನವರು ಅಂಥಾ ಆಸೆಯನ್ನೇನೋ ಇಟ್ಟುಕೊಂಡಿದ್ದರೂ ಅದಕ್ಕೆ ಬೇಕಾದ ಶ್ರಮ ಹಾಕಲಿಲ್ಲ; ಬದಲಿಗೆ ನಿಷ್ಠುರವಾಗಿ ಮಾತನಾಡುವುದನ್ನು ಹೆಚ್ಚು ಮಾಡಿದರು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾದಾಗ ಅವರಿಂದ ದೂರವೇ ಉಳಿದರು.

ಇತ್ತ ಕರ್ನಾಟಕದಲ್ಲಿ ದಲಿತ ಯುವಜನತೆಯಲ್ಲಿ ಎಡ – ಬಲದ ಅಂತರ, ಪರಸ್ಪರ ಅಸಹನೆ ಹೆಚ್ಚುತ್ತಿದ್ದಂತೆ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚತೊಡಗಿದವು. ಅಲ್ಲಲ್ಲಿ ಬಿಡಿ ಬಿಡಿ ಪ್ರತಿಭಟನೆಗಳು ನಡೆದರೂ ಎಪ್ಪತ್ತರ ದಶಕದ ಕಾವು ಕಾಣಲೇ ಇಲ್ಲ. ಇದನ್ನು ಸರಿಯಾದ ದಾರಿಯಲ್ಲಿ ನಡೆಸಬೇಕಾದ ಹಿರಿಯರು ಸಿದ್ದಯ್ಯನವರೂ ಸೇರಿದಂತೆ ಪತ್ರಿಕಾ ಹೇಳಿಕೆಗಳಿಗಷ್ಟೇ ಸೀಮಿತವಾದರು. ದಲಿತ ರಾಜಕಾರಣಿ ಜಿ.ಪರಮೇಶ್ವರ್ ಮೇಲಿನ ಸಿದ್ದಯ್ಯನವರ ಸಿಟ್ಟಿಗೆ ಕೆಲವರು ಎಡ -ಬಲದ ಬೋರ್ಡು ನೇತುಹಾಕಿದರೂ ದಲಿತ ಸಾಹಿತ್ಯ ಮತ್ತು ಚಳವಳಿಯ ವಲಯ ಅದನ್ನೇನೂ ಗಂಭೀರವಾಗಿ ಪರಿಗಣಿಸಲಿಲ್ಲ; ಯಾಕೆಂದರೆ ಪರಮೇಶ್ವರ್ ವಿಷಯದಲ್ಲಿ ಸಿದ್ದಯ್ಯನವರ ಸಿಟ್ಟು ಸಕಾರಣವಾಗಿತ್ತು. ಆನಂತರ ಅದು ‘ಕಾಂಗ್ರೆಸ್ಸನ್ನು ಗೆಲ್ಲಿಸುತ್ತೇವೆ; ಪರಮೇಶ್ವರರನ್ನು ಸೋಲಿಸುತ್ತೇವೆ’ ಎಂಬ ಘೋಷವಾಕ್ಯವಾಗುವ ಅತಿಗೆ ಹೋಯಿತು. ಇದು ಮಾದಿಗ ಸಮುದಾಯದವರೇ ಆದ ಆಂಜಿನೇಯ ಅವರ ಸೋಲಿಗೂ ಕಾರಣವಾಯಿತು. ಸದಾಶಿವ ಆಯೋಗದ ವರದಿಯನ್ನು ಜನತೆಯ ಮುಂದೆ ಇಡಿ; ಅದನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಎಂದು ಮಾದಿಗ ಬಂಧುಗಳು ನಡೆಸಿದ ಹೋರಾಟಕ್ಕೆ ಸಿದ್ದಯ್ಯ ಮತ್ತು ಸಿದ್ದರಾಮಯ್ಯನವರ ಸ್ನೇಹ ಹೆಗಲು ನೀಡಲಿಲ್ಲ. ಇದಕ್ಕೆ ಆ ಹೋರಾಟದ ಮುಂಚೂಣಿಯಲ್ಲಿದ್ದ ಕೆಲವರು ಬಿಜೆಪಿ ಸಖ್ಯದಲ್ಲಿದ್ದಾರೆ ಅನ್ನುವ ಸಿದ್ದಯ್ಯನವರ ಕೋಪ ಕಾರಣವಿರಬಹುದು. ಸ್ವಾತಂತ್ರ್ಯ ಉದ್ಯಾನದ ಹತ್ತಿರ ನಡೆಯುತ್ತಿದ್ದ ಮಾದಿಗರ ಹೋರಾಟಕ್ಕೆ ಪ್ರತಿದಿನ ಹಾಜರಾಗುತ್ತಿದ್ದ ಸಿದ್ದಯ್ಯನವರನ್ನು ಹೊರಗೇ ಓಡಾಡಿಕೊಂಡು ಹೋಗುವಂತೆ ಮಾಡಿದ್ದು ಆ ಹೋರಾಟಗಾರರ ದೊಡ್ಡ ನಷ್ಟ. ಒಂದು ದಿನ ಪ್ರತಿಭಟನೆಯ ಪೆಂಡಾಲಿನ ಹೊರಗೆ ಬಿಸಿಲಲ್ಲಿ ನಿಂತಿದ್ದ ಸಿದ್ದಯ್ಯನವರು ಆ ಹೋರಾಟ ಕುರಿತು ರೂಪಕದ ಭಾಷೆಯಲ್ಲಿ ಮಾತನಾಡಿದ್ದು ನನಗಿನ್ನೂ ನೆನಪಿದೆ. ಆವತ್ತು ‘ಯಾಕಣ್ಣಾ ಬಿಸಿಲಲ್ಲಿ ನಿಂತಿದಿರಾ’ ಎಂದು ಕೇಳಿದ ನನ್ನ ಕೆನ್ನೆ ಹಿಂಡಿ ನಕ್ಕಿದ್ದರು. ಅದಾದ ನಂತರ ತುಮಕೂರಿನ ಮಾದಿಗ ಬಂಧುಗಳು ನಡೆಸಿದ ಅದೇ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು. ಇದನ್ನು ಕಂಡು ಅವರಿಗೆ ಸಮುದಾಯದ ಮೇಲಿದ್ದ ಕಾಳಜಿ ದೊಡ್ಡದು ಎಂದು ನಾವು ಗೆಳೆಯರು ಮಾತಾಡಿಕೊಂಡಿದ್ದೆವು.

ಸಿದ್ದಯ್ಯನವರು ಎಲ್ಲರಂತೆ ಮಿತಿಗಳಿದ್ದ ಮನುಷ್ಯ. ಸಾಹಿತ್ಯ ಮತ್ತು ಚಳವಳಿ ಎರಡರಲ್ಲಿ ‘ಸಾಹಿತಿ’ ಎಂದು ಗುರ್ತಿಸಿಕೊಳ್ಳಲು ಅವರು ಆಸೆ ಪಡುತ್ತಿದ್ದ ಹಾಗೆ, ಕನ್ನಡ ಸಾಹಿತ್ಯ ಸಮಾಜ ಅವರನ್ನು ಒಬ್ಬ ‘ಸಾಹಿತಿ’ಯಾಗಿಯೇ ನೋಡಲು ಆಸೆ ಪಡುತ್ತಿತ್ತು. ಇದಕ್ಕೆ ಕಾರಣ ಅವರಿಗಿದ್ದ ಓದಿನ ವಿಸ್ತಾರ ಮತ್ತು ಕಾವ್ಯದ ಮೇಲಿದ್ದ ಆಕರ್ಷಣೆ. ಇದರಿಂದಾಗಿ ಕೇವಲ ಬೀದಿಗಳಲ್ಲಿ ಧಿಕ್ಕಾರ ಕೂಗಿಕೊಂಡು ಬದುಕು ಮುಗಿಸುತ್ತಿದ್ದ ನೂರಾರು ದಲಿತ ಯುವಕ ಯುವತಿಯರನ್ನು ಚಳವಳಿ, ಸಾಹಿತ್ಯ ಮತ್ತು ಅಕಾಡೆಮಿಕ್ ನೆಲೆಗಳಲ್ಲಿ ನಡೆಯುವಂತೆ ನೋಡಿಕೊಂಡರು. ಇದರ ಪರಿಣಾಮವಾಗಿ ಅವರನ್ನು ಪ್ರೀತಿಸುವ ದಲಿತ ಹುಡುಗ ಹುಡುಗಿಯರು ಹೋರಾಟ, ಸಾಹಿತ್ಯ ಎರಡರಲ್ಲೂ ಸಮರ್ಥವಾಗಿ ಹೆಜ್ಜೆ ಇಡುವಂತಾಗಿದೆ.

ಈಗ ಸಿದ್ದಯ್ಯನವರು ಕನ್ನಡ ಸಾಹಿತ್ಯಕ್ಕೆ ಹೇಗೋ ಹಾಗೆ ದಲಿತ ಚಳವಳಿಯ ಹಾದಿಯೂ ಆಗಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...