ಆಹಾರ ಸಂಸ್ಕೃತಿ ಎನ್ನುವುದು ಅವರವರ ವೈಯಕ್ತಿಕ ಆಯ್ಕೆಗೆ ಬಿಟ್ಟ ಸಂಗತಿ. ವಚನ ಚಳುವಳಿ ತನ್ನ ಒಟ್ಟಾರೆ ಆಶಯದಲ್ಲಿ ಇಂಥಾ ವ್ಯಕ್ತಿಗತ ಸ್ವಾತಂತ್ರ್ಯ ಮತ್ತು ಘನತೆಗಳನ್ನು ಎತ್ತಿಹಿಡಿದ ಒಂದು ಲಿಬರಲ್ ಮೂವ್‍ಮೆಂಟ್. ಹಾಗಾಗಿ ನಾವು ವಚನ ಸಾಹಿತ್ಯದ ಸಮಗ್ರ ಆಶಯದಿಂದ ಪ್ರಸ್ತುತ ಸವಾಲುಗಳಿಗೆ ಉತ್ತರಗಳನ್ನು ಅರ್ಥೈಸಿಕೊಳ್ಳಬೇಕೆ ವಿನಾಃ ಯಾವುದೋ ಒಂದು ವಚನದ ಅಥವಾ ಒಂದು ಸಾಲಿನ ಸುತ್ತ ಕೇಂದ್ರೀಕರಿಸಿ ಚರ್ಚೆ ಮಾಡುವಂತದ್ದಲ್ಲ. ಬಸವಣ್ಣ ಮತ್ತು ಆ ಕಾಲಘಟ್ಟದ ವಚನಕ್ರಾಂತಿಯ ಅಡಿಪಾಯವೇ ಎಲ್ಲಾ ವರ್ಗಗಳ ಒಳಗೊಳ್ಳುವಿಕೆ. ಅಂತದ್ದರಲ್ಲಿ ಆಹಾರ ಆಯ್ಕೆ’ಯ ಕುರಿತಾದ ಒಂದು ವಚನವನ್ನು ಇಟ್ಟುಕೊಂಡು ಆ ಒಳಗೊಳ್ಳುವಿಕೆ ಆಶಯವನ್ನೇ ಅನುಮಾನಿಸಿದರೆ, ಆ ಚಳವಳಿಯ ಸಮಗ್ರ ಆಶಯವನ್ನು ನಾವು ಅರ್ಥ ಮಾಡಿಕೊಂಡಂತೆ ಆಗುವುದಿಲ್ಲ. ವಚನಕಾರರು ಗೂಢಾರ್ಥಗಳ ಮೂಲಕ, ಉಪಮಾನ-ಉಪಮೇಯಗಳ ಮೂಲಕ ನೀತಿಬೋಧೆಗಳನ್ನು ಮಾಡಿದಂತವರು. ಹಾಗಾಗಿ ಹನ್ನೆರಡನೇ ಶತಮಾನದಷ್ಟು ಹಿಂದೆ ಅವರು ಬಳಸಿದ ಪದಗಳನ್ನು ಆಶಯಪೂರ್ವಕವಾಗಿ ಮತ್ತು ಐತಿಹಾಸಿಕ ಒಳನೋಟದಿಂದ ನೋಡಬೇಕು. ಯಥಾವತ್ ಅರ್ಥ ರೂಪದಲ್ಲಿ ಗ್ರಹಿಸುವುದು ಅಷ್ಟೊಂದು ಸಮಂಜಸವಲ್ಲ.
ಇನ್ನು ಆಹಾರ ಸಂಸ್ಕøತಿಯ ಬಗ್ಗೆ ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ, ಅದು ಅವರವರ ವ್ಯಕ್ತಿಗತ ಆಯ್ಕೆಗೆ ಬಿಟ್ಟದ್ದು. ಅದರಿಂದ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ನಿಮ್ಮ ತಟ್ಟೆಯಲ್ಲಿ ಏನಿದೆ ಎಂದು ಪಕ್ಕದವನು ಇಣುಕಿನೋಡಿ, ಕಮೆಂಟ್ ಮಾಡುವುದೇ ಅಸಹ್ಯದ ವಿಷಯ. ಆದರೆ ಬಸವಣ್ಣನ ಚಳುವಳಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಈ ದಿನಮಾನಗಳ ಸಮಕಾಲೀನ ಲಿಂಗಾಯತ ಮಠಗಳೇನಿವೆಯಲ್ಲ, ಅವು ಸಸ್ಯಾಹಾರವನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿವೆ. ಇದೇ ಸಮುದಾಯದೊಳಗೆ ಹುಟ್ಟಿ ಇವತ್ತು ಮಾಂಸಾಹಾರ ಸೇವಿಸುತ್ತಿರುವ ಎಷ್ಟು ಜನರಿಲ್ಲ, ದೊಡ್ಡದೊಡ್ಡ ವ್ಯಕ್ತಿಗಳೇ, ರಾಜಕಾರಣಿಗಳೇ ಅಂತವರಿದ್ದಾರೆ. ಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳದ ಸಮಕಾಲೀನ ಮಠಗಳು ಇತರರ ಆಹಾರಕ್ರಮ ಕೀಳು ಎನ್ನುವಂತೆ ಸಸ್ಯಾಹಾರ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿರುವುದು ವಿಪರ್ಯಾಸ. ಆದರೆ ಶಿವದೀಕ್ಷೆ ಅಥವಾ ಲಿಂಗದೀಕ್ಷೆ ಸ್ವೀಕರಿಸಿದ ಯಾರಲ್ಲೂ ಕೇವಲ ಸೇವಿಸುವ ಆಹಾರದಿಂದ ಮೇಲು, ಕೀಳು ಎಂಬ ಭಾವ ಬರುವುದಿಲ್ಲ.
ಕೆ.ಮರುಳಸಿದ್ದಪ್ಪ, ಚಿಂತಕರು-ಸಾಹಿತಿಗಳು
ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು.


