Homeಕರ್ನಾಟಕಆಹಾರ ಪರಂಪರೆ ಮತ್ತು ವಚನ ಚಳುವಳಿ: ಆಹಾರ ಸಂಸ್ಕೃತಿ ಏನಿತ್ತು? ಅದನ್ನು ನಿರ್ಬಂಧಿಸುತ್ತಿದ್ದದ್ದು ಯಾರು? -...

ಆಹಾರ ಪರಂಪರೆ ಮತ್ತು ವಚನ ಚಳುವಳಿ: ಆಹಾರ ಸಂಸ್ಕೃತಿ ಏನಿತ್ತು? ಅದನ್ನು ನಿರ್ಬಂಧಿಸುತ್ತಿದ್ದದ್ದು ಯಾರು? – ರಂಜಾನ್ ದರ್ಗಾ

- Advertisement -
- Advertisement -

ಲಿಂಗಾಯಿತ ಧರ್ಮವು ಮಾಂಸಾಹಾರಿಗಳನ್ನೂ ಒಪ್ಪುವ ಮೂಲಕ ಆಹಾರ ಸಂಸ್ಕೃತಿಯ ವಿಚಾರದಲ್ಲಿ ಪ್ರಜಾತಾಂತ್ರಿಕವಾಗಿರುತ್ತದೆಯೇ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಕರ್ನಾಟಕದ ಆಹಾರ ಸಂಸ್ಕೃತಿ ಮತ್ತು ಯಾವುದು ಮೇಲು ಯಾವುದು ಕೀಳು ಎಂಬುದರಲ್ಲೇ ಶ್ರೇಣೀಕರಣವನ್ನು ಪ್ರತಿಪಾದಿಸುವ ಈ ದೇಶದಲ್ಲಿ ಇಂತಹ ಚರ್ಚೆಗಳು ಬರುವುದು, ಬರಬೇಕಾದದ್ದು ಸಹಜ. ಆದರೆ, ಈ ಸದ್ಯ ಅದು ಎದ್ದಿರುವ ಸಂದರ್ಭ ಹಾಗೂ ಅದರ ಟಾರ್ಗೆಟ್ ಸರಿಯಿಲ್ಲ ಎಂಬ ಅನಿಸಿಕೆಗಳೂ ಇವೆ. ಈ ಹಿನ್ನೆಲೆಯಲ್ಲಿ ವಿವಿಧ ಚಿಂತಕರನ್ನು ಪತ್ರಿಕೆಯು ಮಾತಾಡಿಸಿತು. ಜೊತೆಗೆ ಆಹಾರದ ವಿಚಾರದಲ್ಲಿ ನಮ್ಮದೇ ಇತಿಹಾಸದ ಕೆಲವು ವಾಸ್ತವಗಳನ್ನು ತಿಳಿಸುವ ರಂಜಾನ್ ದರ್ಗಾ ಅವರ ಲೇಖನವೊಂದರ ಆಯ್ದ ಭಾಗವೂ ಇದರೊಂದಿಗಿದೆ.

ಚರ್ಮಣ್ವತಿ: ಹಿಂದೆ ರಾಜರು ಯಜ್ಞಗಳನ್ನು ವರ್ಷಗಟ್ಟಲೆ ಮಾಡುತ್ತಿದ್ದರು. ವೈದಿಕರು ವರ್ಷಗಟ್ಟಲೆ ಅಲ್ಲೇ ಉಳಿದು ದಕ್ಷಿಣೆ ಪಡೆಯುತ್ತ, ಮಾಂಸದೂಟ ಸವಿಯುತ್ತ ಕೂಡುತ್ತಿದ್ದರು. ಇಂಥ ಒಂದು ಪ್ರಸಂಗ ಕಾಳೀದಾಸನ ಮೇಘದೂತ ಖಂಡಕಾವ್ಯದಲ್ಲಿ ಬರುತ್ತದೆ. ರಂತಿದೇವ ಎಂಬ ರಾಜನ ಯಜ್ಞಕ್ಕಾಗಿ ವೈದಿಕರು ಪ್ರತಿದಿನ ಪಶುಗಳನ್ನು ಕೊಂದು ಅವುಗಳ ಚರ್ಮವನ್ನು ರಾಶಿ ಹಾಕುತ್ತಿದ್ದರು. ವರ್ಷಗಟ್ಟಲೆ ನಡೆದ ಈ ಯಜ್ಞದ ಕೊನೆಯ ದಿನದ ಕೊನೆಯ ಗಳಿಗೆಯಲ್ಲಿ ಬಹು ದೂರದಿಂದ ವೈದಿಕರ ಗುಂಪೊಂದು ಬಂದಿತು. ಆಗ ಮಾಂಸದ ತುಂಡುಗಳು ಖಾಲಿಯಾಗಿ ಬರಿ ಸೂಪ್ (ಸಂಸ್ಕೃತದ ಈ ಸೂಪ್ ಇಂಗ್ಲಿಷ್ ಭಾಷೆ ಸೇರಿದೆ) ಮಾತ್ರ ಉಳಿದಿತ್ತು. ಇದರಿಂದ ಕೆಂಡಾಮಂಡಲವಾದ ವೈದಿಕರು ರಂತಿದೇವನಿಗೆ ಶಾಪ ಕೊಡಲು ಮುಂದಾದರು. ಆಗ ಭಯಭೀತನಾದ ರಂತಿದೇವ ‘ತಾವು ತಡಮಾಡಿ ಬಂದಿದ್ದೀರಿ. ಈ ದೀರ್ಘಕಾಲದ ಯಜ್ಞದಲ್ಲಿ ಅದೆಷ್ಟು ಪಶುಗಳ ಬಲಿ ಕೊಡಲಾಗಿದೆ ಎಂಬುದಕ್ಕೆ ಈ ಚರ್ಮಗಳ ರಾಶಿಯನ್ನು ನೋಡಿರಿ. ಇವುಗಳ ರಕ್ತದಿಂದಲೇ ಹರಿಯುತ್ತಿರುವ ನದಿಯನ್ನು ನೋಡಿರಿ. ಇದು ಚರ್ಮಣ್ವತಿ ನದಿ ಎಂದು ಹೆಸರು ಪಡೆದಿದೆ’ ಎಂದು ಮನವಿ ಮಾಡಿದ. (ಆ ಚರ್ಮಣ್ವತಿ ನದಿಯೇ ಇಂದಿನ ಚಂಬಲ್ ನದಿ)

ದನವೇ ಧನ: ಈ ರಾಜರು ಇಷ್ಟೊಂದು ಪಶುಗಳನ್ನು ಎಲ್ಲಿಂದ ತರುತ್ತಿದ್ದರು ಎಂಬುದಕ್ಕೆ ಧರ್ಮಾನಂದ ಕೋಸಂಬಿಯವರ ‘ಭಗವಾನ ಬುದ್ಧ’ ಗ್ರಂಥದಲ್ಲಿ ಮಾಹಿತಿ ದೊರೆಯುತ್ತದೆ. ರಾಜರು, ಶ್ರೀಮಂತರು ಮತ್ತು ವೈದಿಕರು ಯಜ್ಞಕ್ಕಾಗಿ ರೈತರ ಸಾಕುಪ್ರಾಣಿಗಳನ್ನು ಯಾವುದೇ ಹಣ ಕೊಡದೆ ತರುತ್ತಿದ್ದರು. ರೈತಾಪಿ ಜನರಿಗೆ ದನವೇ ಧನವಾಗಿತ್ತು. (ದನ ಎಂಬುದು ಧನದಿಂದ ಬಂದಿದೆ. ದನವೇ ಧನ. ಇಂಗ್ಲಿಷ್‍ನಲ್ಲಿ ಕ್ಯಾಟಲ್‍ನಿಂದ ಕ್ಯಾಪಿಟಲ್ ಬಂದಿದೆ.) ಆದ್ದರಿಂದ ರಾಜ ಮುಂತಾದ ಬಲಾಢ್ಯರು ಮಹಾಯಜ್ಞ ಆರಂಭಿಸಿದರೆ ರೈತಾಪಿ ಜನ ಒಬ್ಬರಿಗೊಬ್ಬರು ತಬ್ಬಿಕೊಂಡು ಅಳುತ್ತಿದ್ದರು. ರೈತರು ತಮ್ಮ ದನಗಳನ್ನು ಯಜ್ಞಕ್ಕೆ ಬಲಿಪಶುಗಳಾಗಿ ಕೊಡದಿದ್ದಾಗ ಅವರ ಮೇಲೆ ಹಲ್ಲೆ ಮಾಡಿ ತೆಗೆದುಕೊಂಡು ಹೋಗುತ್ತಿದ್ದರು! ದೀರ್ಘ ಕಾಲದ ಆ ಮಹಾಯಜ್ಞಕ್ಕೆ ಬೇಕಾದ ಬಲಿಪಶುಗಳನ್ನು ಸೈನಿಕರು ಬಂದು ಕಂಡ ಕಂಡ ರೈತರ ಮನೆಗಳ ಮುಂದೆ ಕಟ್ಟಿದ ಪಶುಗಳನ್ನು ಹೊಡೆದುಕೊಂಡು ಹೋಗುತ್ತಿದ್ದರು. ಹಾಗೆ ದನಗಳನ್ನು ಹೊಡೆದುಕೊಂಡು ಹೋಗುವುದನ್ನು ಬುದ್ಧ ಗಮನಿಸಿದ್ದರಿಂದಲೇ ಯಜ್ಞಹಿಂಸೆಯನ್ನು ತಡೆಯಲು ನಿರ್ಧರಿಸಿದ. ದೊಡ್ಡವರ ಯಜ್ಞಕ್ಕಾಗಿ ತಮ್ಮ ದನಕರುಗಳನ್ನು ಪುಕ್ಕಟೆ ಕೊಡಬೇಕಾಗಿ ಬಂದದ್ದರಿಂದಲೇ ಬಡವರು ಮತ್ತು ರೈತಾಪಿ ಜನರು ಸಹಜವಾಗಿಯೇ ಯಜ್ಞವಿರೋಧಿಯಾಗಿದ್ದರು. ಜನ ಬೆಂಬಲವಿದ್ದ ಕಾರಣದಿಂದಲೇ ಬುದ್ಧನ ಯಜ್ಞವಿರೋಧಿ ನಿಲವಿಗೆ ಮಾನ್ಯತೆ ದೊರೆಯಿತು.

ಮಹಾ ಮೇಧಾವಿ ಧರ್ಮಾನಂದ ಕೋಸಂಬೀ ಅವರು ಮರಾಠಿಯಲ್ಲಿ ರಚಿಸಿದ ಭಗವಾನ್ ಬುದ್ಧ ಗ್ರಂಥವನ್ನು ಆದ್ಯ ರಂಗಾಚಾರ್ಯ (ಶ್ರೀರಂಗ)ರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿ ಈ ಅನುವಾದ ಗ್ರಂಥವನ್ನು 1956 ರಲ್ಲಿ ಪ್ರಕಟಿಸಿದೆ. ಆ ಗ್ರಂಥದ ಯಜ್ಞಯಾಗ ಅಧ್ಯಾಯದಲ್ಲಿನ ‘ಜನರಿಗೆ ಗೋ ಹಿಂಸೆ ಬೇಕಿದ್ದಿಲ್ಲ’ ಎಂಬ ಉಪಶೀರ್ಷಿಕೆಯಲ್ಲಿ ಕೆಳಗಿನ ವಿಚಾರ ವ್ಯಕ್ತವಾಗಿದೆ.
‘ಈ ದಾಸ, ದೂತ ಮತ್ತು ಆಳುಗಳು ಯಜ್ಞದ ಕೆಲಸಗಳನ್ನು ಅಳುತ್ತ ಅಳುತ್ತ ಯಾಕೆ ಮಾಡುತ್ತಿರಬಹುದಾಗಿದೆ? ಯಾಕೆಂದರೆ ಈ ಯಜ್ಞದಲ್ಲಿ ದನಗಳನ್ನು ಕೊಲ್ಲಲಾಗುತ್ತಿತ್ತು. ಅದನ್ನು ಬಡ ರೈತರಿಂದ ಕಸಿದುಕೊಳ್ಳಲಾಗುತ್ತಿತ್ತು. ಅದಕ್ಕಾಗಿ ರೈತರಿಗೆ ಬಹಳ ಕೆಡುಕೆನಿಸುತ್ತಿತ್ತು.. .. ..
ರಾಜರು ಮತ್ತು ಶ್ರೀಮಂತ ಜನರು ಸ್ವಂತ ತಮ್ಮ ಹಸುಗಳನ್ನೆ ಕೊಲ್ಲುತ್ತಿದ್ದರೆ ದಾಸರೂ ಆಳುಗಳೂ ಅಳುವ ಪ್ರಸಂಗಗಳು ಕಡಿಮೆ ಪ್ರಮಾಣದಲ್ಲಿ ಬರಬಹುದಾಗಿತ್ತು. ಆದರೆ ಈ ದನಗಳನ್ನು ತಮ್ಮಂತಹ ಬಡ ರೈತರ ಮೇಲೆ ಒತ್ತಾಯ ಮಾಡಿ ಕಸಿದುಕೊಳ್ಳುತ್ತಿದ್ದುದಕ್ಕಾಗಿ ಅವರಿಗೆ ಹೇಳದಷ್ಟು ದುಃಖವಾಗುವುದು ಸಹಜವಾಗಿದೆ.

‘ಹಿಂದೂ ಧರ್ಮಶಾಸ್ತ್ರಕ್ಕೆ ಬುನಾದಿಯಾಗಿರುವ ಮನುಸ್ಮøತಿಯ ವಸ್ತುನಿಷ್ಠ ಸಮಗ್ರ ಅನುವಾದ’ ಎಂದು ಹೇಳಿಕೊಂಡ ದಿವಂಗತ ಶೇಷ ನವರತ್ನ ಅವರು ಮನುಸ್ಮೃತಿಯ ಅನುವಾದವನ್ನು ನಿಜವಾಗಿಯೂ ನಿಷ್ಪಕ್ಷಪಾತಿಯಾಗಿ ಮಾಡಿದ್ದಾರೆ. ಮನು ಎಷ್ಟೊಂದು ಪಕ್ಷಪಾತಿ ಎಂಬುದಕ್ಕೆ ಆತನ ಮನುಸ್ಮೃತಿ ಗ್ರಂಥ ಸಾಕ್ಷಿಯಾಗಿದೆ.

ಮೇಲಿನ ಮೂರೂ ವರ್ಣದವರು ಮಾತ್ರ ಶುದ್ಧ ಮಾಂಸ ಭಕ್ಷಣೆ ಮಾಡಬೇಕು; ಶೂದ್ರರು ಮತ್ತು ಅತಿಶೂದ್ರರಿಗೆ ಇಂಥ ಮಾಂಸಾಹಾರ ಸೇವನೆಗೆ ಅವಕಾಶವಿರಬಾರದು ಎಂಬ ಕುತಂತ್ರದಿಂದ ಮನು ಅನೇಕ ಶ್ಲೋಕಗಳನ್ನು ರಚಿಸಿದ್ದಾನೆ. ‘ಯಜ್ಞಹಿಂಸೆ ಎಂಬುದು ಹಿಂಸೆ ಅಲ್ಲ’ ಎಂಬುದು ಅವನ ವಾದವಾಗಿದೆ. ಆದರೆ ‘ಶೂದ್ರರು ಪ್ರಾಣಿಹಿಂಸೆ ಮಾಡಬಾರದು’ ಎಂದು ಉಪದೇಶಿಸುತ್ತಾನೆ. ವೈದಿಕರು ಪ್ರಾಣಿಗಳನ್ನು ಯಜ್ಞದಲ್ಲಿ ಕೊಲ್ಲುವುದು ಧರ್ಮಸಮ್ಮತ. ಆದರೆ ಶೂದ್ರರು ಪ್ರಾಣಿವಧೆ ಮಾಡುವುದು ಧರ್ಮಬಾಹಿರ ಎಂದು ಎಚ್ಚರಿಸುತ್ತಾನೆ.
ಆಹಾರ ಸಂಸ್ಕೃತಿಯ ಮೇಲೆ ಪ್ರತಿಬಂಧ ಹೇರುವ ಕೆಳಗಿನ ಶ್ಲೋಕಗಳು ಮನುವಿನ ವರ್ಣಭೇದ ನೀತಿಗೆ ಕನ್ನಡಿ ಹಿಡಿಯುತ್ತವೆ.
ಮಧುಪರ್ಕೇ ಚ ಯಜ್ಞೇ ಚ ಪಿತೃದೈವತ ಕರ್ಮಣಿ |

ಅತ್ರೈವ ಪಶವೋ ಹಿಂಸ್ಯಾ ನಾನ್ಯತ್ರೇತ್ಯಬ್ರ ವೀನ್ಮನುಃ ||
( ಮನುಸ್ಮೃತಿ ಅಧ್ಯಾಯ 5 ಶ್ಲೋಕ 41)
(ಮಧುಪರ್ಕದಲ್ಲಿ, ಯಜ್ಞದಲ್ಲಿ, ದೇವ-ಪಿತೃ ಕರ್ಮಗಳಲ್ಲಿ ಮಾತ್ರ ಪಶುಗಳನ್ನು ಕೊಲ್ಲಬೇಕೇ ಹೊರತಾಗಿ ಬೇರೆ ಸಂದರ್ಭಗಳಲ್ಲಿ ಪಶುಹಿಂಸೆ ಸಲ್ಲದು ಎಂದು ಮನುವು ಹೇಳಿದ್ದಾನೆ.)

ಏಷ್ವರ್ಧೇಷು ಪಶೂನ್ ಹಿಂಸನ್ ವೇದತತ್ತ್ವಾರ್ಥವಿದ್ದ್ವಿಜಃ |
ಆತ್ಮಾನಂ ಚ ಪಶುಂ ಚೈವ ಗಮಯತ್ಯುತ್ತಮಾಂ ಗತಿಂ||
( ಮನುಸ್ಮೃತಿ ಅಧ್ಯಾಯ 5 ಶ್ಲೋಕ 42)
(ಹೀಗೆ ಯಜ್ಞ, ಶ್ರಾದ್ಧ ಹಾಗೂ ಮಧುಪರ್ಕ ಮುಂತಾದ ಕಾರ್ಯಗಳಿಗಾಗಿ ಮಾತ್ರ ವೇದಜ್ಞನಾದ ಬ್ರಾಹ್ಮಣನು ಪಶುವನ್ನು ಕೊಂದರೆ ತನ್ನ ಜೊತೆಗೆ ಆ ಪಶುವಿಗೂ ಉತ್ತಮ ಗತಿಯನ್ನುಂಟುಮಾಡುತ್ತಾನೆ.)

ಯಾ ವೇದ ವಿಹಿತಾ ಹಿಂಸಾ ನಿಯತಾಸ್ಮಿಂಶ್ಚರಾಚರೇ |
ಅಹಿಂಸಾಮೇವ ತಾಂ ವಿದ್ಯಾದ್ವೇದಾದ್ಧರ್ಮೋ ಹಿ ನಿರ್ಬಭೌ ||
( ಮನುಸ್ಮೃತಿ ಅಧ್ಯಾಯ 5 ಶ್ಲೋಕ 44)
(ವೇದವಿಹತವಾದ ಎಂದರೆ ವೇದಗಳಲ್ಲಿ [ಯಜ್ಞಗಳಲ್ಲಿ] ಹೇಳಿದ ಹಿಂಸೆಯು ಶಾಸ್ತ್ರನಿಯಮ ರೀತ್ಯಾ ನಡೆಯುವುದರಿಂದ ಅದನ್ನು ಅಹಿಂಸೆಯಂದೇ ಪರಿಗಣಿಸಬೇಕು. ಏಕೆಂದರೆ ವೇದಗಳಿಂದಲೇ ಧರ್ಮ ಹುಟ್ಟಿದೆ.)

ಯಜ್ಞಾಯ ಜಗ್ಧಿರ್ಮಾಂಸಸ್ಯೇತ್ಯೇಷ ದೈವೋ ವಿಧಿಃ ಸ್ಮೃತಃ |
ಅತೋ ನ್ಯಥಾ ಪ್ರವೃತ್ತಿಸ್ತು ರಾಕ್ಷಸೋ ವಿಧಿರುಚ್ಯತೇ ||
( ಮನುಸ್ಮೃತಿ ಅಧ್ಯಾಯ 5 ಶ್ಲೋಕ 31)
(ಯಜ್ಞಕ್ಕಾಗಿ ಪಶುವನ್ನು ಕೊಂದು ಮಾಡಿದ ಮಾಂಸಭಕ್ಷಣವು ‘ದೈವಿಕರೀತಿ’ ಎಂದು ಹೇಳಲ್ಪಟ್ಟಿದೆ. ಇದಕ್ಕೆ ವಿರುದ್ಧವಾಗಿ ಅನ್ಯಸಂದರ್ಭಗಳಲ್ಲಿ ಮಾಡುವ ಅಕಾರಣ ಪಶುವಧೆ ಮತ್ತು ಮಾಂಸಭಕ್ಷಣವು ‘ರಾಕ್ಷಸರೀತಿ’ ಎಂದು ಹೇಳಲ್ಪಟ್ಟಿದೆ.)

ವೇದ ಪ್ರಮಾಣವಾದ ಮನುಸ್ಮೃತಿಯ ಪ್ರಕಾರ ಶೂದ್ರರಿಗೆ ಯಜ್ಞ ಮಾಡುವ ಹಕ್ಕಿಲ್ಲ. ಆದ್ದರಿಂದ ಅವರು ಪ್ರಾಣಿಹಿಂಸೆ ಮಾಡುವ ಹಾಗಿಲ್ಲ. (ಏನಿದ್ದರೂ ಅವರು ಸತ್ತದ್ದನ್ನೇ ತಿನ್ನಬೇಕು.) ಶೂದ್ರರು ಆಹಾರಕ್ಕಾಗಿ ಪ್ರಾಣಿವಧೆ ಮಾಡಿದರೆ ಅದು ರಾಕ್ಷಸೀ ಕೃತ್ಯ. ಸವರ್ಣೀಯರು ಯಜ್ಞದಲ್ಲಿ ಪ್ರಾಣಿಗಳನ್ನು ಕೊಂದು ತಿಂದರೆ ಅದು ದೈವಿಕರೀತಿ. ದೇವಮಾರ್ಗದಲ್ಲಿ ಪ್ರಾಣಿಗಳನ್ನು ಕೊಲ್ಲುವ ಹಕ್ಕು ವೈದಿಕರಿಗೆ ಮಾತ್ರ ಇದೆ. ಶೂದ್ರರಿಗೆ ಪ್ರಾಣಿಗಳನ್ನು ಆಹಾರವಾಗಿಸುವ ಹಕ್ಕಿಲ್ಲ. ಹೇಗಿದೆ ಮನುಧರ್ಮ ನ್ಯಾಯ?
(ರಂಜಾನ್ ದರ್ಗಾ ಅವರ “ಮೂರ್ತ ಮತ್ತು ಅಮೂರ್ತ” 2017 ಪುಸಕ್ತದಿಂದ)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ರಂಜಾನ ಧರ್ಗಾರವರ ಲೇಖನ ಅರ್ಥಪೂರ್ಣ,ಇಂದು ಕೂಡ ದನಗಳಿಂದ ಉತ್ತಿಯಾದ ಹಾಲು ತುಪ್ಪಗಳನ್ನು ಸಾಂಕೇತಿಕವಾಗಿ ಯಜ್ಞ ಗಳಲ್ಲಿ ಬಳಸುತ್ತಿರುವರು.,ಇದು ಮನುವಿನ ಮುಂದುವರಿದ ಭಾಗವೇ.

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...