ಭಾರತಕ್ಕೆ ಸ್ವಾತಂತ್ರ್ಯ ಬಂದ ಕುರಿತು ವಿವಾದಿತ ಹೇಳಿಕೆ ನೀಡಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿರುವ ಬಾಲಿವುಡ್ ನಟಿ ಕಂಗನಾ ರಣಾವತ್‌ರವರಿಗೆ ನೀಡಿರುವ ಪದ್ಮಶ್ರೀ ಪ್ರಶಸ್ತಿಯನ್ನು ವಾಪಸ್ ಪಡೆಯಬೇಕೆಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷರಾದ ಸ್ವಾತಿ ಮಾಲಿವಾಲ್‌ರವರು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.
ಭಾರತ ದೇಶದ ಸ್ವಾತಂತ್ರ್ಯಕ್ಕಾಗಿ ಜೀವ ಸವೆಸಿದ, ತಮ್ಮ ಪ್ರಾಣ ತ್ಯಾಗ ಮಾಡಿದ ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್‌ರಂತಹ ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವ ಕಂಗನಾ ರಣಾವತ್‌ರವರಿಗೆ ನೀಡಬೇಕಿರುವುದು ಚಿಕಿತ್ಸೆಯನ್ನು ಹೊರತು ಪದ್ಮಶ್ರೀಯಲ್ಲ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
1857ರ ಭಾರತದ ಪ್ರಥಮ ಸ್ವಾತಂತ್ರ್ಯ ದಂಗೆ, ಖಿಲಾಫತ್ ಚಳವಳಿ, ಚಂಪರಣ್ಯ ಸತ್ಯಾಗ್ರಹ, ಭಾರತ ಬಿಟ್ಟು ತೊಲಗಿ ಚಳವಳಿ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಹಲವು ಹೋರಾಟಗಳನ್ನು ಪಟ್ಟಿಮಾಡಿರುವ ಸ್ವಾತಿ ಮಾಲಿವಾಲ್ ಇವುಗಳನ್ನು ಕಂಗನಾ ಅವಮಾನಿಸಿರುವುದನ್ನು ಖಂಡಿಸಿದ್ದಾರೆ.
कंगना रनाउत ऐसी महिला है जिसे गांधी भगत सिंह की शहादत मज़ाक़ लगती है और लाखों लोगों की त्याग तपस्या से हासिल आज़ादी भीख लगती है! इसको पुरस्कार की नही इलाज की ज़रूरत है!
मैंने राष्ट्रपति को पत्र लिखा है कि तुरंत रनाउत का पद्म श्री वापिस लेके उसपे राष्ट्रद्रोह की FIR होनी चाहिए! pic.twitter.com/GqlwwUSpfK
— Swati Maliwal (@SwatiJaiHind) November 14, 2021
ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷ್ ಆಡಳಿತದ ವಿರುದ್ಧ ಜಲಿಯನ್ ವಾಲಾಬಾಗ್‌ನಲ್ಲಿ ಒಟ್ಟುಗೂಡಿದ ಸಾವಿರಾರು ಜನರನ್ನು, ನಂತರ ನಡೆದ ಹತ್ಯಾಕಾಂಡವನ್ನು ಹೇಗೆ ಮರೆಯಲು ಸಾಧ್ಯ ಎಂದು ಪ್ರಶ್ನಿಸಿರುವ ಮಾಲಿವಾಲ್, ಇತಿಹಾಸದ ಈ ಪುಟಗಳು ಭಿಕ್ಷೆಯೇ ಎಂದು ಕಿಡಿಕಾರಿದ್ದಾರೆ.
“ಇದು ಕಂಗನಾ ಬಾಯಿ ತಪ್ಪಿ ಮಾತನಾಡಿದ್ದಲ್ಲ. ಅವರು ನಮ್ಮ ದೇಶದ ಜನರ ವಿರುದ್ಧ ವಿಷ ಉಗುಳುತ್ತಿರುವುದರಿಂದ ಅವರು ಸದೃಢ ಮನಸ್ಸಿನವರಾಗಿ ಕಾಣುತ್ತಿಲ್ಲ. ಅವರ ಅಭಿಪ್ರಾಯಕ್ಕೆ ಸಹಮತವಿಲ್ಲದವರ ಮೇಲೆ ಆಕ್ರಮಣ ಮಾಡಲು ಪದೇ ಪದೇ ಕೆಟ್ಟ ಭಾಷೆಯನ್ನು ಬಳಸಿದ್ದಾರೆ” ಎಂದು ಸ್ವಾತಿ ಮಾಲಿವಾಲ್ ಕಿಡಿಕಾರಿದ್ದಾರೆ.
ಬುಧವಾರ (ನ.10) ಖಾಸಗಿ ಟೆಲಿವಿಷನ್ ಚಾನೆಲ್ ಟೈಮ್ಸ್ ನೌ ಆಯೋಜಿಸಿದ್ದ ಕಾನ್ಕ್ಲೇವ್‌ನಲ್ಲಿ ಭಾಗವಹಿಸಿದ್ದ ನಟಿ ಕಂಗನಾ ರಣಾವತ್ ಹಿಂದಿಯಲ್ಲಿ ಮಾತನಾಡುತ್ತಾ, “1947 ರಲ್ಲಿ ಸಿಕ್ಕಿದ್ದು ಸ್ವಾತಂತ್ರ್ಯವಲ್ಲ ಅದು ಭಿಕ್ಷೆ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ 2014 ರಲ್ಲಿ ಬಂದಿದೆ” ಎಂದಿದ್ದರು. ಆ ಮೂಲಕ 2014 ರಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ದೇಶ ಸ್ವತಂತ್ರಗೊಂಡಿದೆ ಎಂಬರ್ಥದಲ್ಲಿ ಕಂಗನಾ ಮಾತನಾಡಿದ್ದರು. ಬಿಜೆಪಿ ಸಂಸದ ವರುಣ್ ಗಾಂಧಿ ಸೇರಿದಂತೆ ಲಕ್ಷಾಂತರ ಜನ ಕಂಗನಾ ಹೇಳಿಕೆಯನ್ನು ಖಂಡಿಸಿದ್ದರು.
ಕಂಗನಾ ರಣಾವತ್ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಅದನ್ನು ಯಾರಾದರೂ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ ಎಂದು ಹೇಳಿದ್ದಾರೆ.
ಇಂದು ಈ ಕುರಿತು ಮತ್ತೆ ಪ್ರತಿಕ್ರಿಯಿಸಿರುವ ಕಂಗನಾ, “ಭಾರತದಲ್ಲಿ ಬ್ರಿಟಿಷರು ಮಾಡಿದ ಲೆಕ್ಕವಿಲ್ಲದಷ್ಟು ಅಪರಾಧಗಳಿಗೆ ಹೊಣೆಗಾರರಾಗದಿರುವುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ತೋರಿದ ಅಗೌರವ” ಎಂದಿದ್ದಾರೆ.
ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ದೇಶದ ಸಂಪತ್ತನ್ನು ಲೂಟಿ ಮಾಡುವುದರಿಂದ ಹಿಡಿದು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ದಯವಾಗಿ ಕೊಂದು ನಮ್ಮ ದೇಶವನ್ನು ಎರಡು ಭಾಗಗಳಾಗಿ ವಿಭಜಿಸುವವರೆಗೆ ಭಾರತದಲ್ಲಿ ಮಾಡಿದ ಲೆಕ್ಕವಿಲ್ಲದಷ್ಟು ಅಪರಾಧಗಳಿಗೆ ನಮ್ಮ ರಾಷ್ಟ್ರ ನಿರ್ಮಾತೃಗಳು ಬ್ರಿಟಿಷರನ್ನು ಹೊಣೆಗಾರರನ್ನಾಗಿ ಮಾಡಲಿಲ್ಲ. ಎರಡನೇ ವಿಶ್ವಯುದ್ಧದ ನಂತರ ಬ್ರಿಟಿಷರು ತಮ್ಮ ಬಿಡುವಿನ ವೇಳೆಯಲ್ಲಿ ಭಾರತವನ್ನು ತೊರೆದರು. ವಿನ್‌ಸ್ಟನ್ ಚರ್ಚಿಲ್ ಅವರನ್ನು ಯುದ್ಧ ವೀರ ಎಂದು ಪ್ರಶಂಸಿಸಲಾಯಿತು. ಬಂಗಾಳದ ಕ್ಷಾಮಕ್ಕೆ ಕಾರಣವಾದ ಅದೇ ವ್ಯಕ್ತಿ; ಅವರು ತನ್ನ ಅಪರಾಧಗಳಿಗಾಗಿ ಸ್ವತಂತ್ರ ಭಾರತದ ನ್ಯಾಯಾಲಯಗಳಲ್ಲಿ ಎಂದಾದರೂ ವಿಚಾರಣೆಗೆ ಒಳಗಾಗಿದ್ದಾರೆಯೇ? ಇಲ್ಲ ಎಂದು ಕಂಗನಾ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ನನ್ನ ಹೇಳಿಕೆ ತಪ್ಪೆಂದು ಸಾಬೀತುಪಡಿಸಿದರೆ ಪದ್ಮಶ್ರೀ ವಾಪಸ್ ಮಾಡುತ್ತೇನೆ: ಕಂಗನಾ ರಣಾವತ್


