ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿಸಿರುವ “ಕನ್ನಡ ಕಾಯಕ ವರ್ಷಾಚರಣೆ-2020ʼʼ ಯ ಲಾಂಛನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ವಿಧಾನಸೌಧದಲ್ಲಿ ಇಂದು ಬಿಡುಗಡೆಗೊಳಿಸಿದರು.
ಲಾಂಛನ ಬಿಡುಗಡೆ ಮಾಡುವ ಮೂಲಕ ಕನ್ನಡ ಕಾಯಕ ವರ್ಷ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಾಗಾಭರಣ, ಕಾರ್ಯಕ್ರಮವನ್ನು ಒಂದು ವರ್ಷಪೂರ್ತಿ ಅರ್ಥಪೂಣವಾಗಿ ಆಚರಿಸಲು ಹಲವು ಪ್ರತ್ಯೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲು ಎಲ್ಲರ ಸಹಭಾಗಿತ್ವ ಬಹಳ ಮುಖ್ಯ ಎಂದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆಯಾಗಿದ್ದು, ಮತ್ತಷ್ಟು ಸಮೃದ್ಧವಾಗಿ ವಿಸ್ತಾರಗೊಳಿಸಲು ಕನ್ನಡವನ್ನು ವಿವಿಧ ವಯೋಮಾನದ, ವಿವಿಧ ರಂಗಗಳ ಜನರು ಸುಲಭವಾಗಿ ಕಲಿಯುವಂತಾಗಲು ಆರಂಭಿಕ ಕ್ರಮವಾಗಿ ಇ-ಕನ್ನಡ ಕಲಿಕಾ ಅಕಾಡೆಮಿ ಪೋರ್ಟಲ್ ಒಂದನ್ನು ಆರಂಭಿಸಲಾಗಿದೆ. ಇಲ್ಲಿ ಕನ್ನಡ ಕಲಿಕೆ, ಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನೂ ಕಾಲಕಾಲಕ್ಕೆ ಸಂಗ್ರಹಿಸಿ ಪ್ರಕಟಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಮಾತು ತಪ್ಪಿದ ಕೇಂದ್ರ ಸರ್ಕಾರ – ಟಿ.ಎಸ್.ನಾಗಾಭರಣ
ರಾಜ್ಯ, ದೇಶ ಮತ್ತು ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಲ್ಲಿ ಉದ್ಯೋಗ ಪಡೆಯಲು ಸಹಕಾರಿಯಾಗಲು ಹಾಗೂ ಅವರಿಗೆ ಉನ್ನತ ಶಿಕ್ಷಣದಲ್ಲಿ ಅವಕಾಶ ಸಿಗುವ ನಿಟ್ಟಿನಲ್ಲಿ “ಕನ್ನಡ ಭಾಷಾ ಕೌಶಲ್ಯ ಆನ್‌ಲೈನ್ ಪರೀಕ್ಷೆ” ವ್ಯವಸ್ಥೆಯನ್ನು ರೂಪಿಸಲಾಗಿದೆ ಎಂದರು.
ಕನ್ನಡದಲ್ಲಿ ಇ-ಮೇಲ್ ವಿಳಾಸಗಳನ್ನು ರಚಿಸಿಕೊಳ್ಳಲು ಕೆಲ ದಿನಗಳಷ್ಟೇ ಕಾಯಬೇಕಿದೆ ಎಂಬ ಅಂಶವನ್ನು ನಾಗಾಭರಣ ತಿಳಿಸಿದ್ದಾರೆ. ’ಕರ್ನಾಟಕ.ಭಾರತ(ಕರ್ನಾಟಕ[ಡಾಟ್]ಭಾರತ) ಎಂಬ ಯು.ಆರ್.ಎಲ್ ಭಾರತ ಸರ್ಕಾರದ ನ್ಯಾಶನಲ್ ಇಂಟರ್ನೆಟ್ ಎಕ್ಸ್ಚೇಂಜ್ ಆಫ್ ಇಂಡಿಯಾವು ಕರ್ನಾಟಕ ಸರ್ಕಾರದ ಬಳಕೆಗಾಗಿ ಮೀಸಲಿಟ್ಟಿದೆ. ಇ–ಆಡಳಿತ ಇಲಾಖೆಯ ಮೂಲಕ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಇದು ಜಾರಿಯಾದಲ್ಲಿ ಇ-ಮೇಲ್ ವಿಳಾಸಗಳನ್ನು ಕನ್ನಡದಲ್ಲಿಯೇ ರಚಿಸಿಕೊಳ್ಳಬಹುದಾಗಿದೆ, ಆ ಮೂಲಕ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಪಸರಿಸಲು ಸಹಕಾರಿಯಾಗಲಿದೆ’ ಎಂದು ವಿವರಿಸಿದರು.
ಕನ್ನಡ ಲಿಪಿಯಲ್ಲೇ ಉಚಿತ ಇ-ಮೇಲ್ ಸೇವೆಯನ್ನು ಎಲ್ಲ ಕನ್ನಡಿಗರಿಗೆ ನೀಡುವ ಸದುದ್ದೇಶದಿಂದ ಕರ್ನಾಟಕ ಸರ್ಕಾರವು ಈಗಿರುವ “.ಭಾರತ್“ (ಡಾಟ್ ಭಾರತ್) ಸೇವೆಯನ್ನು ಬಳಸಿಕೊಂಡು ರಾಜ್ಯ ಸರ್ಕಾರದ ಎಲ್ಲ ಜಾಲತಾಣ (ವೆಬ್ಸೈಟ್)ಗಳನ್ನು ಕನ್ನಡಕ್ಕೆ ಬದಲಾಯಿಸಿದರೆ ಕನ್ನಡದಲ್ಲೇ ಇ-ಮೈಲ್ ಸೇವೆಯನ್ನೂ ನೀಡಬಹುದು (ಉದಾಹರಣೆಗೆ ಮುಖ್ಯಮಂತ್ರಿ@ಕರ್ನಾಟಕ.ಭಾರತ) ಎಂದರು.
ಒಟ್ಟಾರೆ ಕನ್ನಡ ಭಾಷೆಯನ್ನು ರಾಜ್ಯದಲ್ಲಿ ಮಾತ್ರವಲ್ಲದೇ ಜಾಲತಾಣಗಳ ಹೆಸರುಗಳನ್ನು ಕನ್ನಡದಲ್ಲೇ ಬಳಸಲು ಅವಕಾಶ ಒದಗಿಸಿ, ಆ ಮೂಲಕ ಕನ್ನಡ ಭಾಷೆಯನ್ನು ಜಗತ್ತಿನಾದ್ಯಂತ ಪಸರಿಸಬಹುದು ಎಂದಿದ್ದಾರೆ.
ಇನ್ನೂ, ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿರುವ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜಾಲತಾಣಗಳಲ್ಲಿ ಸಂಪೂರ್ಣವಾಗಿ ಕನ್ನಡವನ್ನು ಬಳಸುವ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೂ ಮುಖ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಲಿದ್ದು, “ಕನ್ನಡ ಕಾಯಕ ವರ್ಷ”ದಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುವುದಾಗಿ ಪ್ರಾಧಿಕಾರ ಅಧ್ಯಕ್ಷ ನಾಗಭರಣ ತಿಳಿಸಿದ್ದಾರೆ.

ಇದರ ಜೊತೆಗೆ ಕನ್ನಡ ಕಾಯಕ ವರ್ಷಾಚರಣೆಯಲ್ಲಿ ನಾಗರಿಕರು, ಖಾಸಗಿ ಸಂಸ್ಥೆಗಳು, ಸರ್ಕಾರಿ ಇಲಾಖೆಗಳು, ಸಂಘಸಂಸ್ಥೆಗಳನ್ನು ಒಳಗೊಳ್ಳಲು ಯೋಜನೆ ರೂಪಿಸಲಾಗುತ್ತದೆ. ಪ್ರಾಯೋಗಿಕವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದಲೇ ಕರ್ನಾಟಕ ನಾಡಿನ ಚರಿತ್ರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಿರುಹೊತ್ತಿಗೆಗಳನ್ನು ಪ್ರಕಟಿಸಲಾಗುವುದು. “ಹಾಡಬನ್ನಿ-ನೋಡಬನ್ನಿʼʼ ಕಾರ್ಯಕ್ರಮದ ಮೂಲಕ 10 ಕಿರುಚಿತ್ರ ಮತ್ತು ಹಾಡುಗಳಿಗೆ ವರ್ಷಾಂತ್ಯಕ್ಕೆ ಪ್ರಶಸ್ತಿಯನ್ನು ನೀಡಲಾಗುವುದು. ವಿವಿಧ ಗಣ್ಯರಿಂದ ನಾಡಿನ ಮಕ್ಕಳಿಗೆ “ಉದ್ಯೋಗ ಪೂರ್ವ ಯೂಟ್ಯೂಬ್ ತರಬೇತಿ” ಹಮ್ಮಿಕೊಳ್ಳಲಾಗುವುದು ಎಂದರು.


