Homeಮುಖಪುಟಬೇಂದ್ರೆ-125; ಪ್ರತಿಭಟಿಸಿದ ಬೇಂದ್ರೆ ಕಾವ್ಯ : ಬಡವರಬಗ್ಗರ ತುತ್ತಿನ ಚೀಲವ ಮಾತ್ರ ’ಬರಿದೋ ಬರಿದು’

ಬೇಂದ್ರೆ-125; ಪ್ರತಿಭಟಿಸಿದ ಬೇಂದ್ರೆ ಕಾವ್ಯ : ಬಡವರಬಗ್ಗರ ತುತ್ತಿನ ಚೀಲವ ಮಾತ್ರ ’ಬರಿದೋ ಬರಿದು’

ಅರವಿಂದರ ಮತ್ತು ಅವರ ಆಶ್ರಮದ ಬಗೆಗಿನ ಬೇಂದ್ರೆ ಅವರ ಪ್ರೀತಿಯ ಬಗ್ಗೆ ಪುಸ್ತಕಗಳನ್ನೇ ಬರೆಯಲಾಗಿದೆ. ಆದರೆ ಯುದ್ಧ ಹಾಗೂ ವಸಾಹತುಶಾಹಿಯ ಬಗ್ಗೆ ’ನರಬಲಿ’ ಪದ್ಯವನ್ನು ಬರೆದದ್ದಕ್ಕಾಗಿ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿ, ಆನಂತರ ಮುಗದದಲ್ಲಿ ’ನಜರ್‌ಬಂದಿ’ಯಲ್ಲಿ ಅವರು ಇರಬೇಕಾಗಿ ಬಂದುದನ್ನು ಬಹಳ ಚುಟುಕಾಗಿ ವಿವರಿಸಲಾಗುತ್ತದೆ. ಈ ಶಿಕ್ಷೆಯ ನಂತರ ಅವರಿಗೆ ಯಾವ ಉದ್ಯೋಗವೂ ಸಿಕ್ಕದೆ ವರ್ಷಗಳ ಕಾಲ ಬೇಂದ್ರೆ ಅನಿಶ್ಚಿತವಾದ ಜೀವನ ನಡೆಸಿದರು.

- Advertisement -
- Advertisement -

ನಾನು ಬೆಳೆದದ್ದು ಓದಿದ್ದು ಹುಬ್ಬಳ್ಳಿ-ಧಾರವಾಡದಲ್ಲಿ. ಕರ್ನಾಟಕ ಕಾಲೇಜು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಾವು ಓದುತ್ತಿದ್ದಾಗ ನಮಗೆ ಬೇಂದ್ರೆಯವರ ಬಗ್ಗೆಯಾಗಲಿ ಅವರ ಕಾವ್ಯದ ಬಗ್ಗೆ ಆಗಲಿ ಅಂಥಾ ವಿಶೇಷ ಪ್ರೀತಿಯೇನಿರಲಿಲ್ಲ. ಮುಖ್ಯ ಕಾರಣವೆಂದರೆ ಆ ಹೊತ್ತಿಗಾಗಲೇ ಬೇಂದ್ರೆಯವರು ಅವರ ಪ್ರತಿಭೆಗಿಂತ ಅವರ ವಿಕ್ಷಿಪ್ತತೆಯ ಕಾರಣಕ್ಕೆ ಪ್ರಸಿದ್ಧರಾಗಿದ್ದರು. ಅವರ ಶಿಷ್ಯರ ಗುಂಪು ಅವರ ಕಾವ್ಯವನ್ನು ಆಧ್ಯಾತ್ಮವಾಗಿ ಓದುತ್ತ, ಅವರ ತಾತ್ವಿಕ ಕವನಗಳನ್ನು ಕೆಲವು ಸಾಧಕರಿಗೆ ಮಾತ್ರ ಅರ್ಥವಾಗಬಲ್ಲ ರಹಸ್ಯಮಯ ಪದ ಚಕ್ರವ್ಯೂಹವೆಂದು ಪ್ರಚಾರ ಮಾಡುತ್ತಿದ್ದರು. ಅದು 1970ರ ದಶಕದ ಕಾಲವಾಗಿದ್ದರಿಂದ ಚಳವಳಿಗಳು, ಹೋರಾಟಗಳ ಕಾಲವಾಗಿತ್ತು. ಈ ಸನ್ನಿವೇಶದಲ್ಲಿ ನಮಗೆ ಬೇಂದ್ರೆ ವೈದಿಕ ಸಂಪ್ರದಾಯದ ಪ್ರತಿನಿಧಿಯಾಗಿ ಕಾಣುತ್ತಿದ್ದರು. ಆದರೆ ಹುಕ್ಕೇರಿ ಬಾಳಪ್ಪನವರ ಅದ್ಭುತ ಹಾಡುಗಾರಿಕೆಯಿಂದ, ಶಂಕರ ಮೊಕಾಶಿ ಪುಣೇಕರ್ ಅವರ ಮಾತು, ಭಾಷಣಗಳಿಂದಾಗಿ ನಮ್ಮ ಕೈಗೆ ಎಟುಕದಿದ್ದ ಬೇಂದ್ರೆ ಒಬ್ಬರು ಇದ್ದಾರೆ ಎಂದು ಅನ್ನಿಸುತ್ತಿತ್ತು.

ಹೀಗಾಗಿ ನಾನು ಧಾರವಾಡವನ್ನು ಬಿಟ್ಟು ಶಿವಮೊಗ್ಗೆಗೆ ಬಂದ ಮೇಲೆಯೆ ಈ ನಿಜವಾದ ಬೇಂದ್ರೆಯವರನ್ನು ಆವಿಷ್ಕಾರ ಮಾಡಿಕೊಳ್ಳತೊಡಗಿದ್ದು. ಬೇಂದ್ರೆ ವಿಶ್ವದ ಶ್ರೇಷ್ಠ ಕವಿಗಳಲ್ಲಿ ಒಬ್ಬರು ಎನ್ನುವುದನ್ನು ಕಂಡುಕೊಂಡೆ. ಇದೆಲ್ಲ ಇಲ್ಲಿ ಹೇಳಲು ಕಾರಣವೆಂದರೆ ಇಂದಿನ ತಲೆಮಾರಿನ ಯುವಕ ಯುವತಿಯರೂ ಬೇಂದ್ರೆ ಕಾವ್ಯಕ್ಕೆ ಇಂಥದೇ ಪಯಣ ಮಾಡುತ್ತಿರಬಹುದು. 1932ರಲ್ಲಿ ತಮ್ಮ ಶ್ರೇಷ್ಠ ಸಂಕಲನವಾದ ಗರಿಯನ್ನು ಪ್ರಕಟಿಸಿದ ಬೇಂದ್ರೆ 90 ವರ್ಷಗಳ ನಂತರ ಅದನ್ನು ಓದುವ ತಲೆಮಾರಿಗೆ ಎಷ್ಟು ಪ್ರಸ್ತುತವಾಗಿದ್ದಾರೆ? ಇಂದಿನ ಬದುಕಿಗೆ ಸ್ಪಂದಿಸುವ, ಸಮಕಾಲೀನವೆನ್ನಿಸುವಂಥ ಶಕ್ತಿ ಬೇಂದ್ರೆ ಕಾವ್ಯಕ್ಕೆ ಇದೆಯೆ?

ಬೇಂದ್ರೆ ಕಾವ್ಯದ ಅಲಕ್ಷಿತವಾದ ಗುಣವೆಂದರೆ ಅದರಲ್ಲಿರುವ ತೀವ್ರ ಪ್ರತಿಭಟನಾತ್ಮಕ ಗುಣ. ಇದರಲ್ಲಿ ಉದ್ವೇಗವಿದೆ, ರೊಚ್ಚಿದೆ ಅತ್ಯಂತ ತೀಕ್ಷ್ಣವಾದ ವಿಡಂಬನೆಯ ಶಕ್ತಿಯಿದೆ. ಇದೇನು ವಿಚಿತ್ರವಾದ ಹೇಳಿಕೆ ಎಂದು ಅನ್ನಿಸಿದರೂ ಈ ಗುಣವು ಬ್ರೆಕ್ಟ್‌ನ ಪದ್ಯಗಳಲ್ಲಿ ಕಾಣುವಂತಹದು. ಇದರಲ್ಲಿ ಉದ್ದೇಶಪೂರ್ವಕವಾದ ಉತ್ಪ್ರೇಕ್ಷೆ ಇದೆ. ವಿರೋಧಾಭಾಸದ ಬಳಕೆಯಿದೆ. ಉದಾಹರಣೆಗೆ ತುಂಬಾ ಸರಳವಾದ ಮತ್ತು ಕೆಲವರು ಮಕ್ಕಳ ಪದ್ಯವೆಂದು ತಪ್ಪಾಗಿ ಓದಿಕೊಳ್ಳುವ ’ಕರಿಮರಿ ನಾಯಿ’ ಪದ್ಯವನ್ನು ನೋಡಬಹುದು. ಈ ಪದ್ಯದಲ್ಲಿನ ಪ್ರತಿದ್ವಂದ್ವಿಗಳು ಒಂದು ಕರಿಮರಿ ನಾಯಿ ಮತ್ತು ಭಟ್ಟರು. ಭಟ್ಟರಿಗೆ ಕರಿಮರಿ ನಾಯಿ ಮೈಲಿಗೆ. ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಕೊಚ್ಚಿಹೋಗುವ ಭಯದಿಂದ ಅದು ಮನೆಯೊಳಗೆ ನುಗ್ಗಬಹುದೆಂದು ಅವರಿಗೆ ಭೀತಿ. ಹೀಗಾಗಿ ವೀರಯೋಧನಂತೆ ಕೈಯಲ್ಲಿ ಸೌಟು ಹಿಡಿದು ಬಾಗಿಲಲ್ಲಿ ರಕ್ಷಣೆಗೆ ನಿಂತಿದ್ದಾರೆ! ಈ ವ್ಯಂಗ್ಯ ಚಿತ್ರವನ್ನು ಕಲ್ಪಿಸಿಕೊಂಡು ಓದಿದರೆ ಈ ಕಾಳಗದ ಹಿಂದೆ ಅನೇಕ ಅರ್ಥಗಳು ಹೊಳೆಯುತ್ತವೆ. ಅದಕ್ಕೆ ಪೂರಕವಾಗಿ doggerel ಎಂದು ಕರೆಯಲಾಗುವ ಶೈಲಿಯ ಅಂತ್ಯ ಪ್ರಾಸಗಳಿವೆ. ಮತ್ತು ಕಾಳಗದ ವ್ಯಾಖ್ಯಾನಕಾರರಾದ ಬೇಂದ್ರೆಯವರ ತುಂಟ ದನಿಯಿದೆ.

ಭಪ್ಪರೆ ಭಪ್ಪರೆ ಭಲರೆ! ಭಟ್ಟರೋ
ಕಾಯ್ದರು ಮನೆಯನು ಏನು ದಿಟ್ಟರೋ
ಕುನ್ನಿಯು ಒಳಗೇ ಬಂದೇನೆಂದಿತು;
ಭಟ್ಟರು ಬಂದರೆ ಕೊಂದೇನೆಂದರು

PC : BookBrahma

ಈ ವ್ಯಂಗ್ಯ ವಿಡಂಬನೆಗಳಿಗೆ ಸಾಮಾಜಿಕ ವಿಮರ್ಶೆಯ ಹರಿತವಾದ ಗುಣವು ಸೇರಿಕೊಳ್ಳುವುದು. ಅವರ ಅನೇಕ ಅತ್ಯುತ್ತಮ ಪದ್ಯಗಳಲ್ಲಿ ’ತುತ್ತಿನ ಚೀಲ’ ಇಂದಿಗೂ ಬಡವರ ಬಗ್ಗರ ಬಗೆಗಿನ ಅತ್ಯಂತ ಪ್ರಭಾವಿ ಪದ್ಯವಾಗಿದೆ. ಬೇಂದ್ರೆಯವರ ಸಂವೇದನೆಯ ಗುಣವೆಂದರೆ ಒಂದು ವಾಸ್ತವವನ್ನು ಅತಿಶಯಕ್ಕೆ ಉತ್ಪ್ರೇಕ್ಷೆಗೆ ತೆಗೆದುಕೊಂಡು ಹೋಗಿ ಅದನ್ನು ಶಕ್ತಿಶಾಲಿ ರೂಪಕವನ್ನಾಗಿ ಪರಿವರ್ತಿಸುವುದು. 19ನೇ ಶತಮಾನದ ಔದ್ಯೋಗಿಕ ಕ್ರಾಂತಿಯ ಯುಗವು ತಂದಂಥ ಅಸಮಾನತೆಗಳ ಬಗ್ಗೆ ಇಂದಿಗೂ ನಾವು ಓದುವ ವಿಲಿಯಮ್ ಬ್ಲೇಕ್ ಕವಿಯ ಶೈಲಿಯು ಹೀಗೇ ಇತ್ತು. ಅವನ ಒಂದು ಪದ್ಯದಲ್ಲಿ ಬಾಲಕಾರ್ಮಿಕನಾದ ಹುಡುಗನ ಕನಸಿನಲ್ಲಿ ದೇವದೂತನೊಬ್ಬನು ಬಂದು ’ದುಃಖ ಪಡಬೇಡ ಸ್ವರ್ಗದಲ್ಲಿ ದೇವರು ನಿನ್ನ ಕಷ್ಟಗಳಿಗೆ ಪರಿಹಾರ ನೀಡುತ್ತಾನೆ. ಈಗ ಒಳ್ಳೆಯ ಹುಡುಗನಾಗಿರು’ ಎಂದು ಹೇಳುತ್ತಾನೆ. ಬ್ಲೇಕ್‌ನಿಗೆ ಆ ಕಾಲದ ಫ್ಯಾಕ್ಟರಿಗಳು ಮತ್ತು ಚರ್ಚುಗಳು ‘dark satanic mills’ (ಸೈತಾನನ ಕಪ್ಪು ಕಾರ್ಖಾನೆಗಳು) ಆಗಿ ಕಾಣುತ್ತವೆ. ಇಂಥದೇ ರೂಪಕ ಶಕ್ತಿಯನ್ನು ಬೇಂದ್ರೆಯವರ ಪದ್ಯದಲ್ಲಿ ಕಾಣಬಹುದು.

“ದೈವುಳ್ಳವರಿಗೆ ದಯವೇ ಇಲ್ಲ!
ತಿತ್ತಿರೆ ತುಂಬಿದೆ
ಕೂಳಿನ ಕೋಟೆ
ಬಿಡುಗಣ್ಣವರಿಗೆ
ಕಾಣುವುದಿಲ್ಲ
ಅಮೃತ ತೇಗಿನ
ಮದವಂತಹದು!
ಹಸಿದವ ಬಲ್ಲ
ಹಸಿವೆಯ ಶೂಲಿ”

’ದೈವುಳ್ಳವರು’ ಇಲ್ಲಿ ಶ್ರೀಮಂತರು ಮತ್ತು ಅವರ ಒಡೆತನದ ಕೂಳಿನ ಕೋಟೆ ತುಂಬಿದೆ ಆದರೆ ಬಡವರು ಈ ಕೋಟೆಯನ್ನು ಲಗ್ಗೆ ಹಾಕಿ ಪ್ರವೇಶಿಸಲಾರರು ಎಂದು ಅರ್ಥಕೊಡುತ್ತದೆ. ಆದರೆ ಈ ’ಅನಿಮೇಶರು’ ಪದ್ಯದ ಮುಂದಿನ ಸಾಲಿನಲ್ಲಿ ದೇವರುಗಳೇ ಈ ದೈವುಳ್ಳವರು ಎಂದು ಭಾಸವಾಗುತ್ತದೆ. ಅವರು ಬಿಡುಗಣ್ಣವರು (ಅನಿಮೇಶರು- ರೆಪ್ಪೆ ಮಿಟುಕಿಸದವರು). ಆದರೆ ಅವರಿಗೆ ಬಡವರ ಬವಣೆ ಕಾಣುವುದಿಲ್ಲ. ಏಕೆಂದರೆ ಅವರು ಅಮೃತ ಕುಡಿದ ಮದದಲ್ಲಿದ್ದಾರೆ, ಹಸಿದವರು ಮಾತ್ರ ಹಸಿವಿನ ಶೂಲ/ನೋವು ಅನುಭವಿಸುತ್ತಾರೆ.

ಮನುಷ್ಯ ಜೀವವು ಹಸಿವಿನಿಂದ ಕೂಗಿದರೆ ಅದು “ಮುಗಿಲಿನ ಕಿವಿಯನು/ ಮುಟ್ಟಲೇ ಇಲ್ಲ, ಇಲ್ಲಿ ಭುವಿಯಲ್ಲಿ ಅನ್ನದ ಕೊರತೆಯೇನು ಇಲ್ಲ.

“ಕಿಕ್ಕಿರಿ ತುಂಬಿದೆ
ಭೂಮಿಯ ಕಣಜ
ಕಕ್ಕಸ ಬಿಡುತಿದೆ
ಬೊಕ್ಕಸದೊಡಲು”

ಆದರೆ ಬಡವರ ಬಗ್ಗರ ತುತ್ತಿನ ಚೀಲವು ಮಾತ್ರ ’ಬರಿದೋ ಬರಿದು’. ನನಗಂತೂ ಈ ಸಾಲು ಓದಿದಾಗ ಹಸಿವಿನಿಂದ ಮುಕ್ತಿಯೇ ಇಲ್ಲದ 200 ಮಿಲಿಯನ್ ಭಾರತೀಯರು ಮತ್ತು ಬಹುಪಾಲು ಹೆಗ್ಗಣಗಳ ಪಾಲಾಗುವ ನಮ್ಮ FCIಗಳಲ್ಲಿ ಶೇಖರಿಸಿರುವ ಆಹಾರ ಧಾನ್ಯಗಳ ನೆನಪಾಗುತ್ತದೆ.

ಇದನ್ನೂ ಓದಿ: ಬೇಂದ್ರೆ-125 ವಿಶೇಷ: ಬೇಂದ್ರೆ ಎಂಬ ಧಾರವಾಡೀ ಗಾರುಡಿಗತನ

ಹಾಗಂತ ಈ ಪದ್ಯ ಬಡವರ ಬಗ್ಗೆ ಬರೀ ಕರುಣೆಯ ಅಥವಾ ಅವರು ಅಸಹಾಯಕ ಬಲಿಪಶುಗಳು ಎನ್ನುವ ಚಿತ್ರವನ್ನು ಮಾತ್ರ ಕೊಡುವುದಿಲ್ಲ. “ಬಡವರ ಬಗ್ಗರ ತುತ್ತಿನ ಚೀಲದ ಒಳಗಿನ ಒಳದನಿಯೊಂದು” ಪ್ರತಿಭಟನೆಯ ದನಿಯಾಗಿ ಹೊರಬರುತ್ತಲಿದೆ. ಅದು “ದೇವರದೊಂದು/ ಗೋರಿಯ ಕಟ್ಟಿ, ಧರ್ಮದ ಧೂಪಕೆ ಬೆಂಕಿಯನಿಕ್ಕಿ ನೆಲವನ್ನೆಲ್ಲಾ ತುತ್ತುವನೆಂದು ಗದರುತ್ತಿದೆ. ಇಂಥ ಪ್ರತಿಭಟನೆ ಹಾಗೂ ಬದಲಾವಣೆಯ ಅಪೇಕ್ಷೆಯ ಬಗ್ಗೆ ಬೇಂದ್ರೆಯವರ ಕಾವ್ಯದಲ್ಲಿ ಅನೇಕ ಪ್ರಸ್ತಾಪಗಳಿವೆ.

ಇಷ್ಟೇ ಅದ್ಭುತವಾದ ಪದ್ಯವೆಂದರೆ ’ಭೂಮಿ ತಾಯಿಯ ಚೊಚ್ಚಲ ಮಗ”. ಇವನು ರೈತ. ಅವನ ಬದುಕು ಹೀಗಿದೆ:

“ದಿನವೂ ಸಂಜೆಗೆ
ಬೆವರಿನ ಜಳಕ
ಉಸಿರಿನ ಕೂಳಿಗೆ
ಕಂಬನಿ ನೀರು
ಹೊಟ್ಟೆಯು ಹತ್ತಿತು
ಬೆನ್ನಿನ ಬೆನ್ನು’

ಸಾವಿನ ಬೆಳಕು ಎಂದು ಬರುವುದೋ ಎಂದು ಕಾಯುವ ಸ್ಥಿತಿಯಾಗಿದೆ ಅವನದು. ’ಕುರುಡು ಕಾಂಚಾಣ’ ಪದ್ಯವಂತೂ ಬೇಂದ್ರೆ ಈ ಪದ್ಯ ಬರೆದ ಕಾಲದಿಂದ ಇಂದಿನ ಜಾಗತೀಕರಣದವರೆಗಿನ ವಿವಿಧ ಸಾಮಾಜಿಕ ಸ್ಥಿತಿಗಳಲ್ಲಿ ಅರ್ಥಪೂರ್ಣವಾಗಿ ಕಂಡಿದೆ. ಈ ಪದ್ಯದ ಜೊತೆಗೆ ’ಅನ್ನಾವತಾರ’ ಪದ್ಯವನ್ನೂ ಓದಬೇಕು. ತಮ್ಮ ಸ್ವಂತದ ಬದುಕಿನಲ್ಲಿ ಬಡತನ, ಮಕ್ಕಳ ಸಾವು, ದುಃಖ ಇವನ್ನೆಲ್ಲ ಅನುಭವಿಸಿದ ಬೇಂದ್ರೆಯವರಿಗೆ ಬದುಕಿನ ವಿಲಕ್ಷಣವಾದ ಅಸಮಾನತೆಗಳು ತೀಕ್ಷ್ಣವಾಗಿ ಕಾಣುತ್ತಿದ್ದವು.

PC : BookBrahma

ಅರವಿಂದರ ಮತ್ತು ಅವರ ಆಶ್ರಮದ ಬಗೆಗಿನ ಬೇಂದ್ರೆ ಅವರ ಪ್ರೀತಿಯ ಬಗ್ಗೆ ಪುಸ್ತಕಗಳನ್ನೇ ಬರೆಯಲಾಗಿದೆ. ಆದರೆ ಯುದ್ಧ ಹಾಗೂ ವಸಾಹತುಶಾಹಿಯ ಬಗ್ಗೆ ’ನರಬಲಿ’ ಪದ್ಯವನ್ನು ಬರೆದದ್ದಕ್ಕಾಗಿ ಬೆಳಗಾವಿಯ ಹಿಂಡಲಗಿ ಜೈಲಿನಲ್ಲಿ, ಆನಂತರ ಮುಗದದಲ್ಲಿ ’ನಜರ್‌ಬಂದಿ’ಯಲ್ಲಿ ಅವರು ಇರಬೇಕಾಗಿ ಬಂದುದನ್ನು ಬಹಳ ಚುಟುಕಾಗಿ ವಿವರಿಸಲಾಗುತ್ತದೆ. ಈ ಶಿಕ್ಷೆಯ ನಂತರ ಅವರಿಗೆ ಯಾವ ಉದ್ಯೋಗವೂ ಸಿಕ್ಕದೆ ವರ್ಷಗಳ ಕಾಲ ಬೇಂದ್ರೆ ಅನಿಶ್ಚಿತವಾದ ಜೀವನ ನಡೆಸಿದರು. ಈ ಪದ್ಯದ ಬಗ್ಗೆ ಅವರು ಬರೆದ ಟಿಪ್ಪಣಿಯಲ್ಲಿ “ಪ್ರಾಣಿ ದಯಾ ಸಂಘದವರು ಪಶುಬಲಿಯನ್ನು ನಿಲ್ಲಿಸುತ್ತಿದ್ದಾರೆ, ಯಾವುದಾದರೂ ನರದಯಾ ಸಂಘದವರು ನರಬಲಿಯನ್ನು ನಿಲ್ಲಿಸಲಾರರೆ” ಎಂದು ಕೇಳುತ್ತಾರೆ. ಈ ಪದ್ಯ ಉಗ್ರವಾದ ಯುದ್ಧವಿರೋಧಿ ಪದ್ಯವಾಗಿದೆ. ಕವಿಯ ದನಿಯು ತೀವ್ರ ಆಕ್ರೋಶದಿಂದ ಕೂಡಿದೆ. ರುದ್ರವೂ ಭೀಭತ್ಸವೂ ಆದ ಮಹಾಕಾಳಿಯ ನಂತರ ಬರುವ ಸಾಲುಗಳು ಹೀಗಿವೆ:

“ಇದುವೆ ಕಾಳಿಯ ಪೂಜೆಯು ಶುದ್ಧ
ಇದಕ್ಕೆ ಹುಂಬರು ಎಂಬರು ಯುದ್ಧ !”
ಈ ಪದ್ಯದಲ್ಲೂ ದೇವರುಗಳನ್ನು ಬೇಂದ್ರೆ ತರಾಟೆಗೆ ತೆಗೆದುಕೊಳ್ಳುತ್ತಾರೆ.
“ಅಮರರೆಂಬುವರು ಕೊಳೆಯದ ಹೆಣಗಳೋ?
ಮುಚ್ಚದ ಕಣ್ಗಳು ಮುಚ್ಚಿದ ಕಣ್ಗಳೋ?”

ನನ್ನ ಓದಿನ ಮಿತಿಯಲ್ಲಿ ಹೇಳುವುದಾದರೆ ದೇವರುಗಳನ್ನು ಹೀಗೆ ಛೇಡಿಸಿ ಬೇಂದ್ರೆಯವರ ಸಮಕಾಲೀನರು ಬರೆದಿಲ್ಲ. ಅಲ್ಲದೆ ಈ ಪದ್ಯದಲ್ಲಿ ಮನುಕುಲವು ಪ್ರಗತಿ ಸಾಧಿಸುತ್ತಿದೆ ಎನ್ನುವ ಸಂಕಥನವನ್ನೇ ಪ್ರಬಲವಾಗಿ ನಿರಾಕರಿಸುತ್ತಾರೆ. ಈಗ ಹಿಂದಿನ ಕಾಲದ ಅಶ್ವಮೇಧದ ಬದಲು ನರಮೇಧ ನಡೆಯುತ್ತಿದೆ ಎಂದು ಹೇಳುತ್ತಾರೆ.

’ಗರಿ’ ಮತ್ತು ’ನಾದಲೀಲೆ’ ಸಂಕಲನಗಳಲ್ಲಿ ಬೇಂದ್ರೆ ಶೋಧಿಸುವ ಗಂಡು ಹೆಣ್ಣಿನ ಪ್ರೀತಿಯ ಜಗತ್ತು ಕನ್ನಡ ಕಾವ್ಯದ ಮೇರು ಸಾಧನೆಯಾಗಿದೆ. ಪ್ರೀತಿಯನ್ನು ಹೇಳಿಕೊಳ್ಳುವ, ಹಂಚಿಕೊಳ್ಳುವ ಮತ್ತು ಅನುಭವಿಸುವ ರೀತಿಗಳು ಪ್ರತಿಯೊಂದು ಸಂಸ್ಕೃತಿಗೂ, ಭಾಷೆಗೂ ವಿಶಿಷ್ಟವಾಗಿರುತ್ತವೆ. ಇವನ್ನು ವಿವರಿಸಲಾಗದು. ಬೇಂದ್ರೆ ಬರೆದ ಒಲವಿನ ಪದ್ಯಗಳು ಹೇಗಿವೆಯೆಂದರೆ ಅವನ್ನು ಓದಿದಾಗ ಹೀಗಲ್ಲದೆ ಇನ್ನಾವ ರೀತಿಯಲ್ಲಿಯೂ ಪ್ರೀತಿಸಲಾಗದು ಎಂದು ಅನ್ನಿಸುವುವಂತೆ. ಇದಕ್ಕೆ ಕಾರಣವೆಂದರೆ ಅವರು ಸಂಸ್ಕೃತಿಯ ಆಳದ ನೆನಪುಗಳನ್ನು ತಲುಪಿ, ತಟ್ಟಿ, ಮುಟ್ಟಿ ಬರೆಯುತ್ತಾರೆ. ಅಂದಹಾಗೆ ಬೇಂದ್ರೆ ಕಾವ್ಯದ ಸಖಿಯರು ಬಹುಪಾಲು ಎಲ್ಲರೂ ತಳವರ್ಗದವರು. ಹೊಳೆಯಲ್ಲಿ ಬಟ್ಟೆ ಒಗೆಯುತ್ತ ಹೊಸ ಹರೆಯವೊಂದು ಈಜುತ್ತಿರುವವರನ್ನು ನೋಡುವವಳು, ನನ್ನ ಕುಲ ಡೊಂಕಾದರೆ ನನ್ನ ಪ್ರೀತಿ ಡೊಂಕೇ ಎಂದು ಕೇಳುವವಳು, ಹುಬ್ಬಳ್ಳಿಯವನ ಪ್ರೀತಿಯ ನೆನಪಿನಲ್ಲಿ ಬೀದಿಯಲ್ಲಿ ಗೆಳತಿಯರನ್ನು ಅವನೆಲ್ಲಿ ಎಂದು ಕೇಳುವವಳು – ಇವರಾರೂ ಶಿಕ್ಷಿತ ಮಧ್ಯಮವರ್ಗದವರಲ್ಲ. ಈ ಸಖಿಯರ ಪ್ರೀತಿಯನ್ನು ಸಂಭ್ರಮಿಸುವ ಕಾವ್ಯ ಬೇಂದ್ರೆಯವರದು. ಅವರ ಒಲವಿನ ಪದ್ಯಗಳು ಪಾಬ್ಲೋ ನೆರೂಡಾನ ಪ್ರೇಮಕವನಗಳಿಗಿಂತ ಬಹು ಶ್ರೇಷ್ಠವಾಗಿರುವಂಥವು.

ಪ್ರೊ. ರಾಜೇಂದ್ರ ಚೆನ್ನಿ

ಪ್ರೊ. ರಾಜೇಂದ್ರ ಚೆನ್ನಿ
ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕರು, ಕಥೆಗಾರರು, ವಿಮರ್ಶಕರು ಮತ್ತು ಸಂಸ್ಕೃತಿ ಚಿಂತಕರು. ಪ್ರಜಾಪ್ರಭುತ್ವದ ಮೌಲ್ಯಗಳ ಉಳಿವಿಗಾಗಿ ನಡೆಯುತ್ತಿರುವ ದಕ್ಷಿಣಾಯನ ಅಭಿಯಾನದ ಸಂಚಾಲಕರು


ಇದನ್ನೂ ಓದಿ: ಸುಪ್ತಚೇತನವೇ ಮೂಲಶಕ್ತಿ ಎನ್ನುವ ಜೋಸೆಫ್ ಮರ್ಫಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...