Homeಮುಖಪುಟಬೇಂದ್ರೆ-125 ವಿಶೇಷ: ಬೇಂದ್ರೆ ಎಂಬ ಧಾರವಾಡೀ ಗಾರುಡಿಗತನ

ಬೇಂದ್ರೆ-125 ವಿಶೇಷ: ಬೇಂದ್ರೆ ಎಂಬ ಧಾರವಾಡೀ ಗಾರುಡಿಗತನ

- Advertisement -
- Advertisement -

ಧಾರವಾಡದ ಗಾಳಿಗೆ ಅಂಬಿಕಾತನಯನ ಉಸಿರು ಬೆರೆಯದೆ ಈ ಮಣ್ಣಿಗೆ ಬೇಂದ್ರೆಯ ಪಾದದ ಧೂಳು ತಾಕದೆ ನಾಲ್ಕು ದಶಕಗಳೇ ಸಂದು ಹೋಗಿವೆ. ಈ ನಲ್ವತ್ತು ಮಳೆಗಾಲದಲ್ಲಿ ಧಾರವಾಡ ಬಹಳ ಬದಲಾಗಿದೆ. ಬೇರೆಯೇ ಆಗಿದೆ. ಎಂಥದೋ ಉಕ್ಕಂದ, ಎಂಥದೋ ಸೊರಗು, ಒಂದು ಬಗೆಯ ಅಸಹಜ ವಿದ್ಯಾಮಗಳಿಗೆ ಸಿಲುಕಿ ನಲುಗುತ್ತಿದೆ. ಈಗಲೂ ನೆತ್ತಿಯಲ್ಲಿ ಕೂತು ನೋಡುತ್ತಿರುವ ಸೋಮೇಶ್ವರನಿಗೂ ದಿಕ್ಕುತಪ್ಪಿದಂಥ ಸ್ಥಿತಿ. ಆ ಶ್ರಾವಣ, ಆ ಸಣ್ಣ ಸೋಮವಾರ, ಆ ಮಳೆಯು ಎಳೆಯುವ ತೇರು, ಆ ಸಾಧನಕೇರಿ ಎಲ್ಲವೂ ನೆನಪಿನ ಗೋಲದಲ್ಲಿ ಕಳೆದುಹೋಗುತ್ತ, ಧಾರವಾಡಕ್ಕೆ ಧಾರವಾಡವೇ ಬೇಂದ್ರೆ ಕಾವ್ಯದ ನೂಲ ಜೀಕಿನಲ್ಲಿ ಹಿಮ್ಮುಖವಾಗಿ ನಡೆಯುವ ದಾವಂತದಲ್ಲಿದ್ದಂತೆ. ಬೇಂದ್ರೆಯಿಲ್ಲದ ಧಾರವಾಡ ಅಂದರದು ಅಂತರಗಂಗೆ ಶಾಲ್ಮಲೆಯು ಒಳಗೊಳಗೇ ಬತ್ತುತ್ತಿರುವ ಬರಡುತನದಂತೆ.

ಪಂಪ ಕುಮಾರವ್ಯಾಸ ಎಂಬ ಕವಿಗಳಿಗೆ ತವರು ಮನೆ ಎನಿಸಿದ ಧಾರವಾಡ ಸೀಮೆಯವನು ನಾನು ಎಂದು ಜ್ಞಾನಪೀಠ ಪ್ರಶಸ್ತಿ ಸ್ವೀಕಾರದಲ್ಲಿ ಅಭಿಮಾನದಿಂದ ನುಡಿದಿದ್ದರು ಕವಿ ಬೇಂದ್ರೆ. ಈ ಪ್ರಶಸ್ತಿಯನ್ನು ಸಮಸ್ತ ಧಾರವಾಡದ ಪರವಾಗಿ ಸ್ವೀಕರಿಸುತ್ತೇನೆ ಎಂದವರು. ಇದು ಮಾತಿನ ಮಾತಾಗಿರಲಿಲ್ಲ. ಬೇಂದ್ರೆಯವರಿಗೆ ಧಾರವಾಡ ಅವರ ಪ್ರಜ್ಞೆಯ ತಳಹದಿಯಾಗಿತ್ತು. ’ತಾಯೆ ಮಾಯೆ ಅಂಬಿಕೆಯೆ ನಿನ್ನ ತನಯ ದತ್ತನು, ನೀನು ಇತ್ತುದಿತ್ತೆನು’ ಎಂದು ತಮ್ಮ ಸಂವೇದನೆಯ ಮೂಲವೇ ತಾಯ್ತನದ ಕಣ್ಣೋಟ ಎನ್ನುವಾಗಲೂ ಆ ತಾಯ್ತನದಲ್ಲಿ ಧಾರವಾಡದ ತಾಯಿಯ ಪಾಲೂ ಇದ್ದದನ್ನು ಉಪೇಕ್ಷಿಸಲಿಲ್ಲ. ಬಯಲುಸೀಮೆ, ಮಲೆನಾಡುಗಳ ಸಂಕರ ಗುಣಧರ್ಮದ ಐದು ಗುಡ್ಡಗಳ ಎತ್ತರದಲ್ಲಿ ಚಾಚಿಕೊಂಡಿರುವ ಬಯಲು ಮಣ್ಣಾಳದಲಿ ಹರಿವ ನೀರ ಸೆಲೆಗಳ ಬೆರೆಕೆಯ ಧಾರವಾಡಕ್ಕೇ ಒಂದು ಅನನ್ಯತೆಯಿದೆ ಎಂಬ ಗೌರವ ಬೇಂದ್ರೆಯವರದಾಗಿತ್ತು. ’ವಿನಯ ಹಳಸುವ ಬದುಕಲ್ಲ. ವಿಶಿಷ್ಟಕ್ಕೆ ಕೆಡುಕಿಲ್ಲ. ಇದು ಧಾರವಾಡದ ತತ್ವ- ಎಂದು 1965ರಲ್ಲಿ ಕವಿ ಕಣವಿಯವರ ನೆಲ-ಮುಗಿಲು ಸಂಕಲನದ ಮುನ್ನುಡಿಯಲ್ಲಿ ಬರೆದಿದ್ದರು ಬೇಂದ್ರೆ. ಈ ಧಾರವಾಡದ ತತ್ವ ಮತ್ತು ಸತ್ವಕ್ಕೆ ತನ್ನನ್ನು ತೆತ್ತುಕೊಂಡ ಪ್ರೀತಿ ಅವರದು.

ಬೇಂದ್ರೆ ಕಾವ್ಯದ ಸಾರ್ಥಕತೆಯ ಎಲ್ಲ ಮಗ್ಗಲುಗಳಲ್ಲಿಯೂ ಧಾರವಾಡವಿದೆ ಮತ್ತು ಬೇಂದ್ರೆ ಕಾವ್ಯ ಧಾರವಾಡವನ್ನು ತನ್ನ ಹದಕ್ಕೆ ಒಗ್ಗಿಸಿದೆ. ಆಧುನಿಕತೆಗೆ ಅದೇ ತಾನೇ ರೆಪ್ಪೆಯೊಡೆಯುತ್ತಿರುವ ಧಾರವಾಡ ಪೇಶ್ವಾಯಿಗಳ, ಮೊಘಲರ ಆಳ್ವಿಕೆಯನ್ನು ದಾಟಿ, ಬ್ರಿಟಿಷರ ಆಡಳಿತದಲ್ಲಿ ತನ್ನತನದ ಅರಿವಿಗೆ ತೆರೆಯುತ್ತಿತ್ತು. ಮರಾಠಿ ಮತ್ತು ಕನ್ನಡ ಜನಭಾಷೆಗಳಾಗಿ; ಇಂಗ್ಲಿಷು ಆಡಳಿತಗಾರರ ಭಾಷೆಯಾಗಿ ಬೇರೂರಿತ್ತು. ದ್ವಾರ ವಾಡ ಎಂಬ ಸಂಸ್ಕೃತ ಮರಾಠಿಗಳ ಮಿಲಾವತ್ತಿನ, ಪುನರುಕ್ತಿಯ ಅರ್ಥವಂತಿಕೆಯ ಪದ ಹಲವು ಚಿಂತನೆಗಳಿಗೆ ಹಾದಾಡುವ ಹೊಸ್ತಿಲಾಗಿ ಪಳಗುತ್ತಿತ್ತು. ಬ್ರಿಟಿಷರ ಕಾಲದಲ್ಲಿ ಧಾರವಾಡ ಅದೆಷ್ಟು ಮಾನ್ಯತೆಯನ್ನು ಪಡೆದಿತ್ತೆಂದರೆ, ದೇಶದ ರಾಜಧಾನಿಯನ್ನು ಕಲ್ಕತ್ತೆಯಿಂದ ಬದಲಿಸಬೇಕೆಂದು ಲಾರ್ಡ್ ಕರ್ಜನ್ ನೇಮಿಸಿದ್ದ ಸಮಿತಿಯು ಭಾರತದ ಐದು ನಗರಗಳ ಹೆಸರನ್ನು ಶಿಫಾರಸು ಮಾಡಿತ್ತಂತೆ. ಅದರಲ್ಲಿ ಧಾರವಾಡವೂ ಒಂದಾಗಿತ್ತು. ಆದರೆ ಪುಣ್ಯ, ಭಾರತದ ಚರಿತ್ರೆ ದಿಲ್ಲಿಯನ್ನು ಆಯ್ದುಕೊಂಡು ಧಾರವಾಡವನ್ನು ಸಾಂಸ್ಕೃತಿಕ ನಗರಿಯಾಗಿಯೇ ಉಳಿಸಿತು. ಥ್ಯಾಕರೆಗೆ ಗೋರಿಕಟ್ಟಿದ ನೆಲ ಮೊಗ್ಲಿಂಗ್ ಕಿಟ್ಟೆಲ್‌ರಿಗೆ ಮಡಿಲು ನೀಡಿತು. ದೇಶದ ಸ್ವಾತಂತ್ರ್ಯ ಹೋರಾಟದ ಎಚ್ಚರದ ಕಾಲದಲ್ಲಿ ಇಂಗ್ಲಿಷರ ಸಾಂಸ್ಕೃತಿಕ ಯಾಜಮಾನ್ಯವನ್ನು ದಟ್ಟವಾಗಿ ತಡೆಯುವ, ಈ ನೆಲದ ಸಾಂಸ್ಕೃತಿಕ ಅಸ್ಮಿತೆಯನ್ನು ರೂಪಿಸಿಕೊಳ್ಳುವ ಹೋರಾಟದ ಭಾಗವಾಗಿ ಬೇಂದ್ರೆ ಕಾವ್ಯಗಳನ್ನು ಕಾಣಬೇಕಿದೆ.

ಧಾರವಾಡದ ಮಣ್ಣಿನ ಕಣಗಳನ್ನು ಬೇಂದ್ರೆ ಜೀವಿತಗೊಳಿಸಿದರು.

ವಿಶ್ವಮಾತೆಯ ಗರ್ಭ ಕಮಲ ಜಾತ-ಪರಾಗ
ಪರಮಾಣು ಕೀರ್ತಿ ನಾನು!

ಎಂಬ ಸ್ಪಷ್ಟತೆ ಅವರದು. ಆದರೆ ಈ ವಿಶ್ವಾತ್ಮಕ ಪ್ರಜ್ಞೆಯಲ್ಲಿ ತನ್ನ ನೆಲದ ಚಹರೆಯನ್ನು ಮರೆಮಾಚಲು ಅವರು ಸಿದ್ಧರಿರಲಿಲ್ಲ. “ನಿನ್ನ ಕಣ್ಣ ಕಡೆಗೋಲಿನಿಂದ| ನನ್ನ ಹೃದಯ ಕಡೆಯೇ ತಾಯಿ| ಎನ್ನ ಹೃದಯ ಕಡೀ| ಬೆಣ್ಣೆ ಮೇಲೆ ತೇಲಿಸಿ ತಂದು| ನಿನ್ನ ಬಾಯ್ಗೆ ಹಿಡಿಯೆ ತಾಯಿ| ನೀನೇ ಬಾಯ್ಗೆ ಹಿಡಿ|”- ಎಂದು ಧಾರವಾಡ ತಾಯಿಯನ್ನು ಪ್ರಾರ್ಥಿಸಿಕೊಳ್ಳುತ್ತಾರೆ. ಈ ನೆಲ, ನನ್ನ ಹೃದಯವನ್ನು ಸಂಸ್ಕರಿಸಬಲ್ಲದೆಂಬ ವಿನೀತಭಾವ ಅವರದು. “ಕವಿಯು ಭೂತಕಾಲದ ಒಂದು ಸಾಂಸ್ಕೃತಿಕ ಪರಂಪರೆಯನ್ನು ನಡೆಸಿಕೊಂಡು ಬರುವ ಸಾಂಕೇತಿಕ ವ್ಯಕ್ತಿ” ಎಂಬ ತಿಳಿವು ಅವರದಾಗಿತ್ತು. ಜೈನರ ಕಾವ್ಯ, ಶರಣರ ವಚನ, ದಾಸರ ಹಾಡಿನ ಕನ್ನಡ ಪರಂಪರೆಯನ್ನು ನೆನೆಯುವಾಗ; ಜನಪದ ಸಾಹಿತ್ಯದ ದನಿಗೆ ತಮ್ಮ ಮನಸ್ಸನ್ನು ಮುಡಿಪಿಡುವಾಗ, ಗರತಿಯರ ಹಾಡಿನ ಸಂಪಾದನೆಯ ಅಗತ್ಯವನ್ನು ಕಾಣುವಾಗ; ಸಿದ್ಧ, ನಾಥ, ಶಾಕ್ತ, ವಾರಕರೀ ಮತ್ತು ಅನುಭಾವ ಪದ್ಧತಿಗಳೆಲ್ಲವನ್ನೂ ಬಿಡುಗಣ್ಣಿನ ಎಚ್ಚರದಲ್ಲಿ ತಮ್ಮ ಆತ್ಮಪ್ರತ್ಯಯವಾಗಿಸಿಕೊಳ್ಳುವಾಗ; ಜನಪದರ ಬಾಳಿನ ಮೂಲ ಚೂಲಗಳೆನ್ನೆಲ್ಲ, ಅವರ ನಗೀ ನೋವುಗಳನ್ನೆಲ್ಲ ಯಾವ ಆಯ್ಕೆಯ ಲೆಕ್ಕಾಚಾರವೂ ಬೇಕಿಲ್ಲದೆ ತಮ್ಮ ಸಂವೇದನೆಯ ಹಾಸು-ಹೊಕ್ಕಾಗಿಸಿಕೊಳ್ಳುವಾಗ ಬೇಂದ್ರೆ ಇಡೀ ಧಾರವಾಡವನ್ನು ತಮ್ಮೊಳಗೆ ಮರುಸೃಷ್ಟಿಸಿಕೊಳ್ಳುತ್ತಿದ್ದರು. ವಸಾಹತುಶಾಹಿಯ ಎದುರು ನಿಲ್ಲುವ ದೇಸೀ ಸತ್ವವನ್ನು ಉಜ್ವಲಗೊಳಿಸಿಕೊಲ್ಳುತ್ತಿದ್ದರು.

ಬೇಂದ್ರೆ ಕಾವ್ಯದ ಅನನ್ಯತೆಯೆಂದರೆ ಚೈತನ್ಯದ ಪೂಜೆ. ಜನಮೂಲ ಸಂಸ್ಕೃತಿಯು ಯಾವುದನ್ನು ಮಹತ್ವದ್ದೆಂದು ನಂಬಿ, ಬಾಳಿ ಬಂದಿದೆಯೋ ಆ ಎಲ್ಲವನ್ನೂ ಅದೇ ತೀವ್ರತೆಯಿಂದ ಆರಾಧಿಸಬಲ್ಲ, ಎಲ್ಲವನ್ನೂ ಒಳಗೊಳ್ಳಬಲ್ಲ ಅಪರೂಪದ ಗುಣ ಬೇಂದ್ರೆವರದು. ಅವರು ಧಾರವಾಡ ಸೀಮೆಯ ಯಾವ ಶಕ್ತಿ ಸ್ಥಾನವನ್ನೂ ಆಲಕ್ಷಿಸಲಿಲ್ಲ. ಸಿದ್ಧಾರೂಢ, ನಾಗಲಿಂಗ, ಶಿರಸಂಗಿ ಕಾಳಮ್ಮ, ದುರ್ಗಮ್ಮ, ಸೋಮೆಶ್ವರ – ಈ ಸೀಮೆಯ ಸಾಂಸ್ಕೃತಿಕ ಧಾರೆಗಳನ್ನವರು ಅತ್ಯಂತ ಪ್ರಜ್ಞಾವಂತಿಕೆಯಿಂದ ಆದರಿಸಿದವರು. ಭಾರತವಿಂದು ಸಾಂಸ್ಕೃತಿಕ ಏಕರೂಪೀ ಯಾಜಮಾನ್ಯತೆಯಲ್ಲಿ ಉಸಿರುಗಟ್ಟುತ್ತಿರುವಾಗ, ಬೇಂದ್ರೆಯವರ ಬಹುತ್ವ ತಿಳಿವು ಅಗಾಧವಾದದ್ದೆಂದು ಅನ್ನಿಸುತ್ತದೆ. ಬೇಂದ್ರೆ ಕಾವ್ಯ ಸಮಗ್ರದಲ್ಲಿ ಅಲಕ್ಷಿಸಿಕೊಂಡು ಬಂದ ಅವರ ಪ್ರಾರ್ಥನಾ ಪದ್ಯಗಳನ್ನು ಮರು ಅಧ್ಯಯಿಸುವ ಅಗತ್ಯವಿದೆ. ಆರಾಧನೆ ಅವರಿಗೆ ಜಡ ಜಾತೀಯತೆ ಆಗಲಿಲ್ಲ. ಎಲ್ಲ ತತ್ವವನ್ನು ಹೀರಿ ಹರಿವ ಈ ನೆಲದ ಧಾರಕ ಗುಣವನ್ನವರು ಕಂಡಿದ್ದರು.

1. ಜನ ಹರಿ ಅಲ್ಲಾ ಶಿವನೇ ಬಲ್ಲಾ
ಒಬ್ಬನಲ್ಲದೇ ಎರಡಿಲ್ಲಾ
ಜೀವದೇವನೊಂದಾವಣೆ ಇಲ್ಲದ
ನೀರಿಲ್ಲದ ನೆಲ ಬರಡಲ್ಲಾ

2. ಒಳಗಿರತಾನ ನಮ್ಮಪ್ಪಾ
ವಿಠಲ ಅಂದ್ರೂ ಸೈ
ವೆಂಕಟಾ ಅಂದ್ರೂ ಸೈ
ದತ್ತ ಅಂದ್ರೂ ಸೈ
ಧೂತ್ ಅಂದ್ರೂ ಸೈ

3. ಹೊರಗಿನ ದೇವರು ಯಾಕ ಬೇಕು
ಒಳಗಿನ ದೇವನ ಸಾಕಬೇಕು

PC : Chiloka

ಬೇಂದ್ರೆ ಅವಿರತವಾಗಿ ಈ ಬಹುತ್ವದ ಉಪಾಸನೆಗೆ ತಮ್ಮನ್ನು ಸಜ್ಜುಗೊಳಿಸಿಕೊಳ್ಳುತ್ತ, ಅದೊಂದು ಸಾಮಾಜಿಕ ಎಚ್ಚರ ಎನ್ನುವಂತೆ ಬಾಳಿದರು. ವೈದಿಕ ಮನೆತನದಲ್ಲಿ ಜನಿಸಿಯೂ ಬೇಂದ್ರೆಯವರಿಗೆ ಒದಗಿ ಬಂದ ಸ್ರೀ ಪೋಷಿತ ಕುಟುಂಬದ ಕಾರಣವಾಗಿ ಅವರ ಬಹುತ್ವದ ತಿಳಿವು ಅರಳಿದೆ ಎಂಬ ಎಚ್.ಎಸ್.ಆರ್ ಅವರ ಮಾತನ್ನು ಗಮನಿಸಬೇಕು. ಈಗ ಇನ್ನಷ್ಟು ದೂರದಲ್ಲಿ ನಿಂತು ಬೇಂದ್ರೆ ಕಾವ್ಯವನ್ನು ಓದುವಾಗ ತಮ್ಮನ್ನು ವೈದಿಕ ಜಡತೆಯಿಂದ ಕಳಚಿಕೊಳ್ಳುವ ಪ್ರಯತ್ನವೂ ಅವರಲ್ಲಿ ಇದ್ದೀತು ಅನ್ನಿಸುತ್ತದೆ.

ಬೇಂದ್ರೆ ಕಾವ್ಯದ ಭಾಷೆ, ಯಥಾವತ್ ಧಾರವಾಡೀ ಭಾಷೆಯಲ್ಲ ಅಥವಾ ಧಾರವಾಡೀ ಭಾಷೆ ಎನ್ನುವ ’ಒಂದು’ ಇಲ್ಲ. ಧಾರವಾಡದ ನೆಲ ತೀವ್ರವಾದ ರಾಜಕೀಯ ದಬ್ಬಾಳಿಕೆ ಒಳಗಾಗಲಿಲ್ಲ. ಒಂದಿಷ್ಟು ಅನಾಯತ್ವದ ಒರಟುತನ ಈ ಬದುಕಿಗಿತ್ತು. ಅದು ಭಾಷೆಗೂ ಇತ್ತು ಎಂದು ಕುರ್ತಕೋಟಿಯವರು ಗುರ್ತಿಸುತ್ತಾರೆ. ಆದರೆ ಬೇಂದ್ರೆ ಈ ನುಡಿಯನ್ನು ಹದಗೊಳಿಸಿದ ಕ್ರಮ ಇದೆಯಲ್ಲ. ಅದೊಂದು ವಿಸ್ಮಯ.

ಜುಮ್ ಜುಮು ರುಮುಜುಮು ಗುಂಗುಣು ದುಮುದುಮು ನಾದರ ನದಿಯೊಂದು ನಡೆದ್ಹಾಂಗ.

ಕನ್ನಡಕ್ಕೆ ಈ ನಾದದ ನದಿಯ ನಡಿಗೆಯನ್ನು ಕಾಣಿಸಿದರು. ಕೇಳಿಸಿದರು. ಕನ್ನಡವನ್ನು ಈ ಕೇಳುವಿಕೆಗೆ ಸಜ್ಜುಗೊಳಿಸಿದರು. ’ಬಂದೆ ಜೋಗಿ ಬಾ ಬಾರೊ ಜೋಗಿ ಬಾ ಏನು ಹೊತ್ತು ಬಂದಿ’ ಎಂಬ ಅನುಭಾವದ ಎತ್ತರಕ್ಕೆ ಆಡುಮಾತನ್ನು ತಂದರು. ಧಾರವಾಡದ ಬೆಟ್ಟ, ಗುಡ್ಡ, ಕೊಳ್ಳ, ಹಳ್ಳ, ಜಾತ್ರಿ, ಜಾಪತ್ರಿ-॒ ಯಾವೆಲ್ಲವೂ ಬೇಂದ್ರೆ ಎಂಬ ಅಗ್ನಿದಿವ್ಯದಲ್ಲಿ ಹಾದು ಬಂಗಾರವಾದವು. ಈ ಜನಬದುಕಿನ ವಾರೆಕೋರೆಗಳನ್ನು ವಿಷಣ್ಣ ವಾಸ್ತವದಿಂದ ದಾಖಲಿಸಿದರು.

ಬ್ಯಾಟಿ ನಾಯೊದರ್‍ಯಾವೋ
ಹಸುಜೀವ ಬೆದರ್‍ಯಾವೋ
ಗಳಗಳನೆ ಗಿಡದೇಲಿ ಉದರ್‍ಯಾವೋ

ಎನ್ನುತ್ತ ಬೆದರಿಸಿದ ಚಿಗರಿಗಂಗಳ ಚೆಲುವೆಯನ್ನು ಹೂವ ಹಡಲಿಗೆಯನು ಹೊತ್ತ ಭೂಮಿತಾಯಿ ಜೋಗತಿಯನ್ನು ಪ್ರತಿಮಿಸಿದರು. ಹುಣ್ಣಿಮೆ ಚಂದಿರನ ಹೆಣದ ಕಳೆಹೊತ್ತ ತಾಯಿಯನ್ನು ಒಳಬಾಗಿಲಿನಿಂದ ಹೊರಗೆ ತೋರಿದರು.

ಆಗ ಬೇಂದ್ರೆಯಿದ್ದರು. ಬೇಂದ್ರೆಯವರ ನಂಬಿಗೆಯ ಸಾಚಾ ರೀತಿ, ಸಾಚಾ ಜಗಳಗಳಿದ್ದವು. ಮಲ್ಲಿಕಾರ್ಜುನ ಮನ್ಸೂರರು ಬೇಂದ್ರೆಯವರು ಬೆಳದಿಂಗಳ ರಾತ್ರಿಯಲ್ಲಿ ಕಲಾರಸಯಾನದಲ್ಲಿ ಬೀದಿಗುಂಟ ಬೆಳತನಕಾ ನಡೆದಾಡುತ್ತಿದ್ದರೆ, ಧಾರವಾಡವೇ ಸಾಧನೆ ಕೇರಿಯಾಗಿರುತ್ತಿತ್ತು. ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳಿಯಾಂವಾ… ಎಂದು ಹಾಡಿಕೊಂಡು ಓಡಾಡಿಕೊಂಡಿದ್ದ ವೇಶ್ಯೆಯ ಅಂತರಂಗದ ಕಿಚ್ಚಿಗೆ ತಮ್ಮೆದೆಯಲ್ಲಿ ತಾವಿಟ್ಟು ಲೌಕಿಕ ಅಲೌಕಿಕ ಪ್ರೇಮದ ಆರ್ತಮೊರೆಯಾಗಿಸುವ ಬೇಂದ್ರೆ ಎಂಬ ಎತ್ತರದ ಮನಸ್ಸಿತ್ತು. ತನ್ನ ಬಾಳಿನ ಬೆಂಕಿ, ಹೊರ ಬಾಳಿನ ಉಗಿ ಎರಡನ್ನೂ ತಮ್ಮ ಮನೋಭೂಮಿಕೆಯಲ್ಲಿ ಹಾಯಿಸಿಕೊಂಡು ತಾನೇ ಒಂದು ಹದವಾಗಿಬಿಟ್ಟಿದ್ದರು ಬೇಂದ್ರೆ.

ಈಗ ಧಾರವಾಡವಿದೆ. ಬೇಂದ್ರೆಯ ಬಹುಜ್ಞತೆಯಿಲ್ಲ. ಬಹುತ್ವದ ಪ್ರೀತಿಯಿಲ್ಲ. ಬೇಂದ್ರೆ ಎಂಬ ಜೀವಕಾಮವಿಲ್ಲ. ಜೀವಜೀವಾಳದಲಿ ಮುರಿದೇಳುತ್ತಿದ್ದ ಕಾವ್ಯದ ಕಸುವಿಲ್ಲ. ಈಗಿಲ್ಲಿ ಪ್ರತಿಭೆ ಪ್ರದರ್ಶನವಾಗಿದೆ, ಸಾಹಿತ್ಯ ವ್ಯಾಪಕವಾಗಿದೆ. ಶಿಕ್ಷಣ ಬಂಡವಾಳೋದ್ಯಮವಾಗಿದೆ. ಎಲ್ಲ ನಗರಗಳಂತೆ ಧಾರವಾಡವೂ ಹೊರಗೆ ವಿಜೃಂಭಿಸುತ್ತ ಒಳಗೆ ಹಳಸುತ್ತಿದೆ. ಬೇಂದ್ರೆ ಎಂದರೆ ಸಿಲಬಸ್‌ನ ಒಂದೆರಡು ಕವಿತೆಯಾಗಿದೆ. ಬೇಂದ್ರೆ ಅಂದರೆ ಒಳಸಾರಿಗೆ ಬಸ್ಸಾಗಿದೆ. ಇನ್ನೂ ಚಾಲ್ತಿಯಲ್ಲಿರುವ ವ್ಯವಹಾರದ ಹೆಸರಾಗಿ ಅಂಗಡಿ ಮುಂಗಟ್ಟು ಸಂಸ್ಥೆಗಳ ತಲೆಬರಹವಾಗಿದೆ. ಬೇಂದ್ರೆ ಇಂದಿಗೂ ಬೇಕಾದ ಜೀವಯಾನ. ಅವರನ್ನು ಓದುವುದು ಎಂದರೆ, ನಾವು ನಮ್ಮ ಕಾಲ-ದೇಶಗಳಿಗೆ ಋಣಸಂದಾಯ ಮಾಡುವುದು.

ವಿನಯ ಒಕ್ಕುಂದ

ವಿನಯ ಒಕ್ಕುಂದ
ವಿನಯಾ ಒಕ್ಕುಂದ ಸದ್ಯ ಧಾರವಾಡಲ್ಲಿ ನೆಲೆಸಿದ್ದಾರೆ. ಕನ್ನಡ ಸಹ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿರುವ ವಿನಯ ಕವಿಯಾಗಿ ಪರಿಚಿತರು. ಬಾಯಾರಿಕೆ, ನೂರು ಗೋರಿಯ ದೀಪ, ಹಸಬಿ ಕವನ ಸಂಕಲನಗಳು. ಊರ ಒಳಗಣ ಬಯಲು, ಉರಿ ಅವರ ಕಥಾಸಂಕಲನಗಳು.


ಇದನ್ನೂ ಓದಿ: ಹಿಂದಕ್ಕೆ ಹೆಜ್ಜೆ ಇಡಲೊಪ್ಪದ ರೈತರು: ಸ್ಥಳ ಖಾಲಿ ಮಾಡಿದ ಹೆಚ್ಚುವರಿ ಪೊಲೀಸರು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...