ರಾಜ್ಯದ ಹಾಸನ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು ಭೂಮಿ ಕಂಪಿಸಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ರಿಕ್ಟರ್ ಮಾಪಕದಲ್ಲಿ 3.4 ರ ತೀವ್ರತೆಯ ಭೂಕಂಪನವು ದಾಖಲಾಗಿದೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಮತ್ತು ಅರಕಲಗೂಡು ತಾಲೂಕಿನ ಹಲವಾರು ಗ್ರಾಮಗಳಲ್ಲಿ ನಸುಕಿನ ಜಾವ 4.30ರಿಂದ 5 ಗಂಟೆಯ ಮಧ್ಯೆ ಭೂಮಿ ಕಂಪಿಸಿದ ಅನುಭವವಾಗಿದೆ. ನಿದ್ದೆಯಲ್ಲಿದ್ದ ಜನ ಎದ್ದು ಹೊರಗೋಡಿ ಬಂದಿದ್ದಾರೆ. ಹೊಳೆನರಸೀಪುರ ತಾಲೂಕಿನ ನಾಗರನಹಳ್ಳಿ ಗ್ರಾಮ ಪಂಚಾಯತ್‌ನ ಮಲುಗನಹಳ್ಳಿ ಭೂಕಂಪನ ಕೇಂದ್ರವಾಗಿತ್ತು ಎನ್ನಲಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ರೇಂಜರ್ ಬ್ಲಾಕ್, ನೇಗಳ್ಳೆ ಗ್ರಾಮಗಳಲ್ಲಿ ಮಡಿಕೇರಿ ನಗರ, ದೇವಸ್ತೂರು, ಸುಂಟಿಕೊಪ್ಪ ನಾಕೂರು, ಕಾನ್‌ಬೈಲ್ ಸೇರಿದಂತೆ ವಿವಿಧೆಡೆಗಳಲ್ಲಿ ನಸುಕಿನ ಜಾವ 4.30ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
ಇದನ್ನೂ ಓದಿ: ನಾರಾಯಣ ಗುರುಗಳ ಪಠ್ಯಕ್ಕೆ ಕತ್ತರಿ: ‘ನನಗೆ ಅದು ನೆನಪಾಗುತ್ತಿಲ್ಲ’ ಎಂದ ಪಠ್ಯ ಪುಸ್ತಕ ಸಮಿತಿ ಸದಸ್ಯ ಡಾ. ಅನಂತಕೃಷ್ಣ ಭಟ್
ಮಂಡ್ಯ ಜಿಲ್ಲೆಯಲ್ಲಿಯೂ ನಸುಕಿನ ಜಾವ 4.30 ರಿಂದ 4:50ರ ಸುಮಾರಿಗೆ ಲಘು ಭೂಕಂಪನದ ಅನುಭವಾಗಿದೆ. ಕೆ.ಆರ್ ಪೇಟೆ ತಾಲ್ಲೂಕಿನ ಗೊಂದಿಹಳ್ಳಿ, ಐಕನಹಳ್ಳಿ, ಬಿದರಹಳ್ಳಿ, ಚಿನ್ನೇನಹಳ್ಳಿ, ಮಾದಾಪುರ, ಗೊಡೇಹೊಸಹಳ್ಳಿಯ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿ ಕೊಂಚ ಕಾಲ ಜನ ಆತಂಕಕ್ಕೆ ಈಡಾಗಿದ್ದರು ಎನ್ನಲಾಗಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದೆ. “ಈ ಪ್ರಮಾಣದ ತೀವ್ರತೆಯು ಮಧ್ಯಮವಾಗಿದೆ. ಭೂಕಂಪನವು ಅಧಿಕೇಂದ್ರದಿಂದ ಗರಿಷ್ಠ 50 ಕಿಮೀ ದೂರದವರೆಗೆ ಇದರ ಪರಿಣಾಮವಿರಲಿದೆ. ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ, ಆದರೆ ಸ್ವಲ್ಪ ಭೂಮಿ ಅಲುಗಾಡಬಹುದು. ಭೂಕಂಪದ ತೀವ್ರತೆಯು ಸಾಧಾರಣವಾಗಿದ್ದು ಹಾನಿಕಾರಿಯಾಗಿಲ್ಲ. ಜನರು ಭಯಭೀತರಾಗಬೇಡಿ” ಎಂದು ಕೆಎಸ್‌ಎನ್‌ಡಿಎಂಸಿ ಮನವಿ ಮಾಡಿದೆ.
ಇದನ್ನೂ ಓದಿ: ಅಫ್ಘಾನಿಸ್ಥಾನದಲ್ಲಿ ಪ್ರಭಲ ಭೂಕಂಪನಕ್ಕೆ 950ಕ್ಕೂ ಹೆಚ್ಚು ಜನರು ಬಲಿ


