ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧ ವಿಚಾರಣಾ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವ ಆದೇಶವನ್ನು ಹೈಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.
ಸಿಐಡಿ ಮಾಡಿರುವ ತನಿಖೆ ಮತ್ತು ಅಂತಿಮ ವರದಿ ಹಾಗೆಯೇ ಉಳಿಯಲಿದೆ ಎಂದಿರುವ ಹೈಕೋರ್ಟ್, ಸಿಐಡಿ ತನ್ನ ಮುಂದೆ ಇಟ್ಟಿರುವ ಸಾಮಗ್ರಿಗಳು ಮತ್ತು ಈ ಆದೇಶದಲ್ಲಿ ಮಾಡಿದ ಅವಲೋಕನಗಳನ್ನು ಪರಿಗಣಿಸಿ ಹೊಸದಾಗಿ ಸೂಕ್ತ ಆದೇಶ ನೀಡಲು ವಿಚಾರಣಾ ನ್ಯಾಯಾಲಯಕ್ಕೆ ವಿಷಯವನ್ನು ಹಿಂದಿರುಗಿಸಿದೆ. ಇದೇ ವೇಳೆ ಯಡಿಯೂರಪ್ಪ ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಜುಲೈ 4, 2024 ರಂದು ವಿಚಾರಣಾ ನ್ಯಾಯಾಲಯ ನೀಡಿದ್ದ ಆದೇಶವನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಆದೇಶ ಹೊರಡಿಸಿದ್ದಾರೆ. ಪೋಕ್ಸೋ ಮತ್ತು ಐಪಿಸಿ ನಿಬಂಧನೆಗಳ ಅಡಿಯಲ್ಲಿ ಸದಾಶಿವನಗರ ಠಾಣೆಯಲ್ಲಿ ತನ್ನ ವಿರುದ್ದ ದಾಖಲಾಗಿರುವ ಎಫ್‌ಐಆರ್, ಆನಂತರ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿ ಹಾಗೂ ಅದನ್ನು ಆಧರಿಸಿ ಸಕ್ಷಮ ನ್ಯಾಯಾಲಯ ಸಂಜ್ಞೇ ಪರಿಗಣಿಸಿರುವ ಆದೇಶವನ್ನು ರದ್ದುಪಡಿಸುವಂತೆ ಕೋರಿ ಯಡಿಯೂರಪ್ಪ ಪ್ರತ್ಯೇಕ ಎರಡು ಅರ್ಜಿಗಳನ್ನು ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಮಾನ್ಯ ಮಾಡಿದ್ದಾರೆ.
2024ರ ಜೂನ್‌ನಲ್ಲಿ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯ (ಪೋಕ್ಸೋ) ಸೆಕ್ಷನ್ 8 ಮತ್ತು 1860ರ ಭಾರತೀಯ ದಂಡ ಸಂಹಿತೆಯ 354ಎ ಅಡಿಯಲ್ಲಿ ಯಡಿಯೂರಪ್ಪ ವಿರುದ್ದ ಪ್ರಕರಣ ದಾಖಲಾಗಿದೆ.
ಸಂಜ್ಞೇ ಪರಿಗಣಿಸಿರುವ ಆದೇಶ ಹೊರತುಪಡಿಸಿ ಉಭಯ ಪಕ್ಷಕಾರರ ಪರ ಹಿರಿಯ ವಕೀಲರಾದ ಸಿ ವಿ ನಾಗೇಶ್ ಮತ್ತು ಪ್ರೊ. ರವಿವರ್ಮ ಕುಮಾರ್ ಅವರು ಎತ್ತಿರುವ ಯಾವುದೇ ವಾದಗಳಿಗೆ ಹೈಕೋರ್ಟ್ ಉತ್ತರಿಸಿಲ್ಲ. ಎಲ್ಲಾ ವಾದಗಳನ್ನು ಮುಕ್ತವಾಗಿರಿಸಲಾಗಿದ್ದು, ಅರ್ಜಿದಾರರು ಸೂಕ್ತ ಸಂದರ್ಭದಲ್ಲಿ ಸೂಕ್ತ ವೇದಿಕೆಯಲ್ಲಿ ಪರಿಹಾರ ಪಡೆಯಬಹುದಾಗಿದೆ” ಎಂದು ಆದೇಶ ಮಾಡಿದೆ.
ಹೀಗಾಗಿ, ಈ ಪ್ರಕರಣದಲ್ಲಿ ಇತರೆ ಆರೋಪಿಗಳಾಗಿರುವ ವೈ ಎಂ ಅರುಣ, ರುದ್ರೇಶ ಮರಳಸಿದ್ದಯ್ಯ ಮತ್ತು ಜಿ ಮರಿಸ್ವಾಮಿ ಅವರ ವಿರುದ್ಧ ಸಂಜ್ಞೇ ಪರಿಗಣಿಸಿರುವ ಆದೇಶ ಮುಂದುವರಿಯಲಿದೆ.
ಮಾರ್ಚ್ 28,2024 ರಂದು ಯಡಿಯೂರಪ್ಪ ಅವರಿಗೆ ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ಅದರ ಪ್ರಕಾರ, ಯಡಿಯೂರಪ್ಪ ತನಿಖಾಧಿಕಾರಿಯ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಜೂನ್ 10, 2024 ರಂದು ಯಡಿಯೂರಪ್ಪ ಅವರಿಗೆ ಎರಡನೇ ನೋಟಿಸ್ ನೀಡಿ, ಜೂನ್ 11, 2024 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಆದರೆ, ಅವರು ಜೂನ್ 17 ರವರೆಗೆ ಹಾಜರಾಗಲು ಸಮಯ ಕೋರಿದ್ದರು. ಈ ನಡುವೆ ಯಡಿಯೂರಪ್ಪ ಅವರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಐಡಿ ಆರೋಪಿಸಿತ್ತು.
ಅರ್ಜಿದಾರರ ವಿರುದ್ಧ ಎಫ್‌ಐಆರ್ ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಯಡಿಯೂರಪ್ಪ ಪರ ವಕೀಲರು ವಾದಿಸಿದ್ದಾರೆ. ಕ್ಯಾನ್ಸರ್‌ನಿಂದಾಗಿ ಕೊನೆಯುಸಿರೆಳೆದ ಸಂತ್ರಸ್ತೆಯ ತಾಯಿ, ದೂರುದಾರರ ಅರ್ಹತೆಗಳು ಮತ್ತು ಅರ್ಜಿದಾರರ ವಿರುದ್ಧ ಹೊರಿಸಲಾದ ಆರೋಪಗಳ ಸ್ವರೂಪ, ದೂರುದಾರರು ಇತರರ ವಿರುದ್ಧ ದಾಖಲಿಸಿರುವ ಹಲವಾರು ಪ್ರಕರಣಗಳ ಬಗ್ಗೆಯೂ ವಕೀಲರು ಉಲ್ಲೇಖಿಸಿದ್ದಾರೆ. ತನ್ನ ಕಕ್ಷಿದಾರರ ವಿರುದ್ಧದ ಪ್ರಕರಣದಂತೆ ಅವೆಲ್ಲವೂ ಕ್ಷುಲ್ಲಕವಾಗಿವೆ ಎಂದು ಅವರು ವಾದಿಸಿದ್ದಾರೆ. ಇದಲ್ಲದೆ, ರಾಜಕೀಯ ದ್ವೇಷದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.
ಮಧ್ಯಂತರ ಆದೇಶದ ಮೂಲಕ, ನ್ಯಾಯಾಲಯವು ಯಡಿಯೂರಪ್ಪ ಅವರಿಗೆ ತನಿಖೆಗೆ ಸಹಕರಿಸುವಂತೆ ಮತ್ತು ತನಿಖೆಗಾಗಿ ಪೊಲೀಸರ ಮುಂದೆ ಹಾಜರಾದಾಗ ಅವರನ್ನು ಬಂಧಿಸದಂತೆ ನಿರ್ದೇಶಿಸಿತ್ತು.
ಪ್ರಕರಣದ ಹಿನ್ನೆಲೆ : ಫೆಬ್ರವರಿ 2, 2024ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಯಡಿಯೂರಪ್ಪ ಮೇಲಿದೆ. ಈ ಸಂಬಂಧ ಬಾಲಕಿಯ ತಾಯಿ ಮಾರ್ಚ್ 14, 2024 ರಂದು ಯಡಿಯೂರಪ್ಪ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನ್ಯಾಯ ಕೊಡಿಸುವಂತೆ ಕೋರಿ ಬಾಲಕಿ ಮತ್ತು ಆಕೆಯ ತಾಯಿ ಯಡಿಯೂರಪ್ಪ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಯಡಿಯೂರಪ್ಪ ವಿರುದ್ಧದ ದೂರಿನ ಸಂಬಂಧ ಅಪ್ರಾಪ್ತ ಬಾಲಕಿಯ ತಾಯಿ ಮೇ 27, 2024 ರಂದು ವಕೀಲ ಬಾಲನ್ ಅವರನ್ನು ಭೇಟಿಯಾಗಬೇಕಿತ್ತು. ಆದರೆ, ಉಸಿರಾಟದ ತೊಂದರೆಯಿಂದ ಅವರು ಮೇ 26, 2024ರಂದು ಬೆಂಗಳೂರಿನ ನ್ಯಾನೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಈ ಸಾವಿನ ಸುತ್ತವೂ ಹಲವು ಅನುಮಾನಗಳು ವ್ಯಕ್ತವಾಗಿದ್ದು, ತನಿಖೆಗೆ ಅಗ್ರಹಿಸಿ ಜನವಾದಿ ಮಹಿಳಾ ಸಂಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಮೇ 27,2024ರಂದು ದೂರು ದಾಖಲಿಸಿದೆ.
ಮುಡಾ ಪ್ರಕರಣ ಸಿಬಿಐ ತನಿಖೆಗೆ ವಹಿಸಲು ಹೈಕೋರ್ಟ್ ನಕಾರ : ಸಿಎಂ ಸಿದ್ದರಾಮಯ್ಯ ನಿರಾಳ


