ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೇಲ್ವಿಚಾರಣೆಯಲ್ಲಿ ನಾಗರಿಕರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಯ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಗುರುವಾರ (ಸೆ.23) ಮಧ್ಯಂತರ ಆದೇಶ ನೀಡಿದೆ.
ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ. ಆದರೆ, ಸಮೀಕ್ಷೆಯಲ್ಲಿ ಭಾಗವಹಿಸಿದವರಿಂದ ಪಡೆದ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಇದೇ ವೇಳೆ ಅಧಿಕಾರಿಗಳಿಗೆ ಆದೇಶಿಸಿದೆ ಮತ್ತು ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ ಎಂದು ಸಾರ್ವಜನಿಕರಿಗೆ ತಿಳಿಸಲು ಸೂಚಿಸಿದೆ.
ರಾಜ್ಯ ಸರ್ಕಾರದ ಸಾಮಾಜಿಕ-ಆರ್ಥಿಕ ಸಮೀಕ್ಷೆಯನ್ನು ತಡೆ ಹಿಡಿಯಲು ಯಾವುದೇ ಕಾರಣವಿಲ್ಲ. ಆದರೆ, ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು ಮತ್ತು ಅದನ್ನು ಗೌಪ್ಯವಾಗಿಡಬೇಕು. ಜೊತೆಗೆ, ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತವಾಗಿದೆ, ಯಾರೂ ಒತ್ತಾಯದಿಂದ ಮಾಹಿತಿ ಕೊಡಬೇಕಾಗಿಲ್ಲ ಎಂದು ಸಾರ್ವಜನಿಕವಾಗಿ ತಿಳಿಸಬೇಕು. ಸಮೀಕ್ಷೆಗಾರರು ಆರಂಭದಲ್ಲಿಯೇ ಜನರಿಗೆ ಇದನ್ನು ಸ್ಪಷ್ಟವಾಗಿ ಹೇಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ.ಎಂ ಜೋಶಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ.
ಹಿಂದುಳಿದ ವರ್ಗಗಳ ಆಯೋಗದ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ರವಿವರ್ಮ ಕುಮಾರ್ ಅವರು, “ಈ ಸಮೀಕ್ಷೆಯು ಒಂದು ವರ್ಗ ಅಥವಾ ಜಾತಿಗೆ ಸಮರ್ಪಕ ಪ್ರಾತಿನಿದ್ಯ ಸಿಕ್ಕಿದೆಯೇ.. ಇಲ್ಲವೇ? ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸಲು ಕೈಗೊಳ್ಳಲಾಗಿದೆ ಎಂದು ಹೇಳಿದ್ದರು.
ಸಮೀಕ್ಷೆಯಲ್ಲಿ ಭಾಗವಹಿಸುವುದು ಜನರ ಇಚ್ಛೆಗೆ ಬಿಟ್ಟದ್ದು, ಯಾರನ್ನೂ ಒತ್ತಾಯಪೂರ್ವಕವಾಗಿ ಭಾಗವಹಿಸಲು ಹೇಳಿಲ್ಲ, ಮತ್ತು ಇದನ್ನು ಸಮೀಕ್ಷೆಗಾರರಿಗೆ ತರಬೇತಿಯಲ್ಲಿ ತಿಳಿಸಲಾಗಿದೆ ಎಂದಿದ್ದರು.
ಸಮೀಕ್ಷೆಯಲ್ಲಿ ಭಾಗವಹಿಸುವುದು ಐಚ್ಛಿಕವಾಗಿದ್ದರೂ, ಅದಕ್ಕೆ ವಿರೋಧ ಇದ್ದೇ ಇರುತ್ತದೆ. ಕೆ.ಎಸ್. ಪುಟ್ಟಸ್ವಾಮಿ ಕೇಸ್‌ನಿಂದಾಗಿ ವೈಯಕ್ತಿಕ ಮಾಹಿತಿ ಸಂಗ್ರಹದ ನಿಯಮಗಳು ಬದಲಾಗಿವೆ, ಮತ್ತು ತಮ್ಮ ಮಾಹಿತಿಯನ್ನು ಯಾರೊಂದಿಗೆ, ಹೇಗೆ ಹಂಚಿಕೊಳ್ಳಬೇಕು ಎಂಬ ನಿಯಂತ್ರಣವೂ ಗೌಪ್ಯತೆಯ ಒಂದು ಭಾಗವಾಗಿದೆ ಎಂದು ಅರ್ಜಿದಾರರ ಪರ ಹಿರಿಯ ವಕೀಲ ವಿವೇಕ್ ಸುಬ್ಬಾ ರೆಡ್ಡಿ ವಾದಿಸಿದ್ದರು.
ಸರ್ಕಾರವು ಸಂಗ್ರಹಿಸಿದ ಮಾಹಿತಿಯನ್ನು ಸರಿಯಾಗಿ ನಿಯಂತ್ರಿಸದೆ, ಅದನ್ನು ಅಸುರಕ್ಷಿತವಾಗಿ ಬಿಡುತ್ತದೆ. ಸಮೀಕ್ಷೆಯು ಜನರ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ ಎಂದು ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ಇದು ಸರಿಯೇ ಎಂದು ಪರೀಕ್ಷಿಸಲು ಸಮಾನತೆಯ ನಿಯಮವನ್ನು ಬಳಸಬೇಕು, ಮತ್ತು ಆ ಪರೀಕ್ಷೆ ಮುಗಿಯುವವರೆಗೆ ಸಮೀಕ್ಷೆಯನ್ನು ನಿಲ್ಲಿಸಬೇಕು ಎಂದು ವಿವೇಕ್ ಸುಬ್ಬಾ ರೆಡ್ಡಿ ಕೋರಿದ್ದರು.
ಆಧಾರ್ ದತ್ತಾಂಶ ಸೋರಿಕೆಯಾಗುವ ಸಾಧ್ಯತೆ ಇದೆ ಎಂಬ ವಾದಕ್ಕೆ, ಆಯೋಗ ಸಂಗ್ರಹಿಸುವ ಮಾಹಿತಿಯು ಆಧಾರ್‌ಗೆ ಸಂಬಂಧಿಸಿಲ್ಲ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಆದರೆ, ಸಮೀಕ್ಷೆಯಲ್ಲಿ ಭಾಗವಹಿಸುವ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ಹೊಂದಿದ್ದಾನೆ ಎಂಬ ವಿವರವನ್ನು ಮಾತ್ರ ದಾಖಲಿಸಲಾಗುತ್ತದೆ ಎಂದಿದೆ.
ರಾಜ್ಯ ಸರ್ಕಾರ ಇದನ್ನು ಸಮೀಕ್ಷೆ ಎಂದು ಹೇಳುತ್ತಿದ್ದರೂ, ಅವರು ಪ್ರಕಟಿಸಿದ ಕೈಪಿಡಿಯಲ್ಲಿ ಇದನ್ನು ಜಾತಿಗಣತಿ ಎಂದು ಉಲ್ಲೇಖಿಸಲಾಗಿದೆ ಎಂದು ಹಿರಿಯ ವಕೀಲ ಎಸ್. ಶ್ರೀರಂಗ ವಾದಿಸಿದ್ದರು.
ಈ ಸಮೀಕ್ಷೆಯನ್ನು ಜನಗಣತಿಯಂತೆ ಪರಿಗಣಿಸಲಾಗಿದೆ. ಒಂದು ವೇಳೆ ದೃಢೀಕರಣಕ್ಕಾಗಿ ಮೊಬೈಲ್ ಸಂಖ್ಯೆಯನ್ನು ಕಡ್ಡಾಯಗೊಳಿಸಿದ್ದರೆ, 2021ರ ನಿಯಮಗಳನ್ನು ಪಾಲನೆ ಮಾಡಬೇಕು, ಆದರೆ ಆ ನಿಯಮಗಳನ್ನು ಈ ಸಮೀಕ್ಷೆಯಲ್ಲಿ ಅನುಸರಿಸಿಲ್ಲ ಎಂದಿದ್ದರು.
ವಾದಗಳನ್ನು ಆಲಿಸಿದ ನಂತರ, ನ್ಯಾಯಾಲಯವು ಸಮೀಕ್ಷೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ, ಸಮೀಕ್ಷೆಯಲ್ಲಿ ಭಾಗವಹಿಸುವವರ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಆದೇಶಿಸಿದೆ.
“ಒಬ್ಬರು ವ್ಯಕ್ತಿ ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸಿದರೆ, ಸಮೀಕ್ಷೆ ಮಾಡುವವರು ಒತ್ತಾಯಪೂರ್ವಕವಾಗಿ ಅವರಿಂದ ಯಾವುದೇ ಮಾಹಿತಿಯನ್ನು ಪಡೆಯಲು ಪ್ರಯತ್ನಿಸಬಾರದು. ಆಯೋಗವು ಒಂದು ಕೆಲಸದ ದಿನದೊಳಗೆ (working Day) ಈ ಕುರಿತು ಅಫಿಡವಿಟ್ ಸಲ್ಲಿಸಬೇಕು. ಅದರಲ್ಲಿ ಸಂಗ್ರಹಿಸಿದ ಮತ್ತು ಶೇಖರಿಸಿದ ದತ್ತಾಂಶಗಳ ಗೌಪ್ಯತೆಗಾಗಿ ತೆಗೆದುಕೊಂಡ ಕ್ರಮಗಳನ್ನು ಸ್ಪಷ್ಟವಾಗಿ ತಿಳಿಸಬೇಕು” ಎಂದು ನ್ಯಾಯಾಲಯ ಸೂಚಿಸಿದೆ.
ಸಮೀಕ್ಷೆಗಾಗಿ ಆಗಸ್ಟ್ 13ರಂದು ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ.ಎನ್ ಸುಬ್ಬಾರೆಡ್ಡಿ ಮತ್ತಿತರರು ಪ್ರತ್ಯೇಕ ಪಿಐಎಲ್‌ಗಳನ್ನು ಸಲ್ಲಿಸಿದ್ದರು.
Courtesy: livelaw.in