ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಆಪಾದಿತ ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದ ತನಿಖೆಯನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಲು ಹೈಕೋರ್ಟ್ ಶುಕ್ರವಾರ (ಫೆ 7) ನಿರಾಕರಿಸಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೈಸೂರಿನ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ ತಿರಸ್ಕರಿಸಿದೆ.
“ಲೋಕಾಯುಕ್ತ ಮತ್ತು ಲೋಕಾಯುಕ್ತ ಸಂಸ್ಥೆಯು ಪ್ರಶ್ನಾರ್ಹವಾದ ಸ್ವಾತಂತ್ರ್ಯದಿಂದ ಬಳಲುತ್ತಿಲ್ಲ. ಲೋಕಾಯುಕ್ತ ಸಂಸ್ಥೆ ನಡೆಸಿರುವ ತನಿಖೆಯು ಲೋಪದೋಷ, ಪಕ್ಷಪಾತದಿಂದ ಕೂಡಿದೆ ಎಂದು ತನಿಖಾ ವರದಿಯನ್ನು ಪರಿಶೀಲಿಸಿದಾಗ ಕಂಡು ಬಂದಿಲ್ಲ. ಹೀಗಾಗಿ, ಇದನ್ನು ಮುಂದುವರಿದ ತನಿಖೆ ಅಥವಾ ಮರು ತನಿಖೆ ನಡೆಸಲು ಸಿಬಿಐಗೆ ಆದೇಶಿಸಲಾಗದು. ಬಾಹ್ಯ ಶಕ್ತಿಗಳಿಂದ ಲೋಕಾಯುಕ್ತ ಸಂಸ್ಥೆಯು ಪ್ರಭಾವಕ್ಕೆ ತುತ್ತಾಗುವ ಸಾಧ್ಯತೆಯ ಬಗ್ಗೆ ಈಗಾಗಲೇ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ತಮ್ಮ ತೀರ್ಪುಗಳಲ್ಲಿ ಹೇಳಿವೆ. ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಅರ್ಜಿ ವಜಾ ಮಾಡಲಾಗಿದೆ” ಎಂದು ನ್ಯಾಯಮೂರ್ತಿ ನಾಗಪ್ರಸನ್ನ ಅವರು ಹೇಳಿರುವುದಾಗಿ ಬಾರ್ & ಬೆಂಚ್ ವರದಿ ಮಾಡಿದೆ.
ಸಿದ್ದರಾಮಯ್ಯ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ “ರಾಜ್ಯಪಾಲರು ತನಿಖೆಗೆ ಅನುಮತಿ ನೀಡಿರುವ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿರುವ ನಂತರ ಯಾವುದೇ ಅಕ್ರಮವಾಗಿರುವುದನ್ನು ಅರ್ಜಿದಾರರು ಸಾಬೀತುಪಡಿಸಿಲ್ಲ. ಮುಖ್ಯಮಂತ್ರಿಯಾಗಿರುವ ಕಾರಣಕ್ಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ ಎಂದು ವರದಿ ಹೇಳಿದೆ.
ಲೋಕಾಯುಕ್ತ ಪೊಲೀಸರು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಪ್ರಕರಣದ ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲ ಎಂದು ಅರ್ಜಿದಾರ ಸ್ನೇಹಮಯಿ ಕೃಷ್ಣ ಆರೋಪಿಸಿದ್ದರು.
ಲೋಕಾಯುಕ್ತ, ಸಿಬಿಐ ಅಥವಾ ಯಾವುದೇ ಇತರ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಸ್ನೇಹಮಯಿ ಕೃಷ್ಣ ಕೋರಿದ ನಂತರ, ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 25, 2024 ರಂದು ಪ್ರಕರಣದ ತನಖೆಯನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿ ಆದೇಶಿಸಿತ್ತು. ಆದಾಗ್ಯೂ, ಲೋಕಾಯುಕ್ತ ಪೊಲೀಸರು ಎಫ್‌ಐಆರ್ ದಾಖಲಿಸುವ ಗಂಟೆಗಳ ಮೊದಲು, ಸೆಪ್ಟೆಂಬರ್ 28 ರಂದು ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಸ್ನೇಹಮಯಿ ಕೃಷ್ಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಲೋಕಾಯುಕ್ತ ಪೊಲೀಸರ ತನಿಖಾ ವರದಿಯನ್ನು ದಾಖಲಿಸಿಕೊಂಡ ನಂತರ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಸಿಬಿಐ ತನಿಖೆಗೆ ಕೋರಿ ಸಲ್ಲಿಸಲಾದ ಅರ್ಜಿಯ ಮೇಲಿನ ಆದೇಶವನ್ನು ಕಾಯ್ದಿರಿಸಿದರು. ಲೋಕಾಯುಕ್ತ ಪೊಲೀಸರ ವರದಿಯನ್ನು ವಿಚಾರಣಾ ನ್ಯಾಯಾಲಯವು ಸ್ವೀಕರಿಸುವ ಸಮಯವನ್ನು ಹೈಕೋರ್ಟ್ ವಿಸ್ತರಿಸಿತ್ತು.
ಜನವರಿ 27ರಂದು ವಾದ-ಪ್ರತಿವಾದಗಳ ಸಂದರ್ಭದಲ್ಲಿ, ಲೋಕಾಯುಕ್ತ ಪೊಲೀಸರ ವರದಿಯನ್ನು ಪರಿಶೀಲಿಸಿ ಸಿಬಿಐ ತನಿಖೆಗೆ ಕೋರಿರುವ ಅರ್ಜಿಯನ್ನು ನಿರ್ಧರಿಸುವುದಾಗಿ ಹೈಕೋರ್ಟ್ ಹೇಳಿತ್ತು. ಈ ಮಧ್ಯೆ, ಸಿದ್ದರಾಮಯ್ಯ ಪರ ವಕೀಲರು, ವರದಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದು ವಿಚಾರಣಾ ನ್ಯಾಯಾಲಯದ ವಿಶೇಷ ಅಧಿಕಾರ, ಹೈಕೋರ್ಟ್ ಅಲ್ಲ ಎಂದು ನ್ಯಾಯಾಲಯದ ಮುಂದೆ ವಾದಿಸಿದ್ದರು.
ಲೋಕಾಯುಕ್ತ ಪೊಲೀಸ್ ತನಿಖೆಗೆ ಆದೇಶಿಸಿದ ವಿಶೇಷ ನ್ಯಾಯಾಲಯದ ವ್ಯಾಪ್ತಿಗೆ ಈ ವಿಷಯ ಬರುವುದರಿಂದ, ತನಿಖಾ ವರದಿಯನ್ನು ಪರಿಶೀಲಿಸಿದ ನಂತರ ಸಿಬಿಐ ತನಿಖೆಯ ಬೇಡಿಕೆಯನ್ನು ಹೈಕೋರ್ಟ್ ಪೀಠವು ಸ್ವಯಂಪ್ರೇರಿತವಾಗಿ ನಿರ್ಧರಿಸಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಪರ ವಕೀಲರು ಹೇಳಿದ್ದರು.
2010ರಲ್ಲಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಗೆ ಅವರ ಸಹೋದರ ದಾನವಾಗಿ ನೀಡಿದ್ದ ಸುಮಾರು 3.16 ಎಕರೆ ಭೂಮಿಯನ್ನು ‘ತಪ್ಪಾಗಿ’ ಸ್ವಾಧೀನಪಡಿಸಿಕೊಂಡ ನಂತರ, ಮುಡಾ ಸಂಸ್ಥೆಯು ಪರಿಹಾರವಾಗಿ ಅವರಿಗೆ ಹಂಚಿಕೆ ಮಾಡಿದ್ದ 56 ಕೋಟಿ ರೂ. ಮೌಲ್ಯದ 14 ನಿವೇಶನಗಳ ಸುತ್ತ ಮುಡಾ ಪ್ರಕರಣ ಕೇಂದ್ರೀಕೃತವಾಗಿದೆ.
ಬಿಜೆಪಿ ಅಧಿಕಾರಾವಧಿಯಲ್ಲಿ ತಮ್ಮ ಪತ್ನಿಗೆ 14 ವಸತಿ ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ನನ್ನ ಕಡೆಯಿಂದ ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರ ನಡೆದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸಾರ್ವಜನಿಕವಾಗಿ ಹೇಳಿದ್ದಾರೆ. ಈ ಮಧ್ಯೆ ಅವರ ಪತ್ನಿ ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ.
ಮುಡಾ ನಿವೇಶನ ಹಂಚಿಕೆಯಲ್ಲಿನ ಅಕ್ರಮಗಳ ತನಿಖೆಗೆ ಅನುಕೂಲವಾಗುವಂತೆ ಸೆಪ್ಟೆಂಬರ್ 24, 2024ರ ಏಕಸದಸ್ಯ ಪೀಠದ ಆದೇಶದ ವಿರುದ್ಧ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ವಿಭಾಗೀಯ ಪೀಠವು ಮಾರ್ಚ್ 22 ರಂದು ಮೇಲ್ಮನವಿಯನ್ನು ವಿಚಾರಣೆ ನಡೆಸಲಿದೆ.
ನ್ಯಾಕ್ ಲಂಚ ಪ್ರಕರಣ : ದಾವಣಗೆರೆ ವಿವಿ ಪ್ರೊ.ಗಾಯತ್ರಿ ದೇವರಾಜ್ ಅಮಾನತು


