‘ಮಲ್ಟಿಪ್ಲೆಕ್ಸ್‌ಗಳು ಸೇರಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಎಲ್ಲಾ ಭಾಷೆಗಳ ಚಲನಚಿತ್ರಗಳ ಪ್ರದರ್ಶನಕ್ಕೆ ತೆರಿಗೆ ಹೊರತುಪಡಿಸಿ ಗರಿಷ್ಠ 200 ರೂಪಾಯಿ ಏಕರೂಪ ದರ ನಿಗದಿಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ನಿಯಮಗಳಿಗೆ ಹೈಕೋರ್ಟ್ ಮಂಗಳವಾರ (ಸೆ.23) ಮಧ್ಯಂತರ ತಡೆ ನೀಡಿದೆ.
ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಮತ್ತು ಇತರ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ರವಿ ವಿ ಹೊಸ್ಮನಿ ಅವರು, ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ವಿಚಾರಣೆಯ ಸಮಯದಲ್ಲಿ, ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು, “ಅರ್ಜಿದಾರರು ಕರ್ನಾಟಕ ಸಿನಿಮಾಸ್ (ನಿಯಂತ್ರಣ) ಕಾಯ್ದೆಯಡಿಯಲ್ಲಿ ರೂಪಿಸಲಾದ ನಿಯಮವನ್ನು ತಿದ್ದುಪಡಿ ಮಾಡುವ ಅಧಿಸೂಚನೆಯನ್ನು ಪ್ರಶ್ನಿಸಿದ್ದಾರೆ. ತಿದ್ದುಪಡಿಯಲ್ಲಿ ಒಂದು ನಿಬಂಧನೆಯನ್ನು ಸೇರಿಸಲಾಗಿದೆ, ಇದು ಸಂಪೂರ್ಣವಾಗಿ ಅನಿಯಂತ್ರಿತವಾಗಿದೆ” ಎಂದು ಹೇಳಿದರು.
“ಟಿಕೆಟ್ ಬೆಲೆಯನ್ನು 200 ರೂಪಾಯಿಗೆ ನಿಗದಿಪಡಿಸಲಾಗಿದೆ. ಈ ಸ್ಥಿರ ಬೆಲೆಗೆ ಯಾವುದೇ ತಾರ್ಕಿಕ ಆಧಾರವಿಲ್ಲ. ಗ್ರಾಹಕರು ಹೆಚ್ಚಿನ ಐಷಾರಾಮಿ ಸೌಲಭ್ಯಗಳಿಗಾಗಿ ಹೆಚ್ಚು ಹಣ ಪಾವತಿಸಲು ಸಿದ್ಧರಿದ್ದರೂ, ಎಲ್ಲರಿಗೂ ಒಂದೇ ಬೆಲೆಯನ್ನು ವಿಧಿಸುವುದು ಸರಿಯಲ್ಲ” ಎಂದರು.
ಏಪ್ರಿಲ್ 2017ರಲ್ಲಿ ಇದೇ ರೀತಿಯ ಸರ್ಕಾರಿ ಆದೇಶವೊಂದು ಜಾರಿಯಾಗಿತ್ತು. ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ನಂತರ, ಆದೇಶವನ್ನು ಸ್ಥಗಿತಗೊಳಿಸಲಾಗಿತ್ತು. ಕೊನೆಗೆ ಸರ್ಕಾರ ಅದನ್ನು ವಾಪಸ್ ಪಡೆಯಿತು. ಅದೇ ವಿಷಯ ಈಗ ಪುನರಾವರ್ತನೆಯಾಗುತ್ತಿದೆ. ಈ ಹಿಂದೆ ಸರ್ಕಾರಿ ಆದೇಶದ (ಜಿಒ) ಮೂಲಕ ನಿಯಮ ಜಾರಿಗೊಳಿಸಲಾಗಿತ್ತು. ಈಗ ಕಾಯ್ದೆಗೆ ತಿದ್ದುಪಡಿಯ ಮೂಲಕ ಜಾರಿಗೆ ತರಲಾಗಿದೆ ಎಂದು ಮುಕುಲ್ ರೋಹಟಗಿ ಪೀಠದ ಗಮನಕ್ಕೆ ತಂದರು.
“ನಾವು ಸಿನಿಮಾ ಥಿಯೇಟರ್‌ಗಳನ್ನು ನಿರ್ಮಿಸಲು ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ್ದೇವೆ. ಎಲ್ಲಾ ಟಿಕೆಟ್‌ಗಳ ಬೆಲೆಯನ್ನು 200 ರೂಪಾಯಿಗೆ ನಿಗದಿಪಡಿಸಬೇಕು ಎಂದು ಆದೇಶಿಸುವುದು ಸರಿಯಲ್ಲ. ಇದು ಎಲ್ಲಾ ವಿಮಾನಗಳನ್ನು ಕೇವಲ ಇಕಾನಮಿ ಕ್ಲಾಸ್‌ಗೆ ಸೀಮಿತಗೊಳಿಸುವಂತೆ ಹೇಳುವುದಕ್ಕೆ ಸಮಾನವಾಗಿದೆ. ಈ ಕಾಯ್ದೆಯಡಿಯಲ್ಲಿ ಬೆಲೆ ನಿಗದಿಪಡಿಸುದಕ್ಕೆ ಯಾವುದೇ ಅಧಿಕಾರವಿಲ್ಲ” ಎಂದು ವಾದಿಸಿದರು.
“ಈ ಕಾಯ್ದೆಯು ಟಿಕೆಟ್ ಬೆಲೆಯನ್ನು ನಿಗದಿಪಡಿಸುವುದನ್ನು ಎಂದಿಗೂ ಉದ್ದೇಶಿಸಿರಲಿಲ್ಲ, ಮತ್ತು ಈ ತಿದ್ದುಪಡಿಯು ಸಿನಿಮಾ ಥಿಯೇಟರ್ ಮಾಲೀಕರ ವ್ಯಾಪಾರ ನಡೆಸುವ ಹಕ್ಕಿನ ಮೇಲೆ ನೇರವಾದ ನಿರ್ಬಂಧವಾಗಿದೆ. ನೂರಾರು ಸಿನಿಮಾ ಥಿಯೇಟರ್‌ಗಳಿಗೆ ಇದರಿಂದ ಪರಿಣಾಮ ಬೀರುತ್ತದೆ. ಹಾಗಾಗಿ, ಈ ವಿಷಯವನ್ನು ನ್ಯಾಯಾಲಯ ಅಂತಿಮವಾಗಿ ನಿರ್ಧರಿಸುವವರೆಗೆ 200 ರೂಪಾಯಿ ಟಿಕೆಟ್ ಬೆಲೆಯ ನಿಯಮವನ್ನು ತಡೆ ಹಿಡಿಯಬೇಕು” ಎಂದು ಮನವಿ ಮಾಡಿದರು.
ಇದೇ ವೇಳೆ, ಮತ್ತೊಬ್ಬ ಅರ್ಜಿದಾರರ ಪರವಾಗಿ ವಾದಿ ಮಂಡಿಸಿದ ಹಿರಿಯ ವಕೀಲ ಉದಯ್ ಹೊಳ್ಳ ಅವರು, ಹಿಂದಿನ ಸರ್ಕಾರಿ ಆದೇಶದಲ್ಲಿ ಟಿಕೆಟ್ ಬೆಲೆಯ ಮೇಲೆ ಮಿತಿಯನ್ನು ವಿಧಿಸಲಾಗಿತ್ತು. 2017ರಲ್ಲಿ ಟಿಕೆಟ್ ಬೆಲೆಯ ಮೇಲೆ 200 ರೂಪಾಯಿಗಳ ಮಿತಿಯನ್ನು ಹಾಕಲಾಗಿತ್ತು. ಹಲವು ವರ್ಷಗಳ ನಂತರ ಈಗ ಮತ್ತೆ ಅದೇ ಮಿತಿಯನ್ನು ವಿಧಿಸಲಾಗಿದೆ. ಹಿಂದಿನ ಸರ್ಕಾರಿ ಆದೇಶವನ್ನು ವಾಪಸ್ ಪಡೆಯಲಾಗಿತ್ತು. ಆದ್ದರಿಂದ, ತಾತ್ಕಾಲಿಕವಾಗಿ ಈ ಆದೇಶವನ್ನು ತಡೆ ಹಿಡಿದು ಮಧ್ಯಂತರ ಆದೇಶ ನೀಡಲು ನಾವು ಕೋರುತ್ತಿದ್ದೇವೆ ಎಂದರು.
ಹೊಂಬಾಳೆ ಫಿಲ್ಮ್ಸ್ ಪರ ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು, ನಿಯಮ ತಿದ್ದುಪಡಿ ಮಾಡುವ ನೆಪದಲ್ಲಿ ನಿಯಮ ಮಾಡುವ ಕ್ರಮವು ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದು ವಾದಿಸಿದರು.
“ಇದು ಸಂಪೂರ್ಣವಾಗಿ ಪ್ರದರ್ಶಕ ಮತ್ತು ಚಿತ್ರ ವೀಕ್ಷಕರ ನಡುವಿನ ಖಾಸಗಿ ಒಪ್ಪಂದವಾಗಿದೆ. ಒಂದು ಚಿತ್ರಮಂದಿರದಲ್ಲಿ ಒಂದು ಚಿತ್ರಕ್ಕೆ ಒಂದು ಟಿಕೆಟ್ ಬೆಲೆ ಮತ್ತು ಇನ್ನೊಂದು ಚಿತ್ರ ಮಂದಿರದಲ್ಲಿ ಅದೇ ಚಿತ್ರಕ್ಕೆ ಇನ್ನೊಂದು ಟಿಕೆಟ್ ಬೆಲೆ ಇರುತ್ತದೆ” ಎಂದು ಥಿಯೇಟರ್ ಪರವಾಗಿ ಹಾಜರಾದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಹೇಳಿದರು.
ರಾಜ್ಯ ಸರ್ಕಾರದ ಪರವಾಗಿ ವಾದಿಸಿದ ಎಎಜಿ ಇಸ್ಮಾಯಿಲ್ ಝಬಿಉಲ್ಲಾ ಅವರು, “ಜುಲೈ 15 ರಂದು ಪ್ರಕಟವಾದ ಕರಡು ಅಧಿಸೂಚನೆಗೆ ಕೆಲವು ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿದ್ದಾರೆ. ಟಿಕೆಟ್ ಬೆಲೆಗೆ ಮಿತಿ ವಿಧಿಸುವ ನಿರ್ಧಾರವನ್ನು ಮಾರ್ಚ್ 7 ರ ರಾಜ್ಯ ಬಜೆಟ್ ಭಾಷಣದಲ್ಲಿ ಘೋಷಿಸಲಾಗಿತ್ತು. ಇದು ಸಾರ್ವಜನಿಕರ ಹಿತದೃಷ್ಟಿಯಿಂದ ಮಾಡಲಾಗಿದೆ. ಈ ನಿರ್ಧಾರದಿಂದಾಗಿ ಅನೆಕ್ಸರ್ ಎ ಜಾರಿಗೆ ಬಂದಿದೆ. ಜೊತೆಗೆ, ಈ ರೀತಿಯ ನಿಯಂತ್ರಣವನ್ನು ವಿಧಿಸುವ ಅಧಿಕಾರವು ಸಂವಿಧಾನದಿಂದ ದೊರೆತಿದೆ ಎಂದು ಅವರು ಸ್ಪಷ್ಟಪಡಿಸಿದರು.
ಕರ್ನಾಟಕ ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ (ಕೆಎಫ್‌ಸಿಸಿ) ಪರ ವಕೀಲರು, ತಾವು ಈ ಪ್ರಕರಣದಲ್ಲಿ ಒಳಗೊಳ್ಳಲು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯಕ್ಕೆ ಸಹಾಯ ಮಾಡಲು ಇಚ್ಛಿಸುವುದಾಗಿ ತಿಳಿಸಿದರು. ಆದರೆ, ನ್ಯಾಯಾಲಯವು ಈ ಪ್ರಕರಣವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲ ಎಂದು ಸ್ಪಷ್ಟಪಡಿಸಿತು. ಕೆಎಫ್‌ಸಿಸಿಯು ಈ ಪ್ರಕರಣದಲ್ಲಿ ಭಾಗವಹಿಸಲು ತನ್ನ ಕಾನೂನು ಅರ್ಹತೆಯನ್ನು ಸಾಬೀತುಪಡಿಸಬೇಕು ಎಂದು ಮೌಖಿಕವಾಗಿ ಹೇಳಿತು.
ಕೋಮುವಾದಿಗಳಿಗೆ ಅವಕಾಶ, ಶಾಂತಿಪ್ರಿಯರಿಗೆ ನಿರ್ಬಂಧ: ಮದ್ದೂರು ‘ಸೌಹಾರ್ದ ನಡಿಗೆ’ ಜಾಥಾದಲ್ಲಿ ಆಕ್ರೋಶ


