ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹೇಳಿಕೆಗೆ ಕರ್ನಾಟಕದಾದ್ಯಂತ ಒಕ್ಕೊರಲಿನ ವಿರೋಧ ವ್ಯಕ್ತವಾಗಿದೆ. ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಮತ್ತು ಕನ್ನಡಪರ ಸಂಘಟನೆಗಳು ಉದ್ಧವ್ ಠಾಕ್ರೆಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಗಡಿ ಹೋರಾಟದಲ್ಲಿ ಮಡಿದವರ ನೆನಪಿನಲ್ಲಿ ಹಮ್ಮಿಕೊಂಡಿದ್ದ ಹುತಾತ್ಮ ದಿನಾಚರಣೆಯಲ್ಲಿ ಭಾಗವಹಿಸಿದ ಉದ್ಧವ್ ಠಾಕ್ರೆ ಮೇಲಿನ ಹೇಳಿಕೆ ನೀಡಿದ್ದರು. “ಮರಾಠಿ ಮಾತನಾಡುವ ಮತ್ತು ಮರಾಠಿ ಸಾಂಸ್ಕೃತಿಕ ವಾತವಾರಣವಿರುವ ಕರ್ನಾಟಕದ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸುವುದೇ ಈ ಗಡಿ ಹೋರಾಟದಲ್ಲಿ ಹುತಾತ್ಮರಾದವರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ನಾವು ಒಂದಾಗಿದ್ದೇವೆ ಮತ್ತು ಅದಕ್ಕೆ ಬದ್ಧರಾಗಿದ್ದೇವೆ” ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿಯು ಟ್ವೀಟ್ ಮಾಡಿತ್ತು.
कर्नाटकव्याप्त मराठी भाषिक आणि सांस्कृतिक प्रदेश महाराष्ट्रात आणणे हीच या सीमा लढ्यात हौतात्म्य पत्करलेल्या सैनिकांना आदरांजली ठरणार आहे. त्यासाठी आम्ही एकजूट आणि कटिबद्ध आहोत. या अभिवचनासह हूतात्म्यांना विनम्र अभिवादन??
— CMO Maharashtra (@CMOMaharashtra) January 17, 2021
ಮಹಾರಾಷ್ಟ್ರ ಸಿಎಂರವರ ಈ ಪ್ರಚೋದನಾಕಾರಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, “ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಾದೇಶಿಕತೆ ಪ್ರದರ್ಶನ ಮತ್ತು ಭಾಷಾಂಧತೆಯ ಮಾತುಗಳು ದೇಶದ ಏಕತೆಗೆ ಮಾರಕವಾಗಿವೆ. ಇದನ್ನು ನಾನು ಖಂಡಿಸುತ್ತೇನೆ. ಕರ್ನಾಟಕದಲ್ಲಿ ಮರಾಠಿಗರು ಕನ್ನಡಿಗರೊಂದಿಗೆ ಬೆರೆತಿದ್ದಾರೆ, ಅದೇ ರೀತಿ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿರುವ ಕನ್ನಡಿಗರು ಮರಾಠಿಗರೊಂದಿಗೆ ಬೆರೆತಿದ್ದಾರೆ. ಈ ಸೌಹಾರ್ದಯುತ ವಾತಾವರಣವನ್ನು ಕೆಡಿಸುವ ಪ್ರಯತ್ನ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಂದ ಆಗುತ್ತಿರುವುದು ನೋವಿನ ಸಂಗತಿ. ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ ಎಂದು ಬಿಎಸ್‌ವೈ ಆಗ್ರಹಿಸಿದ್ದಾರೆ.
'ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮರಾಠಿ ಭಾಷೆ ಮತ್ತು ಸಂಸ್ಕೃತಿ ಪ್ರಧಾನ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳುವ ಮಾತನಾಡಿರುವುದು ಅವರ ಉದ್ಧಟತನದ ಪ್ರದರ್ಶನವಾಗಿದೆ. ಇದು ಭಾರತೀಯ ಒಕ್ಕೂಟ ತತ್ವದ ವಿರುದ್ಧವಾದ ನಿಲುವು. ಮಹಾಜನ್ ವರದಿಯೇ ಅಂತಿಮ ಎಂಬುದು ಎಲ್ಲರೂ ಬಲ್ಲ ಸತ್ಯ. (1/3)
— CM of Karnataka (@CMofKarnataka) January 18, 2021
ಈ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ “ನಮ್ಮ ಬೆಳಗಾವಿ ಬಗ್ಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೀಡಿರುವ ಅಧಿಕಪ್ರಸಂಗತನದ ಹೇಳಿಕೆ ಖಂಡನೀಯ. ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಇತ್ಯರ್ಥವಾಗಿರುವ ವಿಷಯವನ್ನು ಕೆಣಕಲು ಬರಬೇಡಿ. ಬೆಳಗಾವಿ ನಮ್ಮದು” ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರೆ, ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ. ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ. ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ. ಬೆಳಗಾವಿ ಗಡಿ ಬಗ್ಗೆ ಮಹಾಜನ ವರದಿಯೇ ಅಂತಿಮ. ಇತ್ಯರ್ಥವಾಗಿರುವ ವಿಷಯವನ್ನುವ ಕೆಣಕಿ ರಾಜಕೀಯ ಮಾಡಲು ಹೋಗಬೇಡಿ. ಈಗ ನೀವು ಕೇವಲ ಶಿವಸೈನಿಕ ಅಲ್ಲ, ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿ ಎನ್ನುವುದನ್ನು ಮರೆಯಬೇಡಿ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
ಕರ್ನಾಟಕದ ನೆಲ-ಜಲ-ಭಾಷೆಯ ರಕ್ಷಣೆ ನಮ್ಮೆಲ್ಲರ ಕರ್ತವ್ಯ.
ಈ ಬಗ್ಗೆ ರಾಜಿಯೂ ಇಲ್ಲ, ರಾಜಕೀಯವೂ ಇಲ್ಲ.ಮಹಾರಾಷ್ಟ್ರ ಮುಖ್ಯಮಂತ್ರಿ @uddhavthackeray ಅವರ ಉದ್ಧಟತನದ ಹೇಳಿಕೆಗೆ@CMofKarnataka ಅವರು,
ಅಧಿಕೃತವಾಗಿ ತಕ್ಕ
ಪ್ರತ್ಯುತ್ತರ ನೀಡಬೇಕು.#ಬೆಳಗಾವಿನಮ್ಮದು
೩/೪— Siddaramaiah (@siddaramaiah) January 18, 2021
ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಟ್ವೀಟ್ ಮಾಡಿ “ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಕನ್ನಡ ಹೋರಾಟಗಾರರು ನೆಟ್ಟಿದ್ದ ಕನ್ನಡ ಧ್ವಜ ತೆರವು ಮಾಡಬೇಕು ಎಂದು ವಾದಿಸಿದ್ದ ಎಂಇಎಸ್‌ಗೆ ಸರಿಯಾದ ಪೆಟ್ಟು ಕೊಟ್ಟಿದ್ದರೆ, ಇಂದು ಉದ್ಧವ್ ಠಾಕ್ರೆ ಇಂಥ ಮಾತುಗಳನ್ನು ಆಡಲು ಸಾಧ್ಯವಾಗುತ್ತಿರಲಿಲ್ಲ. ಎಂಇಎಸ್ ಅನ್ನು ಪರೋಕ್ಷವಾಗಿ ಬೆಂಬಲಿಸುತ್ತಿರುವವರಿಂದ ಪ್ರೇರಣೆ ಪಡೆದೇ ಉದ್ಧವ ಠಾಕ್ರೆ ಇಂಥ ಮಾತುಗಳನ್ನು ಆಡಿದ್ದಾರೆ ಎಂದು ಎಚ್‌ಡಿಕೆ ದೂರಿದ್ದಾರೆ.
‘ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ’ ಎಂದಿರುವ ಉದ್ಧವ್ ಠಾಕ್ರೆ ಅವರ ಹೇಳಿಕೆ ಚೀನಾದ ವಿಸ್ತರಣಾವಾದವನ್ನು ಧ್ವನಿಸುತ್ತಿದೆ. ಒಕ್ಕೂಟ ವ್ಯವಸ್ಥೆ ಒಪ್ಪಿ, ಭಾಷಾ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡು, ಅದಕ್ಕೆ ಬದ್ಧವಾಗಿ ನಡೆಯುತ್ತಿರುವಾಗ ಇಂಥ ವಿಸ್ತರಣಾವಾದ ಸೌಹಾರ್ದಕ್ಕೆ ಧಕ್ಕೆ ತರಲಿದೆ.
1/7— H D Kumaraswamy (@hd_kumaraswamy) January 18, 2021
ಕರವೇ ರಾಜ್ಯಾಧ್ಯಕ್ಷ ನಾರಾಯಣಾಗೌಡರವರು ಟ್ವೀಟ್ ಮಾಡಿ “ಉದ್ಧವ್ ಠಾಕ್ರೆ ಹೇಳಿಕೆ ಕುಚೇಷ್ಟೆ, ತಲೆಹರಟೆ ಮಾತು. ಶಿವಸೇನೆಯವರಿಗೆ ಮೂರು ತಿಂಗಳಿಗೊಮ್ಮೆ ಗಡಿ ತಂಟೆ ಕೆದಕದಿದ್ದರೆ ತಿಂದಿದ್ದು ಅರಗುವುದಿಲ್ಲ. ಹೀಗೆ ಮಾತಾಡುವುದರಿಂದ ಉದ್ಧವ್ ಠಾಕ್ರೆ ಪದೇಪದೇ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ. ಆದರೂ ಈ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾಧನೀಯ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳು ಪ್ರಗತಿಪರ ರಾಜ್ಯಗಳಾಗಿದ್ದು, ಹೆಚ್ಚು ತೆರಿಗೆ ಸಂಗ್ರಹಿಸಿಕೊಡುತ್ತವೆ. ಆದರೂ ಈ ರಾಜ್ಯಗಳ ಮೇಲೆ ಹಿಂದಿ ಸಾಮ್ರಾಜ್ಯಶಾಹಿ ದಬ್ಬಾಳಿಕೆ ನಡೆಸುತ್ತಿದೆ. ಈ ಸಂದರ್ಭದಲ್ಲಿ ನಾವೆಲ್ಲರೂ ಒಂದಾಗಿ ಹೋರಾಟ ನಡೆಸಬೇಕಿತ್ತು. ಉದ್ಧವ್ ಠಾಕ್ರೆಗೆ ಈ ಸಾಮಾನ್ಯ ಜ್ಞಾನ ಇಲ್ಲದಿರುವುದು ವಿಷಾಧನೀಯ. (7/8)
— ನಾರಾಯಣಗೌಡ್ರು.ಟಿ.ಎ | Narayanagowdru T.A. (@narayanagowdru) January 18, 2021
ಕರ್ನಾಟಕ ಅಕ್ರಮಿತ ಪ್ರದೇಶ ಎಂಬ ಉದ್ಧವ್ ಹೇಳಿಕೆಯೇ ಅಸಂಬದ್ಧ. ಕರ್ನಾಟಕ ಯಾವ ಪ್ರದೇಶವನ್ನು ಅತಿಕ್ರಮಿಸಿಕೊಂಡಿಲ್ಲ. 1956ರ ರಾಜ್ಯ ಪುನರ್ವಿಂಗಡನೆ ಸಂದರ್ಭದಲ್ಲಿ ಬೆಳಗಾವಿ ನ್ಯಾಯಬದ್ಧವಾಗಿಯೇ ಅಂದಿನ ಮೈಸೂರು ಸಂಸ್ಥಾನದ ಭಾಗವಾಗಿದೆ. ಮಹಾಜನ್ ಆಯೋಗದ ವರದಿಯೂ ಅದನ್ನು ಸ್ಪಷ್ಟಪಡಿಸಿದೆ. ಹೀಗಿರುವಾಗ ಮಹಾರಾಷ್ಟ್ರದ ಕೀಟಲೆಗೆ ಅರ್ಥವಿದೆಯೆ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಬೆಳಗಾವಿ ಯಾವತ್ತಿದ್ದರೂ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗ. ಮಹಾಜನ್ ವರದಿಯನ್ನು ಈಗಾಗಲೇ ಒಪ್ಪಿಕೊಂಡಾಗಿದೆ. ಮಹಾರಾಷ್ಟ್ರ ಸರ್ಕಾರವು ಗಡಿ ಭಾಗದ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುವುದು ಸರಿಯಲ್ಲ. ಮಹಾರಾಷ್ಟ್ರ ಸರ್ಕಾರ ತನ್ನ ವೈಫಲ್ಯ ಮರೆಮಾಚಿಕೊಳ್ಳಲು ಗಡಿ ವಿಷಯ ಪ್ರಸ್ತಾಪಿಸಿ ಜನರ ಭಾವನೆ ಕೆರಳಿಸುವ ಯತ್ನ ಮಾಡುವುದನ್ನು ನಿಲ್ಲಿಸಬೇಕು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಹಿಂದಿ ಹೇರಿಕೆಗೆ ತೀವ್ರ ವಿರೋಧ: ಹಿಂದಿಗುಲಾಮಗಿರಿಬೇಡ ನ್ಯಾಷನಲ್ ಟ್ರೆಂಡಿಂಗ್!


