ವಸಾಹತುಶಾಹಿ ಕಾಲದಿಂದಲೂ ಭೌಗೋಳಿಕ-ರಾಜಕೀಯ ಜಾಗತಿಕ ವ್ಯವಸ್ಥೆಯನ್ನು ಪ್ರಮುಖವಾಗಿ ರೂಪಿಸಿದವರು “ಫರ್ಸ್ಟ್ ವರ್ಲ್ಡ್ ಎಂದು ಕರೆಯಲಾಗುವ ಪಶ್ಚಿಮದ ದೇಶಗಳು. ಬ್ರಿಟನ್ನಿನ ಮೂರು ಕಾದಂಬರಿಕಾರರು – ಜೇಮ್ಸ್ ಬಾಂಡ್ ಪಾತ್ರದ ಸೃಷ್ಟಿಕರ್ತ ಇಯಾನ್ ಫ್ಲೆಮಿಂಗ್, ಫ್ರೆಡೆರಿಕ್ ಫೋರ್‍ಸಿಥ್ ಮತ್ತು ಇತ್ತೀಚೆಗಷ್ಟೆ ತೀರಿಕೊಂಡ ಜಾನ್ ಲೆ ಕೆರ್ರೆ – ನಮಗೆ ಈ ದೃಷ್ಟಿಕೋನವನ್ನು ಅರ್ಥ ಮಾಡಿಕೊಳ್ಳಲು ಸಹಕರಿಸಿದವರು. ಸೋಜಿಗವೆಂದರೆ ಈ ಮೂವರೂ ತಮ್ಮ ಪೂರ್ವಾಶ್ರಮದಲ್ಲಿ ಗೂಢಚಾರರಾಗಿದ್ದವರು ಮತ್ತು ಅವರು ಬರೆದಿದ್ದು “ಸ್ಪೈ ಫಿಕ್ಷನ್ (ಗೂಢಚರ್ಯ ಕಥಾನಕಗಳು) ಮಾತ್ರ! ಇದರಿಂದ ಜಾಗತಿಕ ಜಿಯೋ ಪಾಲಿಟಿಕ್ಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಗೂಢಚರ್ಯೆಯ ಪಾತ್ರ ಕೂಡ ವಿದಿತವಾಗುತ್ತದೆ.

ಈ ಮೂವರ ಕೃತಿಗಳಲ್ಲಿ ವಿಲನ್ ಯಾರು ಎಂಬುದನ್ನು ಗಮನಿಸುತ್ತಾ ಬನ್ನಿ. ಆ ಕಾಲಘಟ್ಟದಲ್ಲಿ ಪಶ್ಚಿಮ ಕಟೆದು ನಿಲ್ಲಿಸಿದ ಶತ್ರು ಮತ್ತು ಅದರ ರಾಜಕೀಯದ ಪಾಠವೇ ಈ ಕಾದಂಬರಿಗಳು. ಮೂವರೂ ಬಹುತೇಕ ಅಮೆರಿಕಾ-ರಷ್ಯಾ ನಡುವಿನ ಶೀತಲಸಮರ ಕಾಲಘಟ್ಟದ ಪ್ರಾಡಕ್ಟುಗಳು. 90ರ ದಶಕದಲ್ಲಿ ಯುಎಸ್‌ಎಸ್‌ಆರ್ ಪತನದವರೆಗೆ ಇವರ ಬಹುತೇಕ ಕಾದಂಬರಿಗಳು ರಷ್ಯಾ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಶೀತಲ ಸಮರದ ಅಂತ್ಯವನ್ನು ಗೂಢಚರ್ಯೆಯ ಅಂತ್ಯ ಎಂದೂ ಹಲವರು ಉತ್ಪ್ರೇಕ್ಷಿಸಿದ್ದರು. ಆದರೆ ಜಾನ್ ಲೆ ಕೆರ್ರೆ ಅಂದೇ ಹೇಳೀದ್ದರು, ಅದು ಸಾಧ್ಯವೇ ಇಲ್ಲವೆಂದು. ಪಶ್ಚಿಮವು ಕೆಲವೇ ವರ್ಷಗಳಲ್ಲಿ ಹೊಸ ಶತ್ರುವನ್ನು ಕಟೆದು ನಿಲ್ಲಿಸಿತು – ಅದು ಇಸ್ಲಾಂ. ಗೂಢಚರ್ಯೆಯೂ, ಅದರ ಸುತ್ತಲಿನ ಕಾದಂಬರಿಗಳೂ ಹೊಸ ದಿಕ್ಕಿನಲ್ಲಿ ಮುಂದುವರೆದವು. ಟ್ರಂಪ್ ಅಧ್ಯಕ್ಷಾವಧಿಯಲ್ಲಿ ಐಸಿಸ್ ನಾಯಕ ಅಲ್-ಬಾಗ್ಧಾದಿಯ ಹತ್ಯೆಯೊಂದಿಗೆ ಇಸ್ಲಾಮಿಕ್ ಭಯೋತ್ಪಾದನೆ ಕೊಂಚ ಹಿಂದಕ್ಕೆ ಸರಿದಿದೆ. ಆದರೆ ಇರಾನ್ ಇನ್ನೂ ಒಂದು ವಿಲನ್ ಆಗಿ ತೆರೆಯ ಮೇಲಿದೆ. ಇತ್ತ ಇಸ್ರೇಲ್ ಜೊತೆಗೆ ಮೊಟ್ಟಮೊದಲ ಬಾರಿಗೆ ಅರಬ್ ರಾಷ್ಟ್ರಗಳು ಸೌಹಾರ್ದಯುತ ಸಂಬಂಧಗಳನ್ನು ಸ್ಥಾಪಿಸಿಕೊಳ್ಳುತ್ತಿವೆ. ಇದರಲ್ಲಿ ಪ್ರಮುಖ ಪಾತ್ರ ವಹಿಸಿದಾತ ಟ್ರಂಪ್‌ನ ಅಳಿಯ.

ಜಾಗತಿಕ ಭೌಗೋಳಿಕ-ರಾಜಕೀಯ ವ್ಯವಸ್ಥೆಯನ್ನು ಕಟ್ಟಿಕೊಡುವುದರಲ್ಲಷ್ಟೇ ಅಲ್ಲ, ಅದು ಮುಂದೆ ತೆಗೆದುಕೊಳ್ಳಬಹುದಾದ ದಿಕ್ಕು-ದೆಸೆಯನ್ನು ಊಹಿಸಿ ಹೇಳುವಲ್ಲಿಯೂ ಈ ಕಾದಂಬರಿಕಾರರು ನಿಷ್ಣಾತರು. ಹಾಗಾಗಿಯೇ ಜಗತ್ತಿನ ಸರ್ಕಾರಗಳು, ಗೂಢಚಾರಿ ಸಂಸ್ಥೆಗಳೂ ಸಹ ಅವರ ಕೃತಿಗಳನ್ನು ಕಾದುನಿಂತು ಓದುತ್ತವೆ. ಸುಮಾರು ಎರಡೂವರೆ ದಶಕಗಳ ನಂತರ ಬರೆದ, ಫೋರ್‍ಸಿಥ್ ಅವರ 2018ರ ಕಾದಂಬರಿ ’ದಿ ಫಾಕ್ಸ್’ ಮತ್ತು ಲೆ ಕೆರ್ರೆ ಅವರ 2019ರ ಕಡೆಯ ಕಾದಂಬರಿ ’ದಿ ಏಜೆಂಟ್ ರನ್ನಿಂಗ್ ಇನ್ ದಿ ಫೀಲ್ಡ್’ಗಳಲ್ಲಿ ರಷ್ಯಾ ಮತ್ತೆ ವಿಲನ್! ಇದು ಖಂಡಿತವಾಗಿಯೂ ಬದಲಾಗುತ್ತಿರುವ ಜಾಗತಿಕ ಭೌಗೋಳಿಕ-ರಾಜಕೀಯ ವ್ಯವಸ್ಥೆಯ ದಿಕ್ಕನ್ನು ಸೂಚಿಸುತ್ತದೆ. ಈ ಎರಡೂ ಕಾದಂಬರಿಗಳ ಮೂಲ ಸೆಲೆ 2016ರ ಅಮೆರಿಕಾ ಅಧ್ಯಕ್ಷ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ಅನ್ನು ಗೆಲ್ಲಿಸುವಲ್ಲಿ ರಷ್ಯಾ ನಿರ್ವಹಿಸಿತೆನ್ನಲಾದ ಪಾತ್ರ, ಅದು ಮತ್ತೆ ಗೂಢಚರ್ಯೆಯ ಮೂಲಕವೇ. ಅದು ಈಗ ಹೊಸ ರೂಪ ಪಡೆದುಕೊಂಡಿದೆ. ಮೊದಲಿನ ಹಾಗೆ ಅದು ಒಬ್ಬ ಗೂಢಚಾರಿಯು ನಿಜಜಗತ್ತಿನಲ್ಲಿ ನಡೆಸುವ ಸಾಹಸಗಳಾಗಿರಬೇಕಿಲ್ಲ. ಅದು ಇವತ್ತು ಜನಮಾನಸವನ್ನು ಪ್ರಭಾವಿಸುವ ಪ್ರೊಪೊಗ್ಯಾಂಡಾ, ಡಿಸ್‌ಇನ್ಫರ್‍ಮೇಷನ್ ಮತ್ತು ಫೇಕ್ ನ್ಯೂಸ್‌ಗಳ ಮೂಲಕ ನಡೆಯುತ್ತೆ. ಅದಕ್ಕೆ ವೇದಿಕೆಗಳು ಫೇಸ್‌ಬುಕ್ಕೂ ಸೇರಿದಂತೆ ಹಲವು ಸಾಮಾಜಿಕ ಮಾಧ್ಯಮಗಳು ಮತ್ತು ನಮ್ಮ ಕಿಸೆಯಲ್ಲಿರುವ ಫೋನುಗಳು!

ಅಮೆರಿಕ ಅಧ್ಯಕ್ಷನೇ ರಷ್ಯಾದ ಕೈಗೊಂಬೆಯಾದರೆ, ಅದಕ್ಕಿಂತಲೂ coup d’etat (ರಾಜಕೀಯ ದಂಗೆ) ಉಂಟೆ? ವ್ಲಾದಿಮಿರ್ ಪುಟಿನ್ ರಷ್ಯಾವನ್ನು ಮತ್ತೆ ಸ್ಟಾಲಿನ್ ಕಾಲದ ಉಚ್ಛ್ರಾಯಕ್ಕೆ ತರಬೇಕೆಂಬ ಅಬ್ಸೆಷನ್ ಇಂದ ಕೆಲಸ ಮಾಡುತ್ತಿದ್ದಾನೆ ಎಂದು ಬಣ್ಣಿಸುತ್ತಾರೆ ಫೋರ್‍ಸಿಥ್. ಟ್ರಂಪ್‌ಅನ್ನು “ಪುಟಿನ್ಸ್ ಶಿಟ್‌ಹೌಸ್ ಕ್ಲೀನರ್ ಎಂದು ಬಣ್ಣಿಸುತ್ತಾರೆ ಲೆ ಕೆರ್ರೆ ತಮ್ಮ ಇತ್ತೀಚಿನ ಕಾದಂಬರಿಗಳಲ್ಲಿ. ಇತ್ತೀಚೆಗೆ ಅಮೆರಿಕೆಯ ಗೂಢಚರ್ಯೆಯ ಅತಿ ದೊಡ್ಡ ಎಕ್ಸ್‌ಪೋಸ್‌ಗಳನ್ನು ಮಾಡಿದ್ದು ವಿಕಿಲೀಕ್ಸ್ ಖ್ಯಾತಿಯ ಜೂಲಿಯನ್ ಅಸ್ಸಾಂಜ್ ಮತ್ತು ಎಡ್ವರ್ಡ್ ಸ್ನೋಡೆನ್. ಇವರೀರ್ವರಿಗೂ ರಷ್ಯಾ ಸಂಬಂಧಗಳಿವೆ – ಸ್ನೋಡೆನ್ ಸದ್ಯ ರಷ್ಯಾ ಆಶ್ರಯದಲ್ಲೇ ಇದ್ದಾನೆ. ರಷ್ಯಾದ ಬೇಹುಗಾರರ ಜೊತೆಗೂಡಿ ಅಸ್ಸಾಂಜ್ ಅಮೆರಿಕೆಯ ವಿರುದ್ಧ ಗೂಢಚರ್ಯೆ ಮಾಡಿದ್ದಾನೆಂದು ಆರೋಪಪಟ್ಟಿ ಹಿಡಿದು ಅಮೆರಿಕ ಸರ್ಕಾರ ಕೂತಿದೆ. 2016ರ ಅಮೆರಿಕ ಚುನಾವಣೆಯ ವೇಳೆ ವಿಕಿಲೀಕ್ಸ್, ಡೆಮಾಕ್ರಾಟ್ ಪಕ್ಷದ ಆಂತರಿಕ ಈಮೇಲ್‌ಗಳನ್ನು ಲೀಕ್ ಮಾಡಿದ್ದು, ಹಿಲರಿ ಕ್ಲಿಂಟನ್‌ಗೆ ದೊಡ್ಡ ಹೊಡೆತ ನೀಡಿ, ಟ್ರಂಪ್‌ಗೆ ಸಹಕಾರಿಯಾಗಿತ್ತು. 2016ರ ಅಮೆರಿಕ ಚುನಾವಣೆಯಲ್ಲಿ ರಷ್ಯಾದ ಪಾತ್ರದ ಬಗ್ಗೆ ನಡೆದ ತನಿಖೆಯನ್ನು ಟ್ರಂಪ್ ಸರ್ಕಾರ ಮುಚ್ಚಿಹಾಕಿತು. ಸದ್ಯ ಅಲ್ಲಿ ಡೆಮಾಕ್ರಾಟ್ ಸರ್ಕಾರ ಬರುತ್ತಿರುವುದರಿಂದ ಈ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ಮುಂದಿನ ದಿನಗಳಲ್ಲಿ ಲಭ್ಯವಾಗಲಿದೆ. ಇನ್ನು ರಷ್ಯಾದ ಕೈಗೊಂಬೆ ಎನಿಸಿಕೊಂಡ ಟ್ರಂಪ್ ಜಾಗತಿಕ ವೇದಿಕೆಯಿಂದ ಅಮೆರಿಕೆಯನ್ನು ಹಿಂತೆಗೆದುಕೊಂಡಿದ್ದು ಕಾಕತಾಳೀಯವೇ?

ಟ್ರಂಪ್ ತನ್ನ ಪ್ರೆಸಿಡೆನ್ಸಿಯ ಕಡೆಯ ಎರಡು ವರ್ಷಗಳಲ್ಲಿ ಚೀನಾ ವಿರುದ್ಧ ಟ್ರೇಡ್ ವಾರ್ ನಡೆಸಿದ್ದು, ಇದು ಬರಲಿರುವ ಅಮೆರಿಕಾ-ಚೀನಾ ಶೀತಲಸಮರದ ಯುಗಕ್ಕೆ ನಾಂದಿಯೇ ಎಂಬ ಚರ್ಚೆ ಈಗ ಎಲ್ಲೆಡೆ ನಡೆದಿದೆ. ಈ ಬಾರಿಯ ಶೀತಲಸಮರ ಯಾವುದೇ ಸಿದ್ಧಾಂತದ ಆಧಾರಿತವಾಗಿರದೇ ಎಕನಾಮಿಕ್ಸ್ ಮೇಲೆಯೇ ನಡೆಯಬಹುದೇನೋ? 2028ರ ವೇಳೆಗೆ ಚೀನಾದ ಆರ್ಥಿಕತೆ ಅಮೆರಿಕೆಯದನ್ನು ಮೀರಿ ಬೆಳೆಯುತ್ತದೆ ಎಂದು ಅಂದಾಜಿಸಲಾಗಿದೆ. ಸಹಜವಾಗಿಯೇ ಇದು ಅಮೆರಿಕೆಯಲ್ಲಿ ಮತ್ತು ಒಟ್ಟಾರೆ ಪಶ್ಚಿಮದಲ್ಲಿ ಒಂದು ಆಳವಾದ ಅಭದ್ರತೆಯನ್ನು ಮೂಡಿಸಿದೆ. ಕೊರೊನಾ ವೈರಸ್ ಎಂಬುದು ಚೀನಾದ ಷಡ್ಯಂತ್ರ ಎಂಬ ಊಹಾತ್ಮಕತೆಯ ಹಿಂದೆ ಕೆಲಸ ಮಾಡುತ್ತಿರುವುದು ಇದೇ ಅಭದ್ರತೆಯ ಭಾವ. ಕೊರೊನಾ ಕಾರಣವಾಗಿ ಜಗತ್ತಿನ ಆರ್ಥಿಕತೆಯೇ ಕುಸಿದುಬಿದ್ದಿರುವ ಈ ದಿನಮಾನಸದಲ್ಲಿ ಚೀನಾ ದಾಪುಗಾಲು ಹಾಕುತ್ತಿರುವುದು ಇದಕ್ಕೆ ಸಾಕ್ಷಿ ಎಂಬಂತೆ ವಾದಿಸುವವರಿದ್ದಾರೆ. ಆದರೆ ಒಂದೊಮ್ಮೆ ಈ ಷಡ್ಯಂತ್ರ ನಿಜವೇ ಆದರೆ ಇದಕ್ಕಿಂತಲೂ ಹುಚ್ಚು ಮತ್ತೊಂದಿಲ್ಲ. ಕೊರೊನಾ ಕಾರಣವಾಗಿ ಇವತ್ತು ಚೀನಾ ಜಗತ್ತಿನಲ್ಲಿ ತನಗಿದ್ದ ಅಷ್ಟೋಇಷ್ಟು ಗುಡ್‌ವಿಲ್ ಅನ್ನು ಕಳೆದುಕೊಂಡಿದೆ. ವಿಶ್ವಸಂಸ್ಥೆಯ ವೇದಿಕೆಯ ಮೇಲೆ ಪಶ್ಚಿಮದ ಬಹುತೇಕ ಶಕ್ತಿಗಳು ಚೀನಾ ವಿರುದ್ಧ ಬುಸುಗುಡಲು ಪ್ರಾರಂಭಿಸಿದ್ದಾರೆ.

ಚೀನಾ ಏಷಿಯಾದ ಮಟ್ಟದಲ್ಲಿ ವಿಸ್ತರಣಾವಾದಿ ಶಕ್ತಿ ಎಂಬುದರಲ್ಲಿ ಅನುಮಾನವಿಲ್ಲ. ಅದರ ನಿತ್ಯ ನಿದರ್ಶನ ನಮ್ಮ ಲಡಾಕ್‌ನಲ್ಲಿ ನಾವೇ ಎದುರಿಸುತ್ತಿದ್ದೇವೆ. ಟಿಬೆಟ್ ಮತ್ತು ಹಾಂಕಾಂಗ್‌ಅನ್ನು ಆಕ್ರಮಿಸಿಕೊಂಡಿರುವ ಚೀನಾ, ಶ್ರೀಲಂಕಾ, ನೇಪಾಳ, ಬರ್ಮಾ, ಬಾಂಗ್ಲಾದೇಶ ಮತ್ತಿತರ ಭಾರತದ ಅಕ್ಕಪಕ್ಕದ ದೇಶಗಳ ಮೇಲೆ ತನ್ನ ಹಿಡಿತವನ್ನು ಸ್ಥಾಪಿಸಿಕೊಳ್ಳುತ್ತಿದೆ. ಆದರೆ ಇದುವರೆಗೂ ಚೀನಾ ಯಾವುದೇ ವಿಶ್ವ ಯುದ್ಧಗಳಲ್ಲಿ ಭಾಗವಹಿಸಿಲ್ಲ. ಅದು ಅನಾದಿಕಾಲದಿಂದಲೂ ಜಾಗತಿಕ ವ್ಯವಸ್ಥೆಯ ಹೊರಗೇ ನಿಂತಿದೆ. ಚೀನಾ ಎಂದಿಗೂ ಒಂದು ಅಂತರ್ಮುಖಿ ದೇಶ ಮತ್ತು ನಾಗರಿಕತೆಯಾಗಿಯೇ ಉಳಕೊಂಡಿದೆ. ಗೂಗಲ್, ಟ್ವಿಟರ್ ರೀತಿಯ ವೇದಿಕೆಗಳು ಚೀನಾದೊಳಗೆ ಹೊಕ್ಕುವುದಕ್ಕೆ ಪರದಾಡಿ, ಅಲ್ಲಿ ಅಂತಹ ಬೇರೆಯದೇ ಆಂತರಿಕ ಸಾಮಾಜಿಕ ಜಾಲತಾಣಗಳಿವೆ. ಅದು ಚೀನಾಕ್ಕೆ ಮಾತ್ರ ಸೀಮಿತ, ಜಗತ್ತಿನ ಪ್ರಭಾವದಿಂದ ತನ್ನ ಪ್ರಜೆಗಳನ್ನು ಚೀನಾ ರಕ್ಷಿಸಿಕೊಳ್ಳುವುದು ಹೀಗೆ. ಇಂತಹ ಅಂತರ್ಮುಖಿ ದೇಶಕ್ಕೆ ಜಾಗತಿಕ ಶಕ್ತಿಯಾಗುವುದು ಸಾಧ್ಯವಿದೆಯೇ? ಇನ್ನು ರಷ್ಯಾ ಮತ್ತು ಚೀನಾ ನಡುವಿನ ಸಂಬಂಧಗಳು ಅತ್ಯಂತ ಹಾರ್ದಿಕವಾಗಿದ್ದು, ಅವರಿಬ್ಬರೂ ಜೊತೆಗಾರರು ಎಂದೇ ಜಗತ್ತು ನೋಡುತ್ತದೆ. ಹಾಗಾದರೆ, ಟ್ರಂಪ್ ರಷ್ಯಾದ ಕೈಗೊಂಬೆಯೇ ಆಗಿದ್ದರೆ ಆತ ಏಕೆ ಚೀನಾ ವಿರುದ್ಧ ತಿರುಗಿಬಿದ್ದ? ಕೆಲವು ಒಗಟುಗಳು ಹಾಗೆಯೇ ಉಳಿದುಕೊಳ್ಳುತ್ತವೆ.

ಈಗ ರೂಪುಗೊಳ್ಳುತ್ತಿರುವ ಈ ಹೊಸ ಜಾಗತಿಕ ಭೌಗೋಳಿಕ ರಾಜಕೀಯ ವ್ಯವಸ್ಥೆಯಲ್ಲಿ ಭಾರತದ ಪಾತ್ರ ಏನು?

ಆರ್ಥಿಕತೆ ಸಂಕಷ್ಟದಲ್ಲಿದ್ದಾಗ ಬಹುಬಾರಿ ಜಗತ್ತಿನಲ್ಲಿ ರಾಷ್ಟ್ರೀಯತೆ, ಬಲಪಂಥೀಯತೆಗಳು ಮತ್ತೆ ಮುನ್ನೆಲೆಗೆ ಬಂದು, ಕೂಗುಮಾರಿ ನಾಯಕರು ಅಧಿಕಾರಕ್ಕೆ ಬರುತ್ತಾರೆ. 2008ರ ಆರ್ಥಿಕ ಸಂಕಷ್ಟದ ನಂತರ ಜಗತ್ತಿನಲ್ಲಿ ಇಂಥದೊಂದು ಅಲೆ ಎದ್ದಿದೆ. ನಿಯೋಲಿಬರಲ್ ಮತ್ತು ಗ್ಲೋಬಲೈಸ್ಡ್ ಆರ್ಥಿಕತೆಯ ಲಾಭಗಳಿಂದ ವಂಚಿತವಾದ ಸಮುದಾಯಗಳು, ಇದರಿಂದ ಅತಿಹೆಚ್ಚು ಲಾಭ ಪಡೆದ ಎಲೀಟ್‌ಗಳ ವಿರುದ್ಧ ದಂಗೆ ಎದ್ದರು. ಇದು ಎಡಪಂಥೀಯ ಅಲೆಯನ್ನು ಸೃಷ್ಟಿಸಬೇಕಿತ್ತು. ಆದರೆ ಜಾಗತಿಕತೆಯ ವಿರೋಧವೆಂಬಂತೆ ಹುಟ್ಟಿಕೊಂಡ ರಾಷ್ಟ್ರವಾದ, ಯೂರೋಪಿನಲ್ಲಿ ವಲಸಿಗರ ವಿರುದ್ಧದ ರಿಟರಿಕ್ ಸೇರಿದಂತೆ ಬಲಪಂಥೀಯ ಅಲೆಯಾಗಿ ಎದ್ದುನಿಂತಿದೆ. ಅಮೆರಿಕದಲ್ಲಿ ಟ್ರಂಪ್, ಬ್ರಿಟನ್ನಿನಲ್ಲಿ ಬ್ರೆಕ್ಸಿಟ್ ಬೆನ್ನಿನ ಮೇಲೆ ಉದಯಿಸಿದ ಬೋರಿಸ್ ಜಾನ್ಸನ್, ಬ್ರೆಜಿಲ್‌ನ ಬೋಲ್ಸನಾರೋ, ನಮ್ಮಲ್ಲಿ ಮೋದಿ ಹೀಗೆ ಬಲಪಂಥೀಯ, ರಾಷ್ಟ್ರೀಯವಾದಿ, ನಿರಂಕುಶ ನಾಯಕರು ಉದಯಿಸಿದ್ದಾರೆ. ಅಮೆರಿಕೆ ಮತ್ತು ಬ್ರಿಟನ್ ಜಾಗತಿಕ ವೇದಿಕೆಯಿಂದ ಕೊಂಚ ಹಿಂತೆಗೆದುಕೊಂಡಿವೆ. ಬ್ರಿಟನ್ ಯೂರೋಪಿಯನ್ ಯೂನಿಯನ್ ಇಂದ ಹೊರಬರುವ ಮೂಲಕ ಇದನ್ನು ಹೆಚ್ಚು ಪ್ರಬಲವಾಗಿ ಪ್ರತಿಪಾದಿಸಿದೆ. ಆದರೆ ಈ ಬಲಪಂಥೀಯ ನಾಯಕರಲ್ಲೇ ಒಂದು ಕೂಟವು ಏರ್ಪಡುತ್ತಲಿದೆ ಮತ್ತು ಅಮೆರಿಕೆಯಲ್ಲಿ ಡೆಮಾಕ್ರಾಟ್ ಜೋಸೆಫ್ ಬೈಡೆನ್ ಅಧ್ಯಕ್ಷರಾದ ನಂತರ, ಟ್ರಂಪ್‌ಗೂ ಹಿಂದಿನ ಅಮೆರಿಕೆಯ ರಾಜಕಾರಣ ಮರಳಿ ದಾಪುಗಾಲಿಡಲಿದ್ದು, ಅಮೆರಿಕ ಮತ್ತೆ ಜಗತ್ತಿನ ವೇದಿಕೆಯನ್ನು ಆಕ್ರಮಿಸಿಕೊಳ್ಳಲು ಹವಣಿಸುವ ಸಾಧ್ಯತೆಯಿದೆ.

ನೆಹರೂ ಹಾಕಿಕೊಟ್ಟ ನಾನ್ ಅಲೈನ್ಡ್ ಆದ ಅಂತಾರಾಷ್ಟ್ರೀಯ ಸಂಬಂಧಗಳಿಂದ (ಅಲಿಪ್ತ ನೀತಿ) ಸಾಕಷ್ಟು ದೂರ ಬಂದಿರುವ ಭಾರತ, ಕಳೆದ ಮೂರು ದಶಕಗಳಲ್ಲಿ ಸಿದ್ಧಾಂತಗಳನ್ನು ಮೀರಿ ಎಲ್ಲ ರಾಷ್ಟ್ರಗಳೊಡನೆ ತನ್ನ ಸ್ವಹಿತಾಸಕ್ತಿಯ ಮೇಲೆ ಸಂಬಂಧಗಳನ್ನು ನಡೆಸಿಕೊಂಡು ಬಂದಿದೆ. ಆದರೆ ಮೋದಿ ಆಳ್ವಿಕೆಯಲ್ಲಿ ಅದು ದೊಡ್ಡ ಸ್ಥಿತ್ಯಂತರಕ್ಕೊಳಪಟ್ಟಿದೆ. ಇವತ್ತು ನಮ್ಮ ಅಂತಾರಾಷ್ಟ್ರೀಯ ಸಂಬಂಧಗಳಿಗೆ ಒಂದು ಬಲಪಂಥೀಯ ಲೋಕದೃಷ್ಟಿ ಇದೆ ಮತ್ತು ಅದಕ್ಕಾಗಿ ಒಂದು ಸೈದ್ಧಾಂತಿಕ ತಳಹದಿ ರೂಪುಗೊಳ್ಳುತ್ತಿದೆ. ಮೋದಿ ಕಳೆದ ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಪರವಾಗಿ ಪ್ರಚಾರ ನಡೆಸಿದ್ದನ್ನು ನೆನಪಿಸಿಕೊಂಡರೆ ಇದಕ್ಕೆ ಇನ್ನಷ್ಟು ಪುಷ್ಟಿ ದೊರೆತೀತು.

ದೆಹಲಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಈ ಬಾರಿ ಇಂಗ್ಲೆಂಡಿನ ಪ್ರಧಾನಿ ಬೋರಿಸ್ ಜಾನ್ಸನ್ ಮುಖ್ಯ ಅತಿಥಿಯಾಗಿ ಬರಬೇಕಿತ್ತು, ಕೊರೊನಾ ಕಾರಣವಾಗಿ ಬರಲಾಗುತ್ತಿಲ್ಲ. ಈ ಹಿಂದೆ ಡೊನಾಲ್ಡ್ ಟ್ರಂಪ್ ಮತ್ತು ಬೋಲ್ಸನಾರೋ ಅವರನ್ನು ಮೋದಿ ಅತಿಥಿಗಳನ್ನಾಗಿ ಕರೆದಿದ್ದಾರೆ.

ಕಾಶ್ಮೀರದಲ್ಲಿ ಆರ್ಟಿಕಲ್ 370ಅನ್ನು ಕಿತ್ತುಹಾಕಿದಾಗ ಎದ್ದ ಜಾಗತಿಕ ವಿರೋಧವನ್ನು ಎದುರಿಸಲು ಮೋದಿ ಸರ್ಕಾರ ಯೂರೋಪಿಯನ್ ಪಾರ್ಲಿಮೆಂಟಿನ ಕೆಲವು ಅತಿ ಬಲಪಂಥೀಯ ಸಂಸದರನ್ನು ಕರೆಸಿಕೊಂಡು ಟೂರು ಹೊಡೆಸಿ, ಕಾಶ್ಮೀರದಲ್ಲಿ ನೆಲೆಸಿರುವ ’ಶಾಂತಿ’ ಮತ್ತು ಆಗಲಿರುವ ’ಅಭಿವೃದ್ಧಿ’ಯನ್ನು ತೋರಿಸಿದ್ದರು! ದುಬೈ ರಾಜನ ಮಗಳು ಶೇಖ್ ಲತೀಫಾ ಸ್ವಾತಂತ್ರ್ಯ ಅರಸಿ ದೇಶ ಬಿಟ್ಟು ಹಡಗೊಂದರಲ್ಲಿ ತಪ್ಪಿಸಿಕೊಂಡಿದ್ದಳು. 2018ರಲ್ಲಿ ಭಾರತದ ಗೋವೆಯ ಬಳಿ ಆಕೆ ಇದ್ದ ಹಡಗನ್ನು ಅಡ್ಡಗಟ್ಟಿ ಆಕೆಯನ್ನು ಬಂಧಿಸಿ ದುಬೈ ರಾಜನಿಗೆ ಮರಳಿ ಒಪ್ಪಿಸಿತು ಭಾರತ. ಇವತ್ತು ಕಾಶ್ಮೀರದ ವಿಷಯದಲ್ಲೂ ಯುಎಇ ಮೋದಿಯನ್ನು ಬೆಂಬಲಿಸಿದೆ. ಇಸ್ರೇಲಿನ ಬೇಹುಗಾರಿಕಾ ಸಂಸ್ಥೆಯೊಂದು ಪೆಗಸಸ್ ಎಂಬ ಮೊಬೈಲು ಫೋನನ್ನು ಹ್ಯಾಕ್ ಮಾಡುವ ಸಾಫ್ಟ್‌ವೇರ್ ಅನ್ನು ತಯಾರಿಸಿತ್ತು. ಅದನ್ನು ವಾಟ್ಸಾಪಿನ ಮೂಲಕ ಬಳಸಿ ಫೋನಿಗೆ ಕನ್ನ ಹಾಕಬಹುದಿತ್ತು. ಇದನ್ನು ಅರಿತ ವಾಟ್ಸಾಪು ಹೀಗೆ ಕನ್ನ ಹಾಕಿದ ಫೋನ್ ಮಾಲೀಕರನ್ನು 2019ರಲ್ಲಿ ಎಚ್ಚರಿಸಿತ್ತು. ಆ ಪಟ್ಟಿಯಲ್ಲಿ ಇವತ್ತು ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ಆನಂದ್ ತೇಲ್ತುಂಬ್ಡೆ ಅವರೂ ಸೇರಿದಂತೆ ಇತರೆ ಆರೋಪಿಗಳ ಪರ ಹೋರಾಡುತ್ತಿರುವ ವಕೀಲರು, ಕುಟುಂಬ ಸದಸ್ಯರು ಮತ್ತು ಮಾನವ ಹಕ್ಕು ಹೋರಾಟಗಾರರು ಇದ್ದರು. ಇದು ಭಾರತ ಮತ್ತು ಇಸ್ರೇಲ್ ಬೇಹುಗಾರಿಕೆಗಳು ಒಟ್ಟಾಗಿ ಕೆಲಸ ಮಾಡುತ್ತಿರುವುದರ ಸಂಕೇತ. ಈ ಒಟ್ಟಾಗುವಿಕೆಗೆ ಇವತ್ತು ಒಂದು ಸೈದ್ಧಾಂತಿಕ ತಳಹದಿ ಇದೆ. ಈ ದೃಷ್ಟಿಯಲ್ಲಿಯೇ ಮೋದಿ ತನ್ನನ್ನು ತಾನು ಒಬ್ಬ ವಿಶ್ವನಾಯಕನಾಗಿ ನೋಡಿಕೊಳ್ಳುವುದು.

ಇನ್ನು ಅಮೆರಿಕ-ಚೀನಾ ಶೀತಲ ಸಮರವೇ ಮುಂದಿನ ದಿನಗಳಲ್ಲಿ ರೂಪುಗೊಳ್ಳುವ ಜಾಗತಿಕ ವ್ಯವಸ್ಥೆ ಎನ್ನುವುದಾದರೆ ಅದರಲ್ಲಿ ಭಾರತಕ್ಕೆ ಅಗ್ರಮಾನ್ಯ ಸ್ಥಾನ ದೊರೆಯುವುದರಲ್ಲಿ ಅನುಮಾನವಿಲ್ಲ. ಚೀನಾವನ್ನು ಏಷಿಯಾದಲ್ಲಿ ಎದುರಿಸಬಲ್ಲ ಶಕ್ತಿ ಭಾರತ ಮಾತ್ರ ಎಂಬುದು ಜಗತ್ತಿನ ನಂಬಿಕೆ. ಭಾರತ, ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾ – ಚೀನಾ ಇಂದ ಅಭದ್ರತೆಗೆ ಒಳಗಾಗಿರುವ ನಾಲ್ಕು ದೇಶಗಳು ಕ್ವಾಡ್ ಹೆಸರಿನಲ್ಲಿ ಈಗ ಒಟ್ಟಾಗಿವೆ. ಇದು ಮಿಲಿಟರಿ ಪಾರ್ಟ್ನರ್‌ಶಿಪ್. ಇದೇ ಸಮಯದಲ್ಲಿ ಚೀನಾ ಲಡಾಕ್‌ನಲ್ಲಿ ಸಾವಿರಾರು ಕಿಲೋಮೀಟರ್ ಆಕ್ರಮಿಸಿಕೊಂಡು ಕೂತಿದೆ. ಆದರೆ ಚೀನಾ ವಿರುದ್ಧ ನೇರ ಯುದ್ಧ ಮಾಡುವ ಸ್ಥಿತಿಯಲ್ಲಿ ಭಾರತ ಇಲ್ಲ, ಏಕೆಂದರೆ ಚೀನಾ ಪಾಕಿಸ್ತಾನವಲ್ಲ. 56 ಇಂಚು ಎದೆಯ ಮೋದಿ ಇದುವರೆಗೂ ಈ ಸಂಘರ್ಷದ ಸಂಬಂಧವಾಗಿ ಚೀನಾ ಹೆಸರನ್ನೂ ಒಮ್ಮೆಯೂ ಹೇಳಿಲ್ಲ. ಆದರೆ ಒಂದು ಸ್ಟೇಲ್‌ಮೇಟ್ ಅನ್ನು ಚೀನಾ ಮೇಲೆ ಮೋದಿ ಹೇರಿರುವುದು ನಿಜ. ಆದರೆ ನಮ್ಮ ಪ್ರಾಂತ್ಯವನ್ನು ಚೀನಾ ಆಕ್ರಮಿಸಿ ಕೂತಿರುವುದು, ಅದನ್ನು ಹಿಮ್ಮೆಟ್ಟಿಸಲಾಗದಿರುವುದೂ ಅಷ್ಟೇ ನಿಜ. ಈ ಹಿನ್ನೆಲೆಯಲ್ಲಿ ಹೊಸ ವ್ಯವಸ್ಥೆಯಲ್ಲಿ ಭಾರತದ ಪಾತ್ರವೇನಾಗಿರಬಹುದು ಎಂಬುದು ಕಾದು ನೋಡಬೇಕಿದೆ.


 

ಇದನ್ನೂ ಓದಿ: ‘2 ಬಾರಿ ಮಹಾಭಿಯೋಗ’ – ಅಮೆರಿಕ ಇತಿಹಾಸದಲ್ಲಿ ಕಪ್ಪುಚುಕ್ಕೆಯಾದ ಟ್ರಂಪ್!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಸೂರ್ಯ ಚಿಂತಾಮಣಿ
+ posts

LEAVE A REPLY

Please enter your comment!
Please enter your name here