ಕಾಲೇಜು ಹುಡುಗ-ಹುಡುಗಿಯರು ಒಟ್ಟಿಗೆ ಕುಳಿತುಕೊಳ್ಳುತ್ತಾರೆ ಎಂಬ ಕಾರಣಕ್ಕೆ ಮೂಲಭೂತವಾದಿಗಳು ಬಸ್‌ನಿಲ್ದಾಣದ ಬೆಂಚ್ ಅನ್ನು ಮುರಿದು ಅದರಲ್ಲಿ ಒಬ್ಬರಷ್ಟೆ ಕುಳಿತುಕೊಳ್ಳುವಂತೆ ತಯಾರುಗೊಳಿಸಿದ್ದ ಬಸ್ ನಿಲ್ದಾಣವನ್ನು ತಿರುವನಂದಪುರಂ ಕಾರ್ಪೋರೇಷನ್ ಅಧಿಕಾರಿಗಳು ಹೊಸದಾಗಿ ನಿರ್ಮಾಣ ಮಾಡಲು ಬೇಕಾಗಿ ತೆಗೆದು ಹಾಕಿದ್ದಾರೆ. ಬೆಂಚನ್ನು ಮುರಿದು ಒಬ್ಬರಿಗೆ ಕೂರುವಂತೆ ತಯಾರಿಗೊಳಿಸಿದ್ದ ಮೂಲಭೂತವಾದಿಗಳ ನಡೆಯನ್ನು ವಿರೋಧಿಸಿದ್ದ ಕಾಲೇಜು ವಿದ್ಯಾರ್ಥಿಗಳು, ‘ಒಬ್ಬರ ಮಡಿಲಲ್ಲಿ ಮತ್ತೊಬ್ಬರು ಕೂತು’ ಪ್ರತಿಭಟಿಸಿದ್ದು ದೇಶದ ಗಮನಸೆಳೆದಿತ್ತು.
ತಿರುವನಂತಪುರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್ (ಸಿಇಟಿ) ಬಳಿಯ ಶ್ರೀಕಾರ್ಯಂನ ಅದೇ ಸ್ಥಳದಲ್ಲಿ ಲಿಂಗ ತಟಸ್ಥ ಬಸ್ ನಿಲ್ದಾಣವನ್ನು ನಿರ್ಮಿಸುವುದಾಗಿ ನಗರದ ಮೇಯರ್ ಆರ್ಯ ಎಸ್. ರಾಜೇಂದ್ರನ್ ಭರವಸೆ ನೀಡಿದ ಎರಡು ತಿಂಗಳ ನಂತರ ಕಾರ್ಪೋರೇಷನ್ ಅಧಿಕಾರಿಗಳು ಅದನ್ನು ತೆಗೆದುಹಾಕಿದ್ದಾರೆ. ಇದೀಗ ಅಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣಗೊಳ್ಳಲಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿದ್ಯಾರ್ಥಿಗಳು ಒಬ್ಬರ ಮಡಿಲಲ್ಲಿ ಮತ್ತೊಬ್ಬರು ಕುಳಿತು ಪ್ರತಿಭಟನೆ ನಡೆಸುತ್ತಿರುವ ಫೋಟೋಗಳು ವೈರಲ್ ಆದ ನಂತರ ಜುಲೈನಲ್ಲಿ ಮೇಯರ್ ಆರ್ಯ ರಾಜೇಂದ್ರನ್ ಅವರು ಪ್ರದೇಶಕ್ಕೆ ಭೇಟಿ ನೀಡಿದ್ದರು. ಮೂಲಭೂತವಾದಿಗಳ ಕ್ರಮವನ್ನು ವಿರೋಧಿಸಿದ್ದ ಅವರು “ಬೆಂಚ್ ಅನ್ನು ಮೂರು ಭಾಗಗಳಾಗಿ ಕತ್ತರಿಸುವ ವಿಧಾನವು ಅನುಚಿತ ಮಾತ್ರವಲ್ಲದೆ ಕೇರಳದಂತಹ ಪ್ರಗತಿಪರ ಸಮಾಜಕ್ಕೆ ಯೋಗ್ಯವಲ್ಲ” ಎಂದು ಹೇಳಿದ್ದರು.
ಇದನ್ನೂ ಓದಿ: ಈ ಸುಂದರ ಫೋಟೊ ಮೂಲಕ ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದ ಕೇರಳ ವಿದ್ಯಾರ್ಥಿಗಳು
“ರಾಜ್ಯದಲ್ಲಿ ಹುಡುಗಿಯರು ಮತ್ತು ಹುಡುಗರು ಒಟ್ಟಿಗೆ ಕುಳಿತುಕೊಳ್ಳಲು ಯಾವುದೇ ನಿಷೇಧವಿಲ್ಲ. ಅನೈತಿಕ ಪೊಲೀಸ್‌ಗಿರಿಯನ್ನು ಇನ್ನೂ ನಂಬುವವರು ಪ್ರಾಚೀನ ಕಾಲದಲ್ಲಿ ವಾಸಿಸುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಆಡಳಿತಾರೂಢ ಸಿಪಿಐ(ಎಂ)ನ ಯುವ ಘಟಕ ಡಿವೈಎಫ್‌ಐ ಕೂಡ ಬಸ್ ನಿಲ್ದಾಣದಲ್ಲಿ ಬೆಂಚ್ ಒಡೆಯುವುದನ್ನು ಒಪ್ಪಲಾಗದು ಎಂದು ಹೇಳಿತ್ತು.
ಅಂದು ನಡೆದಿದ್ದೇನು?
ಸಿಇಟಿ ಕಾಲೇಜಿನ ಹೊರಗಿನ ಬಸ್ ನಿಲ್ದಾಣವು ವಿದ್ಯಾರ್ಥಿಗಳಿಗೆ ತಮ್ಮ ಸ್ನೇಹಿತರನ್ನು ಮಾತನಾಡಿಸಲು, ಹರಟೆ ಹೊಡೆಯಲು ಪ್ರಸಕ್ತ ಸ್ಥಳವಾಗಿತ್ತು. ಕಾಲೇಜು ಮುಗಿದ ನಂತರ ಅಲ್ಲಿ ಕುಳಿತು ಹುಡುಗ ಹುಡುಗಿಯರು ಸೇರಿ ತಮಾಷೆ ಮಾಡುತ್ತಿದ್ದುದು ಎಂದಿನ ದಿನಚರಿ. ಆದರೆ ಇದು ಅಲ್ಲಿನ ಸ್ಥಳೀಯ ಸಂಪ್ರದಾಯವಾದಿಗಳಿಗೆ ಸಹಿಸಿಕೊಳ್ಳಲು ಅಸಾಧ್ಯವಾಗಿತ್ತು. ಅವರ ಪ್ರಕಾರ ಹುಡುಗ ಹುಡುಗಿಯರು ಮಾತನಾಡಬಾರದು, ಸ್ನೇಹ ಪ್ರೀತಿ ಮಾಡಬಾರದು.
ಅದಕ್ಕಾಗಿ ಸ್ಥಳೀಯರು ಜುಲೈ 19ರ ಮಂಗಳವಾರ ರಾತ್ರೋರಾತ್ರಿ ಬಸ್ ಸ್ಟ್ಯಾಂಡಿನಲ್ಲಿ ಕುಳಿತುಕೊಳ್ಳುವ ಕುರ್ಚಿಗಳನನ್ನು ತೆಗೆದು ಕೇವಲ ಒಬ್ಬೊಬ್ಬರು ಮಾತ್ರ ಕುಳಿತುಕೊಳ್ಳುವಂತೆ ಮೂರು ಕುರ್ಚಿಗಳನ್ನು ಹಾಕಲಾಗಿತ್ತು. ಎರಡು ಕುರ್ಚಿ ಜೊತೆಗಿದ್ದರೆ ಹುಡುಗ-ಹುಡುಗಿ ಕುಳಿತು ಮಾತನಾಡುತ್ತಾರೆ ಎಂಬುದು ಅವರ ಈ ಕೃತ್ಯಕ್ಕೆ ಕಾರಣವಾಗಿತ್ತು.

ಮರುದಿನ ಇದನ್ನು ಗಮನಿಸಿದ್ದ ವಿದ್ಯಾರ್ಥಿಗಳು ಪ್ರತಿಭಟಿಸಲು ನಿರ್ಧರಿಸಿ, ಒಂದೇ ಸೀಟಿನಲ್ಲಿ ಹುಡುಗ ಹುಡುಗಿಯರು ತೊಡೆಮೇಲೆ ಕುಳಿತು ಫೋಟೊ ತೆಗೆದು ತಮ್ಮ ಸ್ನೇಹಿತರ ಗುಂಪುಗಳಲ್ಲಿ ಹಂಚಿಕೊಂಡರು. ಅವರ ಈ ದಿಟ್ಟ ಮತ್ತು ವಿನೂತನ ಪ್ರತಿಭಟನೆಯ ಈ ಚಿತ್ರಗಳು ನಂತರ ಎಲ್ಲೆಂದರಲ್ಲಿ ವೈರಲ್ ಆದವು. ಉಳಿದ ವಿದ್ಯಾರ್ಥಿಗಳು ಈ ಫೋಟೊ ತೆಗೆಸಿಕೊಳ್ಳುವ ಪ್ರತಿಭಟನೆಗೆ ಕೈಜೋಡಿಸಿ ತಾವು ಜೊತೆಗೆ ಕುಳಿತು ಪೋಟೊ ತೆಗೆಸಿಕೊಂಡಿದ್ದರು.
ಇದನ್ನೂ ಓದಿ: ಕೇರಳದಲ್ಲಿ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸಿದ ಆಪ್; ಹುಸಿಯಾಗುತ್ತಿರುವ ಪರ್ಯಾಯ ರಾಜಕಾರಣದ ಭರವಸೆ
“ನಾವು ಪ್ರತಿನಿತ್ಯ ಅಲ್ಲಿ ಕುಳಿತರೆ, ಹುಡುಗ-ಹುಡುಗಿ ಮಾತನಾಡಿದರೆ ಸ್ಥಳೀಯರು ತೊಂದರೆ ಕೊಡುತ್ತಿದ್ದರು. ನಿಂದಿಸುತ್ತಿದ್ದರು. ಹಾಗಾಗಿ ಇಬ್ಬರು ಕೂರಬಾರದೆಂದು ಒಂದೊಂದು ಕುರ್ಚಿಯನ್ನು ತೆಗೆಸಿದ್ದರು. ಅದನ್ನು ವಿದ್ಯಾರ್ಥಿಗಳು ವಿರೋಧಿಸಿ ವಿನೂತನವಾಗಿ ಪ್ರತಿಭಟಿಸಿದ್ದಾರೆ” ಎಂದು ಸಿಇಟಿ ಕಾಲೇಜು ಸಂಘದ ಉಪಾಧ್ಯಕ್ಷ ಕೆ.ಪೆ ಫೆಬಿ ಅಂದು ಹೇಳಿದ್ದರು.

ಈ ಕುರಿತು ಮಾತನಾಡಿದ್ದ ಮತ್ತೊಬ್ಬ ವಿದ್ಯಾರ್ಥಿನಿ ಆರ್ಯ,“ನಾವು ಪೋಸ್ಟ್ ಮಾಡಿದ ಚಿತ್ರ ವೈರಲ್ ಆಗುತ್ತದೆ ಎಂದು ನಾವು ಅಂದಾಜಿಸಿರಲಿಲ್ಲ. ಅದು ಅಷ್ಟೊಂದು ಹರಿದಾಡುತ್ತಿರುವುದು ನಮ್ಮ ಈ ಸರಳ ಪ್ರತಿಭಟನೆಗೆ ಜನಬೆಂಬಲವನ್ನು ತೋರಿಸುತ್ತದೆ. ಜೊತೆಗೆ ಇಲ್ಲಿನ ಸ್ಥಳೀಯರು ವಿದ್ಯಾರ್ಥಿಗಳ ಬಗ್ಗೆ ಯಾವ ಅಭಿಪ್ರಾಯ ಹೊಂದಿದ್ದಾರೆ ಮತ್ತು ನಮ್ಮನ್ನು ಹೇಗೆ ನಿಯಂತ್ರಿಸಲು ಬಯಸುತ್ತಾರೆ ಎಂಬುದನ್ನು ತಿಳಿಸುತ್ತದೆ. ಆದರೆ ನಮ್ಮ ಪ್ರತಿಭಟನೆಯ ನಂತರ ಇದುವರೆಗೂ ನಮಗೆ ಸಕರಾತ್ಮಕ ಪ್ರತಿಕ್ರಿಯೆಗಳು ಬಂದಿವೆ” ಎಂದು ಅವರು ಹೇಳಿದ್ದರು.
ಇದನ್ನೂ ಓದಿ: ಕೇರಳ: ಮಹಿಳೆಯರ ಸುರಕ್ಷತೆಗಾಗಿ ಪಿಂಕ್ ಪ್ರೊಟೆಕ್ಷನ್ ಯೋಜನೆ ಆರಂಭ
ಈ ಹಿಂದೆ ಕೂಡಾ ಸಿಇಟಿ ಕಾಲೇಜಿನ ವಿದ್ಯಾರ್ಥಿಗಳು ಹಾಸ್ಟೆಲ್ ಸಮಯದ ಕುರಿತು ಪ್ರತಿಭಟನೆ ನಡೆಸಿದ್ದರು. ಸಂಜೆ 6.30ರ ಒಳಗೆ ವಿದ್ಯಾರ್ಥಿನಿಯರು ಹಾಸ್ಟೆಲ್ ಒಳಗೆ ಬರಬೇಕು ಎಂಬ ನಿಯಮ ಜಾರಿಗೆ ತಂದಾಗ ಭಾರಿ ಪ್ರತಿಭಟನೆ ನಡೆಸಿ ಅದನ್ನು 9.30ರ ಒಳಗೆ ಬರಬೇಕು ಎಂದು ತಿದ್ದುಪಡಿ ತರಲು ಕಾರಣರಾಗಿದ್ದರು.


