ಗಡಿ ಜಿಲ್ಲೆಯಾಗಿರುವ ಕೇರಳದ ಕಾಸರಗೋಡಿನ ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣ ಮಾಡಲಾಗುತ್ತಿದೆ ಎಂದು ಕರ್ನಾಟಕದ ನಾಯಕರು ಎತ್ತಿರುವ ಆತಂಕಗಳಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ. ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ಕಾಸರಗೋಡಿನ ಗ್ರಾಮಗಳ ಹೆಸರನ್ನು ಬದಲಾಯಿಸುವ ಉದ್ದೇಶ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ಅವರು ಬುಧವಾರ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಮತ್ತು ತುಳು ಭಾಷೆಯಲ್ಲಿ ಇರುವ ಹಳ್ಳಿಗಳ ಹೆಸರುಗಳನ್ನು ಮಲಯಾಳಂ ಭಾಷೆಗೆ ಬದಲಾಯಿಸುವ ಬಗ್ಗೆ ಯಾವುದೇ ಮಾತುಕತೆ ಹಿಂದಿನಿಂದಲೂ ಇರಲಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಇಂತಹ ಸುದ್ದಿಗಳು ಬಂದಿದ್ದಾದರೂ ಎಲ್ಲಿಂದ ಎಂದು ಮುಖ್ಯಮಂತ್ರಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದೊಂದಿಗೆ ಗಡಿ ಹಂಚಿಕೊಳ್ಳುವ ಗ್ರಾಮಗಳ ಹೆಸರನ್ನು ಬದಲಾಯಿಸಲಾಗುತ್ತಿದೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಹಲವಾರು ನಾಯಕರು ಪಕ್ಷಬೇಧ ಮರೆತು ಈ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಮನವಿ ಮಾಡಿದ್ದರು.
ಇದನ್ನೂ ಓದಿ: ಕಾಸರಗೋಡು ಗಡಿ ಗ್ರಾಮಗಳ ಹೆಸರು ಬದಲಿಸುವಿಕೆ: ಸತ್ಯ ಮತ್ತು ಅರೆಸತ್ಯಗಳು
ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಿಎಂ ವಿಜಯನ್ ಅವರಿಗೆ ಪತ್ರ ಬರೆದಿದ್ದು, ಈ ಪ್ರದೇಶದಲ್ಲಿನ ಸಂಸ್ಕೃತಿ ಮತ್ತು ಭಾವನಾತ್ಮಕ ಬಾಂಧವ್ಯವನ್ನು ವಿವರಿಸಿದ್ದಾರೆ.
“ಇತ್ತೀಚಿನ ದಿನಗಳಲ್ಲಿ, ಈ ಪ್ರದೇಶಗಳ ನಿವಾಸಿಗಳಿಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅವಕಾಶ ನೀಡದೆ ಕೆಲವು ಹಳ್ಳಿಗಳ ಹೆಸರನ್ನು ಬದಲಾಯಿಸಲು ಸ್ಥಳೀಯ ಸಂಸ್ಥೆಗಳು ಪ್ರಯತ್ನಿಸುತ್ತಿವೆ” ಎಂದು ಯಡಿಯೂರಪ್ಪ ಅವರು ಪಿಣರಾಯಿ ವಿಜಯನ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.
ಸಿದ್ದರಾಮಯ್ಯ ಅವರು ಪತ್ರದಲ್ಲಿ “ಎರಡು ರಾಜ್ಯಗಳ ನಡುವೆ ಭೌಗೋಳಿಕವಾದ ಗಡಿರೇಖೆಯಿದ್ದರೂ ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕವಾದ ಅವಿನಾಭಾವ ಸಂಬಂಧ ಇದೆ. ಗಡಿ ಪ್ರದೇಶದಲ್ಲಿ ಕನ್ನಡಿಗರು ಮತ್ತು ಕೇರಳಿಗರು ಸೋದರ-ಸೋದರಿಯರಂತೆ ಸಹಬಾಳ್ವೆ ನಡೆಸುತ್ತಿದ್ದಾರೆ. ಗ್ರಾಮಗಳ ಹೆಸರಿನ ಜೊತೆ ಅಲ್ಲಿನ ಸ್ಥಳೀಯರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ. ಹೆಸರಿನ ಬದಲಾವಣೆಯಿಂದ ತಾಯ್ನಾಡಿನ ಜೊತೆಗಿನ ಅವರ ಕರುಳಬಳ್ಳಿಯ ಸಂಬಂಧವನ್ನು ಕಿತ್ತುಕೊಂಡ ಹಾಗಾಗುತ್ತದೆ. ಹೀಗಿದ್ದರೂ ಕೆಲ ಗುಂಪುಗಳು ಈ ಸಂಬಂಧವನ್ನು ಕಲಕಲು ಪ್ರಯತ್ನಿಸುತ್ತಿರುವುದು ಖೇದಕರ ಸಂಗತಿ” ಎಂದು ಹೇಳಿದ್ದರೆ.
ಇದನ್ನೂ ಓದಿ: ಕಾಸರಗೋಡಿನ ಗ್ರಾಮಗಳ ಕನ್ನಡದ ಹೆಸರು ಬದಲಿಸದಂತೆ ಕೇರಳ ಸಿಎಂಗೆ ಪತ್ರ ಬರೆಯುವೆ: ಬಿಎಸ್‌ವೈ
ಈ ನಡುವೆ ಕೇರಳದ ಮಂಜೇಶ್ವರ ಶಾಸಕ, ಕನ್ನಡಿಗ ಎ.ಕೆ.ಎಂ.ಆಶ್ರಫ್ ಮತ್ತು ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬು ಅವರು ಈ ಬಗ್ಗೆ ಸ್ಪಷ್ಟೀಕರಣ ನೀಡಿ ಹೆಸರು ಬದಲಾವಣೆಯ ಪ್ರಸ್ತಾಪ ಇಲ್ಲವೆಂದು ತಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ
ಕಾಸರಗೋಡಿನ ಸ್ಥಳನಾಮ ಬದಲಾವಣೆ ವಿವಾದದ ವಾಸ್ತವತೆ.@hd_kumaraswamy @JoshiPralhad @BSYBJP @TOIMangalore @nalinkateel @prajavani @udayavani_web @varthabharati @utkhader @KPCCPresident @dineshgrao pic.twitter.com/QPJtRM3GD4— AKM Ashraf (@akmashraf_) June 28, 2021
ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ (KBADA) ಅಧ್ಯಕ್ಷರಾಗಿರುವ ಡಾ. ಸಿ ಸೋಮಶೇಖರ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಕೇರಳದ ಕಾಸರಗೋಡು ಭಾಗದಲ್ಲಿ ಕನ್ನಡದ ಹೆಸರುಗಳನ್ನು ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು. ಆ ನಂತರ ವಿವಾದ ದೊಡ್ಡ ರೀತಿಯಲ್ಲಿ ಸದ್ದು ಮಾಡಿತ್ತು.
ಇದನ್ನೂ ಓದಿ: ಕೇರಳದ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ


