ಕಾಸರಗೋಡು ಗಡಿ ಗ್ರಾಮಗಳ ಹೆಸರು ಬದಲಿಸುವಿಕೆ: ಸತ್ಯ ಮತ್ತು ಅರೆಸತ್ಯಗಳು | Naanu gauri

ಕಳೆದ ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಭಾಷೆ ಬಗ್ಗೆ ಸಂಚಲನ ಮೂಡಿಸಿರುವ ಸುದ್ದಿಯೊಂದು ಹರಿದಾಡುತ್ತಿದೆ. ಕೇರಳ ಸರ್ಕಾರವು ಕಾಸರಗೋಡು ಜಿಲ್ಲೆಯ ಗಡಿ ಗ್ರಾಮಗಳ ಹೆಸರನ್ನು ಕನ್ನಡದಿಂದ ಮಲಯಾಳಂಗೆ ಬದಲಾಯಿಸಲು ಯೋಜಿಸುತ್ತಿದೆ ಎಂಬುದೇ ಈ ಸುದ್ದಿ.

ಕಾಸರಗೋಡು ಪ್ರದೇಶಗಳಲ್ಲಿನ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಮಾತನಾಡಿದ ದಿ ನ್ಯೂ ಇಂಡಿಯನ್‍ ಎಕ್ಸ್‍ಪ್ರೆಸ್‍, “ಇದು ಮೊದಲು ಸರ್ಕಾರಿ ಸಂಸ್ಥೆಯಾದ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಸೃಷ್ಟಿಯಾದ ನಕಲಿ ನಿರೂಪಣೆಯಾಗಿದೆ” ಎಂದು ಹೇಳಿದೆ. ಕಾಸರಗೋಡು ಜಿಲ್ಲಾಡಳಿತದ ಉನ್ನತ ಅಧಿಕಾರಿ ಒಬ್ಬರು, “ಇದು ನಕಲಿ ಸುದ್ದಿ” ಎಂದು ಇಂಡಿಯನ್‍ ಎಕ್ಸ್‍ಪ್ರೆಸ್‍ಗೆ ತಿಳಿಸಿದ್ದಾರೆ.

ಕಾಸರಗೋಡು ಜಿಲ್ಲಾಡಳಿತವು, “ನಮ್ಮೊಂದಿಗೆ ಕಾಸರಗೋಡಿನ ಹಳ್ಳಿಗಳ ಹೆಸರನ್ನು ಬದಲಾಯಿಸುವ ಬಗ್ಗೆ  ಯಾವುದೇ ಪ್ರಸ್ತಾಪ ಇಲ್ಲ” ಎಂದು ಹೇಳಿದೆ.

ಇದನ್ನೂ ಓದಿ: ಲಕ್ಷದ್ವೀಪ: ಆಡಳಿತಾಧಿಕಾರಿಯ 2 ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ತಡೆ

ಕೇರಳ ಸರ್ಕಾರ ಇಂತಹ ಅಧಿಕೃತ  ಅಧಿಸೂಚನೆ ಹೊರಡಿಸಿಲ್ಲ ಎಂದು ಇಂಡಿಯನ್‍ ಎಕ್ಸ್‍ಪ್ರೆಸ್‍ ಉಲ್ಲೇಖಿಸಿದೆ.

ಕಾಸರಗೋಡು ಕುರಿತು ಸತತವಾಗಿ ಬರೆಯುತ್ತಿರುವ ಕನ್ನಡ ಬರಹಗಾರ ಕುಮಾರ್‌‌ ರೈತ, “ನಾವೀಗ ಮುಂದೆ ಬದಲಾಗಬಹುದಾದ ಸ್ಥಳನಾಮಗಳ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಈಗಾಗಲೇ 20 ಕ್ಕೂ ಹೆಚ್ಚಿನ ಸ್ಥಳನಾಮ ಬದಲಿಸಿದ್ದಾರೆ” ಎನ್ನುತ್ತಾರೆ.

“ಅಲ್ಲಿನ ಕನ್ನಡ ಶಾಲೆಗಳಿಗೆ ಮಲಯಾಳಂ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಮೊದಲಿನಿಂದಲೂ ಇದೆ. ಅದು ಯುಡಿಎಫ್‍ ಅಥವಾ ಎಲ್‍ಡಿಎಫ್‍ ಇರಲಿ, ಇದು ನಡೆದೇ ಇದೆ” ಎಂದು ಕುಮಾರ್‌‌‌ ನಾನುಗೌರಿ.ಕಾಂ ಗೆ ತಿಳಿಸಿದ್ದಾರೆ.

ಕಳೆದ ಮೂರು ನಾಲ್ಕು ದಿನಗಳ ಪತ್ರಿಕಾ ವರದಿಗಳ ಪ್ರಕಾರ, ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್‌‌ ಮತ್ತಿಹಳ್ಳಿ ಹೇಳುವುದು ಏನೆಂದರೆ, “ಮಧುರ ಅನ್ನು ಮಧುರಂ, ಮಲ್ಲಾ ಅನ್ನು ಮಲ್ಲಂ, ಕಾರಡ್ಕಾವನ್ನು ಕಡಗಂ, ಬೆಡಡ್ಕಾವನ್ನು ಬೆಡಗಂ, ಪಿಲಿಕುಂಜೆ ಅನ್ನು ಪಿಲಿಕುನ್ನು, ಅನೆಬಾಗಿಲು ಆನೆವಗಿಲ್, ಮಂಜೇಶ್ವರ ಅನ್ನು ಮಂಜೇಶ್ವರಂ, ಅಂತ ಬದಲಾಯಿಸಲಿದ್ದಾರೆ….”

ಇದನ್ನೂ ಓದಿ: ಆಯಿಷಾ ಸುಲ್ತಾನಾ ಹೇಳಿಕೆ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿಲ್ಲ: ಕೇರಳ ಹೈಕೋರ್ಟ್

ಕೇರಳದಲ್ಲಿ ಬೇರೆ ವಿಷಯಗಳೆ ಇಲ್ಲದ ಬಿಜೆಪಿ ಈ ಅನಗತ್ಯ ವಿವಾದ ಸೃಷ್ಟಿಸುತ್ತಿದೆಯೇ ಎಂಬ ಅನುಮಾನಗಳು ಎದ್ದಿವೆ. ಕೇರಳ ಸರ್ಕಾರ ಅಥವಾ ಕಾಸರಗೋಡು ಜಿಲ್ಲಾಡಳಿತ ಇಂತಹ ಯಾವುದೇ ಆದೇಶ ಅಥವಾ ಕ್ರಮಕ್ಕೆ ಮುಂದಾಗಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಇಂಡಿಯನ್‍ ಎಕ್ಸ್‍ಪ್ರೆಸ್‍ ವರದಿ ಮಾಡಿದೆ.

ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ಅವರು, “ಕೆಲವು ಸ್ಥಳೀಯ ಸಂಸ್ಥೆಗಳು ಜನರೊಂದಿಗೆ ಯಾವುದೆ ಸಮಾಲೋಚನೆ ಮಾಡದೆ ಕಾಸರಗೋಡಿನ ಕನ್ನಡ ಮಾತನಾಡುವ ಗ್ರಾಮಗಳ ಹೆಸರನ್ನು ಬದಲಾಯಿಸಲು ಪ್ರಯತ್ನಿಸುತ್ತಿವೆ” ಎಂದು ಹೇಳಿಕೆ ನೀಡಿದ್ದಾರೆ. “ಇದು ಇಲ್ಲಿ ದೀರ್ಘಕಾಲ ಇರುವ ಕನ್ನಡ ಮತ್ತು ತುಳು ಸಂಸ್ಕೃತಿಯನ್ನು ನಾಶಪಡಿಸುತ್ತದೆ” ಎಂದು ಅವರು ಹೇಳಿದ್ದಾರೆ. ಈ ವಿಷಯವನ್ನು ಕಾಸರಗೋಡು ಜಿಲ್ಲಾಡಳಿತ ಅಥವಾ ಸ್ಥಳೀಯ ಸಂಸ್ಥೆಗಳೊಂದಿಗೆ ಕ್ರಾಸ್‍ಚೆಕ್‍ ಮಾಡದೇ ಮಾಧ್ಯಮಗಳು ವರದಿ ಮಾಡಿವೆ ಎಂದು ಇಂಡಿಯನ್‍ ಎಕ್ಸ್‍ಪ್ರೆಸ್‍ ವರದಿ ಮಾಡಿದೆ.

ವಿಷಯವನ್ನು ಜೀವಂತವಾಗಿಡಲು ಸೋಮಶೇಖರ ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ.

ಕುಮಾರಸ್ವಾಮಿ ಪ್ರವೇಶ

ಜನತಾದಳ (ಎಸ್) ಮುಖಂಡ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದು, “ಕೇರಳ ಸರ್ಕಾರವು ಮಂಜೇಶ್ವರದ ಕೆಲವು ಹಳ್ಳಿಯನ್ನು ಮಲಯಾಳಂ ಹೆಸರಿಗೆ ಬದಲಾಯಿಯಿಸುವ ಯತ್ನ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಇದು ನಿಜವೇ ಆಗಿದ್ದರೆ. ಭಾಷಾ ಸಾಮರಸ್ಯ ಮತ್ತು ಸಾಂಸ್ಕೃತಿಕ ಸಹಬಾಳ್ವೆಗೆ ಅಡ್ಡಿ ಮಾಡುತ್ತದೆ. ಈ ಪ್ರಕ್ರಿಯೆ ನಿಲ್ಲಿಸಬೇಕು ಎಂದು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ” ಎಂದು ಬರೆದಿದ್ದಾರೆ.

ಇದನ್ನೂ ಓದಿ: ಕಾಸರಗೋಡಿನ ಗ್ರಾಮಗಳ ಕನ್ನಡದ ಹೆಸರು ಬದಲಿಸದಂತೆ ಕೇರಳ ಸಿಎಂಗೆ ಪತ್ರ ಬರೆಯುವೆ: ಬಿಎಸ್‌ವೈ

ಆದರೆ, ವಾಸ್ತವ ತಿಳಿಯದೆ ಅವಸರದ ಹೇಳಿಕೆ ನೀಡುತ್ತಿರುವವರ ಬಗ್ಗೆ ವಿಷಾದ ವ್ಯಕ್ತಪಡಿಸಬೇಕಷ್ಟೇ ಎಂದು ಎಕ್ಸ್‍ಪ್ರೆಸ್‍ ವರದಿ ಹೇಳುತ್ತದೆ. ಇಂಡಿಯನ್‍ ಎಕ್ಸ್‍ಪ್ರೆಸ್‍  ಜಿಲ್ಲಾಡಳಿತ ಮತ್ತು ಕಾಸರಗೋಡಿನ ಸ್ಥಳೀಯ ಸಂಸ್ಥೆಗಳ ಜನರ ಪ್ರತಿನಿಧಿಗಳೊಂದಿಗೆ ಮಾತನಾಡಿದೆ. ಅಲ್ಲಿನ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು  ಈ ವಿಷಯ ಕೇಳಿ ಗೊಂದಲಕ್ಕೊಳಗಾಗಿದ್ದಾರೆ. ಮಧುರ ಅನ್ನು ಮಧುರಂ ಎಂದು ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾಪವಿಲ್ಲ ಎಂದು ಬಿಜೆಪಿಯ ಮಧುರ ಪಂಚಾಯತ್ ಅಧ್ಯಕ್ಷ ಗೋಪಾಲಕೃಷ್ಣ ಹೇಳಿದ್ದಾರೆ. “ಸರ್ಕಾರ ಅಂತಹ ಯಾವುದೇ ಪ್ರಸ್ತಾಪವನ್ನು ಮಾಡಿಲ್ಲ ಅಥವಾ ಹೆಸರನ್ನು ಬದಲಾಯಿಸಲು ನಾವು ಕೇಳಿಲ್ಲ” ಎಂದು ಗೋಪಾಲಕೃಷ್ಣ ಹೇಳಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅಲ್ಲಿ ಪಂಚಾಯಿತಿಯನ್ನು ಬಿಜೆಪಿ ಆಳುತ್ತಿದೆ.

ಅನೆಬಾಗಿಲು ಮಧುರ ಬಳಿಯ ಸ್ಥಳವಾಗಿದ್ದು, ಆ ಹೆಸರನ್ನು ಬದಲಾಯಿಸುವ ಪ್ರಸ್ತಾಪವೂ ಇಲ್ಲ. ಕಾರಡ್ಕಾ ಪಂಚಾಯತ್ ಉಪಾಧ್ಯಕ್ಷೆ ಎಂ.ಜನನಿ, ಕಾರಡ್ಕಾ ಹೆಸರನ್ನು ಕಡಗಂ ಎಂದು ಬದಲಾಯಿಸಲು ಜನರಿಂದ ಯಾವುದೇ ಬೇಡಿಕೆಯಿಲ್ಲ ಮತ್ತು ಅಂತಹ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿದ್ದಾರೆ. ಈ ಪಂಚಾಯಿತಿಯನ್ನು ಬಿಜೆಪಿಯೇ ಆಳುತ್ತಿದೆ.

ಕಡಗಂ ಎಂಬುದು ಪಂಚಾಯತ್ ಕೇಂದ್ರ ಕಚೇರಿ ಮುಲ್ಲೆರಿಯಾದಿಂದ 6 ಕಿ.ಮೀ ದೂರದಲ್ಲಿದೆ ಎಂದು ಬಿಜೆಪಿ ನಾಯಕಿ ಜನನಿ ಹೇಳಿದ್ದಾರೆ. “ಕಡಗಂ, ಕರಡ್ಕಾ ಎರಡೂ ಹೆಸರುಗಳು ಯಾವಾಗಲೂ ಇರುತ್ತವೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕೇರಳದ ಗ್ರಾಮಗಳ ಹೆಸರು ಬದಲಾವಣೆ ಇಲ್ಲವೆಂದು ಶಾಸಕ ಎ.ಕೆ.ಎಂ. ಅಶ್ರಫ್ ಸ್ಪಷ್ಟನೆ

ಕಾಸರಗೋಡು ಸರ್ಕಾರಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಕೆ.ವಿಜಯನ್ ಮಾತನಾಡಿ, “ಕಾಸರಗೋಡು ಜನರು ಹಲವಾರು ಭಾಷೆಗಳನ್ನು ಮಾತನಾಡುತ್ತಾರೆ ಮತ್ತು ಅವರು ತಮ್ಮ ಸ್ಥಳಗಳಿಗೆ ತಮ್ಮದೇ ಹೆಸರನ್ನು ಹೊಂದಿದ್ದಾರೆ. ಮಲಯಾಳಿಗಳು ಮಂಜೇಶ್ವರಂ ಮತ್ತು ನೀಲೇಶ್ವರಂ ಎಂದು ಹೇಳಬಹುದು. ಆದರೆ ಅಧಿಕೃತವಾಗಿ ಈ ಸ್ಥಳವು ಮಂಜೇಶ್ವರ ಮತ್ತು ನೀಲೇಶ್ವರ ಅಷ್ಟೇ. ಹೆಸರುಗಳನ್ನು ಬದಲಾಯಿಸುವ ಪ್ರಸ್ತಾಪ ಅಧೀಕೃತವಾಗಿ ಇಲ್ಲ” ಎಂದಿದ್ದಾರೆ.

ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನ್ ಮಾತನಾಡಿ, “ಅಧಿಕೃತವಾಗಿ, ಇದು ಕಾಸರಗೋಡು. ಆದರೆ ಜನರು ಅದನ್ನು ಬರೆಯುವ ಮತ್ತು ಉಚ್ಚರಿಸುವ ವಿವಿಧ ವಿಧಾನವನ್ನು ಹೊಂದಿದ್ದಾರೆ” ಎಂದು ಹೇಳಿದ್ದಾರೆ.

ಕಾಸರಗೋಡು ಶಾಂತವಾಗಿದೆ

ಗಡಿ ವಿಷಯ ಬಂದ ತಕ್ಷಣ ಮಾಧ್ಯಮಗಳು ಮತ್ತು ಗಡಿಭಾಗದ ಜನರು ಉದ್ವೇಗಕ್ಕೆ ಒಳಗಾಗುತ್ತಾರೆ. ಮಂಜೇಶ್ವರದ ಶಾಸಕ ಅಶ್ರಫ್‍ ಅವರು ಕನ್ನಡದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಮೊದಲ ಅಧಿವೇಶನದಲ್ಲಿ  ಗೋವಿಂದ ಪೈ ಅವರ ಕವನ ಉಲ್ಲೇಖಿಸಿ ಮಾತನಾಡಿದ್ದು ಅಲ್ಲಿ ಕೇರಳದಲ್ಲಿ ಯಾವ ವಿವಾದವನ್ನೂ ಉಂಟು ಮಾಡಲೇ ಇಲ್ಲ.

ಕಾಸರಗೋಡಿನ ಗಡಿಭಾಗದ ಸಾಕಷ್ಟು ಜನ ಇವತ್ತಿಗೂ ವೈದ್ಯಕೀಯ ಸೇವೆ, ಶಿಕ್ಷಣ ಮುಂತಾದ ಕಾರಣಗಳಿಗೆ ಮಂಗಳೂರನ್ನೆ ಅವಲಂಬಿಸಿದ್ದಾರೆ. ಅಂದಂತೆ, ಕಾಸರಗೋಡಿನ ಜನ ಮಂಗಳೂರನ್ನು ಮಂಗಳಾಪುರಂ ಅನ್ನುತ್ತಾರೆ! ಜನರಭಾಷೆ ಅಂದರೆ ಹೀಗೆ ಅಲ್ಲವೇ? ಕುಮಾರ ರೈತ ಅಂತಹವರಿಗೆ ಕಾಸರಗೋಡು ಬಗ್ಗೆ ಹಲವು ಸಕಾರಣಿಕ ಆಕ್ಷೇಪ ಇರಬಹುದು. ಅಲ್ಲಿರುವ ಕನ್ನಡೆ ಶಾಲೆಗಳ ಲೆಕ್ಕ ಇಟ್ಟುಕೊಂಡು, ಬೆಂಗಳೂರಿನಲ್ಲಿ ಇರುವ ಸರ್ಕಾರಿ ಕನ್ನಡ ಶಾಲೆಗಳ ಲೆಕ್ಕ ನೋಡಬೇಕಾಗಿದೆ ಅಲ್ಲವೇ? ರಾಜ್ಯದ ಶಾಲೆಗಳಲ್ಲೇ ಕನ್ನಡ ಮಾಯ ಆಗುತ್ತಿರುವ ಸಂದರ್ಭದಲ್ಲಿ ನಾವು ಕಾಸರಗೋಡಿನ ಬಗ್ಗೆ ತಲೆ ಕೆಡಿಸಿಕೊಂಡು ಕೂಡುವುದು ಬೇಡ ಅಲ್ಲವೇ?

ಇದನ್ನೂ ಓದಿ: ಮಹಾರಾಷ್ಟ್ರದಿಂದ ರಾಜ್ಯಕ್ಕೆ ಪ್ರವೇಶ ಬೇಕೆಂದರೆ ಕೊರೊನಾ ನೆಗೆಟಿವ್ ರಿಪೋರ್ಟ್ ಕಡ್ಡಾಯ: ನೈರುತ್ಯ ರೈಲ್ವೆ

LEAVE A REPLY

Please enter your comment!
Please enter your name here