ಸಮುದ್ರ ತೀರದಲ್ಲಿರುವ ಮನೆಗಳನ್ನು ನೆಲಸಮಗೊಳಿಸಬೇಕು ಎಂದು ಲಕ್ಷದ್ವೀಪ ಆಡಳಿತ ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ಮಂಗಳವಾರ ತಡೆಹಿಡಿದಿದೆ. ಮುಂದಿನ ಆದೇಶ ಬರುವವರೆಗೂ ದ್ವೀಪಗಳ ಕರಾವಳಿಯಲ್ಲಿರುವ ಮನೆಗಳನ್ನು ಧ್ವಂಸಗೊಳಿಸುವಂತಿಲ್ಲ ಎಂದು ಅದು ಹೇಳಿದೆ. ತನ್ನ ಕಟ್ಟಡಗಳ ನೆಲಸಮಗೊಳಿಸುವಿಕೆಯ ಬಗ್ಗೆ ನೋಟಿಸ್ ಪಡೆದ ಮಾಲಿಕರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನ್ಯಾಯಾಲಯವು, ಎರಡು ವಾರಗಳಲ್ಲಿ ಈ ವಿಷಯದ ಬಗ್ಗೆ ತನ್ನ ಅಫಿಡವಿಟ್ ನೀಡುವಂತೆ ಆಡಳಿತಕ್ಕೆ ನಿರ್ದೇಶಿಸಿದೆ.
ಈ ಹಿಂದೆಯೆ ಹಲವರ ಮನೆಗಳನ್ನು ಧ್ವಂಸ ಮಾಡುವ ಬಗ್ಗೆ ಆಡಳಿತವು ನೋಟಿಸ್ ನೀಡಿತ್ತು. ಅದಕ್ಕಾಗಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಆದರೆ ಆಡಳಿತವು ಅದು ಕೇವಲ ಕರಡು ಸಲಹೆಯಾಗಿದೆ ಎಂದು ತಿಳಿಸಿತ್ತು. ಇದರ ನಂತರ ಸಂತ್ರಸ್ತರು ಮತ್ತೆ ಧ್ವಂಸಗೊಳಿಸುವಿಕೆಯ ಆದೇಶವನ್ನು ಆಡಳಿತದಿಂದ ಪಡೆದಿದ್ದರು, ಹೀಗಾಗಿ ಅವರು ಮತ್ತೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪದ 100 ಮನೆಗಳ ಧ್ವಂಸಕ್ಕೆ ನೋಟಿಸ್: ಸಾರ್ವಜನಿಕರ ಆಕ್ರೋಶ
ಇತ್ತೀಚೆಗೆ ಹೊರಡಿಸಲಾಗಿರುವ ಹೊಸ ಆದೇಶಗಳಲ್ಲಿ, ಸಮುದ್ರ ತೀರದಿಂದ 20 ಮೀಟರ್ ಒಳಗೆ ಇರುವ ನೂರಕ್ಕಿಂತಲೂ ಹೆಚ್ಚಿನ ಮನೆಗಳನ್ನು ಧ್ವಂಸ ಮಾಡಲು ಹೇಳಲಾಗಿದೆ. ತೀರದಿಂದ 20 ಮೀಟರ್ ಒಳಗೆ ಇರುವ ಶೌಚಾಲಯಗಳು ಮತ್ತು ನಿರ್ಜನ ದ್ವೀಪಗಳಲ್ಲಿ ನಿರ್ಮಿಸಲಾದ ತಾತ್ಕಾಲಿಕ ಮೀನುಗಾರಿಕಾ ಶೆಡ್‌ಗಳನ್ನು ಸಹ ಧ್ವಂಸ ಮಾಡಲು ಅದು ಹೇಳಿದೆ.
ಲಕ್ಷದ್ವೀಪದ ಆಡಳಿತ ಕೇಂದ್ರವಾಗಿರುವ ಕವರತ್ತಿಯ 102 ಮನೆಗಳಿಗೆ ನೋಟಿಸ್ ಪಡೆದಿವೆ. ಅಷ್ಟೇ ಅಲ್ಲದೆ ಇನ್ನೂ 52 ಮನೆಗಳಿಗೆ ಶೀಘ್ರದಲ್ಲೇ ನೋಟಿಸ್ ನೀಡಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆರಿಯಮ್, ಸುಹೆಲಿ ಪಾರ್ ಮತ್ತು ಕಲ್ಪೇನಿ ದ್ವೀಪಗಳ ಅನೇಕರು ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳಿಂದ ಇದೀ ರೀತಿಯ ನೋಟಿಸ್ ಪಡೆದಿದ್ದಾರೆ ಎಂದು ‘ಮಾಧ್ಯಮಂ’ ವರದಿ ಮಾಡಿದೆ.
ಮನೆಗಳಿಗೆ ನೀಡಲಾದ ನೋಟಿಸ್‌ಗೆ ಉತ್ತರಿಸಲು ಜೂನ್ 30 ಕೊನೆಯ ದಿನಾಂಕವಾಗಿದೆ. ಒಂದು ವೇಳೆ ನೋಟಿಸ್ ನೀಡಿದ ಕಟ್ಟಡಗಳನ್ನು ಧ್ವಂಸ ಮಾಡಲು ವಿಫಲವಾದರೆ ಅದನ್ನು ಅಧಿಕಾರಿಗಳೇ ಧ್ವಂಸ ಮಾಡಲಿದ್ದು, ಅದಕ್ಕೆ ತಗುಲುವ ವೆಚ್ಚವನ್ನು ಕಟ್ಟಡದ ಮಾಲಿಕರು ನೀಡಬೇಕಾಗುತ್ತದೆ ಎಂದು ನೋಟಿಸ್ ಹೇಳಿತ್ತು.
ಸಮುದ್ರ ತೀರದಿಂದ 50 ಮೀಟರ್ ದೂರವಿರುವ ಕಟ್ಟಡಗಳಿಗೂ ನೋಟಿಸ್ ಬಂದಿದೆ ಎಂದು ದ್ವೀಪವಾಸಿಗಳು ಹೇಳಿದ್ದಾರೆ. ನೋಟಿಸ್ ಪಡೆದ ಹಲವು ಕಟ್ಟಡಗಳು ತೀರದಿಂದ 50 ಮೀಟರ್ ದೂರದಲ್ಲೆ ನಿರ್ಮಿಸಲ್ಪಟ್ಟಿತ್ತಾದರೂ, ಸಮುದ್ರ ಕೊರೆತದಿಂದ ಅದರ ಅಂತರ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಲಕ್ಷದ್ವೀಪ: ಆಡಳಿತಾಧಿಕಾರಿಯ 2 ವಿವಾದಾತ್ಮಕ ಆದೇಶಗಳಿಗೆ ಕೇರಳ ಹೈಕೋರ್ಟ್ ತಡೆ
ಆದರೆ ಅಧಿಕಾರಿಗಳು, “ಇಂಟಿಗ್ರೇಟೆಡ್ ಐಲ್ಯಾಂಡ್ ಮ್ಯಾನೇಜ್ಮೆಂಟ್ ಪ್ಲ್ಯಾನ್ ಅಡಿಯಲ್ಲಿ ಕಾನೂನುಬಾಹಿರವಾಗಿ ಕಟ್ಟಲ್ಪಟ್ಟ ಕಟ್ಟವೆಂದು ಕಂಡುಬಂದವರಿಗೆ ಮಾತ್ರ ನೋಟಿಸ್ ನೀಡಲಾಗುತ್ತದೆ. ಅಲ್ಲದೆ, ಶಿಥಿಲವಾದ ಮನೆಗಳು ಮತ್ತು ಶೌಚಾಲಯಗಳನ್ನು ಮಾತ್ರ ಉರುಳಿಸುತ್ತಿದ್ದು, ಯಾರೂ ಆತಂಕಕ್ಕೊಳಗಾಗುವ ಅಗತ್ಯವಿಲ್ಲ. ಐದು ಸ್ಥಳಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಲು ಬೇಕಾಗಿ ಕಟ್ಟಡಗಳನ್ನು ತೆಗೆದುಹಾಕಲಾಗುತ್ತದೆ” ಎಂದು ಹೇಳುತ್ತಾರೆ.
ಈ ಮಧ್ಯೆ, ದ್ವೀಪವಾಸಿಗಳು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಕಳಪೆ ತ್ಯಾಜ್ಯ ನಿರ್ವಹಣೆಗೆ ದಂಡ ವಿಧಿಸಲಿರುವ ಹೊಸ ಆದೇಶಕ್ಕೆ ಆಕ್ರೋಶಗಳು ಹೆಚ್ಚಿವೆ. ತ್ಯಾಜ್ಯ ನಿರ್ವಹಣೆಗೆ ಯಾವುದೆ ಮೂಲಸೌಕರ್ಯಗಳೇ ಇಲ್ಲದೆ ಇರುವಾಗ ದಂಡ ವಿಧಿಸುವಂತಹ ಆದೇಶಗಳು ಹೇಗೆ ತಾರ್ಕಿಕವಾಗುತ್ತದೆ ಎಂದು ದ್ವೀಪವಾಸಿಗಳು ವಾದಿಸುತ್ತಿದ್ದಾರೆ.
ಈ ಮೊದಲು ಚೆರಿಯಮ್ ದ್ವೀಪದಲ್ಲಿ, ಕಡಲತೀರದ ಉದ್ದಕ್ಕೂ ಇರುವ ಮೀನುಗಾರರ ನಿರ್ಮಾಣಗಳನ್ನು ಏಳು ದಿನಗಳಲ್ಲಿ ತೆರವುಗೊಳಿಸಲು ಆಡಳಿತವು ಆದೇಶಿಸಿತ್ತು. ಮೀನುಗಾರರು ಅದನ್ನು ಸ್ವಇಚ್ಛೆಯಿಂದ ಮಾಡದಿದ್ದರೆ, ಕಂದಾಯ ಇಲಾಖೆಯು ಇದನ್ನು ಮಾಡುತ್ತದೆ ಎಂದು ಆದೇಶವು ಉಲ್ಲೇಖಿಸಿತ್ತು.
ಲಕ್ಷದ್ವೀಪ ಆಡಳಿತವು ಈ ಮೊದಲು ಕೂಡಾ ಮೀನುಗಾರರ ನಿರ್ಮಾಣಗಳನ್ನು ಇದೇ ಮಾದರಿಯಲ್ಲಿ ಕಿತ್ತುಹಾಕಿತ್ತು. ಇದು ದ್ವೀಪವಾಸಿಗಳು ಸೇರಿದಂತೆ ಭಾರತದಾದ್ಯಂತ ಭಾರಿ ಆಕ್ರೋಶವನ್ನು ಹುಟ್ಟಹಾಕಿತ್ತು. ಪ್ರಫುಲ್ ಪಟೇಲ್ ನೇತೃತ್ವದ ಹೊಸ ಲಕ್ಷದ್ವೀಪ ಆಡಳಿತವು ಪರಿಚಯಿಸಿದ ಅನೇಕ ಕಠಿಣ ಯೋಜನೆಗಳಲ್ಲಿ ಇದು ಒಂದಾಗಿದೆ.
ಇದನ್ನೂ ಓದಿ: ಲಕ್ಷದ್ವೀಪ ನ್ಯಾಯಾಂಗ ವ್ಯಾಪ್ತಿ ಬದಲಾವಣೆ ಪ್ರಸ್ತಾಪ – ಆಡಳಿತ ದುರುಪಯೋಗ ಆರೋಪ
ಇದಕ್ಕೂ ಮುನ್ನ, ಕಳೆದ ಶನಿವಾರದಂದು, ಪರಿಸರ ಕಾಳಜಿಗಳ ಬಗ್ಗೆ ತಜ್ಞರ ಎಚ್ಚರಿಕೆಗಳ ಹೊರತಾಗಿಯೂ, ಒಕ್ಕೂಟ ಸರ್ಕಾರವು ಲಕ್ಷದ್ವೀಪದಲ್ಲಿ ಪ್ರಮುಖ ಪ್ರವಾಸೋದ್ಯಮ ಯೋಜನೆಗೆ ಅನುಮೋದನೆ ನೀಡಿತ್ತು. ಲಕ್ಷದ್ವೀಪದ ಮಿನಿಕಾಯ್ ದ್ವೀಪದಲ್ಲಿ ರೆಸಾರ್ಟ್‌ಗಳನ್ನು ನಿರ್ಮಿಸಲು ಖಾಸಗಿ ಕಂಪನಿಗೆ 75 ವರ್ಷಗಳ ಅವಧಿಗೆ 15 ಹೆಕ್ಟೇರ್ ಭೂಮಿಯನ್ನು ಸರ್ಕಾರ ಗುತ್ತಿಗೆಗೆ ನೀಡಲಿದೆ.

ಪ್ರಫುಲ್ ಪಟೇಲ್ ತಾನು ದ್ವೀಪದಲ್ಲಿ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಗೋ ಮಾಂಸ ಮಾರಾಟ ನಿಷೇಧ, ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪದಲ್ಲಿ ಗೂಂಡಾ ಕಾಯ್ದೆ ಜಾರಿ, ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವವರು ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಅನರ್ಹ, ಖಾಸಗಿ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ, ಲಕ್ಷದ್ವೀಪಾಭಿವೃದ್ಧಿ ಪ್ರಾಧಿಕಾರ 2021 ರಚನೆ, ಲಕ್ಷದ್ವೀಪದಲ್ಲಿ ಮದ್ಯ ಮಾರಾಟ ನಿಷೇಧ ತೆರವು, ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧವನ್ನು ಒಳಗೊಂಡ ಹಲವು ಮಸೂದೆ, ವಿಧೇಯಕಗಳನ್ನು ಪರಿಚಯಿಸಿದ್ದರು.
ಇದು ದ್ವೀಪದ ಜನರ ವಿರೋಧಕ್ಕೆ ಕಾರಣವಾಗಿದ್ದು, ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ. ಅಲ್ಲದೆ, ಕಾನೂನು ಹೋರಾಟಕ್ಕೂ ಮುಂದಾಗಿದ್ದು, ಕೇರಳ ಹೈಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.
ಡೈರಿ ಫಾರಂಗಳನ್ನು ಮುಚ್ಚುವ ಮತ್ತು ಶಾಲೆಯ ಮಧ್ಯಾಹ್ನದ ಊಟದಲ್ಲಿ ಮಾಂಸವನ್ನು ನೀಡುವುದನ್ನು ನಿಲ್ಲಿಸಬೇಕು ಎಂದು ಪ್ರಫುಲ್ ಪಟೇಲ್ ನೀಡಿದ್ದ ಎರಡು ವಿವಾದಾತ್ಮಕ ಆದೇಶಗಳನ್ನು ಕೇರಳ ಹೈಕೋರ್ಟ್ ತಡೆಹಿಡಿದಿತ್ತು.
ಇದನ್ನೂ ಓದಿ: #SaveLakshadweep-ಬಿಜೆಪಿಯ ದ್ವೇಷ ರಾಜಕೀಯಕ್ಕೆ ಹೊಸ ಬಲಿ; ಲಕ್ಷದ್ವೀಪದಲ್ಲಿ ಏನಾಗುತ್ತಿದೆ?