ಎದೆ ನೋವು ಎಂದು ನೋವು ತೋಡಿಕೊಂಡರೂ ಬಿಡದೆ ಪೊಲೀಸರು ನಡೆಸಿರುವ ಹಲ್ಲೆಯಿಂದಾಗಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಕೇರಳದಲ್ಲಿ ನಡೆದಿದೆ.
ಸ್ನೇಹಿತರಾದ ಜುಬೈರ್, ಸಜೀವನ್ ಮತ್ತು ಶಾಮನಾದ್ ಅವರು ತಲಶ್ಶೇರಿಯಿಂದ ವಡಕರ ಬಳಿ ಕಲ್ಲೇರಿ ಕಡೆಗೆ ಜುಲೈ 21ರಂದು ಹೋಗುತ್ತಿದ್ದಾಗ ರಾತ್ರಿ 11.30 ರ ಸುಮಾರಿಗೆ ಅವರ i20 ಕಾರು, ಸ್ವಿಫ್ಟ್‌ಗೆ ಡಿಕ್ಕಿ ಹೊಡೆದಿತ್ತು. ಈ ಅವಘಡದಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಲ್ಲೆ ನಡೆಸಿದ ಕೆಲವೇ ಗಂಟೆಗಳಲ್ಲಿ ಸಜೀವನ್ ಸಾವನ್ನಪ್ಪಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಡಕರ ಸಮೀಪದ ಅಡ್ಯಕ್ಕತೆರುವು ಎಂಬಲ್ಲಿ ಈ ದುರ್ಘಟನೆ ನಡೆದಿದೆ. ಹಿಂಬದಿ ಸೀಟಿನಲ್ಲಿ ಕುಳಿತಿದ್ದ ಕಾರಣ ಶಾಮನಾದ್ ಪೊಲೀಸರು ವಶಕ್ಕೆ ಪಡೆದಿಲ್ಲ.
ವಡಕರದಲ್ಲಿ ಡ್ರೈವಿಂಗ್ ಲರ್ನಿಂಗ್ ಇನ್‌ಸ್ಟಿಟ್ಯೂಟ್ ನಡೆಸುತ್ತಿರುವ ಜುಬೇರ್ ಘಟನೆ ಕುರಿತು ಮಾತನಾಡಿ, “ನಾವು ಇನ್ನೊಂದು ಕಾರಿನಲ್ಲಿದ್ದ ಜನರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಯತ್ನಿಸಿದೆವು. ಅಷ್ಟರಲ್ಲಾಗಲೇ ಪೊಲೀಸರಿಗೆ ಮಾಹಿತಿ ದೊರೆತ್ತಿದ್ದ ಕಾರಣ ನಮ್ಮನ್ನು ಠಾಣೆಗೆ ಕರೆದೊಯ್ದರು. ಪೊಲೀಸ್ ಠಾಣೆಯಲ್ಲೇ ಸಬ್ ಇನ್ಸ್ ಪೆಕ್ಟರ್ ನಮ್ಮ ಮೇಲೆ ಕೋಪಗೊಂಡಿದ್ದರು. ಆಗ ಸಜೀವನ್, ಇಂತಹ ಅವಘಡಗಳು ಸಹಜ ಎಂದು ಹೇಳಿದ. ಸಜೀವನ್ ಹಿಂತಿರುಗಿ ಮಾತನಾಡಿದ ಕಾರಣಕ್ಕೇನೋ ಸಬ್ ಇನ್ಸ್‌ಪೆಕ್ಟರ್ ಆತನನ್ನು ಹೊಡೆದು ನಮ್ಮನ್ನು ಠಾಣೆಯೊಳಗೆ ತಳ್ಳಿದರು” ಎಂದು ಮಾಹಿತಿ ನೀಡಿರುವುದಾಗಿ ‘ನ್ಯೂಸ್ ಮಿನಿಟ್’ ವರದಿ ಮಾಡಿದೆ.
“ಪೊಲೀಸ್ ಸಿಬ್ಬಂದಿ ಸಜೀವನ್ ಅವರ ಮುಖಕ್ಕೆ ಮತ್ತು ಬೆನ್ನಿಗೆ ಬಲವಾಗಿ ಹೊಡೆದರು. ಆಗ ಸಜೀವನ್ ಒಂದು ಕೈಯನ್ನು ಎದೆಗೆ ಮತ್ತು ಇನ್ನೊಂದು ಕೈಯನ್ನು ಮೇಲಕ್ಕೆತ್ತಿ ನೋವು ತೋಡಿಕೊಂಡನು. ಅಲ್ಲಿ ಇನ್ನೂ ಇಬ್ಬರು ಮೂವರು ಪೊಲೀಸರು ಇದ್ದರು. ಆದರೆ ಅವರು ನಮ್ಮನ್ನು ಬಿಡಲೇ ಇಲ್ಲ. ಅವರು ನಮ್ಮನ್ನು ಹೊರಗೆ ಬಿಡುವ ಮೊದಲು 45 ನಿಮಿಷಗಳ ಕಾಲ ಕಾಯಿಸಿದರು. ಮರುದಿನ ಕಾರನ್ನು ಬಿಡುಗಡೆ ಮಾಡಲಾಗುವುದು. ಕೀಲಿಯನ್ನು ಪೊಲೀಸ್ ಠಾಣೆಯಲ್ಲಿ ಇಡಬೇಕೆಂದು ನಮಗೆ ತಿಳಿಸಲಾಯಿತು” ಎಂದು ವಿವರಿಸಿದ್ದಾರೆ.
ಸಬ್ ಇನ್ಸ್‌ಪೆಕ್ಟರ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿ ತಮ್ಮನ್ನು ಥಳಿಸಿರುವುದಾಗಿ ಜುಬೇರ್ ಆರೋಪಿಸಿದ್ದಾರೆ.
“ಪೊಲೀಸರು ಅವನ ಮುಖ ಮತ್ತು ಬೆನ್ನಿನ ಮೇಲೆ ಕನಿಷ್ಠ ಐದರಿಂದ ಆರು ಬಾರಿ ಹೊಡೆದರು. ಪೊಲೀಸರು ಹೊಡೆಯಲು ಪ್ರಾರಂಭಿಸಿದ ಐದು ನಿಮಿಷಗಳಲ್ಲಿ ತನಗಾಗುತ್ತಿರುವ ಸಮಸ್ಯೆಯನ್ನು ಸಜೀವನ್ ಹೇಳಿದ್ದ. ಯಾಕೆ ಹೀಗೆ ಹೊಡೆಯುತ್ತಿದ್ದೀರ ಎಂದು ಪೊಲೀಸರನ್ನು ಕೇಳಿದಾಗ ನನಗೂ ಥಳಿಸಿದರು. ಸಜೀವನ್ ಎದೆನೋವು ಮತ್ತು ಅಸ್ವಸ್ಥತೆ ಕಾಣಿಸಿಕೊಳ್ಳುತ್ತಿರುವ ಕುರಿತು ಪೊಲೀಸರಿಗೆ ತಿಳಿಸಿದಾಗ- ಗ್ಯಾಸ್ ಆಗಿರಬಹುದು ಎಂದು ತಾತ್ಸಾರ ತೋರಿ ನೀರು ಕುಡಿಯಲು ತಿಳಿಸಿದರು” ಎಂದು ಜುಬೇರ್ ಹೇಳಿದ್ದಾರೆ.
ಪೊಲೀಸರು ಇಬ್ಬರಿಗೂ ತೆರಳಲು ಅವಕಾಶ ನೀಡಿದ ನಂತರ, ಸಜೀವನ್ ಆಟೊ ಹತ್ತಲು ಪೊಲೀಸ್ ಠಾಣೆಯಿಂದ ಹೊರಬಂದನು. “ಕಾರಿನ ಕೀಯನ್ನು ಪೊಲೀಸರಿಗೆ ಕೊಟ್ಟು ನಾನು ಹೊರಗೆ ಬರುವಷ್ಟರಲ್ಲಿ ಆತ ಪೊಲೀಸ್ ಠಾಣೆಯ ಆವರಣದಲ್ಲಿ ಕುಸಿದು ಬಿದ್ದಿದ್ದ. ಆ ಸಮಯದಲ್ಲಿ ಕಾಂಪೌಂಡ್ ಹೊರಗೆ ಆಟೋ ರಿಕ್ಷಾಗಳಿದ್ದವು. ನಂತರ ಆಟೋ ರಿಕ್ಷಾ ಚಾಲಕರು ಸಜೀವನ್‌ನನ್ನು ಆಟೋಗೆ ಸ್ಥಳಾಂತರಿಸಲು ಪ್ರಯತ್ನಿಸಿದರು. ಆದರೆ ಆತ ದಪ್ಪವಾಗಿದ್ದ ಕಾರಣ ಕಷ್ಟವಾಯಿತು. ಪೊಲೀಸ್ ಪೇದೆಯೊಬ್ಬರು ಠಾಣೆಯಿಂದ ಹೊರಬಂದರು. ಆಸ್ಪತ್ರೆಗೆ ಕರೆದುಕೊಂಡು ಹೋಗಲು ಕಾರನ್ನು ಕೊಡುವಂತೆ ಅವರಲ್ಲಿ ಮನವಿ ಮಾಡಿದೆ. ಅದಕ್ಕೆ ಅವರು ನಿರಾಕರಿಸಿದರು. ನಂತರ ಆಟೋ ರಿಕ್ಷಾ ಚಾಲಕರು ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. 15 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಬಂದಿತು” ಎಂದು ಘಟನೆಯ ಕುರಿತು ತಿಳಿಸಿದ್ದಾರೆ.
ಇದನ್ನೂ ಓದಿರಿ: ಈ ಸುಂದರ ಫೋಟೊ ಮೂಲಕ ಸಂಪ್ರದಾಯವಾದಿಗಳ ಬಾಯಿ ಮುಚ್ಚಿಸಿದ ಕೇರಳ ವಿದ್ಯಾರ್ಥಿಗಳು
“ಸಜೀವನ್ ತನಗಾಗುತ್ತಿರುವ ನೋವುನ್ನು ವ್ಯಕ್ತಪಡಿಸಿದಾಗಲೇ ಹೊರಹೋಗಲು ಪೊಲೀಸರು ಅವಕಾಶ ನೀಡಿದ್ದರೆ ಆತನ ಜೀವವನ್ನು ಉಳಿಸಬಹುದಿತ್ತು. ನಾನು ಆತನೊಂದಿಗೆ ಆಸ್ಪತ್ರೆಗೆ ಹೋಗಿದ್ದೆ. ಕೆಲವೇ ನಿಮಿಷಗಳಲ್ಲಿ, ಸಜೀವನ್ ತೀರಿಕೊಂಡರು ಎಂದು ವೈದ್ಯರು ನಮಗೆ ತಿಳಿಸಿದರು. ಆದರೆ ಸಾವಿಗೆ ಕಾರಣವೇನೆಂದು ತಿಳಿಸಲಿಲ್ಲ. ಆಸ್ಪತ್ರೆಗೆ ಕರೆದೊಯ್ಯುವ ಮೊದಲು ಸಾಕಷ್ಟು ಸಮಯ ವ್ಯರ್ಥವಾಯಿತು. ಹತ್ತು ನಿಮಿಷ ಮುಂಚಿತವಾಗಿ ಆಸ್ಪತ್ರೆಗೆ ಕರೆತಂದಿದ್ದರೆ ಆತನ ಜೀವ ಉಳಿಸಬಹುದಿತ್ತು” ಎಂದು ವೈದ್ಯರು ಹೇಳಿದ್ದಾರೆ.
ಸಜೀವನ್ ಅವರ ಸಂಬಂಧಿ ಅರ್ಜುನ್ ಕೂಡ ಇದೇ ಆತಂಕವನ್ನು ‘ನ್ಯೂಸ್ ಮಿನಿಟ್’ನೊಂದಿಗೆ ಹಂಚಿಕೊಂಡಿದ್ದಾರೆ. ಸಜೀವನ್ ಅವರ ಎದೆನೋವಿನ ದೂರನ್ನು ಪೊಲೀಸರು ನಿರ್ಲಕ್ಷಿಸಿರುವ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ.
ಉತ್ತರ ವಲಯ ಪೊಲೀಸ್ ಮಹಾನಿರೀಕ್ಷಕ ಟಿ.ವಿಕ್ರಮ್ ಘಟನೆಯ ಕುರಿತು ತನಿಖಾ ವರದಿ ಸಲ್ಲಿಸಿದ್ದಾರೆ. ಪ್ರಕರಣವನ್ನು ಕ್ರೈಂ ಬ್ರಾಂಚ್‌ಗೆ ವರ್ಗಾಯಿಸಲಾಗಿದೆ. ಕ್ರೈಂ ಬ್ರಾಂಚ್ ಜುಲೈ 25ರ ಭಾನುವಾರ ಹೇಳಿಕೆ ದಾಖಲಿಸಲು ಜುಬೈರ್‌ಗೆ ಸಮನ್ಸ್ ನೀಡಿತ್ತು.


