ಕೇರಳ ವಿಧಾನಸಭಾ ಚುನಾವಣೆಯ ಕಣ ರಂಗೇರುತ್ತಿದ್ದಂತೆ, ಇತ್ತ ಬಿಜೆಪಿಗೆ ಭಾರಿ ಹಿನ್ನಡೆ ಉಂಟಾಗಿದೆ. ಮೂರು ವಿಧಾನಸಭಾ ಕ್ಷೇತ್ರಗಳಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳ ಚುನಾವಣಾ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ.
ಕೇರಳದಲ್ಲಿ ಏಪ್ರಿಲ್ 06 ರಂದು ಚುನಾವಣೆ ನಡೆಯಲಿದ್ದು, ತಲಶೇರಿ, ಗುರುವಾಯೂರು ಮತ್ತು ದೇವಿಕುಳಂ ವಿಧಾನಸಭಾ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳ ನಾಮಪತ್ರಗಳು ಅಂತಿಮ ಪರಿಶೀಲನೆಯಲ್ಲಿ ತಿರಸ್ಕೃತವಾಗಿವೆ.
ತಲಶೇರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಪಕ್ಷದ ಜಿಲ್ಲಾಧ್ಯಕ್ಷ ಎನ್ ಹರಿದಾಸ್ ಅವರ ನಾಮಪತ್ರವನ್ನು ಅಂತಿಮ ಪರಿಶೀಲನೆಯಲ್ಲಿ ತಿರಸ್ಕರಿಸಲಾಗಿದೆ. ನಾಮಪತ್ರದೊಂದಿಗೆ ಸಲ್ಲಿಸಬೇಕಾದ ಫಾರ್ಮ್ ಎ (ಅಭ್ಯರ್ಥಿ ಸ್ಫರ್ಧಿಸುವ ರಾಜಕೀಯ ಪಕ್ಷ), ಪಕ್ಷದ ರಾಜ್ಯ ಅಧ್ಯಕ್ಷರ ಕಡ್ಡಾಯ ಸಹಿ ಹೊಂದಿರಲಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಕೇರಳ: ನಾನು ಬಿಜೆಪಿಯ ಕಾರ್ಯಕರ್ತನೂ ಅಲ್ಲ & ಸ್ಪರ್ಧಿಸುವುದಿಲ್ಲ- ಬಿಜೆಪಿ ಟಿಕೆಟ್ ಘೋಷಿಸಲಾಗಿದ್ದ ವ್ಯಕ್ತಿ ಹೇಳಿಕೆ
ಗುರುವಾಯೂರು ಕ್ಷೇತ್ರದಲ್ಲಿ, ಬಿಜೆಪಿ ಅಭ್ಯರ್ಥಿ ನಿವೇದಿತಾ ಸುಬ್ರಮಣ್ಯಂ ಅವರ ನಾಮಪತ್ರವನ್ನು ಕೂಡ ಅಗತ್ಯ ದಾಖಲೆಪತ್ರಗಳನ್ನು ಸಲ್ಲಿಸದ ಕಾರಣ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ನಿವೇದಿತಾ ಮಹಿಳಾ ಮೋರ್ಚಾದ ರಾಜ್ಯ ಅಧ್ಯಕ್ಷರಾಗಿದ್ದಾರೆ.
ದೇವಿಕುಲಂ ಕ್ಷೇತ್ರದಲ್ಲಿ ಬಿಜೆಪಿ ಮಿತ್ರಪಕ್ಷ ಎಐಎಡಿಎಂಕೆ ಅಭ್ಯರ್ಥಿ ಆರ್ ಧನಲಕ್ಷ್ಮಿ ಅವರ ನಾಮಪತ್ರ ಅಪೂರ್ಣ ನಾಮಪತ್ರ ಎಂದು ತಿರಸ್ಕರಿಸಲ್ಪಟ್ಟಿದೆ.
ಗುರುವಾಯೂರ್ ಮತ್ತು ದೇವಿಕುಲಂ ಕ್ಷೇತ್ರಗಳಲ್ಲಿ ಸದ್ಯ ಎನ್‌ಡಿಎಗೆ ಬೇರೆ ಅಭ್ಯರ್ಥಿಗಳು ಇಲ್ಲ. ಆದರೆ, ದೇವಿಕುಲಂನಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಎಸ್.ಗಣೇಶ್ ಅವರನ್ನು ಬೆಂಬಲಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಸಿಪಿಐ (ಎಂ) ಒತ್ತಡದಿಂದಾಗಿ ನಾಮಪತ್ರಗಳನ್ನು ತಿರಸ್ಕರಿಸಲಾಗಿದೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ ಹೇಳಿದ್ದಾರೆ. “ನಾವು ಇದರ ವಿರುದ್ಧ ಕಾನೂನುಬದ್ಧವಾಗಿ ಹೋರಾಡುತ್ತೇವೆ ಮತ್ತು ಸುಪ್ರೀಂ ಕೋರ್ಟ್‌ಗೆ ಹೋಗುತ್ತೇವೆ. ಈ ಮೂರು ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಹಾಕುತ್ತದೆ ”ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಖಂಡಿತವಾಗಿಯೂ LDF’- ಕೇರಳ ಚುನಾವಣೆಗೆ ಎಡಪಕ್ಷಗಳ ಘೋಷವಾಕ್ಯ
ನಾಮಪತ್ರಗಳ ತಿರಸ್ಕಾರವು ಸಿಪಿಐ (ಎಂ) ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆಯೂ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿದೆ.
ಈ ನಾಮಪತ್ರಗಳ ತಿರಸ್ಕರಿಸುವುದರಿಂದ ಸಿಪಿಐ (ಎಂ) ಬಿಜೆಪಿಯೊಂದಿಗೆ ಹೊಂದಿರುವ ರಹಸ್ಯ ಮೈತ್ರಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಹೇಳಿದ್ದಾರೆ. “ಅಧಿಕಾರವನ್ನು ಉಳಿಸಿಕೊಳ್ಳಲು, ಸಿಪಿಐ (ಎಂ) ಕೋಮು ಶಕ್ತಿಗಳೊಂದಿಗೆ ಕೈಜೋಡಿಸಲು ಹಿಂದೆ ಸರಿಯುವುದಿಲ್ಲ. ಪ್ರಮುಖ ಸಿಪಿಐ (ಎಂ) ನಾಯಕರು ಕಣದಲ್ಲಿರುವ ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ” ಎಂದು ಆರೋಪಿಸಿದ್ದಾರೆ.
ಸಿಪಿಐ (ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ ಜಯರಾಜನ್, ಈ ಒಪ್ಪಂದವು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಇದೆ ಎಂದು ಆರೋಪಿಸಿದ್ದಾರೆ. “ದೋಷಯುಕ್ತ ನಾಮನಿರ್ದೇಶನಗಳು ಮತ್ತು ನಂತರದ ನಾಮಪತ್ರ ತಿರಸ್ಕಾರವು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಒಪ್ಪಂದವನ್ನು ಬಹಿರಂಗಪಡಿಸಿದೆ. ತಲಶೇರಿಯಲ್ಲಿ ಬಿಜೆಪಿ ಅಭ್ಯರ್ಥಿಯ ರೂಪದಲ್ಲಿ ಪಕ್ಷದ ರಾಜ್ಯ ಅಧ್ಯಕ್ಷರ ಸಹಿ ಏಕೆ ಇರಲಿಲ್ಲ? ಇದು ಇನ್ನೂ ನಿಗೂಢವಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಕೇರಳ: ಬಿಜೆಪಿ ಮೈತ್ರಿಕೂಟ ತೊರೆದ ‘ಕೇರಳ ಕಾಂಗ್ರೆಸ್’!


