ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಭೂಕುಸಿತದ ಪ್ರದೇಶದಿಂದ ನಿಮಿಷಕ್ಕೊಂದು ನೋವಿನ ಕಥೆಗಳು ಕೇಳಿಬರುತ್ತಿರುವ ನಡುವೆ ಮಾನವೀಯ ವಿಚಾರವೊಂದು ಮಾಧ್ಯಮಗಳಲ್ಲಿ ಸುದ್ದಿಯಾಗಿದೆ. ಪ್ರವಾಹದಲ್ಲಿ ಅನಾಥವಾಗಿದ್ದ ಮಗುವನ್ನು ದತ್ತು ತೆಗೆದುಕೊಳ್ಳಲು ನಾಲ್ಕು ಮಕ್ಕಳನ್ನು ಹೊಂದಿರುವ ದಂಪತಿಗಳು ಮುಂದೆ ಬಂದಿದ್ದಾರೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ.
ಜುಲೈ 30ರ ಬೆಳಿಗ್ಗೆ ವಯನಾಡ್‌ನಲ್ಲಿ ಸಂಭವಿಸಿದ ಭೂಕುಸಿತಗಳು 300ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, 200 ಕ್ಕೂ ಹೆಚ್ಚು ಜನರಿಗಾಗಿ ತೀವ್ರ ಶೋಧ ನಡೆಯುತ್ತಿದೆ ಎಂದು ವರದಿಯಾಗಿದೆ.
ದುರಂತದ ಹಿನ್ನೆಲೆಯಲ್ಲಿ, ಇಡುಕ್ಕಿಯ ಮಹಿಳೆ ಭಾವನಾ ಸಜಿನ್ ಅವರು ಭೂಕುಸಿತ ಪೀಡಿತ ಪ್ರದೇಶದಲ್ಲಿ ಅನಾಥ ನವಜಾತ ಶಿಶುಗಳಿಗೆ ಹಾಲುಣಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ಸ್ವಯಂಪ್ರೇರಿತರಾಗಿದ್ದರು. ಭಾವನಾ ಅವರ ಘೋಷಣೆಯ ಬೆನ್ನಲ್ಲೇ, ವಯನಾಡ್‌ನ ದಂಪತಿಗಳು ವಿಪತ್ತು ವಲಯದಿಂದ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಲು ಸಿದ್ಧರಿದ್ದಾರೆ ಎಂದು ಘೋಷಿಸಿದರು.
ಸಜಿತ್ (43) ಮತ್ತು ಅವರ ಪತ್ನಿ ನಫೀಜಾ (40) ದತ್ತು ಸ್ವೀಕಾರ ಮಾಡುವ ಮೊದಲು, ಅವರು ಮಗುವಿಗೆ ಚಿಕ್ಕು ಎಂದು ಹೊಸ ಹೆಸರನ್ನು ಆಯ್ಕೆ ಮಾಡಿದ್ದಾರೆ.
4 ನೇ ದಿನಕ್ಕೆ ಕಾಲಿಟ್ಟ ಕಾರ್ಯಾಚರಣೆ; ಸಾವಿನ ಸಂಖ್ಯೆ 308ಕ್ಕೆ ಏರಿಕೆ
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭಾರೀ ಭೂಕುಸಿತ ಸಂಭವಿಸಿದ ನಂತರ ನಾಲ್ಕನೇ ದಿನ ಶೋಧ ಕಾರ್ಯಾಚರಣೆಯಲ್ಲಿ ನಾಲ್ವರು ಜೀವಂತವಾಗಿ ಪತ್ತೆಯಾಗಿದ್ದಾರೆ. ವೆಳ್ಳರಿಮಲ ನಿವಾಸಿಗಳಾದ ಜಾನ್ ಕೆ ಜೆ, ಜೊಮೊಲ್ ಜಾನ್, ಕ್ರಿಸ್ಟೀನ್ ಜಾನ್ ಮತ್ತು ಅಬ್ರಹಾಂ ಜಾನ್ ಅವರನ್ನು ರಕ್ಷಿಸಲಾಗಿದೆ ಮತ್ತು ಸುರಕ್ಷಿತ ಮಾರ್ಗದ ಮೂಲಕ ಹತ್ತಿರದ ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.
ಮೊದಲು, ಕುಟುಂಬವನ್ನು ವಿಮಾನದಲ್ಲಿ ಸಾಗಿಸಲು ಯೋಜಿಸಲಾಗಿತ್ತು. ಆದರೆ, ನಂತರ ಸುರಕ್ಷಿತ ಮಾರ್ಗವನ್ನು ಗುರುತಿಸಲಾಯಿತು ಎಂದು ಮೂಲಗಳು ತಿಳಿಸಿವೆ.
ಸೇನೆ ಮತ್ತು ಎನ್‌ಡಿಆರ್‌ಎಫ್ ತಂಡ ಸೇರಿದಂತೆ ರಕ್ಷಕರು ತಮ್ಮ ನಿವಾಸದಿಂದ ಶಿಬಿರಕ್ಕೆ ಸುರಕ್ಷಿತ ಮಾರ್ಗದ ಭರವಸೆ ನೀಡಿದ ನಂತರ ಕುಟುಂಬವು ಪರಿಹಾರ ಶಿಬಿರಕ್ಕೆ ಸ್ಥಳಾಂತರಿಸಲು ಒಪ್ಪಿಕೊಂಡಿತು.
ಸಾವಿನ ಸಂಖ್ಯೆ 308ಕ್ಕೆ ಏರಿದೆ. ಅಧಿಕೃತ ಎಣಿಕೆ 201 ರಷ್ಟಿದೆ. ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಕೇರಳದ ಎಡಿಜಿಪಿ ಎಂ ಆರ್ ಅಜಿತ್ ಕುಮಾರ್ ಶುಕ್ರವಾರ ಈ ಪ್ರದೇಶದಲ್ಲಿ ಸಂಭವಿಸಿದ ವಿನಾಶಕಾರಿ ಭೂಕುಸಿತದಲ್ಲಿ ಸುಮಾರು 300 ಜನರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಹೇಳಿದ್ದಾರೆ. ಭೂಕುಸಿತದಿಂದ 348 ಮನೆಗಳಿಗೆ ಹಾನಿಯಾಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ; ಮಣಿಪುರ ಗಲಭೆ: ಜಿರಿಬಾಮ್‌ನಲ್ಲಿ ಶಾಂತಿ ಮರುಸ್ಥಾಪನೆಗೆ ಮೈತೆಯಿ-ಹ್ಮಾರ್ ಸಮುದಾಯಗಳ ಒಪ್ಪಿಗೆ


