ಉತ್ತರ ಕನ್ನಡ ಜಿಲ್ಲೆ ಶಿರೂರಿನಲ್ಲಿ ಉಂಟಾದ ಗುಡ್ಡ ಕುಸಿತ ದುರಂತದಲ್ಲಿ ಸಾವನ್ನಪ್ಪಿದ ಕೇರಳದ ಲಾರಿ ಚಾಲಕ ಅರ್ಜುನ್‌ನ ಕುಟುಂಬಸ್ಥರು ಲಾರಿ ಮಾಲೀಕ ಅಬ್ದುಲ್ ಮನಾಫ್ ವಿರುದ್ದ ದೂರು ದಾಖಲಿಸಿದ್ದಾರೆ ಎಂದು ವರದಿಯಾಗಿದೆ.
ಅರ್ಜುನ್ ಸಹೋದರಿ ಅಂಜು ದೂರು ದಾಖಲಿಸಿದ್ದು, ಮನಾಫ್ ತಮ್ಮ ಕುಟುಂಬದ ಭಾವನಾತ್ಮಕ ಪರಿಸ್ಥಿತಿಯನ್ನು ಬಂಡವಾಳವನ್ನಾಗಿಸಿಕೊಂಡು, ಅರ್ಜುನ್ ಫೋಟೋ ಬಳಸಿ ಪ್ರಚಾರ ಪಡೆಯುತ್ತಿದ್ದಾರೆ, ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ ಕುಟುಂಬದ ಹೆಸರಿಗೆ ಕಳಂಕ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬದ ವಿರುದ್ದ ಮಾನಹಾನಿ ಪೋಸ್ಟ್ ಹಾಕುವವರ ವಿರುದ್ದವೂ ಅಂಜು ದೂರು ನೀಡಿದ್ದಾರೆ. ಚೆರುವಾಯೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮನಾಫ್ ಮತ್ತು ಮುಳುಗುತಜ್ಞ ಈಶ್ವರ ಮಲ್ಪೆ ವಿರುದ್ದ ಅರ್ಜುನ್ ಕುಟುಂಬ ಕೆಲ ದಿನಗಳ ಹಿಂದೆ ಹಲವು ಆರೋಪಗಳನ್ನು ಮಾಡಿತ್ತು. ಇವರಿಬ್ಬರೂ ಅರ್ಜುನ್ ಹೆಸರನ್ನು ತಮ್ಮ ಯೂಟ್ಯೂಬ್ ಚಾನೆಲ್ ಚಂದಾದಾರನ್ನು ಹೆಚ್ಚಿಸಲು ಬಳಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಮನಾಫ್ ಅರ್ಜುನ್ ಹೆಸರಿನಲ್ಲಿ ನಮಗೆ ಗೊತ್ತಿಲ್ಲದಂತೆ ಹಣ ಸಂಗ್ರಹಿಸಿದ್ದಾರೆ. ಅದರಲ್ಲಿ ಸ್ವಲ್ಪ ಮೊತ್ತವನ್ನು ನಮಗೆ ಕೊಟ್ಟಿದ್ದಾರೆ. ಅದೂ ಕೂಡ ಪ್ರಚಾರ ಪಡೆಯಲು ಮಾಡಿರುವುದು ಎಂದು ಹೇಳಿತ್ತು.
ತನ್ನ ವಿರುದ್ದ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮನಾಫ್, “ನಾನು ಈ ಹಿಂದೆ ಹೇಳಿರುವ ಮಾತುಗಳಿಗೆ ಬದ್ದನಾಗಿದ್ದೇನೆ. ಗೊತ್ತಿಲ್ಲದೆ ಏನಾದರು ತಪ್ಪು ಮಾಡಿದ್ದರೆ ಅದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ. ನನ್ನ ವಿರುದ್ದ ದೂರು ದಾಖಲಿಸಿದರೂ, ನಾನು ಅರ್ಜುನ್ ಕುಟುಂಬದ ಪರವಾಗಿಯೇ ನಿಲ್ಲುತ್ತೇನೆ” ಎಂದಿದ್ದಾರೆ.
“ಯೂಟ್ಯೂಬ್ ಚಾನೆಲ್‌ನಲ್ಲಿ ಅರ್ಜುನ್ ಫೋಟೋ ಬಳಸಿ ಪ್ರಚಾರ ಪಡೆಯಲಾಗುತ್ತಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮನಾಫ್, ಮಾಧ್ಯಮಗಳು ಕೊಟ್ಟ ಸಲಹೆಯಂತೆ ಶಿರೂರಿನ ಪರಿಸ್ಥಿತಿಯ ಕುರಿತು ಮಾಹಿತಿ ನೀಡಲು ನಾನು ಯೂಟ್ಯೂಬ್ ಚಾನೆಲ್ ಮಾಡಿದೆ. ಅರ್ಜುನ್ ಶವವನ್ನು ಮನೆಗೆ ತಲುಪಿಸಿದ ಬಳಿಕ ನಾನು ಚಾನೆಲ್ ಬಳಸಿಲ್ಲ. ಪ್ರಸ್ತುತ ಯೂಟ್ಯೂಬ್ ಚಾನೆಲ್‌ನಿಂದ ಅರ್ಜುನ್ ಫೋಟೋವನ್ನು ತೆಗೆದು ಹಾಕಿದ್ದೇನೆ” ಎಂದು ಹೇಳಿದ್ದಾರೆ.
ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಕನ್ನಡಿಕ್ಕಲ್ ನಿವಾಸಿಯಾದ ಲಾರಿ ಚಾಲಕ ಅರ್ಜುನ್ ಜುಲೈ 16ರಂದು ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ದುರಂತದ ಬಳಿಕ ಲಾರಿ ಸಹಿತ ನಾಪತ್ತೆಯಾಗಿದ್ದರು. ಸತತ ಹುಡುಕಾಟದ ಫಲವಾಗಿ 72 ದಿನಗಳ ಬಳಿಕ ಸೆಪ್ಟೆಂಬರ್ 25ರಂದು ಲಾರಿ ಮತ್ತು ಅದರೊಳಗೆ ಅರ್ಜುನ್ ಶವ ಗಂಗಾವಳಿ ನದಿಯಲ್ಲಿ ಪತ್ತೆಯಾಗಿತ್ತು.
ಇದನ್ನೂ ಓದಿ : ‘ಮಗಳು ಸೆಕ್ಸ್ ರಾಕೆಟ್‌ನಲ್ಲಿ ಸಿಲುಕಿದ್ದಾಳೆ’ ಎಂದು ಹಣಕ್ಕೆ ಬೇಡಿಕೆ; ಹೃದಯಾಘಾತದಿಂದ ಪ್ರಾಣಬಿಟ್ಟ ಶಾಲಾ ಶಿಕ್ಷಕಿ


