ಕೇರಳದಲ್ಲಿ ಸಾರ್ವಜನಿಕ, ಖಾಸಗಿ ಮತ್ತು ಸೈಬರ್ ತಾಣಗಳಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯದಿಂದ ರಕ್ಷಣೆ ನೀಡಲು ಕೇರಳ ಪೊಲೀಸರು “ಪಿಂಕ್ ಪ್ರೊಟೆಕ್ಷನ್” ಯೋಜನೆ ಎಂಬ ಹೊಸ ಯೋಜನೆಯನ್ನು ಪ್ರಾರಂಭಿಸಿದ್ದಾರೆ.
ಈ ಯೋಜನೆಗಾಗಿ 10 ಕಾರುಗಳು, ಬುಲೆಟ್ ಬೈಕ್‌ಗಳು ಮತ್ತು 20 ಬೈಸಿಕಲ್‌ಗಳು ಸೇರಿದಂತೆ 40 ದ್ವಿಚಕ್ರ ವಾಹನಗಳನ್ನು ಮಂಜೂರು ಮಾಡಲಾಗಿದ್ದು, ಇವುಗಳನ್ನು ಸೋಮವಾರ (ಜುಲೈ 19) ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಬಿಡುಗಡೆ ಮಾಡಿದ್ದಾರೆ.
“ಪಿಂಕ್ ಪ್ರೊಟೆಕ್ಷನ್” ಯೋಜನೆಯು ವರದಕ್ಷಿಣೆ ಸಂಬಂಧಿತ ಸಮಸ್ಯೆಗಳು, ಸೈಬರ್ ತಾಣಗಳಲ್ಲಿ ಉಂಟಾಗುವ ಬೆದರಿಕೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗಾಗುವ ದೌರ್ಜನ್ಯವನ್ನು ತಡೆಯುವ ಗುರಿಯನ್ನು ಹೊಂದಿದೆ. ಯೋಜನೆಯು 10 ಘಟಕಗಳನ್ನು ಹೊಂದಿದೆ, ಅವುಗಳಲ್ಲಿ ಒಂದು ಈಗಾಗಲೇ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಪಿಂಕ್ ಪೊಲೀಸ್ ಗಸ್ತುದಳವನ್ನು ಒಳಗೊಂಡಿದೆ.
ಇದನ್ನೂ ಓದಿ: ಹಳ್ಳಿಗಳ ಕನ್ನಡ ಹೆಸರು ಮಲಯಾಳೀಕರಣ: ವಿವಾದದ ಬಗ್ಗೆ ಕೇರಳ ಸಿಎಂ ಪ್ರತಿಕ್ರಿಯೆ ಹೀಗಿದೆ!
Pink Protection Project, a new initiative of the State Police to ensure women's safety in public, private & cyber spaces was inaugurated by hon'ble CM Sri. Pinarayi Vijayan in the presence of Sri.Anil kant IPS(SPC, Kerala) at Police Headquarters today.#keralapolice #pinkpolice pic.twitter.com/JkiKw2tVPc
— Kerala Police (@TheKeralaPolice) July 19, 2021
ಈ ವ್ಯವಸ್ಥೆಯನ್ನು “ಪಿಂಕ್ ಜನಮೈತ್ರಿ ಬೀಟ್” ಎಂದು ಹೆಸರಿಸಲಾಗಿದೆ, ಇದರ ಅಡಿಯಲ್ಲಿ ಕೌಟುಂಬಿಕ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಮನೆಗಳಿಗೆ ಭೇಟಿ ನೀಡುತ್ತಾರೆ. ಅವರು ಪಂಚಾಯತ್ ಸದಸ್ಯರು, ನೆರೆಹೊರೆಯವರು ಮತ್ತು ಇತರ ಸ್ಥಳೀಯರಿಂದ ಮಾಹಿತಿಯನ್ನು ಸಂಗ್ರಹಿಸಿ ಮುಂದಿನ ಕ್ರಮಕ್ಕಾಗಿ ಪೊಲೀಸ್ ಠಾಣೆಗೆ ಮಾಹಿತಿ ಹಸ್ತಾಂತರಿಸುತ್ತಾರೆ.
ವಿಶೇಷ ತರಬೇತಿ ಪಡೆದ ಮಹಿಳಾ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿರುವ ಪಿಂಕ್ ಬೀಟ್ ವ್ಯವಸ್ಥೆಯು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್‌ಗಳಲ್ಲಿ ಮತ್ತು ಶಾಲೆಗಳು, ಕಾಲೇಜುಗಳು ಮತ್ತು ಬಸ್ ನಿಲ್ದಾಣಗಳು ಸೇರಿದಂತೆ ಇತರ ಸಾರ್ವಜನಿಕ ಸ್ಥಳಗಳ ಬಳಿ ಕಾರ್ಯ ನಿರ್ವಹಿಸುತ್ತದೆ. ಎಲ್ಲಾ 14 ಜಿಲ್ಲೆಗಳಲ್ಲಿ ಪಿಂಕ್ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಲಾಗಿದೆ.
ಕೇರಳ ಪೊಲೀಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಅನಿಲ್ ಕಾಂತ್ ಮತ್ತು ಕೇರಳ ಪೊಲೀಸ್ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
“ಮಹಿಳಾ ಪೊಲೀಸ್ ಅಧಿಕಾರಿಗಳು ನಿಯಮಿತವಾಗಿ ಗಸ್ತು ತಿರುಗುತ್ತಾರೆ. ಪೊಲೀಸ್ ಅಧಿಕಾರಿಗಳು ಯೋಜನೆಗೆ ನೀಡಲಾಗಿರುವ ಕಾರುಗಳು, ದ್ವಿಚಕ್ರ ವಾಹನಗಳು ಮತ್ತು ಸೈಕಲ್‌ಗಳಲ್ಲಿ ಗಸ್ತು ತಿರುಗುತ್ತಿರುತ್ತಾರೆ. ಕೌಟುಂಬಿಕ ದೌರ್ಜನ್ಯದ ಬಗ್ಗೆ ಯಾವುದೇ ದೂರು ದಾಖಲಾಗಿದ್ದರೆ, ನಾವು ಪ್ರತಿದಿನ ಗಸ್ತು ನಡೆಸುತ್ತೇವೆ ಮತ್ತು ಕಾಲಕಾಲಕ್ಕೆ ಪರಿಶೀಲಿಸುತ್ತೇವೆ” ಎಂದು ಡಿಜಿಪಿ ಅನಿಲ್ ಕಾಂತ್ ಹೇಳಿದ್ದಾರೆ.
ಇದನ್ನೂ ಓದಿ: ಚಾಲ್ತಿಯಲ್ಲಿರುವ ವಿವಾಹ ವ್ಯವಸ್ಥೆ ಸುಧಾರಿಸಬೇಕು: ವರದಕ್ಷಿಣೆ ಹತ್ಯೆಗಳ ಬಗ್ಗೆ ಪಿಣರಾಯಿ ವಿಜಯನ್


