ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ ವ್ಯಕ್ತಿ ವಿಚಾರಣೆಗೆ ಹಾಜರಾಗಿ ದಾಖಲೆಗಳನ್ನು ನೀಡುವ ಮೂಲಕ ಪೌರತ್ವ ಸಾಬೀತುಪಡಿಸಿದ್ದಾರೆ.
ದಿ ನ್ಯೂಸ್ ಮಿನಿಟ್ ವರದಿಯ ಪ್ರಕಾರ, ಉಪ್ಪಳದ ಕೆ. ಮುಹಮ್ಮದ್ ಅವರಿಗೆ ಫೆಬ್ರವರಿ 12ರಂದು ಇಆರ್‌ಒನಿಂದ ನೋಟಿಸ್ ಬಂದಿತ್ತು. ಫೆಬ್ರವರಿ 13ರಂದು ಮಂಜೇಶ್ವರ ತಾಲೂಕು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಆ ನೋಟಿಸ್‌ನಲ್ಲಿ ಸೂಚಿಸಲಾಗಿತ್ತು. ನೋಟಿಸ್ ಪಡೆದ ಮುಹಮ್ಮದ್ ಆರಂಭದಲ್ಲಿ ಗೊಂದಲಕ್ಕೆ ಒಳಗಾಗಿದ್ದರು. ನಂತರ, ತಾನು ‘ಭಾರತೀಯ ಅಲ್ಲ ಪೌರ ಅಲ್ಲ’ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಪೌರತ್ವ ಸಾಬೀತುಪಡಿಸಬೇಕಿದೆ ಎಂಬುವುದು ಅವರಿಗೆ ಗೊತ್ತಾಗಿದೆ.
“ನೋಟಿಸ್ ಪಡೆದ ನಾನು ಆತಂಕಕ್ಕೆ ಒಳಗಾದೆ. ಏಕೆಂದರೆ, ನಾನು ಹುಟ್ಟಿದ್ದು, ಬೆಳೆದಿದ್ದು, ವಿದ್ಯಾಭ್ಯಾಸ ಪಡೆದಿದ್ದು ಎಲ್ಲಾ ಇಲ್ಲೆ. ನನ್ನ ಮನೆ ಕೂಡ ಇಲ್ಲೇ ಇದೆ. ಹಠಾತ್ ಆಗಿ ಯಾರೋ ಒಬ್ಬರು ನಾನು ಭಾರತೀಯ ನಾಗರಿಕ ಅಲ್ಲ ಎಂದು ಹೇಳಿದಾಗ ನಿಜವಾಗಿಯೂ ಭಯಭೀತನಾದೆ” ಎಂದು ಮುಹಮ್ಮದ್ ನೆನಪಿಸಿಕೊಂಡಿದ್ದಾಗಿ ನ್ಯೂಸ್ ಮಿನಿಟ್ ವರದಿ ವಿವರಿಸಿದೆ.
ಮುಹಮ್ಮದ್ ಅವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಮತದಾರ. 2016 ಮತ್ತು 2021ರ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಅತ್ಯಂತ ಕಡಿಮೆ ಅಂತರದಿಂದ ಸೋತ ಕ್ಷೇತ್ರ ಇದು.
ಫಾರ್ಮ್ 7ರ ಮೂಲಕ ಮುಹಮ್ಮದ್ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದ ಲೋಕೇಶ್ ನೋಂಡಾ, ಅವರು ‘ಭಾರತೀಯ ಪೌರತ್ವವನ್ನು ಹೊಂದಿಲ್ಲ’ ಎಂಬ ಕಾರಣ ನೀಡಿ ಮತದಾರರ ಪಟ್ಟಿಯಿಂದ ಅವರ ಹೆಸರನ್ನು ತೆಗೆದುಹಾಕುವಂತೆ ಕೋರಿದ್ದರು ಎನ್ನಲಾಗಿದೆ.
ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಸೇರ್ಪಡೆಯನ್ನು ಪ್ರಶ್ನಿಸಲು ಅಥವಾ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಹೆಸರನ್ನು ತೆಗೆದುಹಾಕಲು ವಿನಂತಿಸಲು ಬಳಸುವ ನಿರ್ದಿಷ್ಟ ಶಾಸನಬದ್ಧ ಅರ್ಜಿಯಾಗಿದೆ ಫಾರ್ಮ್ 7. ಎರಡನೇ ಹಂತದಲ್ಲಿ ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು 9 ರಾಜ್ಯಗಳಲ್ಲಿ ಎಸ್‌ಐಆರ್ ಅನ್ನು ಚುನಾವಣಾ ಆಯೋಗ ಘೋಷಿಸಿದೆ. ಆ 9 ರಾಜ್ಯಗಳಲ್ಲಿ ಕೇರಳವೂ ಒಂದು.
ನೋಟಿಸ್ ಬಂದ ಮರುದಿನ ಫೆಬ್ರವರಿ 13ರಂದು, ಮುಹಮ್ಮದ್ ಅವರು ಮಂಜೇಶ್ವರ ತಾಲೂಕು ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದರು. ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಅವರು ತಮ್ಮ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಅನ್ನು ಹಾಜರುಪಡಿಸಿದ್ದರು.
ಸುಳ್ಳು ದೂರು
ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಬೂತ್ ಸಂಖ್ಯೆ 128ರ ಮತಗಟ್ಟೆಯ ಮತದಾರರಾದ ಮುಹಮ್ಮದ್ 1970ರಲ್ಲಿ ಜನಿಸಿದವರು. ಈಗ ಅವರಿಗೆ 55 ವರ್ಷ. ಸ್ಥಳೀಯ ಬೇಕೂರ್ ಶಾಲೆಯಲ್ಲಿ 10ನೇ ತರಗತಿಯವರೆಗೆ ಅಧ್ಯಯನ ಮಾಡಿರುವ ಮುಹಮ್ಮದ್, ನಂತರ ದಿನಗೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.
ನ್ಯೂಸ್ ಮಿನಿಟ್ ವರದಿಯ ಪ್ರಕಾರ, ವಿಚಾರಣೆಯ ನಂತರ ಮುಹಮ್ಮದ್ ಅವರ ವಿರುದ್ದದ ದೂರು ಆಧಾರರಹಿತ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಸೇಕರ್ ಐಎಎಸ್ ಅವರ ಫೇಸ್‌ಬುಕ್ ಪೋಸ್ಟ್‌ನ ಪ್ರಕಾರ, ದೂರುದಾರರು ವಿಚಾರಣೆಗೆ ಹಾಜರಾಗಿದ್ದರು, ಆದರೆ ಆರೋಪವನ್ನು ದೃಢೀಕರಿಸಲು ಯಾವುದೇ ದಾಖಲೆ ಪುರಾವೆಗಳನ್ನು ನೀಡುವಲ್ಲಿ ಅವರು ವಿಫಲರಾಗಿದ್ದಾರೆ.
ದಾಖಲೆ ಪರಿಶೀಲನೆ ಮತ್ತು ವಿಚಾರಣೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ, ಮುಹಮ್ಮದ್ ಅವರ ವಿರುದ್ಧದ ದೂರು ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಕಂಡುಬಂದಿದೆ. ಅದರಂತೆ, ಪ್ರಸ್ತುತ ಮತದಾರರ ಪಟ್ಟಿಯಲ್ಲಿ ಅವರ ಹೆಸರು ಮುಂದುವರಿಯಬೇಕೆಂದು ಇಆರ್‌ಒ ಆದೇಶಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಅಲ್ಲದೆ, ಸುಳ್ಳು ದೂರು ನೀಡಿದ ಲೋಕೇಶ್ ವಿರುದ್ಧ ಎಫ್‌ಐಆರ್ ದಾಖಲಿಸಲು ಸಹ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ.
ನ್ಯೂಸ್ ಮಿನಿಟ್ ದೂರುದಾರ ಲೋಕೇಶ್ ನೋಂಡಾನನ್ನು ಮಾತನಾಡಿಸಿದೆ. ಆತ ತಾನು ಮುಹಮ್ಮದ್ ವಿರುದ್ದ ದೂರು ನೀಡಿದ್ದು ಹೌದು, ಆದರೆ ಅವರು ಭಾರತೀಯ ಪ್ರಜೆಯಲ್ಲ ಎಂದು ನಾನು ಹೇಳಿಲ್ಲ. ಅವರನ್ನು ತುಂಬಾ ದಿನಗಳಿಂದ ನೋಡಿಲ್ಲದ ಕಾರಣ, ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದೆ. ನನ್ನಲ್ಲಿ ದೂರಿನ ಪ್ರತಿ ಇದೆ. ನಾನು ದೂರಿಗೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳು ಮತ್ತು ಪುರಾವೆಗಳನ್ನು ಹೊಂದಿದ್ದೇನೆ. ತನಿಖೆ ಮುಂದುವರಿದಂತೆ ಅವುಗಳನ್ನು ಅಧಿಕಾರಿಗಳಿಗೆ ನೀಡುವುದಾಗಿ ಹೇಳಿದ್ದಾರೆ.
“ಲೋಕೇಶ್ ನೋಂಡಾ ನನ್ನದೇ ಊರಿನವನು. ಹಾಗಾಗಿ, ಆತನನ್ನು ನನಗೆ ಪರಿಚಯವಿದೆ. ತಾಲೂಕು ಕಚೇರಿಯಲ್ಲಿ ನೋಡಿದಾಗಲೇ, ನನ್ನ ವಿರುದ್ದಆತನೇ ದೂರು ಕೊಟ್ಟಿರುವುದು ಎಂದು ನನಗೆ ಗೊತ್ತಾಗಿದ್ದು. ಈಗ ನಾನು ಕೆಲಸ ಹೋದಾಗಲೆಲ್ಲ, “ನಿಮ್ಮನ್ನು ವಿಚಾರಣೆಗೆ ಕರೆದಿದ್ದು ಏಕೆ..ನಿಮ್ಮ ಬಳಿ ದಾಖಲೆಗಳು ಇಲ್ವಾ ಎಂದು ಜನರು ಕೇಳುತ್ತಾರೆ. ನನ್ನ ಬಳಿ ಎಲ್ಲಾ ದಾಖಲೆಗಳು ಇವೆ” ಎಂಬುವುದಾಗಿ ಮುಹಮ್ಮದ್ ತಿಳಿಸಿದ್ದಾರೆ.
ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ ಎಂಬ ಆರು ಸುಳ್ಳು ದೂರುಗಳು
ಮುಹಮ್ಮದ್ ಮಾತ್ರವಲ್ಲದೆ ಇನ್ನೂ 6 ಮಂದಿ ಮುಸ್ಲಿಂ ಮಹಿಳೆಯರ ವಿರುದ್ದ ‘ಗೈರು ಹಾಜರಿ’ ಅಥವಾ ‘ಶಾಶ್ವತವಾಗಿ ಸ್ಥಳಾಂತರ’ ಎಂಬ ದೂರುಗಳನ್ನು ಇದೇ ಲೋಕೇಶ್ ನೋಂಡಾ ದಾಖಲಿಸಿದ್ದಾರೆ. ನೋಟಿಸ್ ಪಡೆದ ಅಸ್ಮಾ (64), ಸಫಿಯಾ (51), ನಬೀಸಾ (75), ಮೌಝಿಯತ್ ಸುನೈಫಾ ಎ (25), ಕುಬ್ರಾ (35), ಮತ್ತು ಝುಬೈದಾ (55) ನೋಟಿಸ್ ಪಡೆದವರು. ಇವರಲ್ಲಿ ಸಫಿಯಾ, ಝುಬೈದಾ ಮತ್ತು ಕುಬ್ರಾ ವಿವಾಹವಾಗಿ ಬೇರೆ ಊರುಗಳಿಂದ ಗಂಡನ ಮನೆಗೆ ಬಂದವರು. ಆದರೆ, ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಇವರು ಬೂತ್ ಸಂಖ್ಯೆ 128ರ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ. ಉಳಿದ ಮೂವರು ಇಲ್ಲೇ ಹುಟ್ಟಿ ಬೆಳೆದವರು ಎಂದು ನ್ಯೂಸ್ ಮಿನಿಟ್ ವರದಿ ಉಲ್ಲೇಖಿಸಿದೆ.
ಪೈವಳಿಕೆ ಪಂಚಾಯತ್‌ನ ಮಾಜಿ ಸದಸ್ಯ ಹಾಗೂ ಅಸ್ಮಾ ಅವರ ಮಗ ಝುಲ್ಫಿಕರ್ ಅಲೀ ಮಾತನಾಡಿ, “ದೂರುದಾರ ಲೋಕೇಶ್ ನೋಂಡಾಗೆ ಈ ಏಳು ಜನರ ಪೈಕಿ ಹೆಚ್ಚಿನವರ ಪರಿಚಯ ಇದೆ. ಆತ ನನ್ನ ಮನೆ ಸಮೀಪದ ನಿವಾಸಿ. ಆತ ನನ್ನ ತಾಯಿಯನ್ನು ನೋಡಿದ್ದಾರೆ. ನಾವು ಇಆರ್‌ಒ ಬಳಿಗೆ ಹೋದಾಗ ನೋಂಡಾ ಅಲ್ಲಿ ಇರಲಿಲ್ಲ” ಎಂದು ಹೇಳಿದ್ದಾರೆ.
ಇಆರ್‌ಒ ಪ್ರಕಾರ, ಲೋಕೇಶ್ ಈ ಹಿಂದೆ 91 ಜನರ ವಿರುದ್ಧ ಲಿಖಿತ ದೂರುಗಳನ್ನು ದಾಖಲಿಸಿದ್ದರು ಎಂದು ಝುಲ್ಫಿಕರ್ ಹೇಳಿದ್ದಾರೆ. ಇಆರ್‌ಒ ಆನ್‌ಲೈನ್‌ನಲ್ಲಿ ಸಲ್ಲಿಸಲು ಕೇಳಿದಾಗ, ಆತ ಕೇವಲ ಏಳು ದೂರುಗಳನ್ನು ಮಾತ್ರ ಸಲ್ಲಿಸಿದ್ದಾರೆ ಎಂದಿದ್ದಾರೆ. ಲೋಕೇಶ್ ಈ ಆರೋಪಗಳನ್ನು ನಿರಾಕರಿಸಿದ್ದು, ನಾನು ಕೇವಲ 71 ಆಫ್‌ಲೈನ್ ದೂರುಗಳನ್ನು ಮಾತ್ರ ಸಲ್ಲಿಸಿದ್ದೇನೆ. ಆನ್‌ಲೈನ್‌ನಲ್ಲಿ ಏನನ್ನೂ ಸಲ್ಲಿಸಿಲ್ಲ ಎಂದು ಹೇಳಿದ್ದಾರೆ.
ಈ ಬೆಳವಣಿಗೆಯ ನಂತರ ನೋಟಿಸ್ ಬಂದ ವ್ಯಕ್ತಿಗಳು ಲೋಕೇಶ್ ನೋಂಡಾ ವಿರುದ್ದ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದು, ಜಿಲ್ಲಾಧಿಕಾರಿ ಆತನ ಮೇಲೆ ಎಫ್‌ಐಆರ್ ದಾಖಲಿಸುವುದಾಗಿ ಫೆ.15ರಂದು ತಿಳಿಸಿದ್ದಾರೆ.
ಲೋಕೇಶ್ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿಯನ್ನು ಒದಗಿಸಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿರುವುದರಿಂದ, ಇದನ್ನು 1950ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 31ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತಿದೆ ಎಂದು ನ್ಯೂಸ್ ಮಿನಿಟ್ ವರದಿ ಉಲ್ಲೇಖಿಸಿದೆ.
ಬಿಜೆಪಿ ಮತ್ತು ಮಂಜೇಶ್ವರ
ಕೇರಳದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮೈತ್ರಿಕೂಟದ ಭಾಗವಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ನಾಯಕ ಹಾಗೂ ಮಂಜೇಶ್ವರದ ಶಾಸಕ ಎಕೆಎಂ ಅಶ್ರಫ್ ಅವರು ನೋಟಿಸ್ ಬಂದವರ ವಿಚಾರಣೆಯ ದಿನದಂದು ತಾಲೂಕು ಕಚೇರಿಗೆ ಭೇಟಿ ನೀಡಿದ್ದರು. ಅಧಿಕಾರಿಗಳು ಮತ್ತು ಬಿಜೆಪಿ ನಡುವಿನ ಸಂಬಂಧ ಮತದಾರರಿಗೆ ನೋಟಿಸ್ ಬರಲು ಕಾರಣ ಎಂದು ಅವರು ಆರೋಪಿಸಿದ್ದಾರೆ.
“ವೃದ್ಧರನ್ನು ವಿಚಾರಣೆಗೆ ಕರೆಯುವುದು ಮತ್ತು ಅವರಿಗೆ ಅನಾನುಕೂಲತೆಯನ್ನುಂಟುಮಾಡುವುದು ಬಿಜೆಪಿಯೊಂದಿಗಿನ ಅವರ (ಅಧಿಕಾರಿಗಳ) ಸಂಬಂಧದ ಭಾಗವಾಗಿದೆ. ಇದರ ವಿರುದ್ಧ ನಾವು ಬಲವಾದ ಹೋರಾಟವನ್ನು ಪ್ರಾರಂಭಿಸುತ್ತೇವೆ” ಎಂದು ಅಶ್ರಫ್ ಹೇಳಿದ್ದಾರೆ.
ಮಂಜೇಶ್ವರ ಕೇರಳದಲ್ಲಿ ಬಿಜೆಪಿಗೆ ‘ಎ-ಕ್ಲಾಸ್’ ಕ್ಷೇತ್ರವೆಂದು ಪರಿಗಣಿಸಲಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ 2021 ಮತ್ತು 2016ರ ವಿಧಾನಸಭಾ ಚುನಾವಣೆಗಳಲ್ಲಿ ಮತ್ತು 2019 ರ ಉಪಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಎರಡನೇ ಸ್ಥಾನ ಗಳಿಸಿತ್ತು.
2021ರಲ್ಲಿ, ಅಶ್ರಫ್ ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ 745 ಮತಗಳ ಅಲ್ಪ ಅಂತರದಿಂದ ಗೆದ್ದರು. 2016ರಲ್ಲಿ, ಸುರೇಂದ್ರನ್ ಯುಡಿಎಫ್‌ನ ಪಿ.ಬಿ. ಅಬ್ದುಲ್ ರಝಾಕ್ ವಿರುದ್ಧ ಕೇವಲ 89 ಮತಗಳಿಂದ ಸೋತಿದ್ದರು.
Courtesy : thenewsminute.com


