Homeಮುಖಪುಟಕಿಸಾನ್ ಕಮ್ಯೂನ್, ಯೂನಿವರ್ಸಿಟಿ ಆಫ್ ಇಂಡಿಯಾ: ಸರೋವರ್ ಬೆಂಕಿಕೆರೆ

ಕಿಸಾನ್ ಕಮ್ಯೂನ್, ಯೂನಿವರ್ಸಿಟಿ ಆಫ್ ಇಂಡಿಯಾ: ಸರೋವರ್ ಬೆಂಕಿಕೆರೆ

- Advertisement -

ಒಂದು ವಸಂತವನ್ನೇ ಮುಗಿಸಿ ಬೇಸಿಗೆಗೆ ಕಾಲಿಟ್ಟಿರುವ ರೈತರ ಹೋರಾಟ ಜಾಗತಿಕ ಮಟ್ಟದಲ್ಲಿ ದೊಡ್ಡ ಸದ್ದನ್ನು ಮಾಡಿದೆ. ಅಲ್ಲದೆ ವಿಶ್ವ ಮಟ್ಟದಲ್ಲಿ ನರೇಂದ್ರ ಮೋದಿ ನೇತೃತ್ವದ ಭಾರತದ ಒಕ್ಕೂಟ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ರಿಹಾನ್ನಾ, ಗ್ರೇಟಾ ಥನ್‌ಬರ್ಗ್‌ರಂತ ಸೆಲೆಬ್ರಿಟಿಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಆಡಳಿತ ವ್ಯವಸ್ಥೆಗೆ ನುಂಗಲಾರದ ತುತ್ತಾಗಿದೆ. ಈವರೆಗೂ ಪ್ರಧಾನಿ ಮೋದಿ ಕೃಷಿ ಕಾಯ್ದೆ-ರೈತರ ಹೋರಾಟದ ಕುರಿತು ಒಂದು ಪತ್ರಿಕಾ ಗೋಷ್ಠಿ ನಡೆಸದೇ ಇರುವುದು, ರೈತರೊಂದಿಗೆ ನೇರವಾಗಿ ಮಾತುಕತೆ ನಡೆಸದೇ ಇರುವುದರಿಂದ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ.

ದೆಹಲಿಯ ಚಳಿ ಮತ್ತು ಅಕಾಲಿಕ ಮಳೆಯ ನಡುವೆ, ಸುಮಾರು 250ಕ್ಕೂ ಹೆಚ್ಚು ರೈತರ ಬಲಿದಾನದ ನಡುವೆಯೂ ರೈತರ ಆಂದೋಲನ ಯಾವುದೇ ಅಳುಕಿಲ್ಲದೆ ಮುಂದುವರೆದಿದೆ. ಇದೀಗ ದೆಹಲಿಯಲ್ಲಿ ಬಿರುಬಿಸಿಲು ಶುರುವಾಗಿದೆ. ಟೆಂಟ್‌ಗಳಲ್ಲಿ 10-20 ನಿಮಿಷಕ್ಕಿಂತ ಹೆಚ್ಚುಕಾಲ ಇದ್ದರೆ ಯಾರಾದರೂ ಬೆವೆತು ನೆನೆಯುವುದು ನಿಶ್ಚಯ. ಇವೆಲ್ಲವನ್ನು ಮೀರಿ ರೈತ ಹೋರಾಟ ಮುಂದುವರೆದಿರುವುದು ದೇಶದ ಇತಿಹಾಸದಲ್ಲಿ ದಾಖಲಾಗುವ ಸಂಗತಿಯಾಗಲಿದೆ. ಫೆ.21 ರಿಂದ ಮಾರ್ಚ್ 1ರವರೆಗೆ ಕರ್ನಾಟಕ, ತಮಿಳುನಾಡು, ಆಂಧ್ರ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಂದ ದಕ್ಷಿಣ ಭಾರತ ಹೋರಾಟಗಾರರ ನಿಯೋಗ ದೆಹಲಿಯ ಟಿಕ್ರಿ, ಸಿಂಘು, ಗಾಜಿಪುರ್ ಮತ್ತು ಶಹಜಹಾನ್‌ಪುರ್‌ನ ನಾಲ್ಕು ಗಡಿಗಳ ಹೋರಾಟದಲ್ಲಿ ಭಾಗಿಯಾಗಿದ್ದ ಅನುಭವ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ, ಅನನ್ಯವಾದ ಈ ಹೋರಾಟದ ಅನುಭವಗಳನ್ನು ಪದಗಳಲ್ಲಿ ಕಟ್ಟಿಕೊಡಲೂ ಸಾಧ್ಯವಿಲ್ಲ. ಅದನ್ನು ಅನುಭವಿಸಬೇಕು, ಕಲಿಯಬೇಕು, ಆಚರಣೆಯಲ್ಲಿ ಇಳಿಸಬೇಕು ಎನ್ನುವುದೇ ಪಾಠ.

PC : Pratidhvani.com

ಈ ಕಾಲದ ಹೋರಾಟಗಳ ತಾಯಿ ಜಾತಿ ದೌರ್ಜನ್ಯ, ಜಿಎಸ್‌ಟಿ- ಡಿಮಾನಿಟೈಸೇಷನ್ ಹೊಡೆತ, ನಿರುದ್ಯೋಗದ ಏರಿಕೆ, ಕರಾಳ ಸಿಎಎ-ಎನ್‌ಆರ್‌ಸಿ, ಅತ್ಯಾಚಾರ, ಬೆಲೆ ಏರಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ, ಪ್ರಜಾತಂತ್ರ ಹಾಗೂ ಸ್ವಾತಂತ್ರ್ಯ ಸೂಚ್ಯಂಕದ ಕಳಪೆ ಪ್ರದರ್ಶನಗಳು, ಅತ್ಯಾಚಾರ, ಸ್ಕಾಲರ್‌ಶಿಪ್ ಕಡಿತದಂತಹ ಹಲವಾರು ದಮನಗಳಿಂದ ವಿದ್ಯಾರ್ಥಿ, ದಲಿತ ಯುವಜನರು ಹಾಗೂ ಜನಸಾಮಾನ್ಯರು ಕರಾಳ ದಿನಗಳನ್ನು ಎಣಿಸುವಂತಾಗಿತ್ತು. ಇಂತಹ ಕತ್ತಲ ಕಾಲದಲ್ಲಿ ಎಲ್ಲಾ ಹೋರಾಟಗಳಿಗೆ ಹೊಸ ದಿಕ್ಕನ್ನು ರೈತರ ಆಂದೋಲನ ನೀಡಿರುವುದು ಸುಳ್ಳಲ್ಲ. ಹೋರಾಟಗಳಿಂದ ನಿರೀಕ್ಷಿತ ಯಶಸ್ಸು ಸಿಗದೆ, ಬೇಡಿಕೆಗಳು ಪೂರೈಕೆಯಾಗದೆ ಸಿನಿಕರಾಗಿದ್ದ ಅದೆಷ್ಟೋ ಮನಸ್ಸುಗಳಿಗೆ ರೈತರ ಹೋರಾಟ ಶಕ್ತಿ ನೀಡಿದೆ. ಆಶಾವಾದಿಗಳಿಗೆ ಸ್ಫೂರ್ತಿ ಡಬಲ್ ಆಗಿದೆ.

ಮಿಲೆನಿಯಲ್ಸ್‌ಗಳಿಗೆ ಪ್ರಾಕ್ಟಿಕಲ್ಸ್ ಪಾಠ ಮಾಡುವ ರೈತಾಂದೋಲನ

70-80ರ ದಶಕದ ಹೋರಾಟಗಳನ್ನು ನೋಡಿ ಅನುಭವ ಇಲ್ಲದ 90ರ ಪೀಳಿಗೆಯವರು ಬೆಳೆದಿದ್ದೇ ಎಲ್.ಪಿ.ಜಿಯ ಹುಟ್ಟಿನೊಂದಿಗೆ, ಬಾಬ್ರಿ ಮಸೀದಿ ಧ್ವಂಸವಾಗುವುದರ ಜೊತೆಗೆ. ರಥಯಾತ್ರೆಗಳು, ಕೋಮುದ್ವೇಷಗಳು ಆಳವಾಗಿ ಬೇರೂರುವುದರ ಜೊತೆಗೆ. ಇಂತಹ ಮಿಲೆನಿಯಲ್ಸ್‌ಗಳಿಗೆ ಆಮೂಲಾಗ್ರ ಬದಲಾವಣೆಯ ಬಗ್ಗೆ ನಂಬಿಕೆ ಇರಬಹುದಾದರೂ ಕೋಮುದ್ವೇಷ, ಜಾತಿಯ ರೋಗಗ್ರಸ್ತ ಭಾರತದಲ್ಲಿ ಅಂತಹ ಕ್ರಾಂತಿ ಹೇಗೆ ಸಾಧ್ಯವಾದೀತು? ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತಿರುವಾಗ ಹೇಗೆ? ಎಂಬಿತ್ಯಾದಿ ಪ್ರಶ್ನೆ ಅನುಮಾನಗಳು ಇರಲು ಸಾಧ್ಯ. ಆದರೆ ದೆಹಲಿಯ ಗಡಿಗಳಲ್ಲಿ ಇರುವ ’ಕಿಸಾನ್ ಕಮ್ಯೂನ್’ ಇದಕ್ಕೆಲ್ಲಾ ಉತ್ತರ ಕೊಡುತ್ತದೆ. ಅಂಗಿ ಬಿಚ್ಚಿಸಿ ಜನಿವಾರ ನೋಡಿ ದೇವಸ್ಥಾನಗಳಿಗೆ ಪ್ರವೇಶ ಕೊಡುವುದು, ಜಾತಿ ಆಧಾರಿತ ಪಂಕ್ತಿಯಲ್ಲಿ ಊಟ ಬಡಿಸುವುದು, ಜಾತಿ ಮತ್ತು ಧರ್ಮಾಧಾರಿತ ಸಂಘಟನೆಗಳ ಸಮಾವೇಶಗಳು ಹೆಚ್ಚಾಗುತ್ತಿರುವುದನ್ನೇ ನೋಡಿರುವ ಸಮಯದಲ್ಲಿ, ಎಲ್ಲಾ ಜಾತಿ ಧರ್ಮದವರು ಸಂತ್ರಸ್ತರ ಪರವಾಗಿ, ನೊಂದವರ ಪರವಾಗಿ ಒಟ್ಟಾಗಿ ಹೋರಾಡುವುದು ಹೇಗೆ? ಅದರಲ್ಲೂ ಒಂದೇ ಉದ್ದೇಶಕ್ಕಾಗಿ ಮೂರು ತಿಂಗಳಿಗೂ ಹೆಚ್ಚುಕಾಲ ಜೊತೆಗಿದ್ದು ಹೋರಾಡುವುದು ಸಾಧ್ಯವೇ ಎಂಬುದು ಕಲ್ಪನೆಗೂ ಮೀರಿದ ವಿಷಯವಾಗಿತ್ತು.

ಆದರೆ ಈ ಕಿಸಾನ್ ಕಮ್ಯೂನ್ ಎಲ್ಲವನ್ನು ಸಾಧ್ಯವಾಗಿಸಿ ತೋರಿಸಿದೆ. ಮುಸ್ಲಿಂ-ಹಿಂದೂ-ಸಿಖ್ ಭಾಯಿಚಾರ ಲಂಗರ್‌ಗಳು ನಿಮಗೆ ದಂಡಿಯಾಗಿ ನೋಡಲು ಸಿಗುತ್ತದೆ. ಮುಸ್ಲಿಮನೊಬ್ಬ ರೋಟಿ ಬೇಯಿಸುತ್ತಿದ್ದರೆ, ಸಿಖ್ ಸಬ್ಜಿ ಮಾಡುತ್ತಾರೆ. ಹಿಂದೂ ಬಡಿಸಿದರೆ ಮತ್ತೊಬ್ಬರು ಕಸ ಬಳಿಯುತ್ತಾರೆ. ಹೀಗೆ ಎಲ್ಲರೂ ಎಲ್ಲಾ ಕೆಲಸ ಮಾಡುತ್ತಾರೆ ಮತ್ತು ಒಟ್ಟಿಗೇ ಒಂದೇ ಪಂಕ್ತಿಯಲ್ಲಿ ಊಟ ಮಾಡುತ್ತಾರೆ. ಒಟ್ಟಿಗೇ ಮುಷ್ಟಿ ಬಿಗಿಹಿಡಿದು ’ಕಿಸಾನ್ ಏಕ್ತಾ ಜಿಂದಾಬಾದ್’ ಎಂದು ಕೂಗುತ್ತಾರೆ. ಈ ದೃಶ್ಯಗಳನ್ನು ನೋಡುವ ನಮ್ಮಂತ ಯುವಜನರಿಗೆ ಕ್ರಾಂತಿಯ ಬಗೆಗಿನ ಅನುಮಾನಗಳೆಲ್ಲವೂ ಆ ಘೋಷಣೆಯ ಸದ್ದಿನಲ್ಲಿ ಮಾಯವಾಗಿಬಿಡುತ್ತದೆ!

ಧರ್ಮದ ಬಗೆಗಿನ ಹೊಸ ಕಲ್ಪನೆ

ಬುದ್ಧ ಧರ್ಮವನ್ನು ಪ್ರೀತಿ, ಮಮತೆ ಮತ್ತು ಕರುಣೆ ಎಂದರೆ, ಬಸವಣ್ಣ ದಯೆಯೇ ಧರ್ಮದ ಮೂಲವೆಂದರು. ರೈತಾಂದೋಲನದಲ್ಲಿ ಧರ್ಮವೆಂದರೆ ಸೇವೆ ಮತ್ತು ಸೇವೆ ಮಾತ್ರ! ಪ್ರತಿ 50-100 ಮಿಟರ್‌ಗೆ ಒಂದು ಲಂಗರ್‌ಅನ್ನು (ಅನ್ನ ದಾಸೋಹ) ನೀವು ಹೋರಾಟದ ಜಾಗದಲ್ಲಿ ನೋಡಬಹುದು. ಅಲ್ಲಿಗೆ ಆಹಾರ ಸಾಮಗ್ರಿಗಳು ತರಕಾರಿಗಳನ್ನು ರೈತರು, ಮತ್ತಿತರ ಉದ್ಯೋಗಸ್ಥರು ನಿರಂತರವಾಗಿ ತಂದುಕೊಡುತ್ತಿರುತ್ತಾರೆ. ಅವುಗಳ ಅಗತ್ಯವಿರುವ ಯಾರಾದರೂ ಅವನ್ನು ಬಳಸಿಕೊಳ್ಳಬಹುದು. ಬಹುತೇಕ ಸಿಖ್ ಸಮುದಾಯದ ಗುರುದ್ವಾರಗಳಿಂದ ಹಾಗೂ ಮುಸ್ಲಿಂ ಸಮುದಾಯದವರು ಈ ಲಂಗರ್‌ಗಳನ್ನು ನಡೆಸುತ್ತಿದ್ದಾರೆ. ನೀವು ಅಲ್ಲಿ ಊಟ ಬಡಿಸಿದವರಿಗೆ ಧನ್ಯವಾದ ಹೇಳಿದರೆ ಅವರು ಮರುಕ್ಷಣವೇ “ಧನ್ಯವಾದ ಹೇಳಬೇಡಿ, ನಾವಲ್ಲ ಕೊಟ್ಟವರು ದೇವರು ಕೊಟ್ಟಿದ್ದು, ಸೇವೆ ಮಾಡಬೇಕಿರುವುದು ನಮ್ಮ ಕರ್ತವ್ಯವಷ್ಟೆ” ಎಂದು ಹೇಳುತ್ತಾರೆ. ಊಟ ಬಡಿಸುವವರ, ತರಕಾರಿ ಕೊಡುವವರ ಅಥವಾ ಲಂಗರ್‌ಗಳ ಆಯೋಜಕರ ಹೆಸರನ್ನು ಕೇಳಿದರೆ ಹೆಸರು ಮುಖ್ಯವಲ್ಲ ದೇವರು ಕೊಟ್ಟಿದ್ದು ಎಂದು ಹೇಳಿ ಮುಂದೆ ಹೋಗುತ್ತಾರೆಯೇ ಹೊರತು ’ನಾನೇ ಕೊಡಿಸಿದ್ದು ಎಂದು ಹೇಳುವ ಒಬ್ಬ ವ್ಯಕ್ತಿಯನ್ನು ನೀವು ನೋಡಲು ಸಾಧ್ಯವಿಲ್ಲ. ಅವರೆಲ್ಲರ ಪ್ರಕಾರ ಈ ಸೇವೆಯೇ ನಿಜವಾದ ಧರ್ಮ.

PC : TV9 Kannada

ಈ ಹೋರಾಟದಲ್ಲಿ ಹಲವಾರು ಧರ್ಮಗುರುಗಳೂ ಭಾಗಿಯಾಗಿದ್ದಾರೆ. ಧರ್ಮವೇ ಮುಖ್ಯ ಉಳಿದಿದ್ದು ಸೆಕೆಂಡರಿ ಎಂದು ನಂಬಿದ್ದ ಕಟ್ಟರ್ ಧರ್ಮವಾದಿಗಳು ಕೂಡ ಇದ್ದಾರೆ. ಇವರೆಲ್ಲರೂ ಸಂಯುಕ್ತ ಕಿಸಾನ್ ಮೋರ್ಚಾದ ಮುಖ್ಯಭಾಗವಾಗಿದ್ದಾರೆ ಕೂಡ. ಎಷ್ಟೋ ಬಾರಿ ಸಂಘಟನೆಯೊಂದಕ್ಕೆ ಧರ್ಮದ ಹೆಸರಿದೆ ಎನ್ನುವ ಕಾರಣಕ್ಕೆ ಅವರು ಬೇಡ, ಇವರು ಬೇಡ ಎಂದು ಜಗಳವಾಡುತ್ತೇವೆ. ಯಾರಿರಬೇಕು ಯಾರು ಬೇಡ ಎನ್ನುವುದನ್ನೇ ನಾವು ಮುಖ್ಯ ವಿಚಾರ ಮಾಡಿಕೊಂಡು ದಿನಗಟ್ಟಲೇ ಚರ್ಚೆ ಆಗುವುದುಂಟು. ಆದರೆ ದೆಹಲಿಯ ಹೋರಾಟವು ಎಲ್ಲರನ್ನೂ ಒಳಗೊಂಡಿದೆ. ಧರ್ಮದ ಕಟ್ಟರ್‌ವಾದಿಗಳು ಸಹ ಈ ಹೋರಾಟದಿಂದ ಸುಧಾರಣೆಯಾಗುತ್ತಿದ್ದಾರೆ ಮತ್ತು ಆಗಿದ್ದಾರೆ ಕೂಡ.

ಆಂದೋಲನಕ್ಕೆ ಹಣ ಎಲ್ಲಿಂದ ಬರುತ್ತಿದೆ?

ನೂರು ದಿನಗಳ ಹೊಸ್ತಿಲಲ್ಲಿರುವ ಆಂದೋಲನವು ಇಷ್ಟು ದಿನಗಳ ಕಾಲ ಯಾವ ಹಣದಿಂದ ನಡೆದುಕೊಂಡು ಬಂದಿದೆ? ಇದಕ್ಕೆ ಹೊರದೇಶಗಳಿಂದ ಹಣ ಬರುತ್ತಿದೆಯೇ? ಎಂದು ಮಾರಿಕೊಂಡ ಮಾಧ್ಯಮಗಳು ಅಪಪ್ರಚಾರ ಮಾಡಿದವು. ಇವೆಲ್ಲವೂ ಸುಳ್ಳು ಸುದ್ದಿಗಳು ಎಂದು ಸ್ವತಃ ಎಬಿಪಿ ಸುದ್ದಿವಾಹಿನಿಯ ವರದಿಗಾರ ರಾಜೀನಾಮೆ ನೀಡಿ ಹೊರಬಂದಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಆಂದೋಲನದಲ್ಲಿ ಹಣ ಎಂಬುದು ಅಷ್ಟು ಪ್ರಮುಖವಲ್ಲದ ವಿಚಾರವಾಗಿದೆ. ಇಡೀ ಆಂದೋಲನವು ನಡೆಯುತ್ತಿರುವುದು ಅಪಾರ ಮಾನವ ಪ್ರೀತಿಯನ್ನು ಹೃದಯದಲ್ಲಿ ಇಟ್ಟುಕೊಂಡು ಕೆಲಸ ಮಾಡುತ್ತಿರುವ ಸ್ವಯಂಸೇವಕರಿಂದ. ಹೋರಾಟ ಸರಾಗವಾಗಿ ನಡೆಯಲು ಸಾವಿರಾರು ಜನ ನಿತ್ಯ ಕಸ ಗುಡಿಸುತ್ತಾರೆ, ಕಕ್ಕಸ್ಸು ತೊಳಿಯುತ್ತಾರೆ, ನೂರಾರು ಜನ ಹೆಣ್ಣುಮಕ್ಕಳು ಕೂಡ ಸ್ವಯಂಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಎಲ್ಲರೂ ಕೂಡ ಇದನ್ನು ಒಂದು ಕೆಲಸದಂತೆ ಭಾವಿಸದೆ ಸೇವೆ ಎಂದು ಕರೆಯುತ್ತಾರೆ. ಇದು ನಾವು ಮಾಡಬೇಕಾದ ಕರ್ತವ್ಯವೆಂದು ಭಾವಿಸುತ್ತಾರೆ. ಈ ವಾಲಂಟೀಯರ್‍ಸ್‌ಗಳೇ ಹೋರಾಟದ ಜೀವಚೈತನ್ಯ, ಹೊರತು ಹಣವಲ್ಲ.

ದೇಶದ ಪ್ರತಿಯೊಂದು ರಾಜ್ಯದಿಂದ ದಿನಸಿ, ತರಕಾರಿ ಇತ್ಯಾದಿ ವಸ್ತುಗಳು ನಿತ್ಯ ಹರಿದುಬರುತ್ತಿದೆ. ಕೇರಳದ ರೈತರು ಡ್ರೈ ಫ್ರೂಟ್ಸ್‌ಗಳನ್ನು ಲಾರಿಯಲ್ಲಿ ತುಂಬಿಸಿ ಕಳಿಸಿದರೆ, ಛತ್ತೀಸ್‌ಘಡದ ರೈತರು ಜೇನುತುಪ್ಪವನ್ನು ಹಂಚಿದ್ದಾರೆ. ಪಂಜಾಬಿನ ಯುವಕರು ತಾವು ಏನೂ ಕೊಡಲು ಸಾಧ್ಯವಿಲ್ಲವಲ್ಲ ಎಂದು ಭಾವಿಸಿ ಹೋರಾಟದ ಜಾಗದಲ್ಲಿ ಇರುವ ಆಸ್ಪತ್ರೆಯ ಟೆಂಟಿನಲ್ಲಿ ರಕ್ತದಾನ ಮಾಡಿ ಹೋಗಿದ್ದಾರೆ. ಹಲವಾರು ಪಂಜಾಬಿನ ಅನಿವಾಸಿ ಭಾರತೀಯರು ಸಹ ಹೋರಾಟವನ್ನು ಬೆಂಬಲಿಸುತ್ತಿರುವುದು ನಿಜ. ಯಾಕೆಂದರೆ ಅವರ ತಂದೆ ತಾಯಿ ಸಂಬಂಧಿಕರು ಹೋರಾಟದಲ್ಲಿ ಕೂತಿದ್ದಾರೆ. ನಿತ್ಯ ಹೋರಾಟದ ಜಾಗದಿಂದ ಪ್ರಯಾಣಿಸುವ ವಿದ್ಯಾರ್ಥಿಗಳು, ಉದ್ಯೋಗಸ್ಥರು, ದಾರಿಹೋಕರು ಎಲ್ಲರೂ ಕೂಡ ಇಲ್ಲಿನ ಲಂಗರ್‌ನಲ್ಲಿ ಊಟ ಮಾಡಿಯೇ ಮುಂದೆ ಸಾಗುತ್ತಾರೆ. ಸ್ಥಳೀಯ ಭಿಕ್ಷುಕರು, ಚಿಂದಿ ಆಯುವವರಿಗೆ ವಸತಿ ಮತ್ತು ಊಟ ಕೂಡ ಇಲ್ಲಿ ದೊರೆಯುತ್ತಿದೆ. ಚಿಂದಿ ಆಯುವ ಮಕ್ಕಳನ್ನು ನಾವು ದಶಕಗಳಿಂದ ನೋಡಿಕೊಂಡು ಬಂದಿದ್ದೇವೆ. ಹೋರಾಟದ ಟೆಂಟಿನ ಬಳಿ ಈಗ ಹೋಗಿ ನೋಡಿ, ಈಗ ಮಕ್ಕಳು ನಿತ್ಯ ಸ್ನಾನ ಮಾಡಿಕೊಂಡು, ಹೊಟ್ಟೆ ತುಂಬಾ ಊಟ ಮಾಡಿ ಚಿಂದಿ ಆಯಲು ಹೋಗದೇ ಎಲ್ಲಾ ಗಡಿಗಳಲ್ಲಿ ಇರುವ ಕಿಸಾನ್ ಆರ್ಮಿ ಪಾಠ್‌ಶಾಲಾ ಮತ್ತು ಸಾವಿತ್ರಿ ಫುಲೆ ಪಾಠಶಾಲಗಳಲ್ಲಿ ಓದಲು ಪ್ರಾರಂಭಿಸಿದ್ದಾರೆ!

ಇನ್ನೂ ನಿಮಗೆ ಹೊರದೇಶಗಳಿಂದ ಹಣ ಬರುತ್ತಿದೆಯೇ ಎಂದು ರೈತ ಹೋರಾಟಗಾರರನ್ನು ಕೇಳಿದಾಗ “ಹೊರದೇಶದಿಂದ ಯಾರು ಕೊಡುತ್ತಿದ್ದಾರೆ? ಹಾಗೆ ಕೊಡುತ್ತಿದ್ದರೆ ದುಡ್ಡೇನು ನೆಡದುಕೊಂಡು ಬರುವುದಿಲ್ಲವಲ್ಲ, ಅಕೌಂಟಿಗೆ ಬರುತ್ತೆ ತಾನೆ? ಹೋರಾಟ ನಿರತ ಎಲ್ಲಾ ರೈತರ ಅಕೌಂಟ್‌ಅನ್ನು ತನಿಖೆ ಮಾಡಿ ನೋಡಿ, ಹಾಗೆಯೇ ಪಿಎಮ್ ಕೇರ್ಸ್‌ನ ಅಕೌಂಟ್ ಅನ್ನು ತನಿಖೆ ಮಾಡಿ ಯಾರ ದುಡ್ಡು ಎಲ್ಲಿ ಹೋಗುತ್ತಿದೆ, ಯಾರು ಭ್ರಷ್ಟರು ಯಾರು ದೇಶದ್ರೋಹಿಗಳು ಎಂಬ ಕುರಿತು ಸರಿಯಾದ ಮತ್ತು ಸಮಗ್ರ ತನಿಖೆಯಾಗಲಿ. ನಾವು ಸಿದ್ಧರಿದ್ದೇವೆ ಮತ್ತು ಪಾರದರ್ಶಕರಾಗಿದ್ದೇವೆ.” ಎಂದು ಹೋರಾಟ ನಿರತ ರೈತರು ಸವಾಲು ಹಾಕುತ್ತಾರೆ.

ಹೊಲಗಳಲ್ಲಿ ಕೆಲಸ ಮಾಡಲಿದ್ದಾರೆ ಭಾರತದ ಸೈನಿಕರು

ರಾಜಕಾರಣಿಗಳ ಮಕ್ಕಳು ಹೊರದೇಶದಲ್ಲಿ ಇದ್ದರೆ ರೈತರ ಮಕ್ಕಳು ಸೈನ್ಯಕ್ಕೆ ಸೇರುವುದು ಎಲ್ಲರಿಗೂ ತಿಳಿದ ವಿಷಯ. ಗಡಿ ಕಾಯುತ್ತಿರುವ ಸೈನಿಕರು ರಜೆಯ ಮೇರೆಗೆ ತಮ್ಮ ತಂದೆ ತಾಯಿಯರನ್ನು ನೋಡಲು ಹೋರಾಟದ ಸ್ಥಳಕ್ಕೆ ಬಂದು ಕಣ್ಣೀರು ಹಾಕುತ್ತಿರುವುದು ಈಗ ವೈರಲ್ ಆಗಿದೆ. ಇದರ ಬೆನ್ನಲ್ಲೇ ಸೈನಿಕರು ತಮ್ಮ ಪೋಷಕರನ್ನು ನೋಡಲು ಹೋರಾಟದ ಸ್ಥಳಕ್ಕೆ ಹೋಗುವ ಹಾಗಿಲ್ಲ ಎಂದು ಸೈನ್ಯಕ್ಕೇ ಸರ್ಕಾರ ಎಚ್ಚರಿಕೆ ನೀಡಿದೆ. ಇದರ ಕುರಿತು ಹೋರಾಟದಲ್ಲಿ ಭಾಗಿಯಾಗಿರುವ ಸೈನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೈನ್ಯದಲ್ಲಿ ಸೇವೆ ಸಲ್ಲಿಸಿರುವ ಸುಬೇದಾರ್ ಜಯ್‌ಪ್ರಕಾಶ್ ಮಿಶ್ರ ಅವರು ಸೈನಿಕರನ್ನು ಉದ್ದೇಶಿಸಿ “ನೀವು ಈ ಬಾರಿ ರಜೆಯಲ್ಲಿ ನೇರ ಮನೆಗಳಿಗೆ ಹೋಗಿ ಹೊಲದಲ್ಲಿ ಬೆಳೆದು ನಿಂತಿರುವ ಭತ್ತಗಳನ್ನು ಕೊಯ್ಯಲು ಸಿದ್ಧರಾಗಿ, ಏಕೆಂದರೆ ನಿಮ್ಮ ತಂದೆ ತಾಯಿ ಇಲ್ಲಿ ಹೋರಾಟದಲ್ಲಿ ಇದ್ದಾರೆ ಮತ್ತು ಅವರು ಮನೆಗೆ ಈಗಲೇ ಬರುವವರಲ್ಲ ಎಂದು ಕರೆ ನೀಡಿದ್ದಾರೆ. ಈ ಬಾರಿ ಹೊಲಗಳಲ್ಲಿ ಸೈನಿಕರು ಇರುತ್ತಾರೆ ಎಂದೂ ತಿಳಿಸುತಿದ್ದಾರೆ.

ಒಟ್ಟಾರೆ ದೇಶವು ಹಲವು ತಾರತಮ್ಯಗಳಿಂದ ಒಡೆದು ಹಂಚಿಹೋಗಿರುವ ಸಂದರ್ಭದಲ್ಲಿ ಕಿಸಾನ್ ಕಮ್ಯೂನ್‌ನಲ್ಲಿ ಲಕ್ಷಾಂತರ ಯುವಜನರು, ಮಹಿಳೆಯರು, ದಲಿತರು, ಮೇಲ್ಜಾತಿಯವರು, ಹಿಂದುಳಿದವರು, ಸೈನಿಕರು, ಪ್ರಜ್ಞಾನವಂತ ಪತ್ರಕರ್ತರು, ಕ್ರೀಡಾಪಟುಗಳು ಎಲ್ಲರೂ ಒಗ್ಗಟ್ಟಿನಿಂದ ಒಂದು ಮಹಾನ್ ಉದ್ದೇಶಕ್ಕಾಗಿ ಬಿಗಿ ಮುಷ್ಟಿ ಹಿಡಿದು ನಿಂತಿದ್ದಾರೆ. ರೈತರಿಗೆ ಮಾರಕವಾಗಿರುವ ಮೂರು ಕರಾಳ ಕಾಯ್ದೆಗಳನ್ನು ಸರ್ಕಾರ ಹಿಂಪಡೆಯುವವರೆಗೆ ಹೋರಾಟ ಮುಂದುವರೆಸುವುದಾಗಿ ದೃಢ ನಿಶ್ಚಯ ತಳೆದಿದ್ದಾರೆ. ಇದು ಎಷ್ಟು ಗಟ್ಟಿ ಮತ್ತು ದೃಢವಾಗಿದೆಯೋ ಅಷ್ಟೇ ಶಾಂತಿ ಮತ್ತು ವಿನಯವನ್ನು ಮೈಗೂಡಿಸಿಕೊಂಡಿದೆ. ಹೆಸರು, ನಾಯಕತ್ವ, ಬ್ಯಾನರ್‌ಗಳ ಯಾವ ಅಪೇಕ್ಷೆಯೂ ಇಲ್ಲದೆ ವಿನಯ ಮತ್ತು ಪರಿಶ್ರಮದಿಂದ ದೇಶವನ್ನು ಕಟ್ಟುವ ಕಾರ್ಯದಲ್ಲಿ ಹೇಗೆ ತೊಡಗಿಸಿಕೊಳ್ಳಬಹುದೆಂಬ ದೊಡ್ಡ ಪಾಠವನ್ನು ಈ ಹೋರಾಟದ ಯೂನಿವರ್ಸಿಟಿ ಹೇಳಿಕೊಡುತ್ತದೆ. ಹೋರಾಟದ ವಿದ್ಯಾರ್ಥಿಗಳು ಅವಕಾಶ ಸಿಕ್ಕರೆ ಒಮ್ಮೆ ಈ ವಿಶ್ವವಿದ್ಯಾಲಯಕ್ಕೆ ಭೇಟಿ ಕೊಡಲೇಬೇಕು. ಕರ್ನಾಟಕದಲ್ಲಿ ರೈತಾಂದೋಲನ ಗಟ್ಟಿಗೊಳಿಸುವ ಕೆಲಸವೇ ಈ ಸದ್ಯಕ್ಕೆ ನಾವು ದೇಶಕ್ಕೆ ಸಲ್ಲಿಸಬಹುದಾದ ಚಿಕ್ಕ ಸೇವೆ.

ಸರೋವರ್ ಬೆಂಕಿಕೆರೆ
ಸಾಮಾಜಿಕ ಕಾರ್ಯಕರ್ತರು, ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ರಾಜ್ಯ ಸಂಚಾಲಕರು


ಇದನ್ನೂ ಓದಿ: ರೈತ ಹೋರಾಟ: ಕಡು ಬೇಸಿಗೆ ಎದುರಿಸಲು ಸಿದ್ದರಾಗುತ್ತಿದ್ದಾರೆ ಅನ್ನದಾತರು!

ಸರೋವರ್ ಬೆಂಕಿಕೆರೆ
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬೆಂಗಳೂರು: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ಪರೇಡ್‌ ಮೈದಾನ ಸಜ್ಜು, ಸಾರ್ವಜನಿಕರಿಗಿಲ್ಲ ಪ್ರವೇಶ

0
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಬೆಂಗಳೂರಿನ  ಮಹಾತ್ಮ ಗಾಂಧಿ ರಸ್ತೆಯ ಮಾಣಿಕ್ ಷಾ ಪರೇಡ್‌ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್‌ಗೆ ಸಾರ್ವಜನಿಕರಿಗೆ ಅವಕಾಶ ನೀಡಿಲ್ಲ. ಆಹ್ವಾನ ಪತ್ರಗಳು ಮತ್ತು ಪಾಸ್ ಹೊಂದಿರುವವರಿಗೆ ಮಾತ್ರ ಪರೇಡ್‌ನಲ್ಲಿ...
Wordpress Social Share Plugin powered by Ultimatelysocial
Shares