ಕೊಪ್ಪಳದ ಕಾರಟಗಿ ತಾಲೂಕಿನ ನಾಗನಕಲ್ಲ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸಿಂಧೋಳ ಸಮುದಾಯದ ಯುವಕ ದೇವಾಸ್ಥಾನ ಪ್ರವೇಶಿಸಿದಕ್ಕೆ ದಂಡ ಹಾಕಿದ್ದ ಪ್ರಕರಣವನ್ನು ಬಯಲಿಗೆಳೆದ ವರದಿಗಾರನಿಗೆ ಜೀವಭಯ ಇದ್ದು, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.
ಸ್ಥಳೀಯ ಸುದ್ದಿವಾಹಿನಿ ಜಿಬಿ ನ್ಯೂಸ್ ವರದಿಗಾರ ಸುಂದರರಾಜ್, ತಮಗೆ ಜೀವ ಭಯ ಇದೆ ಎಂದು ರಕ್ಷಣೆ ನೀಡುವಂತೆ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸುದ್ದಿವಾಹಿನಿಯ ಸುದ್ದಿ ಸಂಪಾದಕರು ಮತ್ತು ದಲಿತ ಮುಖಂಡರ ಜೊತೆಗೆ ತೆರಳಿ ಮನವಿ ಸಲ್ಲಿಸಿದ್ದಾರೆ.
ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಸಿಂಧೋಳ ಸಮುದಾಯದ ಯುವಕ ಮಾರೆಪ್ಪ ಮಹಾಲಕ್ಷ್ಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ದಲಿತ ಯುವಕ ದೇವಸ್ಥಾನಕ್ಕೆ ತೆರಳಿದ್ದಕ್ಕೆ ದೇವಸ್ಥಾನದ ಆಡಳಿತ ಮಂಡಳಿ 11 ಸಾವಿರ ರೂಪಾಯಿ ದಂಡ ಹಾಕಿದ್ದ ಪ್ರಕರಣ ತಡವಾಗಿ ಬೆಳಕಿಗೆ ಬಂದಿತ್ತು. ಇದನ್ನು ಸೆ.24 ರಂದು ಜಿಬಿ ನ್ಯೂಸ್ ವರದಿಗಾರ ಸುಂದರರಾಜ್ ಬೆಳಕಿಗೆ ತಂದಿದ್ದರು.
ಇದನ್ನೂ ಓದಿ: ಹಾಸನ: ದಿಂಡಗನೂರಿನಲ್ಲಿ ಮೊದಲ ಬಾರಿಗೆ ದೇವಾಲಯ ಪ್ರವೇಶಿಸಿದ ದಲಿತರು: ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥಿತಿ
ಸ್ಥಳೀಯರಿಂದ ದೂರವಾಣಿ ಕರೆ ಮೂಲಕ ಮಾಹಿತಿ ಪಡೆದಿದ್ದ ಸುಂದರರಾಜ್ ಅವರು ಸ್ಥಳಕ್ಕೆ ಭೇಟಿ ನೀಡಿ, ಸ್ಥಳಿಯರನ್ನು ಮಾತಾಡಿಸಿ, ವಿವರಗಳನ್ನು ವಿಡಿಯೋ ಮೂಲಕ ದಾಖಲು ಮಾಡಿಕೊಂಡು ಈ ಬಗ್ಗೆ ಸುದ್ದಿ ಮಾಡಿದ್ದರು. ಇದರಿಂದ ಮುಖ್ಯವಾಹಿನಿಯ ಮಾಧ್ಯಮಗಳು ಗಮನ ಕೊಟ್ಟವು. ಇದರ ಜೊತೆಗೆ ಪೊಲೀಸ್ ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ಅಸ್ಪೃಶ್ಯತೆ ಆಚರಣೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಘಟನೆ ಬಗ್ಗೆ ನಾನುಗೌರಿ.ಕಾಂ ಜೊತೆಗೆ ಮಾಹಿತಿ ಹಂಚಿಕೊಂಡಿರುವ ಜಿಬಿ ನ್ಯೂಸ್ ವರದಿಗಾರ ಸುಂದರರಾಜ್, ’ನಾನು ನಾಗನಕಲ್ ಪ್ರಕರಣವನ್ನು ಹೊರಗೆಳೆದ ಬಳಿಕ, ಕಳೆದೆರಡು ದಿನಗಳಿಂದ ಅಪರಿಚಿತ ವಾಹನಗಳು ನನ್ನ ವಾಹನವನ್ನು ಹಿಂಬಾಲಿಸುತ್ತಿವೆ. ಹೀಗಾಗಿ ನಾನು ಆತಂಕಗೊಂಡು ಪೊಲೀಸರಿಗೆ ಮನವಿ ಸಲ್ಲಿಸಿದ್ದೇನೆ. ನನಗೆ ಯಾರು ಕರೆ ಮಾಡಿ ಅಥವಾ ಎದುರು ಬಂದು ಬೆದರಿಕೆ ಹಾಕಿಲ್ಲ. ಆದರೆ, ನಾನು ಓಡಾಡುವಾಗ ಬೈಕ್‌ನಲ್ಲಿ ಹಿಂಬಾಲಿಸಿದ ಅನುಭವ ಆಯಿತು. ಮುನ್ನೆಚ್ಚರಿಕೆಯಾಗಿ ನಾನು ದೂರು ನೀಡಿದ್ದೇನೆ” ಎಂದಿದ್ದಾರೆ.
ಇನ್ನು ವರದಿಗಾರನಿಗೆ ಕರ್ನಾಟಕ ಜನಶಕ್ತಿ, ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ, ಮಹಿಳಾ ಮುನ್ನಡೆ, ಕರ್ನಾಟಕ ವಿದ್ಯಾರ್ಥಿ ಸಂಘಟನೆ, ಕರ್ನಾಟಕ ಶ್ರಮಿಕ ಶಕ್ತಿ, ಕರ್ನಾಟಕ ಕೋಮು ಸೌಹಾರ್ದತೆ ವೇದಿಕೆ ಬೆಂಬಲ ನೀಡಿವೆ.
“ಸಾಮಾಜಿಕ ಅವ್ಯವಸ್ಥೆ ಬಗ್ಗೆ ವರದಿ ಮಾಡಿದ ಜಿಬಿ ನ್ಯೂಸ್ ಟೀಮ್‌ಗೆ ರಕ್ಷಣೆ ನೀಡುವುದು ಅವರ ಬೆಂಬಲಕ್ಕೆ ನಿಲ್ಲುವುದು ನಮ್ಮೆಲ್ಲರ ಜವಾಬ್ದಾರಿ ಕೂಡ. ಪ್ರಾಮಾಣಿಕ ಮಾಧ್ಯಮ ಮಿತ್ರರ ಜೊತೆಗೆ ನಾವಿದ್ದೇವೆ” ಎಂದು
ಹೋರಾಟಗಾರ ಕರಿಯಪ್ಪ ಗುಡಿಮನಿ ಹೇಳಿದ್ದಾರೆ.
ಕಾರಟಗಿ ತಾಲೂಕಿನ ನಾಗನಕಲ್ ಗ್ರಾಮದ ಸಿಂಧೋಳ ಸಮುದಾಯದ ಯುವಕ ಮಾರೆಪ್ಪ ದೇವಸ್ಥಾನಕ್ಕೆ ಹೋಗಿ ತಾನೇ ಪೂಜೆ ಸಲ್ಲಿಸಿ ಬಂದಿದ್ದರಿಂದ ದೇವಸ್ಥಾನ ಮೈಲಿಯಾಗಿದೆ ಎಂದು ದೇವಾಲಯ ಆಡಳಿತ ಮಂಡಳಿಯ ಪ್ರಮುಖರು ಮೈಲಿಗೆ ನಿವಾರಣೆ, ಶುದ್ಧೀಕರಣ ಮತ್ತು ಪಶ್ಚಾತಾಪ ಸೇರಿ ಒಟ್ಟು 5 ಲಕ್ಷ ದಂಡ ಕಟ್ಟುವಂತೆ ಆದೇಶಿಸಿದ್ದರು ಎನ್ನಲಾಗಿದೆ. ದಂಡದ ಮೊತ್ತ ಹೆಚ್ಚಾಗಿದ್ದಕ್ಕೆ ಕೆಲವರು ಆಕ್ಷೇಪಿಸಿದ್ದರಿಂದ ಕೊನೆಗೆ 11 ಸಾವಿರ ದಂಡ ಕಟ್ಟಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲಾಗಿತ್ತು ಎಂದು ವರದಿಯಾಗಿದೆ. ಈ ಸಂಬಂಧ ದೇವಸ್ಥಾನದ ಪೂಜಾರಿ ಸೇರಿದಂತೆ ಆಡಳಿತ ಮಂಡಳಿಯ ಒಟ್ಟು 8 ಜನರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಕೊಪ್ಪಳದಲ್ಲಿ ಮತ್ತೊಂದು ಅಸ್ಪೃಶ್ಯತಾ ಆಚರಣೆ: ದೇಗುಲ ಪ್ರವೇಶಿಸಿದ ದಲಿತ ಯುವಕನಿಗೆ ದಂಡ, 8 ಜನರ ವಿರುದ್ಧ ಪ್ರಕರಣ


