‘ನೀರಿನಿಂದ ಮಾಡಿದ ನೀರು’ ಸಿಗುತ್ತದೆ, ನೀರಿನಿಂದ ಮಾಡಿದ ನೂರಾರು ಬಗೆಯ ತಂಪು ಪಾನೀಯಗಳು ಸಿಗುತ್ತವೆ, ನೀರಿನಿಂದಲೇ ಮಾಡಿದ ಆದರೆ ನೀರಲ್ಲದ ಮದ್ಯ ಎಲ್ಲೆಂದರಲ್ಲಿ ಸಿಗುತ್ತದೆ, ಆದರೆ ಬಹುಜನಕ್ಕೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಇದಲ್ಲವೆ ವಿಚಿತ್ರ! ಶುದ್ಧಗಾಳಿ, ನೀರು ಮತ್ತು ಆಹಾರ ಈ ಭೂಮಿಯ ಮೇಲಿನ ಎಲ್ಲ ಜೀವಿಗಳಿಗೂ ಸಿಗಬೇಕಾದದ್ದು ನ್ಯಾಯ ಎಂಬ ವಿಚಾರವೇ ಪಕ್ಕಕ್ಕೆ ಸರಿದಿದೆ, ಗಾಳಿಯೊಂದನ್ನು ಹೊರತುಪಡಿಸಿ ಮಿಕ್ಕೆಲ್ಲಾ ಪ್ರಾಕೃತಿಕ ಸಂಪತ್ತನ್ನು ಬಚ್ಚಿಟ್ಟು, ಬಳಸಲಾಗುತ್ತಿದೆ. ಹಿಂದಿನ ಕಾಲಕ್ಕೂ ಈಗಿನ ಕಾಲಕ್ಕೂ ರೂಪ ಮತ್ತು ತಂತ್ರಗಳಲ್ಲಿ ಬದಲಾವಣೆಗಳಾಗಿರಬಹುದು ಅಷ್ಟೆ. ನನಗೆ ನಮ್ಮ ನೀರಿನ ಧಾರ್ಮಿಕ, ಸಾಮಾಜಿಕ ಸಂಸ್ಕೃತಿಗಳಿಗಿಂತಲೂ ವಿಕೃತಿಗಳ ಪರಿಶೀಲನೆ ಮುಖ್ಯವೆನಿಸುತ್ತದೆ.
ಭೂಮಿ ಮೇಲಣ ನೀರಿನ ಧರ್ಮದ ಪ್ರಕಾರ ಅದು ತನ್ನ ಮಟ್ಟವನ್ನಷ್ಟೆ ಕಾಯ್ದುಕೊಳ್ಳುವುದಿಲ್ಲ. ಸಣ್ಣಪುಟ್ಟ ಪ್ರಾಣಿ ಪಕ್ಷಿಗಳಾದಿಯಾಗಿ ಎಲ್ಲಾ ಜೀವಿಗಳಿಗೂ ಸಿಗುವಂತೆ ದ್ರವ, ಘನ, ಆವಿಯ ರೂಪದಲ್ಲಿರುತ್ತದೆ. ಭೂಮಿಯ ಮೇಲೂ ಭೂಮಿಯ ಒಳಗೂ ನೀರು ಇರುತ್ತದೆ, ಆಕಾಶದಿಂದ ಸುರಿಯುತ್ತದೆ. ವಾತಾವರಣದಲ್ಲೂ ಸಂಚರಿಸುತ್ತಿರುತ್ತದೆ. ಹೀಗಾಗಿ ನೀರು ಜೀವ ಜಲವಾಗಿ ಹಬ್ಬಿದೆ. ಇದು ನೀರಿನ ಧರ್ಮ.

ಧರ್ಮ ಹೇಗಿದೆ ನೋಡಿ, ನೀರು ಪವಿತ್ರಜಲ, ಈ ಪವಿತ್ರ ಜಲದ ಮೂಲವನ್ನು ಎಲ್ಲರೂ ಮುಟ್ಟಬಾರದು, ಕಲ್ಯಾಣಿ, ಬಾವಿ, ಕೆರೆ ನದಿಗಳಿಗೆ ಯಾರು ಇಳಿಯಬೇಕು ಯಾರು ಇಳಿಯಬಾರದು, ಯಾರು ಉಪಯೋಗಿಸಬೇಕು, ಯಾರು ಉಪಯೋಗಿಸಬಾರದು ಎಂಬುದನ್ನು ನೀರಿನ ಧರ್ಮವು, ಶಾಸ್ತ್ರ ಮಾಡಿ ಬಿಸಾಕಿತು. ಇದರ ಪರಿಣಾಮ ಭೀಕರವಾಯ್ತು, ನೀರಿಗೆ ದಿಗ್ಭಂದನ ಏರ್ಪಟ್ಟಿತು. ನೀರಿನ ಧರ್ಮ ಸತ್ತುಹೋಯಿತು. ಹೃಷಿಕೇಶ, ಹರಿದ್ವಾರ ಬನಾರಸ್ ಮೂಲಕ ಹರಿಯುವ ಗಂಗಾ ನದಿ ಮಾತ್ರ ಪವಿತ್ರವೆನಿಸಿತು. ಇತ್ತ ಹಳ್ಳಿಗಳಲ್ಲಿ ನೀರು ಮುಟ್ಟಬಾರದವರ ದೊಡ್ಡ ಪಡೆಯೇ ಸೃಷ್ಠಿಯಾಯಿತು. ಬೇಕಾದಷ್ಟು ಶುದ್ಧು ಜೀವ ಜಾಲ ಕೆರೆ, ಕುಂಟೆ ಹಳ್ಳಗಳಲ್ಲಿ ಇದ್ದರು ಇವರ ಪಾಲಿಗೆ ಇದ್ದರೂ ಇಲ್ಲದಂತಾಗಿ ಪರಿವರ್ತನೆಯಾಯಿತು. ಬಾಯಾರಿಕೆ ಎಂಬುದು ನಿರಂತರ ಭಾವವಾಗಿ ಇಂದಿಗೂ ಕಾಡತೊಡಗಿದೆ.
ರಾಜರಾಕ್ಷಸ
‘ನೀರೂ ಭೂಮಿಯಂತೆಯೇ ರಾಜಪ್ರಭುತ್ವದ ಏಕಸ್ವಾಮ್ಯಕ್ಕೊಳಪಟ್ಟ ಸಂಪತ್ತಾಗಿತ್ತು. ‘ನದಿ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ’ ಪಡೆಯಲೇಬೇಕಾಗಿತ್ತು. ರಾಜ್ಯ ರಾಜ್ಯಗಳ ನಡುವೆ ನದಿ ನೀರಿಗಾಗಿ ನಿರಂತರ ಕಲಹ ನಡೆಯುತ್ತಿದ್ದವು. ಬುದ್ಧನ ಕಾಲದಲ್ಲಿ ಹಿಮಾಲಯದ ತಪ್ಪಲಿನಲ್ಲಿನ ಶಾಖ್ಯ ಮತ್ತು ಕೋಲಿ ರಾಜ್ಯಗಳ ನಡುವೆ ಹರಿಯುತ್ತಿದ್ದ ನದಿಯ ನೀರಿನ ಜಗಳ, ನಿರಂತರ ರಕ್ತಪಾತಕ್ಕೆ ಕಾರಣವಾಗಿತ್ತು. ಚೋಳ ಮತ್ತು ಚಾಲುಕ್ಯರ ಮೂನ್ನೂರು ವರ್ಷಗಳ ಸುದೀರ್ಘ ಯುದ್ಧ ಸರಣಿಗೆ ಕಾವೇರಿ ನೀರಿನ ಹಕ್ಕುದಾರಿಕೆಯ ಪ್ರಶ್ನೆಯೇ ಮುಖ್ಯ ಕಾರಣವಾಗಿತ್ತು. ವಿಜಯನಗರ ಮತ್ತು ಬಹುಮನಿ ರಾಜ್ಯಗಳ ನಡುವಿನ ಬಹುತೇಕ ಯುದ್ಧಗಳು, ತುಂಗಭದ್ರಾ ನೀರ ಹರಿವಿನ ಫಲವತ್ತಾದ ರಾಯಚೂರು ದೋಅಬ್ ಪ್ರದೇಶದ ಒತ್ತುವರಿಗಾಗಿಯೇ ನಡೆದದ್ದು. ಇದೆಲ್ಲಾ ತಮ್ಮ ಜನರ ಹಿತಾಸಕ್ತಿಯನ್ನು ಕಾಪಾಡಲೇನೂ ಆಗಿರಲಿಲ್ಲ. ಸಾವಿರಾರು ಸಂಖ್ಯೆಯ ತಮ್ಮ ಸೈನ್ಯ ಮತ್ತು ರಾಜ ಪರಿವಾರಕ್ಕೆ ಬೇಕಾದ ಆಹಾರ ಧಾನ್ಯ, ಅಧಿಕ ಸಂಖ್ಯೆಯಲ್ಲಿದ್ದ ಕುದುರೆ, ಆನೆ ಮತ್ತು ಎತ್ತುಗಳಿಗೆ ಮೇವು ನೀರುಗಳಿಲ್ಲದೆ ರಾಜ್ಯ ಸಾಮ್ರಾಜ್ಯ, ಪಾಳೇಪಟ್ಟುಗಳ ಉಳಿವು ಸಾದ್ಯವೇ ಇರಲಿಲ್ಲ, ಕೃಷಿ ಉತ್ಪನ್ನಗಳೇ ರಾಜತ್ವದ ಸುಖ ಮೂಲವಾಗಿದ್ದವು. ಸೈನ್ಯಕ್ಕೆ ಅಥವಾ ಪರಿವಾರಕ್ಕೆ ಆಹಾರದ ಕೊರತೆಯುಂಟಾದಾಗ ಯಾವ ಮುಲಾಜು ಇಲ್ಲದೆ ತಮ್ಮದೇ ರಾಜ್ಯದ ಅಮಾಯಕ ಜನರ ಮನೆಗಳ ಮೇಲೆ ದಾಳಿ ಮಾಡುತ್ತಿದ್ದರು. ನಗನಾಣ್ಯ, ದವಸಧಾನ್ಯ ಲೂಟಿ ಮಾಡುತ್ತಿದ್ದರು. ಹಾಗಲ್ಲದಿದ್ದರೆ ಹೊಲ, ಕಣಗಳು ಮತ್ತು ಹಾದಿ ಬೀದಿಗಳಲ್ಲಿ “ಹಗೇವು” ಎಂಬ ಗುಪ್ತ ನೆಲಕಣಜಗಳು ಹುಟ್ಟುತ್ತಿರಲಿಲ್ಲ. ಈ ಹಗೇವುಗಳಿಗೆ ಹಾಕಿದರೆ ಅರ್ಧಕ್ಕರ್ಧ ದವಸ ಹಾಳಾಗುವುದು ಗೊತ್ತಿದ್ದರೂ ರಾಜನ ಕಡೆಯ ಜನರ ಕಣ್ಣು ತಪ್ಪಿಸಲು ಹೀಗೆ ಮಾಡಲೇಬೇಕಾಗಿತ್ತು. ನಗ ನಾಣ್ಯಗಳನ್ನು ಕುಡಿಕೆಯಲ್ಲಿ ಹಾಕಿ ಎಲ್ಲೆಂದರಲ್ಲಿ ಹೂಳುತ್ತಿದ್ದುದಕ್ಕೂ ಬಹುತೇಕ ಇದೇ ಕಾರಣವಾಗಿತ್ತು. ಸದಾ ಕಾಲವು ತನ್ನ ಪ್ರಭುತ್ವದ ಅಧಿಕಾರ ಮತ್ತು ಸಂಪತ್ತನ್ನು ರಕ್ಷಿಸುತ್ತಿದ್ದ ಸೈನ್ಯ ಮತ್ತು ಪುರೋಹಿತರ ಹಿತಾಸಕ್ತಿ ಮುಖ್ಯವಾಗಿತ್ತು. ರಾಜಾ ಪ್ರತ್ಯಕ್ಷ ದೇವತಾ ಎಂಬುದು ಪುರೋಹಿತ, ವಂದಿಮಾಗದರ ಉವಾಚವಾಗಿತ್ತೇ ಹೊರತು ಜನರ ಮಾತಾಗಿರಲಿಲ್ಲ. ರಾಜ ರಾಕ್ಷಸ ಮಂತ್ರಿ ಮೊರೆವ ಹುಲಿ ಇದು ರಾಜಪ್ರಭುತ್ವದ ಬಗೆಗಿನ ಜನರ ನಿಜವಾದ ನಿಲುವು. ರಾಜನ ಕಣ್ಣಿಗೆ ಬೀಳಬಾರದು ಎಂಬುದು ಜನಪದ ನಿಷ್ಠುರ ನಿಲುವಾಗಿತ್ತು.
ಕೆರೆಯಂ ಕಟ್ಟಿಸು ಬಾವಿಯಂ ಸವೆಸು….. ಹಾಗೇ ಕೆರೆ ಕಟ್ಟಿಸುವುದು ಬಾವಿ ತೋಡಿಸುವುದು ಪುಣ್ಯ ಕಾರ್ಯವೆಂದು ತಿಳಿಯಲಾಗಿದ್ದುದು ನಿಜವೇ. ಯಾಕೆಂದರೆ ಇವುಗಳನ್ನು ಬಳಸುತ್ತಿದ್ದವರು ಭೂಸುರರು, ಪ್ರತ್ಯಕ್ಷದೇವರು, ಪುಣ್ಯವಂತ ಪ್ರವಾಸಿಗರು, ಶ್ರೀಮಂತ ವ್ಯಾಪಾರಿಗಳು ಅದಕ್ಕೆ ಅದು ಪುಣ್ಯಕಾರ್ಯ: ಸದರಿ ಕೆರೆಬಾವಿಗಳನ್ನು ರೈತಾಪಿ, ದಲಿತರು ಬಳಸುತ್ತಿದ್ದರೆ ಅದೇಗೆ ಪುಣ್ಯಕಾರ್ಯವಾಗಿಬಿಡುತ್ತಿತ್ತು. ನೀರು ಮುಟ್ಟಲು ಇವರೆಲ್ಲಾ ಪಾಪಿಗಳು, ನಿತ್ಯ ನರಕಿಗಳು ತಾನೇ?
ಚೋಳಾದಿ ರಾಜರಿಂದ ಕಟ್ಟಲ್ಪಟ್ಟ ಕೆರೆಗಳು ಹೆದಾರಿಗಳಿಗೆ ಹೊಂದಿಕೊಂಡೇ ಇದ್ದವು. ಈ ಹೆದ್ದಾರಿಗಳಲಿದ್ದ ಕೆರೆಗಳು ಮೊದಲಿಗೆ ತೂಬುಗಳನ್ನು ಹೊಂದಿದ್ದಂತೆ ಕಾಣುವುದಿಲ್ಲ. ಈ ಬಗೆಯ ಕೆರೆಗಳು ಮಾತ್ರ ಬೃಹತ್ ಸೈನ್ಯದ ನೀರಿನ ಅಗತ್ಯತೆಯನ್ನು ಪೂರೈಸಲು ಶಕ್ತವಾಗಿದ್ದವು. ಸೈನ್ಯದ ಬಹುಮುಖ್ಯಭಾಗವಾಗಿದ್ದ ಪ್ರಾಣಿಗಳಿಗೂ ಈ ನೀರು ಬಳೆಕೆಯಾಗುತ್ತಿತ್ತು. ಎರಡು ಮೂರು ವರ್ಷ ಮಳೆ ಕೈಕೊಟ್ಟರೂ, ಈ ಬಗೆಯ ಕೆರೆಗಳಲ್ಲಿ ನೀರಿಗೇನು ದುಸ್ತರವಾಗುತ್ತಿರಲಿಲ್ಲ. ನಾಡು ಬರ ಅನುಭವಿಸುತ್ತಿದ್ದರೂ ಲೂಟಿಗಾಗಿ ರಾಜ್ಯ ಒತ್ತುವರಿಗಾಗಿ, ಕ್ರೀಡೆಗಾಗಿ ಯುದ್ದಗಳು ಮುಂದುವರಿಯುತ್ತಿದ್ದವು ದಹಲಿ ಸುಲ್ತಾನರು ಮತ್ತು ಮೊಗಲ್ ರಾಜರ ಪ್ರವೇಶದಿಂದ ಭಾರತ ಪ್ರದೇಶಗಳ “ಪ್ರಭುತ್ವಕ್ಕಾಗಿ ಸ್ಪರ್ಧೆ” ತೀವ್ರಗೊಂಡು ರೈತ ಬಂಡಾಯಗಳು ಚಿಗುರೊಡೆಯ ತೊಡಗಿ ಮೇಲೆ ‘ಉದಾರ ಪ್ರಭುತ್ವ’ ‘ಜನಪರ ಕಲ್ಪನೆ’ ಅಲ್ಪಮಟ್ಟಿಗಾಗರೂ ಸ್ಥಾಪಿತವಾಗತೊಡಗಿತು. ಇದರ ಒಂದು ಪರಿಣಾಮವೇ ಕೆರೆ ನೀರಿನ ಮೇಲೆ ರೈತರ ತುಸುಮಟ್ಟಿನ ಹಕ್ಕು ಪ್ರಾಪ್ತವಾದದ್ದು. ಇದಕ್ಕೆ ಮುನ್ನ ಕೆರೆ ಹಿಂಭಾಗದ ಭೂಮಿ ಎಂದೂ ರೈತಾಪಿ ಜನರ ಒಡೆತನದಲ್ಲಿರದೆ ರಾಜಪರಿವಾರ, ದೇವಾಲಯಗಳು ಮತ್ತು ಪುರೋಹಿತರ ದತ್ತಿ ಭೂಮಿಯಾಗಿರುತ್ತತ್ತು. ಇದೇ ಪರಿಸ್ಥಿತಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ಇಂದಿಗೂ ಮುಂದುವರಿದು, ನದಿ ನೀರು, ಮತ್ತು ಅಂತರ್ಜಲದ ಒಡೆತನ ಮೇಲ್ಜಾತಿಗಳಗಷ್ಟೆ ವಿಸ್ತಾರಗೊಂಡಿರುವುದು, ಯಾವಾಗಲೂ ಪ್ರಭುತ್ವಗಳು ಯಾರ ಪರ ಎಂಬುದನ್ನು ಸಾಬೀತುಪಡಿಸುವಂತಿದೆ, ರಾಜ್ಯಗಳ ಬಾಯಾರಿಕೆಗೆ ಮಿತಿ ಇರಲಿಲ್ಲ. ಜನರಿಗೆ ಕುಡಿಯುವ ನೀರಿಗೂ ಗತಿ ಇರಲಿಲ್ಲ.

ಅತಿ ನಾಗರಿಕತೆಯ ಈ ಕಾಲವು, ಸಿಂಧೂ ನಾಗರಿಕತೆಯ ಕಾಲದ ಹರಪ್ಪ, ಮೊಹೆಂಜೊದಾರೊ ಕಾಲಿಬಂಗನ್‍ಗಳ ಒಳಚರಂಡಿ ವ್ಯವಸ್ಥೆ ಮತ್ತು ಬಹು ಅಂತಸ್ಥಿನ ಕಟ್ಟಡಗಳ ಅವಶೇಷಗಳನ್ನು ವೈಭವಿಕರಿಸಿ ವಿವರಿಸಿಕೊಳ್ಳವುದನ್ನು ರೂಢಿ ಮಾಡಿಕೊಂಡಿದೆ. ಚರಿತ್ರೆಯೊಡನೆ ಆ ಮೂಲಕವೇ ಮಾತುಕತೆಗೆ ತೊಡಗುವುದರಲ್ಲಿ ಅದು ಹೆಚ್ಚು ಸಂತಸ ಅನುಭವಿಸುತ್ತಿರುವಂತೆ ಕಾಣುತ್ತದೆ.
5000 ವರ್ಷಗಳ ಸಿಂಧೂ ನಾಗರಿಕತೆಯ ನೀರನ ಊನವೊಂದರ ಉದಾಹರಣೆಯಿಂದ ಈ ನೀರಿನ ಊನದ ಚರಿತ್ರೆಯನ್ನು ಆರಂಭಿಸಬಹುದು. ಮೇಲೆ ಹೆಸರಿಸಿದ ಮತ್ತು ಈ ಕಾಲದ ಎಲ್ಲ ನಗರಗಳಲ್ಲಿ ಎರಡು ಬಗೆಯ ವಾಸದ ಕಟ್ಟಡಗಳಿದ್ದವು. ಕೋಟೆಯೊಳಗಿನ ಕಟ್ಟಡಗಳು, ಇನ್ನೊಂದು ಕೋಟೆಯ ಹೊರಗಿನ ಕಟ್ಟಡಗಳು. ಕೋಟೆಯೊಳಗೆ ಸುರಕ್ಷಿತವಾಗಿದ್ದ ರಾಜಕುಟುಂಬ, ಸೈನ್ಯಧಿಕಾರಿಗಳು, ಶ್ರೀಮಂತ ವ್ಯಾಪಾರಿಗಳು ಮತ್ತು ಪುರೋಹಿತರಿಗೆ ಸೇರಿದ್ದು ಇವು ಸಕಲ ಸೌಲಭ್ಯ ಹೊಂದಿದ್ದವು. ಪ್ರತಿ ಮನೆಯ ಒಂದು ಕಲ್ಲು ಕಟ್ಟಡದ ಬಾವಿ ಹೊಂದಿತ್ತು. ನೀರಿನ ಕೊರೆತೆ ಎಂಬುದೇ ಇವರಿಗಿರಲಿಲ್ಲ. ಆದರೆ ಕೋಟೆಯಾಚೆಯಲ್ಲಿ, ಯಾವ ರಕ್ಷಣೆಯು ಇಲ್ಲದ ಕಾಡು ಪ್ರಾಣಿಗಳ ಭಯದಿಂದ ಸದಾ ತತ್ತರಿಸುತ್ತಿದ್ದ ಕೃಷಿಕರ, ಕರಕುಶಲ ಕೆಲಸಗಾರರ, ಪಶುಪಾಲಕರ ಹಟ್ಟಿಗಳಿದ್ದವು. ಇವುಗಳಿಗೆ ಒಳಚರಂಡಿ, ರಸ್ತೆ, ಬೀದಿದೀಪ, ಮತ್ಯಾವ ಅಲಂಕಾರಗಳು ಇರಲಿಲ್ಲ ಅಲಂಕಾರದ ಮಾತು ಒತ್ತಟ್ಟಿಗಿರಿಲಿ ಕುಡಿಯುವ ನೀರಿನ ವ್ಯವಸ್ಥೆಯೆ ಅಲ್ಲಿ ಗೈರುಹಾಜರು. ಇಡೀ ಹಟ್ಟಿಗೇ ಒಂದು ಬಾವಿಯ ಗತಿ ಇರಲಿಲ್ಲ ಒಂದೇ ಕಾಲ, ಆದರೆ ಸ್ಥಳ ಬೇರೆಬೇರೆಯಾದ ಕಾರಣ ಸವಲತ್ತು ಮತ್ತು ಅವಕಾಶಗಳ ಲಭ್ಯತೆಯು ಬೇರೆಬೇರೆಯಾಯಿತು. ಇದೇ ನೀರಿನ ಸವಲತ್ತು ಮತ್ತು ಅವಕಾಶಗಳ ಲಭ್ಯತೆಯು ಬೇರೆಬೇರೆಯಾಯಿತು. ಇದೇ ನೀರಿನ ಊನ ಒಂಚೂರು ಮುಕ್ಕಾಗದೆ ಆಧುನಿಕ ಕಾಲದವರೆಗೂ ದೇಕಿಕೊಂಡು ಬಂದಿರುವುದು ಅಚ್ಚರಿಯ ಸಂಗತಿ.
ಕದಂಬ, ಚಾಲುಕ್ಯ ಗಂಗ ಇತ್ಯಾದಿ ನೂರಾರು ವಂಶಗಳ ರಾಜಾಧಿರಾಜರು ತಾವೇ ಉತ್ತರ ಭಾರತದಿಂದ ಬರಮಾಡಿಕೊಂಡ ಬ್ರಾಹ್ಮಣರಿಗಾಗಿ ಅಗ್ರಹಾರಗಳೆಂಬ ಪವಿತ್ರ ಕಾಲನಿಗಳನ್ನು ಕಟ್ಟಿಕೊಡುವುದು ತಮ್ಮ ಪುಣ್ಯವೆಂದು ತಿಳಿದಿದ್ದರು. ಅತ್ಯುತ್ತಮ ಪರಿಸರದಲ್ಲಿ ಸದರಿ ಅಗ್ರಹಾರಗಳನ್ನು ನಿರ್ಮಿಸಿ, ಕೋಟೆಯ ರಕ್ಷಣೆ ಒದಗಿಸುವುದರ ಜೊತೆಗೆ ಎಲ್ಲಾ ಸುಖ ಸವಲತ್ತುಗಳ ಅಲ್ಲಿಗೇ ಸರಬರಾಜಾಗುವಂತೆ ನೋಡಿ ರಕ್ಷಣಾತ್ಮಕ ಕಲ್ಲು ಕಟ್ಟಡವುಳ್ಳ ನೀರಿನ ಬಾವಿಯಿಂದ ಅಗ್ರಹಾರ ವ್ಯವಸ್ಥೆಗೊಂಡಿತ್ತು. ಇದೆಲ್ಲಾ ಸರಿಯೇ, ಅತಿಥಿ ಸತ್ಕಾರದ ಅತ್ಯುತ್ತಮ ಪರಿಯೇ. ಆದರೆ ತನ್ನ ಅರಮನೆ, ಚಿನ್ನದ ಕಿರೀಟ, ಸುಖಲೋಲಿಗೆ ಮೂಲವಾದ ತನ್ನದೆ ರಾಜ್ಯದ ಬಹು ಜನರ ಬಾಯಾರಿಕೆ ಈ ರಾಜರುಗಳಿಗೆ ಅರ್ಥವಾಗಲಿಲ್ಲವಲ್ಲ ಅದು ದುರಂತ. ಅಪಾರ ಸವಲತ್ತುಗಳು ಬೇಡ, ಊರಿಗೊಂದು ನೀರಿನ ಬಾವಿಯ ಅಗತ್ಯ ಎಷ್ಟೋ ಶತಮಾನಗಳವರೆಗೆ ಇವರಿಗೆ ಹೊಳೆಯಲಿಲ್ಲ. ವ್ಯಾಪಾರಿಗಳಿಗೆ ಪ್ರವಾಸಿಗರಿಗೆ, ಸೈನ್ಯಾಧಿಕಾರಿಗಳಿಗೆ ಅರವಟ್ಟಿಗೆ ನಿರ್ಮಿಸಲು ಉತ್ಸುಕವಾದ ಮನಸ್ಸು ತನ್ನ ಪ್ರಜೆಗಳ ಜಲ ನಿರೀಕ್ಷೆಯನ್ನು ಉಪೇಕ್ಷಿಸಿದ್ದು ರಾಜತ್ವದ ಹುಟ್ಟು ಕಿವುಡಿಗೆ ಸಾಕ್ಷಿಯಾಗಿದೆ. ದೇವಾಲಯವೊಂದನ್ನು ನಿರ್ಮಿಸುತ್ತಲೇ ಅಲ್ಲೊಂದು ಕಲ್ಯಾಣಿ ಕಟ್ಟಿಸಿದ ಮತ್ತು ಬಾವಿ ತೊಡಿಸಿದ ಮನಸ್ಸಿಗೆ, ಜನರ ನೀರಿಗೆ ಅಗತ್ಯತೆ ಕಾಣಲಿಲ್ಲವಲ್ಲ ಇದು ರಾಜ ಪ್ರಭುತ್ವದ ಹುಟ್ಟು ಕುರುಡಿಗೆ ಸಾಕ್ಷಿಯಾಗಿದೆ.
ಅರಮನೆ, ಗುರುಮನೆ, ಸೆರೆಮನೆ, ಕೋಟೆ ಕಟ್ಟಿದವರಿಗೆ ಒಂದು ‘ಕನಿಷ್ಟಗೂಡು ಇರಲಿಲ್ಲ’ವೆಂಬುದು ಮತ್ತು ಬಾವಿ, ಕಲ್ಯಾಣಿ, ಕಟ್ಟೆ, ಅರವಟ್ಟಿಗೆ, ಕಟ್ಟಿಕೊಟ್ಟವರಿಗೆ ನೀರಿನ ಹಕ್ಕು ಇರಲಿಲ್ಲವೆಂಬುದು ಒಂದು ಫಲಿತಾಂಶ. ವಿಜಯನಗರದ ರಾಜಧಾನಿ ಹಂಪಿಯ ಅರಮನೆಯ ಪಕ್ಕದ ಕಲ್ಯಾಣಿಗೆ, ಅದರಾಚೆಯ ಸ್ವಲ್ಪದೂರದ ರಾಣಿಯರ ಸ್ನಾನಗೃಹದೊಳಕ್ಕೇ ತುಂಗಭದ್ರ ನದಿ ನೀರನ್ನು ನೇರವಾಗಿ ಹರಿಯುವಂತೆ ಮಾಡಿದ ಆ ಕಾಲದ ಚಾಣಕ್ಯ ಇಂಜಿನಿಯರುಗಳಿಗೆ ರಾಜಧಾನಿಯಾಚೆಯ ರೈತಾಪಿ ಜನರ್ಯಾಕೆ ನೆನಪಾಗಲಿಲ್ಲವೆಂಬುದು ರಾಜತ್ವದ ಕೇಡಿನ ರಾಜಕಾರಣಕ್ಕೆ ಸಾಕ್ಷಿ.
ಕೆರೆಯ ನೀರು ಮತ್ತು ರಾಜಧರ್ಮದ ಮೋಸ
ಕೆರೆಗಳು ಹೇಗೆ? ಯಾವಾಗ? ಏಕೆ ಕಟ್ಟಲ್ಪಟ್ಟವು ಎಂಬ ಪ್ರಶ್ನೆಗೆ ಇತಿಹಾಸದಲ್ಲಿ ಸ್ಪಷ್ಟ ಉತ್ತರವಿಲ್ಲ. ಸ್ವಾಭಾವಿಕವಾಗಿ ತಗ್ಗು ಪ್ರದೇಶದಲ್ಲಿ ನಿಂತ ನೀರಿನ ಉಪಯೋಗ ಮನುಷ್ಯರಿಗೆ ಇಂತಹ ಕೆರೆಗಳನ್ನು ಕಟ್ಟುಲು ಪ್ರೇರಣೆ ಆಗಿರಬೇಕು. ಮನುಷ್ಯರು ನೆಲೆನಿಂತು ಪಶುಪಾಲನೆ ಮತ್ತು ಕೃಷಿಯಲ್ಲಿ ಪಾಲುಗೊಂಡಮೇಲೆ ಕೃತಕ ನೀರಿನ ಸೆಲೆಯನ್ನು ಸೃಷ್ಟಿಸಿಕೊಳ್ಳವುದು ಅನಿವಾರ್ಯವಾಗಿತ್ತು. ರಾಜಪ್ರಭುತ್ವ ಬೆಳೆದು ಬಂದಮೇಲೆ ಹೀಗೆ ಕೆರೆಗಳನ್ನು ಕಟ್ಟಿಸುವುದು ರಾಜಧರ್ಮವಾಗಿ ಪರಿಣಮಿಸಿತು.”ಕೆರೆಯಂ ಕಟ್ಟಿಸು ಕಾಲುವೆಯಂ ಸವೆಸು” ಎಂಬಿತ್ಯಾದಿ ಮಾತುಗಳು ಹುಟ್ಟಿ ಜನಪ್ರಿಯವಾದವು. ದಕ್ಷಿಣ ಭಾರತದ ಚರಿತ್ರೆಯಲ್ಲಿ ಚೋಳರು ಕೆರೆಕಟ್ಟಿಸುವ ಕಾಯಕವನ್ನು ತಾವು ರಾಜ್ಯ ಸ್ಥಾಪಿಸಿದ ಕಡೆಗಳಲ್ಲೆಲ್ಲಾ ವಿಸ್ತರಿಸಿದರು. ಇದೇ ಕೆರೆಯ ಪರಂಪರೆಯನ್ನು ಮಿಕ್ಕೆಲ್ಲಾ ರಾಜರು ಅನೂಚಾನವಾಗಿ ಮುಂದುವರೆಸಿದರು. ಚೋಳರು ತಮ್ಮ ರಾಜ್ಯಾಡಳಿತದಲ್ಲಿ ಕೆರೆಕಟ್ಟೆ ವಾರಿಯಂ, (ಕೆರೆಕಟ್ಟೆ ಸಮಿತಿ) ಎಂಬ ಆಡಳಿತ ವಿಭಾಗವನ್ನೇ ಆರಂಭಿಸಿದ್ದರು. ಸ್ಥಳೀಯ ಆಡಳಿತದ ಅತಿಮುಖ್ಯ ಕೆಲಸ ಇದೇ ಆಗಿತ್ತು. ಚೋಳರ ಆಡಳಿತಕ್ಕೊಳಪಟ್ಟ ಕರ್ನಾಟಕದ ಕೋಲಾರ ಮತ್ತು ತುಮಕೂರು ಜಿಲ್ಲಗಳಲ್ಲಿ ನೂರಾರು ಕೆರಗಳ ಒಂದು ದೊಡ್ಡ ಕಾಲವೇ ಜೀವ ತಳೆದದ್ದು ಈ ಕಾರಣದಿಂದಲೇ. ಕೆರೆ ಕಟ್ಟಿಸುವ ಕಾರ್ಯ ಕೇವಲ ರಾಜಕಾರ್ಯವಾಗಿರಲಿಲ್ಲ ಅದು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯವಾಗಿತ್ತು. ಆದ್ದರಿಂದಲೇ ರಾಜರುಗಳಿಗೆ ಕೆರೆಕಟ್ಟಿಸುವ ಕೆಲಸ ಕಷ್ಟವಾಗಿರಲಿಲ್ಲ. ಉಳ್ಳವರು ಹಣ ಸಹಾಯ ದವಸಧಾನ್ಯದ ಸಹಾಯ ಮಾಡಿದೆ ದುಡಿಯುವ ಜನರು ಕೆರೆ ನಿರ್ಮಾಣ ಕಾರ್ಯದ ರುವಾರಿಗಳಾದರು. ಹತ್ತಾರು ವರ್ಷ ಹಿಡಿಯುತ್ತಿದ್ದ ಕೆರೆ ನಿರ್ಮಾಣದ ಕೆಲಸ ದೇವಾಲಯಗಳ ನೀರ್ಮಾಣದ ಕೆಲಸಕ್ಕಿಂತ ಶ್ರದ್ದೆಯಿಂದ ನಡೆಯುತ್ತಿತ್ತು.
ಇಂಥ ಕೆರೆಗಳ ನಿರ್ಮಾಣದಲ್ಲಿ ರಾಜ ಮಹಾರಾಜ ಪಾಳೇಗಾರರು ಅತಿಯಾದ ಶ್ರದ್ದೆ ತೋರಿದ್ದು ಯಾಕೆ? ಈಗಾಗಲೇ ಇದ್ದ ಬಾವಿಗಳು, ಸಣ್ಣ ಸಣ್ಣ ಕಟ್ಟೆಗಳು, ಸ್ವಾಭಾವಿಕ ಕೆರೆಗಳು ಸಾಲದದವೇ? ಪಶುಪಾಲನೆಗೆ ಇವರ ವಿಶೇಷ ಕೊಡುಗೆಯೇ ಇದು? ಕೆರೆ ನಿರ್ಮಾಣ ಅತಿ ಉತ್ಸಾಹಕ್ಕೆ ಧಾರ್ಮಿಕ ಸಾಮಾಜಿಕ ಆರ್ಥಿಕ ಕಾರಣಗಳಷ್ಟೆ ಕಾರಣವೇ? ಎಂಬಿತ್ಯಾದಿ ಪ್ರಶ್ನೆಗಳ ಜೊತೆಗೆ ಇನ್ನೊಂದು ಅಂಶವನ್ನು ಇಟ್ಟುನೋಡಬಹುದು. ಎಂದೂ ರಾಜರ ಮೊದಲ ಆದ್ಯತೆ ‘ಜನಕಲ್ಯಾಣ’ ಆಗಿರಲಿಲ್ಲ. ಅದೂ ಒಂದಂಶವಾಗಿತ್ತೆನ್ನುವುದು ನಿಜವಾದರೂ ಅವರ ಆದ್ಯತೆ ತಮ್ಮ ರಾಜ್ಯ, ಅಧಿಕಾರಗಳ ರಕ್ಷಣೆ ಅದಕ್ಕೆ ಬೇಕಾದ ಸೈನ್ಯ, ಒಂಟೆ ಸೈನ್ಯ, ಸೈನ್ಯಕ್ಕೆ ಬೇಕಾದ, ಶಸ್ತ್ರಾಶ್ತ್ರ, ಆಹಾರ, ಬಟ್ಟೆ ಇತ್ಯಾದಿ ಹೊರಲು ಎತ್ತುಗಳು ಕತ್ತೆಗಳು ಹೇಸರಗತ್ತೆಗಳು, ಸೈನ್ಯದೊಂದಿಗೆ ಸಾಗಬೇಕಾಗಿತ್ತು.
ಇವೆಲ್ಲಾವುಗಳೊಂದಿಗೆ ಅಪಾರ ಪ್ರಮಾಣದಲ್ಲಿ ಬೇಕಾಗಿದ್ದ ನೀರನ್ನು ಹೊತ್ತು ಒಯ್ಯುವುದು ಸಾಧ್ಯವೆ ಇರಲಿಲ್ಲ. ಆದ್ದರಿಂದ ರಾಜರೂ ಅವರ ಬುದ್ಧಿವಂತ ಮಂತ್ರಿಗಳು ಕಂಡು ಹಿಡಿದ ನೀರಮಾರ್ಗ ಈ ಕೆರೆಗಳು ರಾಜರುಗಳ ದಂಡೆಯಾತ್ರಗಳಿಗೆ ನೀರೊ ದಗಿಸುವುದು ಇಂತ ಕೆರೆಗಳ ಮೊದಲ ಆದ್ಯತೆಯಾಗಿತ್ತು ಈಗ ನಾವು ತಿಳಿದಂತೆ ರೈತ ಕಲ್ಯಾಣವೆನಲ್ಲ ಅಷ್ಟಕ್ಕೂ ಭೂಮಿಯಂತೇ ಕೆರೆಗಳು ರಾಜರ ಸ್ವತ್ತಾಗಿದ್ದವು.
ಅವನ ಅಧಿಕಾರಿಗಳು ಕೆರೆಗಳ ಉಸ್ತುವಾರಿ ನೋಡಿಕೊಳ್ಳತ್ತಿದ್ದರು. ರಾಜತ್ವದ ಈ ಹಂತದಲ್ಲಿ ಕೆರೆಗಳಿಗೆ ತೂಬುಗಳೇ ಇರಲಿಲ್ಲವೆಂಬುದು ಅವರ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಬರಗಾಲ ಜಲಕ್ಷಾಮ, ಅಲ್ಪಸಲ್ಪ ಜನರಲ್ಲಿನ ಜಾಗೃತಿ. ಬಂಡಾಯ ಅತೃಪ್ತಿ ಇತ್ಯಾದಿ ಕಾರಣಗಳ ಫಲವಾಗಿ ಜನರ ಯೋಗಕ್ಷೇಮದ ಕಡೆಗೆ ರಾಜರು ಗಮನ ಹರಿಸಿದರು ಆಗ ಕೆರೆಗಳ ಮೇಲೆ ಆ ಸುತ್ತಲ ಜನರಿಗೆ ಅಲ್ಪ ಅಧಿಕಾರ ಪ್ರಾಪ್ತವಾಯಿತ್ತು ತೂಬುಗಳು ಬಂದವು ಹೆಚ್ಚುವರಿ ನೀರನ್ನು ಕೃಷಿಗೆ ಬಳಸುವ ಪರಿಪಾಠ ಆರಂಭವಾಯ್ತು. ಇಷ್ಟಾದರು ಕೆರೆಗಳ ಹಿಂಭಾಗದ ಭೂಮಿ ಬಹುಕಾಲ ರಾಜರ ಮತ್ತವರ ಜೊತೆಗೆ ಇದ್ದ ಬ್ರಾಹ್ಮಣ ಪುರೋಹಿತರ ಹಿಡಿತದಲ್ಲಿತ್ತು ಖಚಿತವಾಗಿ ಬೆಳೆ ಬಂದೇ ಬರುತ್ತಿದ್ದ ಕೆರೆ ಹಿಂದಣ ಜಮೀನುಗಳೆಲ್ಲಾ ರಾಜರ ಪಾಳೇಗಾರರ ಮಂತ್ರಿಗಳ ಪುರೋಹಿತರ ಒಡೆತನದಲ್ಲಿ ಇದ್ದವು. ದುಡಿತ ಮಾತ್ರ ಬಡವರ ಕಡ್ಡಾಯ ಕರ್ತವ್ಯವಾಗಿತ್ತು ಹೀಗೆ ಕೆರೆಗಳು ಮತ್ತು ನದಿ ಅಕ್ಕ ಪಕ್ಕಗಳ ಭೂಪ್ರದೇಶವೆಲ್ಲಾ ಶ್ರೀಮಂತರ ಒಡೆತನದಲ್ಲಿತ್ತು. ಕೆರೆಗಳ ಏರಿಗೆ ಮಣ್ಣಾಕುವುದು ಮಣ್ಣು ಒಡ್ಡರ, ದಡ ಕುಸಿಯದಂತೆ ಏರಿಗೆ ಕಲ್ಲು ಕಟ್ಟುವುದು ಕಲ್ಲು ಒಡ್ಡರ ಆದ್ಯ ಕರ್ತವ್ಯವಾಗಿತ್ತು. ಹೊಳೆತುವುದು ಇತರ ಬಡವರ್ಗದ ಕೆಲಸವಾಗಿತ್ತು. ಇಷ್ಟಾದರು ಇವರಿಗೆ ನೀರಿನ ಒಡೆತನ ಕಿಂಚಿತ್ತು ಇರಲಿಲ್ಲ. ದಲಿತರು ನೀರನ್ನು ಮುಟ್ಟುವಂತೆಯೇ ಇರಲಿಲ್ಲ.

ಈ ಕೆರೆಗಳ ನೀರನ್ನು ದಂಡೆತ್ತಿ ಬರುತಿದ್ದ ಸೈನಿಕರ ಕುದುರೆ, ಆನೆ, ಕತ್ತೆ, ಎತ್ತುಗಳು ನೀರು ಕುಡಿಯಲು ಮೈತೊಳೆಯಲು ಬಳಸುತ್ತಿದ್ದರು ಆರಂಭದಲ್ಲಿ ನೂರಾರು ನಂತರ ಸಾವಿರಾರು, ಆನಂತರ ಲಕ್ಷಾಂತರ ಸಂಖ್ಯೆಗೇರಿದ ರಾಜರ ಸೈನಿಕರು ಇಂಥ ಕೆರೆ ನೀರನ್ನು ಒಮ್ಮೆಗೇ ಕುಡಿದುಬಿಡುವಷ್ಟು ಭಯ ಹುಟ್ಟಿಸುತ್ತಿದ್ದರು. ಸೈನ್ಯದ ಹಾದಿ ಅಷ್ಟು ಭಯಂಕರವಾಗಿತ್ತು. ಅವರು ಇತರ ರಾಜ್ಯದ ಮೇಲಷ್ಟೆ ದಾಳಿ ಮಾಡುತ್ತಿರಲಿಲ್ಲ, ತಮ್ಮದೇ ಕೆರೆಗಳ ನೀರನ ಮೇಲೂ ಅಂಥ ದಾಳಿ ನಡೆಯಿತ್ತಿತ್ತು. ಇಂಥ ತಮ್ಮದೇ ಅಸಂಖ್ಯಾತ ದಾಳಿಗಳನ್ನೂ ಇತರ ವೈರಿ ರಾಜ್ಯಗಳ ಕೊನೆಯಿರದ ದಾಳಿಗಳನ್ನೂ ಸಹಿಸಿ ಸಾಕಾಗಿ ಜನ ರೊಚ್ಚಿಗೆದ್ದು ದಂಗೆ ಏಳತೊಡಗಿದ ಮೇಲೆ ಕೆರೆಗಳಿಗೆ ತೂಬುಗಳು ಬಂದಿರಬೇಕು.
ರಾಜರ ಕಾಲ ಮುಗಿಯಿತು. ಹೊಸ ಕಾಲ ಆರಂಭವಾಯ್ತು, ಕಾಲ ಸರಿಯಿತು. ಕೆರೆಗಳು ಊರಿನ ಉಸ್ತುವಾರಿಗೆ ಬಂದವು. ಅಷ್ಟೊತ್ತಿಗೆ ಆದದ್ದೆನು? ಕೆರೆಯ ಕಲ್ಪನೆಗಳು ಸತ್ತು ಡ್ಯಾಂ ಕಲ್ಪನೆಗಳು ಗರಿಗೆದರಿದವು. ಸಾವಿರಾರು ಎಕರೆ ಪ್ರದೇಶಗಳನ್ನು ಆಕ್ರಮಿಸಿ ಮಲಗಿದವು. ಡ್ಯಾಂಗಳು ಕೆರೆಗಳ ಅಸ್ಥಿತ್ವವನ್ನು ಅಲ್ಲಗಳೆದವು. ಡ್ಯಾಂಗಳ ಕೇಡು ಏನೇ ಇರಲಿ, ಅವು ಭೂಕಂಪಕ್ಕೆ ಕಾಡು ಜನರ ಜಲಾವೃತ ಪ್ರದೇಶದ ಜನರ ನಾಶಕ್ಕೆ ಕಾರಣವಾಗುತ್ತವೆ ಎಂಬಿತ್ಯಾದಿ ಮಾತೆಲ್ಲಾ ಈಗ ಕ್ಲೀಷೆಗಳಾಗಿ ಹೋಗಿವೆ.
ಅದು ಒತ್ತಟ್ಟಿಗಿರಲಿ, ಮತ್ತೆ ಕೆರೆಗಳ ಬಳಿ ಹೋಗುವುದು ಸರಿ. ಹೋಗಿ ನೋಡಿದರೆ ಅಲ್ಲಿ ಕೆರೆಗಳ ಗೋಳು ಹೇಳತೀರದಾಗಿದೆ. ಏರಿ ಸವೆದು ನೂಲಾಗಿದೆ, ಕೆರೆಯ ತಳ ಹೂಳು ತುಂಬಿ ಉಸಿರು ಕಟ್ಟಿದೆ, ನೀರಿಗೆ ಬದಲು ಇರುವುದು ಕೊಳಚೆ ಮುಳ್ಳು ಕಂಟಿ ಮತ್ತು ಹೂಳು. ಜನರ ಸ್ವತ್ತಾದ ಮೇಲೆ ಇನ್ನೂ ಹೆಚ್ಚು ಜೀವ ತುಂಬಿಕೊಳ್ಳ ಬೇಕಾಗಿದ್ದ ಕೆರೆಗಳು ಯಾಕೆ ಹೀಗಾದವು? ಕೆರೆಯು ಯಾಕೆ ಅನಾಥವಾಯ್ತು?
ಕೆರೆಗಳ ಉಸ್ತುವಾರಿ ನೋಡಿಕೊಳ್ಳುವ ಇಲಾಖೆಗಳು ಇದ್ದೂ ಸತ್ತು ಕೂತಿವೆ, ಕೆರೆಯ ಏರಿಯನ್ನೇ ಬಗೆದು ಮಣ್ಣು ತೆಗೆಯುವವರನ್ನು ಊರಿನ ಜನ ಕೇಳುವ ಪ್ರೀತಿ ತೋರದೆ ಕೆರೆಯ ಸಾವನ್ನು ಸಹಿಸುತ್ತಿದ್ದಾರೆ. ಅಷ್ಟೇಕೆ, ಕೆರೆ ಸತ್ತರೆ ಆ ಭಾಗದ ಬೋಮಿಯನ್ನು ಹಂಚಿಕೊಳ್ಳಲೂ ಇವರು ಸಿದ್ದರಿದ್ದಾರೆ.
ಕೆರೆಯ ನೀರಿನ ಮೂಲ ಸೆಲೆಗಳಾದ ಹಳ್ಳಗಳನ್ನು ರೈತರೆಂಬ ಮೂರ್ಖರೇ ಮುಚ್ಚಿಹಾಕಿ ಅನಗತ್ಯವಾಗಿ ತಮ್ಮ ಜಮೀನುಗಳಿಗೆ ನೀರುಣಿಸಲು ಯತ್ನಿಸುತ್ತಿದ್ದಾರೆ. ಹಳ್ಳಗಳನ್ನು ಮುಚ್ಚಿ ಒತ್ತುವರಿ ಮಾಡಿ ಹಳ್ಳದ ಬಾಯಿಗೆ ಮಣ್ಣು ಹಾಕಿದ್ದಾರೆ, ಸಲಹುವವರೇ ಕೊಲ್ಲುತ್ತಿದ್ದಾರೆ. ಹಳ್ಳಗಳಿಲ್ಲದೆ ಕೆರೆಗಳಿಲ್ಲ ಈಗ ಹಳ್ಳಗಳಿಲ್ಲ, ಕೆರೆಗಳೂ ಇಲ್ಲ.
ನೀರು ಹಿಂಗದೆ ಭೂಮಿಯ ಜೀವ ಉಳಿಯುವುದಿಲ್ಲ. ಕುಡಿಯುವ ನೀರುಗೂ ಗತಿ ಇರುವುದಿಲ್ಲ. ಬಾವಿಕೆರೆ ಕಟ್ಟೆಗಳಲ್ಲಿ ನೀರಿಲ್ಲದಂತಾಗಿ ಹಕ್ಕಿಪಕ್ಷಿಗಳು ಪ್ರಾಣಿಗಳು ಬಾಯಾರಿ ಬಸವಳಿದು ಸತ್ತುಹೋಗುತ್ತಿವೆ. “ಎಲ್ಲೆಡೆ ನೀರಾವರಿ” ಎಂಬ ಘೋಷಣೆ ಸಾಕರಕ್ಕೆ ಬೋರ್‍ವೆಲ್‍ಗಳ ಕ್ರಾಂತಿ ಆರಂಭವಾಗಿ ಕೆರೆಬಾವಿ, ಕಟ್ಟೆಗಳಲ್ಲಿದ್ದ ನಿರು ಹೇಳಹೆಸರಿಲ್ಲದಂತಾಗಿದೆ. ಬೋರ್‍ವೆಲ್‍ಗಳೇನೋ ಕೆಲಕಾಲ ಅಕ್ಷಯಪಾತ್ರೆಯಂತೆ ವರ್ತಿಸಿದವು. ಆದರೆ ಕೆರೆಕಟ್ಟೆ ಹಳ್ಳಕೊಳ್ಳ ಕೊನೆಯುಸಿರೆಳೆದ ಮೇಲೆ ಬೋರುಗಳು ಬಿಕ್ಕತೊಡಗಿದವು. ಆಳ ಆಳಕ್ಕೆ ಹೋದಂತೆ ನೀರಿಗೆ ಬದಲು ವಿಷ ಬಂತು, ಬರಬಾರದ ರೋಗಗಳು ತೋಟ ತುಡಿಕೆಗಳಿಗೆ ಬೆಳೆಗಳಿಗೆ ಬಂದವು. ಮನುಷ್ಯರು ಆ ವಿಷದ ನೀರು ಕುಡಿಯುತ್ತಾ ಕಂಡು ಕೇಳರಿಯದ ರೋಗದ ಗೂಡಾಗಿದ್ದಾರೆ. ನಗರವಾಸಿ ಜನರಿಗೂ ನೀರಿನ ವಿಷ ಹಬ್ಬಿದ ಕಾರಣ (ಹಳ್ಳಿಗಳ ಜನ ವಿಷದ ನೀರು ಪ್ಲೋರೈಡ್, ಕ್ಲೋರೈಡ್, ಆರ್ಸೆನಿಕ್ ಕುಡಿದು ಸತ್ತರೇನು ತೊಂದರೆ ಇಲ್ಲ!) ಈಗ ಮಳೆ ನೀರಿನ ಕೊಯ್ಲೂ, ಕೆರೆಕಟ್ಟೆ ಅಭಿವೃದ್ದಿ, ಮಳೆನೀರಿನ ಹಿಂಗಿಸುವಿಕೆ ಇತ್ಯಾದಿ ಶಬ್ದ ಪುಂಜಗಳು ಬೋರಾಡತೊಡಗಿವೆ.
ಆದರೆ ಈಗ್ಗೆ 25 ವರ್ಷಗಳ ಹಿಂದೆ ಇದೇ ವಿಚಾರವಾಗಿ ಎಡತಾಕುತ್ತಿದ್ದ ರಾಜಾಸ್ತಾನದ ರಾಜೇಂದ್ರ ಸಿಂಗ್‍ರ ದನಿ ಯಾರಿಗೂ ಕೇಳಿರಲಿಲ್ಲ, ಆತನ ಮುಖ ಯಾರಿಗೂ ಕಂಡಿರಲಿಲ್ಲ. ಇವರು 25 ವರ್ಷದ ಹಿಂದೆ ತಮ್ಮ ‘ತರುಣ ಭಾರತ ಸಂಘ’ದ ಮೂಲಕ ರಾಜಸ್ತಾನದಲ್ಲಿ ಜನರ ಸಹಾಯದಿಂದ ಜನರ ಸ್ವತ್ತಾಗಿದ್ದ, ಜೀವಸತ್ವವಾಗಿದ್ದ ಆದರೆ ಸತ್ತುಹೋಗಿದ್ದ ಜೋಹಡ್‍ಗಳನ್ನು (ಕೆರೆಗಳು)ಜೀವಂತ ಗೊಳಿಸಿದರು. ಇವು ಜೀವ ತುಂಬಿಕೊಂಡ ಮೇಲೆ ಬತ್ತಿಹೋಗಿದ್ದ ಐದು ನದಿಗಳಲ್ಲೂ ನೀರಾಡಿ ಹರಿಯತೊಡಗಿದವು ರಾಜರ ಸ್ವತ್ತಾಗಿದ್ದಾಗ ಹರಿದು, ಜನರ ಸ್ವತ್ತಾಗುವ ಹೊತ್ತಿಗೆ ಬತ್ತಿಹೋಗಿದ್ದ ನೀರ ಸೆಲೆಗಳು ಮತ್ತೆ ಹರಿಯತೊಡಗಿರುವುದು ಎಂಥ ಸೌಭಾಗ್ಯ ರಾಜೇಂದ್ರಸಿಂಗ್ ಮಾದರಿ ದೇಶಕ್ಕೇ ಹಬ್ಬ ತೊಡಗಿರುವುದು ಆಶಾದಾಯಕ ಸೂಚನೆ.
- ಕೃಷ್ಣಮೂರ್ತಿ ಬಿಳಿಗೆರೆ

(ಹುಳಿಯಾರು ಬಿಎಂಎಸ್ ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲರು. ತಮ್ಮ ತೋಟದಲ್ಲಿ ಸಹಜ ಕೃಷಿ ಮಾಡುತ್ತಲೇ ಕೃಷಿ ಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಛೂಮಂತ್ರಯ್ಯನ ಕಥೆಗಳು, ಸಾವಿರ ಕಣ್ಣಿನ ನವಿಲು, ಕಿಂಚಿತ್ತು ಪ್ರೀತಿಯ ಬದುಕು, ದಾಸಯ್ಯ ಇದು ಕನಸೇನಯ್ಯ, ಧರೆ ಮೇಲೆ ಉರಿಪಾದ, ಮಳೆ ನೀರ ಕುಡಿ, ಅನ್ನ ದೇವರ ಮುಂದೆ, ಮರದಡಿಯ ಮನುಷ್ಯ ಸೇರಿದಂತೆ ಹಲವು ಪುಸ್ತಕಗಳನ್ನು ರಚಿಸಿದ್ದಾರೆ.)
ಇದನ್ನೂ ಓದಿ: ಕೋತಿಗಳಿಗೂ ರೈತರ ಮೇಲೆ ಕರುಣೆಯಿಲ್ಲ: ನಾವು ಕೋತಿ ಹಿಡಿಸಿದ್ದು ಹೀಗೆ..


