‘ಪೆಟ್ರೋಲ್ ಬೆಲೆಯನ್ನು 5 ರೂ ಇಳಿಸುವ ‘ನಾಟಕ’ವನ್ನು ಮೋದಿ ಸರ್ಕಾರ ಮಾಡಿದೆ. ಕೇಂದ್ರ ಸರ್ಕಾರವು ಘೋಷಿಸಿರುವ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತದಿಂದ ಜನರಿಗೆ ನಿಜವಾದ ಪರಿಹಾರ ಸಿಗುವುದಿಲ್ಲ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಂತರ ಕೇಂದ್ರವು, ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸುತ್ತದೆ’ ಎಂದು ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಬುಧವಾರ ತಿಳಿಸಿದ್ದಾರೆ.
‘ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ 50 ರೂ ಕಡಿಮೆ ಮಾಡಿದ್ದರೆ, ಅದು ನಿಜವಾಗಿಯು ಪರಿಹಾರವನ್ನು ತರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಅಸಮರ್ಪಕವಾಗಿದೆ. ಉತ್ತರ ಪ್ರದೇಶ ಚುನಾವಣೆ ನಂತರ ಕೇಂದ್ರವು ಪೆಟ್ರೋಲಿಯಂ ಬೆಲೆಯನ್ನು ಮತ್ತೆ ಹೆಚ್ಚಿಸುತ್ತಾರೆ’ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಬುಧವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂ ಮತ್ತು ಡೀಸೆಲ್ ಮೇಲೆ 10 ರೂ ಸುಂಕವನ್ನು ಇಳಿಸಿದೆ.
ಆರ್‌ಜೆಡಿ ನಾಯಕ ಮತ್ತು ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 70ರೂಗಿಂತ ಕಡಿಮೆ ಮಾಡಬೇಕು ಎಂದಿದ್ದಾರೆ.
‘ಬಿಜೆಪಿಯು ಈ ಮೊದಲು ಲೀಟರ್ ಪೆಟ್ರೋಲ್ ಗೆ 70 ರೂ ದುಬಾರಿ ಎಂದು ಭಾವಿಸಿತ್ತು. ಆದರೆ ಈಗ ಅವರೇ 100 ರೂಗಿಂತ ಹೆಚ್ಚು ಬೆಲೆ ಏರಿಕೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ಈಗಲಾದರೂ ಪೆಟ್ರೊಲ್ ಬೆಲೆ ಕನಿಷ್ಠ 70 ರೂ ಗಳಿಗೆ ತರಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನು ಓದಿ: ಸಣ್ಣ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ: ಮಿಶ್ರ ಪ್ರತಿಕ್ರಿಯೆ


