ಸುಪ್ರೀಂ ಕೋರ್ಟ್‌ನಲ್ಲಿ ಸೋಮವಾರ ನಡೆಯುತ್ತಿದ್ದ ವಿಚಾರಣೆ ಸಮಯದಲ್ಲಿ ವಕೀಲರೊಬ್ಬರು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯಲು ಪ್ರಯತ್ನಿಸಿದ ನಾಟಕೀಯ ದೃಶ್ಯ ನಡೆಯಿತು. ಆರೋಪಿಯನ್ನು ನ್ಯಾಯಾಲಯದ ಕೊಠಡಿಯಿಂದ ಹೊರಗೆ ಕರೆದೊಯ್ಯುತ್ತಿದ್ದಾಗ, ‘ಭಾರತ ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ’ ಎಂದು ಕಿರುಚಾಡಿದ್ದಾನೆ.
ಮಧ್ಯಪ್ರದೇಶದಲ್ಲಿ ಹಾನಿಗೊಳಗಾದ ವಿಷ್ಣು ವಿಗ್ರಹದ ಪುನಃಸ್ಥಾಪನೆಗೆ ಸಂಬಂಧಿಸಿದ ಅರ್ಜಿಯನ್ನು ಆಲಿಸುವಾಗ ಮುಖ್ಯ ನ್ಯಾಯಮೂರ್ತಿಗಳು ‘ದೇವರನ್ನೇ ಕೇಳಿ’ ಎಂಬ ಹೇಳಿಕೆ ನೀಡಿದ ಕೆಲವೇ ವಾರಗಳ ನಂತರ ವಕೀಲನಿಂದ ಇಂದು ಕೃತ್ಯ ನಡೆದಿದೆ.
ಆರೋಪಿಯನ್ನು ತಕ್ಷಣವೇ ಬಂಧಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಗವಾಯಿ ಶಾಂತಚಿತ್ತರಾಗಿದ್ದರು, ಯಾವುದೇ ಅಡೆತಡೆಯಿಲ್ಲದೆ ತಮ್ಮ ವಿಚಾರಣೆಯನ್ನು ಮುಂದುವರೆಸಿದರು.
ಘಟನೆಯ ನಂತರ ಮಾತನಾಡಿದ ಅವರು, “ಇದೆಲ್ಲದರಿಂದ ವಿಚಲಿತರಾಗಬೇಡಿ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ. ವಿಚಾರಣೆಯನ್ನು ಮುಂದುವರಿಸಿ” ಎಂದು ಶಾಂತವಾಗಿ ಹೇಳಿದರು.
ಸುಪ್ರೀಂ ಕೋರ್ಟ್ ವಕೀಲ ರೋಹಿತ್ ಪಾಂಡೆ ಅವರು, ಆರೋಪಿಯನ್ನು 2011 ರಿಂದ ಬಾರ್ ಅಸೋಸಿಯೇಷನ್‌ನ ಸದಸ್ಯ ಎಂದು ಗುರುತಿಸಿದ್ದಾರೆ. “ಮುಖ್ಯ ನ್ಯಾಯಮೂರ್ತಿಗಳ ದೇವರ ಕುರಿತ ಹೇಳಿಕೆಗಳಿಗೆ ಪ್ರತಿಕ್ರಿಯೆಯಾಗಿ ಈ ಕೃತ್ಯ ನಡೆದಿದೆ ಎಂದು ತೋರುತ್ತದೆ. ನಾನು ಈ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇನೆ” ಎಂದು ಅವರು ಹೇಳಿದರು.
ಸೆಪ್ಟೆಂಬರ್‌ನಲ್ಲಿ, ಮಧ್ಯಪ್ರದೇಶದ ಜವಾರಿ ದೇವಸ್ಥಾನದಲ್ಲಿ 7 ಅಡಿ ಎತ್ತರದ ವಿಷ್ಣು ವಿಗ್ರಹವನ್ನು ಪುನಃಸ್ಥಾಪಿಸಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸುತ್ತಾ, ಮುಖ್ಯ ನ್ಯಾಯಮೂರ್ತಿ ಗವಾಯಿ ಅರ್ಜಿದಾರರಿಗೆ, “ಇದು ಸಂಪೂರ್ಣವಾಗಿ ಪ್ರಚಾರ ಹಿತಾಸಕ್ತಿ ಮೊಕದ್ದಮೆ. ಹೋಗಿ ದೇವರನ್ನೇ ಈಗ ಏನಾದರೂ ಮಾಡಲು ಕೇಳಿ. ನೀವು ವಿಷ್ಣುವಿನ ಕಟ್ಟಾ ಭಕ್ತ ಎಂದು ಹೇಳುತ್ತೀರಿ. ಆದ್ದರಿಂದ ಈಗಲೇ ಹೋಗಿ ಪ್ರಾರ್ಥಿಸಿ” ಎಂದು ಹೇಳಿದರು.
ಈ ತೀರ್ಪಿನ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆ, ವಿವಾದಾತ್ಮಕ ಹೇಳಿಕೆಗಳು ಬಂದವು. ಬಳಿಕ, ಮುಖ್ಯ ನ್ಯಾಯಮೂರ್ತಿ ತಮ್ಮ ಹೇಳಿಕೆಗಳನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಹೇಳಿದರು. “ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ” ಎಂದು ಒತ್ತಿ ಹೇಳಿದರು.
ಕೋರ್ಟ್ ಹಾಲ್‌ನಲ್ಲಿ ನಡೆದದ್ದೇನು?
ಸಿಜೆಐ ನೇತೃತ್ವದ ಪೀಠವು ವಕೀಲರ ಪ್ರಕರಣಗಳ ಪ್ರಸ್ತಾಪವನ್ನು ಆಲಿಸುತ್ತಿದ್ದಾಗ ನಾಟಕೀಯ ಘಟನೆ ನಡೆಯಿತು. ಸ್ಥಳದಲ್ಲದಿfದವರ ಪ್ರಕಾರ, ವಕೀಲರು ವೇದಿಕೆಯ ಬಳಿಗೆ ಹೋಗಿ ತಮ್ಮ ಶೂ ತೆಗೆದು ನ್ಯಾಯಾಧೀಶರ ಮೇಲೆ ಎಸೆಯಲು ಪ್ರಯತ್ನಿಸಿದರು.
ಆದರೂ, ನ್ಯಾಯಾಲಯದಲ್ಲಿ ಹಾಜರಿದ್ದ ಭದ್ರತಾ ಸಿಬ್ಬಂದಿ ಸಕಾಲದಲ್ಲಿ ಮಧ್ಯಪ್ರವೇಶಿಸಿ ವಕೀಲರನ್ನು ಹೊರಗೆ ಕರೆದೊಯ್ದರು. ಹೊರನಡೆಯುವಾಗ, ವಕೀಲನು “ಸನಾತನ ಧರ್ಮದ ಅಪಮಾನ ಸಹಿಸುವುದಿಲ್ಲ” ಎಂದು ಕಿರುಚಾಡಿದ್ದಾನೆ.
ಸಿಜೆಐ ಯಾವುದೇ ಮುಜುಗರಕ್ಕೊಳಗಾಗದೆ ನ್ಯಾಯಾಲಯದಲ್ಲಿ ಹಾಜರಿದ್ದ ವಕೀಲರು ತಮ್ಮ ವಾದಗಳನ್ನು ಮುಂದುವರಿಸುವಂತೆ ಸೂಚಿಸಿದರು.
“ಇದೆಲ್ಲದರಿಂದ ವಿಚಲಿತರಾಗಬೇಡಿ. ನಾವು ವಿಚಲಿತರಾಗುವುದಿಲ್ಲ. ಈ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದರು.
Breaking now: shoe thrown at CJI Justice Gavai in court by a lawyer claiming that he would not tolerate ‘anti sanatan’ remarks. TOTALLY UNACCEPTABLE behaviour. If a CJI’s remarks on a Lord Vishnu idol in a court proceedings is going to provoke violent behaviour like this, then…
— Rajdeep Sardesai (@sardesairajdeep) October 6, 2025
ಕೃತ್ಯ ಖಂಡಿಸಿದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ
ಸಿಜೆಐ ಮೇಲೆ ಶೂ ಎಸೆಯಲು ಯತ್ನಿಸಿದ ವಲೀಕನ ಕೃತ್ಯವನ್ನು ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಖಂಡಿಸಿದ್ದಾರೆ. “ಸನಾತನ ವಿರೋಧಿ ಹೇಳಿಕೆಗಳನ್ನು ಸಹಿಸುವುದಿಲ್ಲ ಎಂದು ವಕೀಲರೊಬ್ಬರು ನ್ಯಾಯಾಲಯದಲ್ಲಿ ಸಿಜೆಐ ನ್ಯಾಯಮೂರ್ತಿ ಗವಾಯಿ ಅವರ ಮೇಲೆ ಶೂ ಎಸೆದ ಘಟನೆ ನಡೆದಿದೆ. ಇದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲದ ವರ್ತನೆ. ನ್ಯಾಯಾಲಯದ ವಿಚಾರಣೆಯಲ್ಲಿ ವಿಷ್ಣುವಿನ ವಿಗ್ರಹದ ಬಗ್ಗೆ ಸಿಜೆಐ ಅವರ ಹೇಳಿಕೆಗಳು ಈ ರೀತಿಯ ಹಿಂಸಾತ್ಮಕ ನಡವಳಿಕೆಯನ್ನು ಪ್ರಚೋದಿಸಿದರೆ, ಅದು ತೀವ್ರ ಕಳವಳಕಾರಿ. ದುಃಖಕರವೆಂದರೆ, ಜಾತಿ ದ್ವೇಷ ಮತ್ತು ಧಾರ್ಮಿಕ ಅಸಹಿಷ್ಣುತೆಯ ಸಂಸ್ಕೃತಿಯನ್ನು ‘ಸಾಮಾನ್ಯಗೊಳಿಸಲಾಗುತ್ತಿದೆ’. ಸಾಮಾಜಿಕ ಮಾಧ್ಯಮ ಸೇನೆಗಳು ಮತ್ತು ವಿಷಕಾರಿ ಟಿವಿ ‘ಚರ್ಚೆ’ಗಳೊಂದಿಗೆ ಹಿಂಸಾಚಾರವನ್ನು ಉತ್ತೇಜಿಸುತ್ತಿದೆ” ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ| ಕಳ್ಳನೆಂದು ಭಾವಿಸಿ ದಲಿತ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು


