‘‘ರಾತ್ರಿ ರಾಜಕಾರಣದ ಸಂಸ್ಕೃತಿ ತಿಳಿದಿರುವುದರಿಂದಲೆ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ” ಎಂದು ಬಿಜೆಪಿ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಪಾಟೀಲ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, “ಚುನಾವಣೆಗೆ ಮುನ್ನ, ನಾನು ನಿಮ್ಮ ಮನೆ ಮಗಳು ಎಂದು ಹಲವು ಕನಸುಗಳನ್ನು ತೋರಿಸಿದ್ದರು. ಆದರೆ ಕನಸುಗಳನ್ನು ನನಸು ಮಾಡಲಾಗಿಲ್ಲ. ಹೀಗಾಗಿ ಕ್ಷೇತ್ರದ ಜನರು ಪ್ರತಿಕ್ರಿಯೆ ಕೊಡಲು ಆರಂಭಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್
“ಜನರು ಪ್ರತಿಕ್ರಿಯೆ ನೀಡುತ್ತಿರುವಾಗ ಅದು ಬಿಜೆಪಿಯವರು ಎಂದು ಹೇಳುತ್ತಿದ್ದೀರಿ. ರಾತ್ರಿ ರಾಜಕಾರಣ ಮಾಡುವ ಸಂಸ್ಕೃತಿ ಬಿಜೆಪಿಯದ್ದಲ್ಲ ಕಾಂಗ್ರೆಸ್ಸಿನದ್ದು. ರಾತ್ರಿ ರಾಜಕೀಯ ಸಂಸ್ಕೃತಿ ತಿಳಿದಿರುವುದರಿಂದಲೆ ನೀವು ಶಾಸಕಿ ಆಗಿದ್ದೀರಿ. ನೀವು ಕೆಲಸ ಮಾಡಿಲ್ಲ ಎಂದು ನಾನು ಹೇಳುತ್ತಿಲ್ಲ. ಪ್ರತಿಯೊಬ್ಬರೂ ಶಾಸಕರು ಸಂಸದರಿಗೆ ಕೆಲವೊಂದು ಯೋಜನೆಗಳಿದೆ. ಕ್ಷೇತ್ರದಲ್ಲಿ ಹೇಳುತ್ತಿರುವ ಅಭಿವೃದ್ಧಿ ಹೊಳೆ ಎಲ್ಲಿದೆ ಎನ್ನುವುದನ್ನು ಹೇಳಿದರೆ ನಾನೂ ನೋಡಿಕೊಂಡು ಬರುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ.
ಸಂಜಯ ಪಾಟೀಲ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದರು ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ. ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2 ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿ, “ಆ ಕ್ಷೇತ್ರದ ಜನ ಯಾರಿಗೆ ಎಷ್ಟು ಮತ ನೀಡಿದ್ದಾರೆ ಎಂಬುದನ್ನು ನೋಡಿಕೊಳ್ಳಲಿ. ಮುಂದೆಯೂ ಜನರೇ ಉತ್ತರ ನೀಡುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ದಲಿತ ಯುವಕನಿಗೆ ದಂಡ ಹಾಕಿದ್ದ ಪ್ರಕರಣ ಬಯಲಿಗೆಳೆದ ವರದಿಗಾರನಿಗೆ ಜೀವಭಯ


