‘ಮಾಜಿ ಸಂಸದರಾಗಿರುವ, ವಿಆರ್‌ಎಲ್ ಕಂಪನಿ ಮುಖ್ಯಸ್ಥರಾಗಿರುವ, ಸಾರ್ವಜನಿಕ ಜೀವನದಲ್ಲಿರುವ ವಿಜಯ ಸಂಕೇಶ್ವರ್ ಸುದ್ದಿಗೋಷ್ಠಿ ಕರೆದು ಕೋವಿಡ್ ಚಿಕಿತ್ಸೆಗೆ ಸಂಬಂಧಿಸಿದಂತೆ ಅವೈಜ್ಞಾನಿಕ ಸಲಹೆ ನೀಡಿದ್ದಾರೆ. ಇದು ಒಬ್ಬ ಶಿಕ್ಷಕರ ಸಾವಿಗೆ ಕಾರಣವಾಗಿದೆ. ಕೂಡಲೇ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ಸಲ್ಲಿಕೆಯಾಗಿದೆ.
ಬೆಳಗಾವಿ ಜಿಲ್ಲೆ ಅಥಣಿಯ ಯುವ ವಕೀಲ, ಆರ್‌ಟಿಐ ಕಾರ್ಯಕರ್ತ ಮತ್ತು ಮಾನವ ಹಕ್ಕು ಹೋರಾಟಗಾರ ಭೀಮನಗೌಡ ಪರಗೊಂಡ ಅವರು ಏಪ್ರಿಲ್ 30ರಂದು ಹೀಗೊಂದು ದೂರು ಸಲ್ಲಿಸಿ, ‘ವಿಜಯ ಸಂಕೇಶ್ವರ್ ವಿರುದ್ಧ ಸು-ಮೊಟೊ ಆಧಾರದಲ್ಲಿ ಸರ್ಕಾರ ಪ್ರಕರಣ ದಾಖಲಿಸಬೇಕು. ಸಿಂಧನೂರಿನ ಶಿಕ್ಷಕ ಬಸವರಾಜ್ ಅವರ ಸಾವಿಗೆ ಸಂಕೇಶ್ವರ್ ಸಲಹೆಯೇ ಕಾರಣ. ಐಪಿಸಿ ಸೆಕ್ಷನ್ 306 ಮತ್ತು ಸಾಂಕ್ರಾಮಿಕ ತಡೆ ಆಕ್ಟ್ ಪ್ರಕಾರ ಕೇಸು ದಾಖಲಿಸಬೇಕು’ ಎಂದು ಆಗ್ರಹಿಸಿದ್ದಾರೆ,
ಸಂಕೇಶ್ವರ್ ಧಾರವಾಡ ಜಿಲ್ಲೆ ನಿವಾಸಿಯಾಗಿರುವುದರಿಂದ (ಗದಗ ಮೂಲದವರು) ಧಾರವಾಡ ಡಿಸಿ, ಶಿಕ್ಷಕನ ಸಾವು ಸಂಭವಿಸಿದ ರಾಯಚೂರು ಜಿಲ್ಲೆಯ ಡಿಸಿ ಮತ್ತು ಸಿಂಧನೂರು ತಾಲೂಕು ತಹಸೀಲ್ದಾರ್ ಅವರಿಗೂ ಈ ದೂರಿನ ಪ್ರತಿ ಕಳಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ದೂರುದಾರ ವಕೀಲ ಭೀಮನಗೌಡ ಪರಗೊಂಡ, ‘ಸಾರ್ವಜನಿಕ ಜೀವನದಲ್ಲಿರುವ, ಒಂದು ಪತ್ರಿಕೆ ಮತ್ತು ಒಂದು ಟಿವಿ ಚಾನೆಲ್ ಹೊಂದಿರುವ ವ್ಯಕ್ತಿ, ಅದೂ ಸಾಂಕ್ರಾಮಿಕದ ಸಂದರ್ಭದಲ್ಲಿ ಅವೈಜ್ಞಾನಿಕ ಸಲಹೆಯನ್ನು ಸಾರ್ವಜನಿಕವಾಗಿ ನೀಡಿದ್ದು ಘೋರ ಅಪರಾಧ. ಕೋವಿಡ್ ಕಾರಣಕ್ಕೆ ಜನ ಆತಂಕದಲ್ಲಿದ್ದಾರೆ. ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸುತ್ತಿವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮೂಗಿಗೆ ನಿಂಬೆರಸ ಹಾಕಿಕೊಂಡರೆ ಆಮ್ಲಜನಕ ಮಟ್ಟ ಹೆಚ್ಚುತ್ತದೆ ಎಂಬ ಅವೈಜ್ಞಾನಿಕ ಸಲಹೆ ನೀಡಿದ್ದು ಸಮಾಜದಲ್ಲಿ ಅವಘಡಗಳಿಗೆ ಕಾರಣವಾಗುತ್ತಿದೆ. ಶಿಕ್ಷಕರ ಸಾವು ಇದಕ್ಕೆ ಒಂದು ಉದಾಹರಣೆ’ ಎಂದರು.

ಕಳೆದ ವಾರ, ವಿಜಯ್ ಸಂಕೇಶ್ವರ್ ಅವರು ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಆಮ್ಲಜನಕ ಸಮಸ್ಯೆ ಬಗೆಹರಿಸಲು ನಿಂಬೆರಸವೇ ಪರ್ಯಾಯ ಎಂದು ಹೇಳಿದ್ದರಲ್ಲದೇ, ತಾವು ದಿನವೂ ಈ ಪ್ರಯೋಗ ಮಾಡುತ್ತಿರುವುದಾಗಿ ಮತ್ತು ಸುಮಾರು 200 ಜನ ಪರಿಚಿತರು ಕೂಡ ಈ ಪ್ರಯೋಗ ಮಾಡುತ್ತಿದ್ದಾರೆ. ಇದರಿಂದ ಆಮ್ಲಜನಕ ಮಟ್ಟ ವೃದ್ಧಿಯಾಗುತ್ತದೆ’ ಎಂದು ಹೇಳಿದ್ದರು.
ಇದಕ್ಕೆ ಜೀವ ರಸಾಯನ ವಿಜ್ಞಾನಿ ಪ್ರೊ. ನರೇಂದ್ರ ನಾಯಕ್, ಆಹಾರ ತಜ್ಞ ಕೆ.ಸಿ ರಘು ಸೇರಿ ಹಲವಾರು ತಜ್ಞರು ಮತ್ತು ವೈಜ್ಞಾನಿಕ ಮನೋಭಾವನೆಯ ಸಾವಿರಾರು ಜನರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಮೂರು ದಿನದ ಹಿಂದೆ ಸಿಂಧನೂರುನಲ್ಲಿ ಸರ್ಕಾರಿ ಶಾಲೆ ಶಿಕ್ಷಕ ಬಸವರಾಜ್, ಮೂಗಿಗೆ ನಿಂಬೆರಸ ಹಾಕಿಕೊಂಡ ನಂತರ ವಿಪರೀತ ವಾಂತಿ ಸಂಭವಿಸಿ ನಿಧನರಾದರು ಎಂದು ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಅಪಾದಿಸಿದ್ದರು. ಅವರಿಗೆ ಬೇರೆ ಯಾವುದೇ ಕಾಯಿಲೆ ಇಲ್ಲ ಎಂದು ಅವರು ಹೇಳಿದ್ದರು. ಇದು ರಾಜ್ಯಾದ್ಯಂತ ಸಂಕೇಶ್ವರ್ ವಿರುದ್ಧ ಆಕ್ರೋಶ ಮೂಡಿಸಿತ್ತು.

‘ಮಾಧ್ಯಮ ಕೈಯಲ್ಲಿ ಇರುವುದರಿಂದ ಸಂಕೇಶ್ವರ್ ಅವರು, ಇದು ಹೃದಯಾಘಾತದ ಸಾವು ಎಂದು ಯಾವ ಆಧಾರವಿಲ್ಲದೇ ಬರೆಸಿದರು. ಬಹುಪಾಲು ಮಾಧ್ಯಮಗಳು ಶಿಕ್ಷಕನ ಸಾವಿನ ಸುದ್ದಿ ಮಾಡಿದವೇ ಹೊರತು, ಸಂಕೇಶ್ವರ್ ಸಲಹೆ ಅಪಾಯಕಾರಿ ಎಂಬ ಸ್ಪಷ್ಟ ಸಂದೇಶ ನೀಡಲು ಯತ್ನಿಸಲಿಲ್ಲ. ಹೀಗಾಗಿ ನಾನು ದೂರು ನೀಡಬೇಕಾಯಿತು’ ಎಂದು ಪರಗೊಂಡ ನಾನುಗೌರಿ.ಕಾಂ ಗೆ ತಿಳಿಸಿದರು.
‘ಸಂಕೇಶ್ವರ್ ಅಷ್ಟೇ ಅಲ್ಲ, ಅವರ ಅವೈಜ್ಞಾನಿಕ ಸಲಹೆಯನ್ನು ಬೆಂಬಲಿಸಿದ ಎಲ್ಲರಿಗೂ, ಮುಖ್ಯವಾಗಿ ಜನಪ್ರತಿನಿಧಿಗಳು, ಪತ್ರಕರ್ತರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದೇನೆ’ ಎಂದು ವಕೀಲ ಪರಗೊಂಡ ತಿಳಿಸಿದರು.
‘ದೂರಿನಲ್ಲಿ ಸಂಕೇಶ್ವರ್ ಬಿಟ್ಟು ಬೇರೆ ಹೆಸರು ಉಲ್ಲೇಖಿಸಿಲ್ಲ. ಆದರೆ ಪತ್ರಕರ್ತ ವಿಶ್ವೇಶ್ವರ ಭಟ್ಟ, ಸಂಸದ ಪ್ರತಾಪ ಸಿಂಹ ಮತ್ತು ಕೋಲಾರದ ಬಿಜೆಪಿ ಜನಪ್ರತಿನಿಧಿ ಮುನಿಸ್ವಾಮಿ ಮುಂತಾದವರು ಸಂಕೇಶ್ವರ್ ಅವರ ಅಪಾಯಕಾರಿ ಸಲಹೆಯನ್ನು ಬೆಂಬಲಿಸುವ ಮೂಲಕ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿಸಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವ ಇವರ ಮೇಲೂ ಪ್ರಕರಣ ದಾಖಲಾಗಬೇಕು’ ಎಂದು ಪರಗೊಂಡ ಅಭಿಪ್ರಾಯ ಪಟ್ಟರು.
2003ರಿಂದ ಎಐಎಸ್‌ಎಫ್ ಸಂಘಟನೆಯಲ್ಲಿ ಹಲವಾರು ಹುದ್ದೆಗಳಲ್ಲಿ ಹೋರಾಟ ಮಾಡಿರುವ ಪರಗೊಂಡ ಅವರು, ಬೆಳಗಾವಿ, ಕಲಬುರ್ಗಿ ಮತ್ತು ರಾಯಚೂರುಗಳಲ್ಲಿ ನಡೆದ ಅನೇಕ ಜನಪರ ಚಳುವಳಿಗಳ ನೇತೃತ್ವ ವಹಿಸಿದ್ದಾರೆ.
ಮುಖ್ಯ ಕಾರ್ಯದರ್ಶಿ ಪರಗೊಂಡರ ದೂರಿಗೆ ಪ್ರತಿಕ್ರಿಯಿಸುವರೇ? ಈ ಬಿಜೆಪಿ ಆಡಳಿತದಲ್ಲಿ ಅದೆಲ್ಲ ಸಾಧ್ಯವೇ ಎಂಬುದನ್ನು ಕಾದು ನೋಡಬೇಕಿದೆ.
- ಪಿ.ಕೆ. ಮಲ್ಲನಗೌಡರ್


