ಒಂದಷ್ಟು ಆತಂಕ ಒಂದಷ್ಟು ಭರವಸೆಗಳ ಜತೆಗೆ ಎಲ್ಲಾ ವರ್ಷಗಳೂ ಪ್ರಾರಂಭವಾಗುತ್ತವೆ ಮತ್ತು ಮುಗಿದು ಹೋಗುತ್ತವೆ. ಭಾರತದಲ್ಲಿ ವರ್ಷ 2021 ಮುಗಿಯುವ ವೇಳೆಗೆ ತಿಂಗಳ ಹಿಂದಷ್ಟೇ ಕೇಂದ್ರ ಸರಕಾರ ಬೃಹತ್ ರೈತರ ಹೋರಾಟಕ್ಕೆ ಮಣಿದು ವಿವಾದಿತ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ನೆನಪು ಇನ್ನೂ ಹಸಿರಾಗಿದೆ. ಇಡೀ ಬೆಳವಣಿಗೆ ದೇಶದ ಕೋಟ್ಯಂತರ ಜನರ ಮನಸ್ಸಿನಲ್ಲಿ ಏನೋ ಭರವಸೆ ಹುಟ್ಟಿಸಿದೆ. ಎಲ್ಲವೂ ಕೈಮೀರಿ ಹೋಗಿಲ್ಲ. ಅಧಿಕಾರಸ್ಥರ ದೈತ್ಯ ಶಕ್ತಿ ಎಷ್ಟೇ ಅಗಾಧವಾಗಿರಲಿ ನ್ಯಾಯಯುತ ಪ್ರತಿರೋಧದ ಮುಂದೆ ಅದು ತಲೆ ಬಾಗಲೇಬೇಕೆಂಬ ಸಂದೇಶವನ್ನು ಮನಸ್ಸಲ್ಲಿ ತುಂಬಿಕೊಂಡು ಹೊಸ ವರ್ಷವನ್ನು ಎದುರುನೋಡುವಂತೆ ಮಾಡಿದೆ.
ಆ ವೇಳೆಗಾಗಲೇ ಬಂದದ್ದು ಮತ್ತೊಂದು ಸುದ್ದಿ. ಹರಿದ್ವಾರದಲ್ಲಿ ನಡೆದ ಧರ್ಮಸಂಸತ್‌ನಲ್ಲಿ ಸ್ವಾಮಿ-ಸಾಧ್ವಿ ಅಂತೆಲ್ಲಾ ಕರೆಸಿಕೊಳ್ಳುವ ಕೆಲ ವ್ಯಕ್ತಿಗಳು ಯಾವ ಅಳುಕೂ ಇಲ್ಲದೆ ಈ ದೇಶದಲ್ಲೊಂದು ನರಮೇಧ ನಡೆಯಲೇಬೇಕು ಎಂಬ ಕರೆ ನೀಡಿದ್ದಾರೆ. ದೇಶದಲ್ಲಿ ಜನಾಂಗೀಯ ಶುದ್ಧೀಕರಣ ಆಗಬೇಕು ಎಂದಿದ್ದಾರೆ. ಅರ್ಥಾತ್ ಮುಸ್ಲಿಮರನ್ನು ಕೊಂದು ಹಾಕುವುದೇ ಧರ್ಮ ಎಂಬ ಸಂದೇಶ ನೀಡಿದ್ದಾರೆ. ಇದನ್ನು ಕೇಳಿಸಿಕೊಂಡ ನಂತರವೂ ದೇಶವನ್ನಾಳುವ ದೊಡ್ಡದೊಡ್ಡ ನಾಯಕರೆಲ್ಲ ಸುಮ್ಮನಿದ್ದಾರೆ. ಒಂದಷ್ಟು ಪ್ರತಿಭಟನೆಗಳು ಕೇಳಿಸಿದ ನಂತರ ಘಟನೆಯ ಕುರಿತಾಗಿ ಪೊಲೀಸು ಕೇಸು ದಾಖಲಾಗಿದೆ ಎನ್ನುವುದನ್ನು ಬಿಟ್ಟರೆ ಇದೇನೋ ಒಂದು ಸಾಮಾನ್ಯ ಘಟನೆ ಎನ್ನುವ ರೀತಿಯಲ್ಲಿ ಸರಕಾರ ನಡೆಸುವ ಮಂದಿ ಮತ್ತು ಆಳುವ ಪಕ್ಷದ ಮಂದಿ ಇದ್ದಾರೆ. ವಿರೋಧ ಪಕ್ಷದವರೂ ವಿಶೇಷವಾಗಿ ತಲೆಕೆಡಿಸಿಕೊಂಡ ಹಾಗೆ ಕಾಣುವುದಿಲ್ಲ. ಅಕ್ಷರಶಃ ನಾಜಿ ಜರ್ಮನಿಯನ್ನು ನೆನಪಿಸುವ ಇಂತಹ ಒಂದು ಪ್ರಸಂಗ ಈ ಹಿಂದೆ ದೇಶದಲ್ಲಿ ನಡೆದ ಹಾಗಿಲ್ಲ. ಕೆಲವೇ ಕೆಲವು ವರ್ಷಗಳ ಹಿಂದೆ ಹೀಗೆಲ್ಲಾ ಮಾತನಾಡಲು ಅಕ್ಷರಶ ಕ್ರಿಮಿನಲ್ ವ್ಯಕ್ತಿಗಳು ಕೂಡಾ ಹಿಂಜರಿಯುತಿದ್ದರೇನೋ? ಈಗ 2021ರ ಕೊನೆಗೆ ಹೀಗೆಲ್ಲಾ ಮಾತನಾಡುವುದು ಅಪವಾದ ಅನಿಸುವುದಿಲ್ಲ. ಮಾಮೂಲು ಅಂತ ಸ್ವೀಕೃತವಾಗುತ್ತದೆ!

ಯಾವುದನ್ನು ನೆನೆದು ಹೊಸ ವರ್ಷದತ್ತ ಮುನ್ನೋಟ ಹರಿಸುವುದು? ಜನ ಚಳವಳಿಯೊಂದಕ್ಕೆ ಸರಕಾರ ಮಣಿದ ವಿಚಾರವನ್ನು ನೆನೆದೇ ಅಥವಾ ದೇಶದಲ್ಲಿ ಮನುಷ್ಯ ದ್ವೇಷ ಈ ಪರಿ ಹರಡುವುದನ್ನು ನೆನೆದೇ? ಸಂದ 2021ನೇ ವರ್ಷವನ್ನು ಏನು ಅಂತ ನೆನಪಿಟ್ಟುಕೊಳ್ಳುವುದು? ಚಾರಿತ್ರಿಕ ರೈತ ಚಳವಳಿಯ ಮುಂದೆ ಸರಕಾರ ತಲೆಬಾಗಿದ ವರ್ಷ ಅಂತಲೇ ಅಥವಾ ಸಂವಿಧಾನ ವಿರೋಧಿ ಶಕ್ತಿಗಳು ಈ ದೇಶದಲ್ಲಿ ಇನ್ನಿಲ್ಲ ಎಂಬಂತೆ ವಿಜೃಂಭಿಸಿದ ವರ್ಷ ಅಂತಲೇ?
ರೈತ ಚಳವಳಿ ಯಶಸ್ವೀ ಆಯಿತು. ಆ ಚಳವಳಿಯಲ್ಲಿ ಸಾವಿರ ಸಂದೇಶಗಳಿವೆ. ಚಳವಳಿ ನ್ಯಾಯ ಮಾರ್ಗದಲ್ಲಿದ್ದರೆ, ಚಳವಳಿಗಾರರ ಎದೆಯಲ್ಲಿ ಧೈರ್ಯ ಇದ್ದರೆ, ಚಳವಳಿಗಾರರ ಹೃದಯದಲ್ಲಿ ಮಾನವೀಯತೆ ಇದ್ದರೆ, ಚಳವಳಿಗಾರರಿಗೆ ತಮ್ಮ ಗುರಿಯ ಬಗ್ಗೆ ನಿರ್ದಿಷ್ಟತೆ ಇದ್ದರೆ, ಚಳವಳಿಗಾರರಿಗೆ ಕಾಯುವ ತಾಳ್ಮೆ ಇದ್ದರೆ, ಚಳವಳಿಗಾರರಲ್ಲಿ ಒಗ್ಗಟ್ಟಿದ್ದರೆ ಜನ ಚಳವಳಿಗಳ ಮುಂದೆ ಅಧಿಕಾರದ ಅಟ್ಟಹಾಸ ನಡೆಯಲಾರದು ಅಂತ ದೇಶಕ್ಕೆ ಗೊತ್ತಾಯಿತು. ಅದು ದೊಡ್ಡ ಬೆಳವಣಿಗೆ ಏನೋ ಸರಿ. ಆದರೆ ಇಷ್ಟೆಲ್ಲಾ ಗೊತ್ತಾದ ಮೇಲೆ ಏನಾಯಿತು ಎನ್ನುವುದು ಪ್ರಶ್ನೆ. ಸರಕಾರ ಈ ಒಂದು ವಿಷಯದಲ್ಲಿ ಮಣಿದಿರಬಹುದು. ಅಥವಾ ಮಣಿದಂತೆ ತೋರುವ ತಂತ್ರ ಬಳಸಿರಬಹುದು. ಸರಕಾರಕ್ಕೆ ಹಿನ್ನಡೆಯಾಯಿತು ಅಂತ ಅನ್ನಿಸಬಹುದು. ಸರಕಾರಕ್ಕೆ ಹಿನ್ನಡೆ ಆಗಿದ್ದೆ ಆದರೂ ಅದರಿಂದ ಏನಾಯಿತು? ಚಳವಳಿ ಹೂಡಿದ ರೈತರಿಗೆ ಅವರು ವಿರೋಧಿಸಿದ ಕಾನೂನು ಜಾರಿಯಾಗುವುದಿಲ್ಲ ಎನ್ನುವ ನೆಮ್ಮದಿ ಇರಬಹುದು. ಅದರಿಂದಾಚೆಗೆ ಆ ಕಾನೂನುಗಳು ಕೃಷಿ ಕ್ಷೇತ್ರದಲ್ಲಿ ತಂದೊಡ್ಡಬಹುದಾದ ಅನಾಹುತ ಸದ್ಯಕ್ಕೆ ತಪ್ಪಿತಲ್ಲಾ ಅಂತ ದೇಶದ ಪ್ರಜ್ಞಾವಂತ ಜನ ನಿಟ್ಟುಸಿರಿಡಬಹುದು. ಅದರಾಚೆಗೆ ಏನಾಯಿತು. ಚಳವಳಿ ನಡೆಯಲು ಕಾರಣವಾದ ಕಾನೂನನ್ನು ರೂಪಿಸಿದ ಹಿಂದಿನ ಆರ್ಥಿಕ ಚಿಂತನೆಯೇನಾದರೂ ಬದಲಾಯಿತೇ, ಆ ಚಳವಳಿಯನ್ನು ಹತ್ತಿಕ್ಕಲು ಸರಕಾರ ಮತ್ತು ಅದನ್ನು ಬೆಂಬಲಿಸುವ ಸಂಘಟನೆಗಳು ಕೈಗೊಂಡ ದುರ್ಮಾರ್ಗಗಳ ಹಿಂದಿನ ದುಷ್ಟತನವೇನಾದರೂ ಕಡಿಮೆಯಾಯಿತೇ? ಎಲ್ಲದರ ಮೂಲದಲ್ಲಿರುವ ವಿಭಜನಕಾರಿ ರಾಜಕೀಯವೇನಾದರೂ ದುರ್ಬಲಗೊಂಡಿತೇ?
ಸಾವಧಾನವಾಗಿ ಯೋಚಿಸಿದಾಗ ಕಂಡುಬರುವುದು ಇಷ್ಟೇ. ರೈತ ಚಳವಳಿಯ ಯಶಸ್ಸು ಚಳವಳಿಯ ಮಾದರಿಯೊಂದನ್ನು ನಮ್ಮ ಮುಂದೆ ಬಿಟ್ಟುಹೋಗಿದೆ. ಉಳಿದಂತೆ ಚಳವಳಿಗೆ ಮೂಲಕಾರಣವಾಗಿರುವ ರಾಜಕೀಯ ಹಾಗೆಯೇ ಉಳಿದಿದೆ. ಆ ರಾಜಕೀಯದಿಂದಾಗಿ ದೇಶದ ಸಂವಿಧಾನದ ಅಡಿಪಾಯಕ್ಕೆ ಎದುರಾಗಿರುವ ಆಪತ್ತು ಕೂಡ. ಅವೆಲ್ಲವೂ ಹಾಗೆಯೇ ಉಳಿದಿರುವ ಕಾರಣಕ್ಕೆ ಹರಿದ್ವಾರದಿಂದ ಬೆಚ್ಚಿ ಬೀಳಿಸುವ ಮಾತುಗಳನ್ನು ನಾವೀಗ ಕೇಳುತ್ತಿರುವುದು. ಅದರ ಕುರಿತಾದ ದಿವ್ಯ ನಿರ್ಲಕ್ಷ್ಯವನ್ನು ನಾವೀಗ ನೋಡುತ್ತಿರುವುದು. ಭರವಸೆಯ ಕಿಡಿ ಹಾಗೇ ಆರಿ ಹೋಗುವುದು..

ದೇಶದಲ್ಲಿ ರಾಜಕೀಯ ಅಧಿಕಾರ ಎಂಬುದು ನಿರಂಕುಶವಾಗುತ್ತಾ ಹೋದಂತೆ ಅದಕ್ಕೆ ತದ್ವಿರುದ್ಧ ಬೆಳವಣಿಗೆ ನಡೆದಾಗ ಏನೋ ಆಶಾವಾದ ಕಾಣಿಸಿಕೊಳ್ಳುತ್ತದೆ. ರೈತ ಚಳವಳಿ ಯಶಸ್ಸನ್ನು ಕಂಡಾಗ ಹೀಗೊಂದು ಭರವಸೆ ಮೂಡಿದಂತೆ, ವರ್ಷದ ಆರಂಭದಲ್ಲಿ ಪಶ್ಚಿಮ ಬಂಗಾಳ, ಕೇರಳ ಮತ್ತು ತಮಿಳುನಾಡುಗಳಲ್ಲಿ ವಿರೋಧ ಪಕ್ಷಗಳು ಗೆದ್ದು ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಪಕ್ಷದ ಏಕಚಕ್ರಾಧಿಪತ್ಯದ ಹಂಬಲಕ್ಕೆ ತಣ್ಣೀರೆರೆದಾಗಲೂ ಆಯಿತು. ಆ ಗೆಲುವು ಸಂವಿಧಾನ ವಿರೋಧಿ ರಾಜಕೀಯದ ನಾಗಾಲೋಟಕ್ಕೆ ಒಂದು ರೀತಿಯಲ್ಲಿ ಒಂದಷ್ಟು ತಡೆ ಒಡ್ಡಿದ್ದು ನಿಜ. ಆ ಗೆಲುವಿನಲ್ಲೂ ಪಾಠಗಳಿವೆ. ಅದೇ ರೀತಿ ಸರಕಾರ ಮತ್ತು ಅದರ ಕೈಯ್ಯಾಳಾಗಿರುವ ಪೊಲೀಸ್ ವ್ಯವಸ್ಥೆಯ ಕ್ರೌರ್ಯವನ್ನು ಬಿಂಬಿಸುವ ’ಜೈ ಭೀಮ್’ ನಂತಹ ಸಿನೆಮಾದ ಸಂದೇಶ ವ್ಯಾಪಕವಾಗಿ ಹರಡಿದಾಗಲೂ ಏನೋ ಭರವಸೆ ಹುಟ್ಟಿಕೊಂಡಿತು. ಆ ಸಿನೆಮಾದ ಯಶಸ್ಸಿನಲ್ಲೂ ಪಾಠಗಳಿವೆ.
ಉತ್ತರಾಖಂಡ ರಾಜ್ಯದ ಶಾಲೆಯೊಂದರಲ್ಲಿ ಅಡುಗೆ ಮಾಡುತಿದ್ದ ಮಹಿಳೆ ದಲಿತರು ಎಂಬ ಕಾರಣಕ್ಕೆ ಮೇಲ್ಜಾತಿಯ ಕೆಲವು ಮಕ್ಕಳು ಊಟ ಮಾಡುವುದನ್ನು ನಿಲ್ಲಿಸುತ್ತಾರೆ. ಆ ಮಕ್ಕಳ ಮುಂದೆ ದೇಶದ ಸಂವಿಧಾನವನ್ನು ತೆರೆದು ತೋರಿಸಿ ಅವರಿಗೆ ಬುದ್ಧಿ ಹೇಳುವ ಬದಲಿಗೆ ಸರಕಾರ ಅಡುಗೆಯ ಮಹಿಳೆಯನ್ನೇ ಕೆಲಸದಿಂದ ಕಿತ್ತುಹಾಕುತ್ತದೆ. ಇಂತಹ ಘಟನೆಗಳು ದೇಶಾದ್ಯಂತ ಸಾವಿರಾರು ಆಗಿವೆ. ಆಗುತ್ತಿವೆ. ಕರ್ನಾಟಕದಲ್ಲೂ ಆಗಿವೆ. ಆಗುತ್ತಿವೆ. ಈ ಕುರಿತ ವರದಿಗಳನ್ನು ನೋಡಿ ಆತಂಕಪಡುವ ಬೇಸರ ಪಡುವ ಕೋಟಿಕೋಟಿ ಜನ ಈ ದೇಶದಲ್ಲಿ ಇದ್ದಾರೆ. ಆದರೆ ಯಾರಿಗೂ ಏನೂ ಮಾಡಲಾಗಿಲ್ಲ. ಸಮಸ್ಯೆ ಹಾಗೋಹೀಗೋ ಸ್ಥಳೀಯವಾಗಿಯೇ ಯಾವುದೋ ರೀತಿಯಲ್ಲಿ ನಿಭಾಯಿಸಲ್ಪಡುತ್ತದೆ. ಆದರೆ ಉತ್ತರಾಖಂಡದ ಆ ಶಾಲೆಯಲ್ಲಿ ಹಾಗಾಗಲಿಲ್ಲ. ದಲಿತ ಮಹಿಳೆಯನ್ನು ಕೆಲಸದಿಂದ ಕಿತ್ತುಹಾಕಿ ಅಲ್ಲಿ ಮೇಲ್ಜಾತಿಯ ಅಡುಗೆಯವರನ್ನು ನೇಮಿಸಿದ ನಂತರ ಆ ಶಾಲೆಯಲ್ಲಿದ್ದ ದಲಿತ ಮಕ್ಕಳೆಲ್ಲಾ ಒಂದಾಗಿ ನಮ್ಮವರು ಮಾಡಿದ ಅಡುಗೆ ನೀವು ತಿನ್ನುವುದಿಲ್ಲ ಎಂದಾದರೆ, ನಿಮ್ಮವರು ಮಾಡಿದ ಅಡುಗೆ ನಾವು ತಿನ್ನುವುದಿಲ್ಲ ಎಂದು ಮೇಲ್ಜಾತಿಯವರ ಅಡುಗೆಯನ್ನು ಬಹಿಷ್ಕರಿಸಿದ್ದಾರೆ. ಇದು ಅರ್ಥಪೂರ್ಣ ಪ್ರತಿರೋಧ ಅಂತ ಅನ್ನಿಸುತ್ತದೆ. ಮತ್ತೆ ಭರವಸೆ ಹುಟ್ಟಿಕೊಳ್ಳುತ್ತದೆ. ರೈತರ ಚಳವಳಿ ದೇಶಕ್ಕೊಂದಷ್ಟು ಪಾಠ ಕಲಿಸಿದ ಹಾಗೆ ಈ ದಲಿತ ಮಕ್ಕಳೂ ದೇಶಕ್ಕೆ ಪ್ರತಿರೋಧದ ಪಾಠವೊಂದನ್ನು ಕಲಿಸಿದ್ದಾರೆ.
ಆದರೆ, ಕೊನೆಗೆ ಇವೆಲ್ಲವೂ ಬಿಡಿಬಿಡಿ ಬೆಳವಣಿಗೆಗಳು. ಇಡಿಯಾಗಿ ನೋಡಿದಾಗ ದೇಶದ ಅಂತಸ್ಸತ್ವವನ್ನೇ ನಾಶಗೊಳಿಸುವ, ದೇಶದ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಅಪಾಯಕಾರಿಯಾದ ರಾಜಕೀಯ ಶಕ್ತಿಯೊಂದು ಏನು ಈ ದೇಶದಲ್ಲಿ ವಿಜೃಂಭಿಸುತ್ತಿದೆ ಅದನ್ನು ಹಿಮ್ಮೆಟ್ಟಿಸುವ ಮತ್ತು ಅದನ್ನು ದುರ್ಬಲಗೊಳಿಸುವ ವ್ಯಾಪಕ ರಾಜಕೀಯವೊಂದು ಇಡೀ 2021ರಲ್ಲಿ ರೂಪುಗೊಂಡ ಹಾಗೆ ಕಾಣಿಸುವುದಿಲ್ಲ. ಹಿಂಸೆಯನ್ನು ಎತ್ತಿ ಹಿಡಿಯುವ, ಹಿಂಸೆಯ ಸಂಸ್ಕೃತಿಯನ್ನು ಜನಮನದಲ್ಲಿ ಪ್ರತಿಷ್ಠಾಪಿಸುವ ಭಯಾನಕ ರಾಜಕೀಯದ ವಿರುದ್ಧ ಅಭಿಪ್ರಾಯ ರೂಪುಗೊಂಡಂತೆ ಕಾಣಿಸುವುದಿಲ್ಲ. ಅಸಮಾನತೆಯನ್ನು ಎತ್ತಿಹಿಡಿಯುವ ಮತ್ತು ಅಸಮಾನತೆಯೇ ಒಂದು ಮೌಲ್ಯ ಎಂದು ಭಾವಿಸುವ ಮಂದಿಯ ಮನಸ್ಸಿನಲ್ಲಿ ಅದರ ಬಗ್ಗೆ ಒಂದು ಸಣ್ಣ ಪ್ರಮಾಣದ ಲಜ್ಜೆ-ಪಶ್ಚಾತ್ತಾಪ ಹುಟ್ಟಿಸಬಲ್ಲ ಸಂಕಥನಗಳು ಹುಟ್ಟಿಕೊಳ್ಳುತ್ತಿಲ್ಲ – ಹುಟ್ಟಿಕೊಂಡರೂ ಜನಪ್ರಿಯವಾಗುತ್ತಿಲ್ಲ. ಕೊನೆಯ ಪಕ್ಷ ಇವೆಲ್ಲವನ್ನೂ ಮುಖಾಮುಖಿಯಾಗಿ ಗಟ್ಟಿಯಾಗಿ ಪ್ರಶ್ನಿಸಿದಂತಹ ಸಂದರ್ಭಗಳೂ ಕಂಡುಬರಲಿಲ್ಲ. ಭರವಸೆ ಹುಟ್ಟಿಸುವಂತಹ ಒಂದಷ್ಟು ಬಿಡಿ ಘಟನಾವಳಿಗಳು, ಭರವಸೆಗಾಗಿ ಹಂಬಲಿಸುವ ಒಂದಷ್ಟು ಗೊಣಗಾಟಗಳಲ್ಲೇ ವರ್ಷ ಕಳೆದುಹೋಯಿತು.

ಸಮಾನತೆ ಮತ್ತು ಬಹುತ್ವ ಈ ರಾಷ್ಟ್ರದ ಜೀವದ್ರವ್ಯ ಮಾತ್ರವಲ್ಲ, ಆತ್ಮ ದ್ರವ್ಯಗಳು. ಈ ಸಾಂವಿಧಾನಿಕ ಮೌಲ್ಯಗಳನ್ನು ವಿರೋಧಿಸುವ ಶಕ್ತಿಗಳು ಭಾರತೀಯ ಸಮಾಜದಲ್ಲಿ ಸಂವಿಧಾನ ಬಂದಂದಿನಿಂದಲೂ ಜೀವಂತವಾಗಿವೆ. ಆದರೆ ಕಾಲಕಾಲಕ್ಕೆ ಅಧಿಕಾರಕ್ಕೆ ಬಂದ ಸರಕಾರಗಳು ಸಂವಿಧಾನವನ್ನು ಗೌರವಿಸಿ ಅಂತಹ ಶಕ್ತಿಗಳನ್ನು ಅಧಿಕೃತವಾಗಿಯಾದರೂ ವಿರೋಧಿಸುವ ಕೆಲಸ ಮಾಡಿವೆ. ಆದುದರಿಂದ, ಈ ದೇಶದಲ್ಲಿ ಯಾವ ಧಾರ್ಮಿಕ-ಸಾಮಾಜಿಕ ಸುಧಾರಕರಿಗಿಂತಲೂ ಹೆಚ್ಚಾಗಿ ಸಮಾಜದ ಡೊಂಕನ್ನು ತಿದ್ದುವ ಮತ್ತು ಸಮಾಜವನ್ನು ಸಮಾನತೆಯ ಹಾದಿಯಲ್ಲಿ ಮುರಿದುಕಟ್ಟುವ ಕೆಲಸ ಸಾಧ್ಯವಾದದ್ದು ಸಂವಿಧಾನ-ಬದ್ಧವಾಗಿ ನಡೆಯುವ ಸರಕಾರಗಳ ಮೂಲಕ. ಅಂತಹ ಜೀವವಿರೋಧಿ, ಮನುಷ್ಯ ವಿರೋಧಿ ಮತ್ತು ಸಂವಿಧಾನ ವಿರೋಧಿ ಶಕ್ತಿಗಳಿಗೆ ಆಸರೆಯಾಗಿ ಆಳುವ ಸರಕಾರಗಳೇ ನಿಲ್ಲುತ್ತಿವೆ ಎನ್ನುವುದು ನಮ್ಮ ಕಾಲ ಕಂಡ ಕ್ರೂರವಾದ ವಿಪರ್ಯಾಸ. ಇದನ್ನು ಹಿಮ್ಮೆಟ್ಟಿಸಲು ಹಳೆಯ ಮಾದರಿಯ ಪ್ರತಿರೋಧಗಳು ಸಾಲದು. ಎಲ್ಲ ಪ್ರತಿರೋಧದ ಅಸ್ತ್ರಗಳಿಗೂ ಸಾಣೆ ಹಿಡಿದು ಸನ್ನದ್ಧವಾಗಿ ಇರಿಸಿಕೊಳ್ಳಬೇಕು. ಹೊಸ ವರ್ಷದಲ್ಲಿ ಪ್ರತಿಗಾಮಿ ಶಕ್ತಿಗಳು ಹೊಸ ರೀತಿಯಲ್ಲಿ ವಿಜೃಂಭಿಸುವ ಎಲ್ಲಾ ಸೂಚನೆಗಳೂ ಹಳೆಯ ಹಾಲಿ ವರ್ಷಾಂತ್ಯದ ವೇಳೆಗೆ ಕಾಣಿಸಿಕೊಳ್ಳುತ್ತಿವೆ. ಹೊಸ ರೀತಿಯ ಪ್ರತಿರೋಧಕ್ಕೆ ಹೊಸ ಅಸ್ತ್ರಗಳೆಲ್ಲಾ ಬೇಕಾಗುತ್ತವೆ. ಅಸ್ತ್ರ ಯಾವುದೇ ಇದ್ದರೂ ಮಾರ್ಗ ಮಾತ್ರ ಅಹಿಂಸಾತ್ಮಕವಾಗಿರಬೇಕು ಎಂಬುದಷ್ಟೇ ಷರತ್ತು.
ರೈತರ ಚಳವಳಿಯ ಯಶಸ್ಸಿನಿಂದ ಕಲಿತ ಪಾಠಗಳನ್ನು, ಪ್ರಾದೇಶಿಕ ಪಕ್ಷಗಳ ಚುನಾವಣಾ ಗೆಲುವಿನಿಂದ ಕಲಿತ ಪಾಠಗಳನ್ನು, ಜೈ ಭೀಮ್‌ನಂತಹ ಸಿನೆಮಾದ ಜನಪ್ರಿಯತೆಯಿಂದ ಕಲಿತ ಪಾಠಗಳನ್ನು, ಉತ್ತರಾಖಂಡದ ಆ ಹಳ್ಳಿಯೊಂದರ ಶಾಲೆಯ ದಲಿತ ಮಕ್ಕಳು ಕಲಿಸದ ಪ್ರತಿರೋಧದ ಪಾಠಗಳನ್ನು ದೇಶ ತನ್ನ ಮೂಲಭೂತ ರಾಜಕೀಯ ಸವಾಲುಗಳನ್ನು ಎದುರಿಸಲು ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದರ ಮೇಲೆ 2022ನೆಯ ವರ್ಷದ ಚರಿತ್ರೆ ರೂಪುಗೊಳ್ಳಲಿದೆ.
- ಎ ನಾರಾಯಣ
ಇದನ್ನೂ ಓದಿ: ಕೋಮು ಪ್ರಚೋದನೆ: ತೇಜಸ್ವಿ ಸೂರ್ಯ ಹೇಳಿಕೆಗೆ ಬಿಜೆಪಿ ನಾಯಕರಲ್ಲಿ ಅಸಮಾಧಾನ


