Homeಮುಖಪುಟ’ಜೈ ಶ್ರೀರಾಮ್‌’ ಹೇಳುವಂತೆ ಒತ್ತಾಯಿಸಿ ಮಣಿಪುರದ ಪಾದ್ರಿ ಮೇಲೆ ಹಲ್ಲೆ; ವಿಡಿಯೊ ವೈರಲ್‌

’ಜೈ ಶ್ರೀರಾಮ್‌’ ಹೇಳುವಂತೆ ಒತ್ತಾಯಿಸಿ ಮಣಿಪುರದ ಪಾದ್ರಿ ಮೇಲೆ ಹಲ್ಲೆ; ವಿಡಿಯೊ ವೈರಲ್‌

"ಹಲ್ಲೆ ನಡೆಸಿದವರನ್ನು ಠಾಣೆಗೆ ಕರೆದೊಯ್ಯದೇ ಹಲ್ಲೆಗೊಳಗಾದ ನನ್ನನ್ನು ಬಂಧಿಸಿ ಪೊಲೀಸರು ಕಿರುಕುಳ ನೀಡಿದ್ದಾರೆ" ಎಂದು ಪಾದ್ರಿ ಆರೋಪಿಸಿದ್ದಾರೆ

- Advertisement -
- Advertisement -

‘ಜೈ ಶ್ರೀರಾಮ್‌’ ಹೇಳುವಂತೆ ಒತ್ತಾಯಿಸಿ ಮಣಿಪುರದ ಪಾದ್ರಿಯೊಬ್ಬರಿಗೆ ಹಿಂದುತ್ವದ ಗುಂಪೊಂದು ಕಿರುಕುಳ ನೀಡಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಕ್ರಿಸ್ಮಸ್‌‌ ಹಬ್ಬದಂದು ನಡೆದಿದ್ದು, ವಿಡಿಯೊ ವೈರಲ್ ಆಗಿದೆ.

‘ಜೈ ಶ್ರೀರಾಮ್‌’ ಹೇಳು ಎಂದು ಒತ್ತಾಯಿಸಿರುವ ಅಪರಿಚಿತ ಗುಂಪು, ತಮ್ಮ ಒತ್ತಾಯಕ್ಕೆ ಮಣಿಯದ ಪಾದ್ರಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು ಡಿಸೆಂಬರ್‌ 30ರಂದು ವಿಡಿಯೊ ವ್ಯಾಪಕವಾಗಿ ವೈರಲ್‌ ಆಗಿದೆ. ಬಲಪಂಥೀಯ ಗುಂಪಿನ ಈ ದಬ್ಬಾಳಿಕೆಯ ವಿರುದ್ಧ ಪ್ರಜ್ಞಾವಂತ ನಾಗರಿಕರು ಬೇಸರ ವ್ಯಕ್ತಪಡಿಸಿದ್ದಾರೆ.

ವಾಟ್ಸಾಪ್ ಗ್ರೂಪ್‌ಗಳು ಹಾಗೂ ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊ ಕ್ಲಿಪ್‌ನಲ್ಲಿ ಇಬ್ಬರು ವ್ಯಕ್ತಿಗಳು ಪಾದ್ರಿಯನ್ನು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಕೇಳಿಕೊಳ್ಳುತ್ತಿದ್ದಾರೆ. ಪಾದ್ರಿಯು ಸದರಿ ಪ್ರದೇಶದಲ್ಲಿ ಜನರನ್ನು ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ಮತಾಂತರ ಆರೋಪವನ್ನು ಪಾದ್ರಿ ನಿರಾಕರಿಸಿದ್ದಾರೆ. “ನೀವು ಎಲ್ಲಿಂದ ಬಂದಿದ್ದೀರಿ? ನಿನ್ನನ್ನು ಇಲ್ಲಿಗೆ ಕರೆತಂದವರು ಯಾರು?” ಎಂದು ಹಿಂದುತ್ವ ಗುಂಪು ಪದೇಪದೇ ವಿಚಾರಿಸಿದೆ.

ಭಯಭೀತರಾದ ಪಾದ್ರಿ, “ನಾನು ಭೇಟಿ ಮಾಡಲು ಬಂದಿದ್ದ ಕುಟುಂಬವು ಮೊದಲೇ ಕ್ರಿಶ್ಚಿಯನ್ನರಾಗಿದ್ದರು” ಎಂದು ಹೇಳಲು ಯತ್ನಿಸಿದರು. ಆದರೆ ಹಿಂದುತ್ವ ಗುಂಪು ‘ಜೈ ಶ್ರೀ ರಾಮ್’ ಎಂದು ಹೇಳುವಂತೆ ಹೆದರಿಸುವುದನ್ನು ಮುಂದುವರಿಸಿದರು. “ಜೈ ಶ್ರೀರಾಮ್‌” ಎಂದು ನೀವು ಯಾಕೆ ಹೇಳುವುದಿಲ್ಲ ಎಂದು ಅವರು ಕೇಳುತ್ತಲೇ ಇದ್ದರು. ಅಲ್ಲಿ ಸೇರಿದ್ದ ಜನಸಮೂಹವೂ ‘ಜೈ ಶ್ರೀ ರಾಮ್’ ಎಂದು ಕೂಗುವಂತೆ ಒತ್ತಾಯಿಸಿತು ಎನ್ನಲಾಗಿದೆ.

ಕುಕಿ ಬುಡಕಟ್ಟು ಜನಾಂಗಕ್ಕೆ ಸೇರಿದ ಪಾದ್ರಿ ಚುಂಗ್ಲೆನ್‌ಲಾಲ್ ಸಿಂಗ್ಸಿಟ್ ಅವರು ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯವರಾಗಿದ್ದಾರೆ. ಹಲ್ಲೆಗೊಳಗಾದ ಅವರನ್ನು ‘ದಿ ವೈರ್‌’ ಜಾಲತಾಣ ಸಂಪರ್ಕಿಸಿದ್ದು, “ಈ ಘಟನೆಯು ಕ್ರಿಸ್‌ಮಸ್‌ ದಿನದಂದು ಮಧ್ಯಾಹ್ನ 3 ಗಂಟೆ ವೇಳೆ ನಡೆಯಿತು. ನಾನು ಪ್ರಾರ್ಥನೆ ಮಾಡಲು ಕಥುವಾದಲ್ಲಿನ ಭಕ್ತರ ಮನೆಗೆ ಹೋಗಿದ್ದೆ. ನಾನು ಮನೆಗೆ ಹಿಂತಿರುಗಿ ನನ್ನ ಮೂರು ಮಕ್ಕಳಿಗೆ ಕೆಲವು ಉಡುಗೊರೆಗಳನ್ನು ಖರೀದಿಸಲು ಮಾರುಕಟ್ಟೆಗೆ ಹೋದೆ. ಆಗ ಇಬ್ಬರು ವ್ಯಕ್ತಿಗಳು ನನ್ನನ್ನು ತಡೆದು, ಆ ದಿನ ನಾನು ಭೇಟಿ ನೀಡಿದ ಕುಟುಂಬವನ್ನು ಮತಾಂತರ ಮಾಡಿದ್ದೀಯ ಎಂದು ಆರೋಪಿಸಲಾರಂಭಿಸಿದರು. ಜೈ ಶ್ರೀ ರಾಮ್ ಎಂದು ಹೇಳಲು ನನ್ನನ್ನು ಒತ್ತಾಯಿಸಿದರು” ಎಂದು ಪಾದ್ರಿ ತಿಳಿಸಿದ್ದಾರೆ.

“ಸ್ವಲ್ಪ ಸಮಯದ ನಂತರ ಅವರು ಯಾರಿಗೋ ಫೋನ್ ಮಾಡಿದರು. ಅವರ ಜೊತೆಗೆ ಇನ್ನೊಬ್ಬರು ಸೇರಿಕೊಂಡರು. ಅಷ್ಟರಲ್ಲಾಗಲೇ 100 ಜನರ ಗುಂಪು ಜಮಾಯಿಸಿತ್ತು. ಅವರಲ್ಲಿ ಕೆಲವರು ಧಾರ್ಮಿಕ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ನನ್ನನ್ನು ಹೊಡೆಯುವುದಾಗಿ ಬೆದರಿಕೆ ಹಾಕಿದರು. ಮೂವರು ನನಗೆ ಕೆಲವು ಬಾರಿ ಕಪಾಳಕ್ಕೆ ಹೊಡೆದರು. ನನ್ನ ತುಟಿಗಳನ್ನು ಪದೇ ಪದೇ ಒದ್ದೆ ಮಾಡುತ್ತಿರುವುದನ್ನು ನೀವು ವಿಡಿಯೊದಲ್ಲಿ ನೋಡುತ್ತೀರಿ. ಅವರ ದಾಳಿಯಿಂದ ಹೆದರಿ ನನ್ನ ಬಾಯಿ ಮತ್ತು ಗಂಟಲು ಒಣಗಿ ಹೋಗಿತ್ತು. ನಾನು ಭಯದಲ್ಲಿದ್ದೆ. ಹೀಗಾಗಿ ಮಾತನಾಡಲು ಸಾಧ್ಯವಾಗಲಿಲ್ಲ” ಎಂದಿದ್ದಾರೆ.

ಹಲ್ಲೆ ನಡೆಸಿದ ಗುಂಪು ಸ್ಥಳೀಯ ಪೊಲೀಸರನ್ನು ಕರೆಸಿ, ‘ಈ ಪ್ರದೇಶದಲ್ಲಿ ಧಾರ್ಮಿಕ ಮತಾಂತರವನ್ನು ಪಾದ್ರಿ ನಡೆಸುತ್ತಿದ್ದಾರೆ’ ಎಂದು ಆರೋಪಿಸಿದರು. ನಾನು ಪೊಲೀಸರಿಗೆ ನಿಜವಾಗಿ ಏನಾಯಿತು ಎಂದು ಹೇಳಿದೆ. ಮತಾಂತರದ ಆರೋಪವನ್ನು ನಿರಾಕರಿಸಿದೆ. ಹಲ್ಲೆ ನಡೆಸಿದವರ ಬದಲು ನನ್ನನ್ನು ಪೊಲೀಸರು ಠಾಣೆಗೆ ಕರೆದೊಯ್ದು 24 ಗಂಟೆಗಳ ಕಾಲ ಲಾಕಪ್‌ನಲ್ಲಿ ಇರಿಸಿದರು. ನನ್ನನ್ನು ನಿಂದಿಸಿದರು. ಬಂಧನದ ವೇಳೆ ಥಳಿಸಿದರು. ಐದು ದಿನಗಳಲ್ಲಿ ನಾನು ಮಣಿಪುರಕ್ಕೆ ತೆರಳದಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಕಥುವಾ ಎಸ್‌ಎಸ್‌ಪಿ ಎಚ್ಚರಿಸಿದರು ಎಂದು ಪಾದ್ರಿ ದೂರಿದ್ದಾರೆ.

ಚುಂಗ್ಲೆನ್‌ಲಾಲ್ ಅವರು ಕಳೆದ ಮೂರು ವರ್ಷಗಳಿಂದ ಕಥುವಾದಲ್ಲಿ ನೆಲೆಸಿದ್ದಾರೆ ಮತ್ತು ಫ್ರೆಂಡ್ಸ್ ಆಫ್ ಮಿಷನರಿ ಪ್ರೇಯರ್ ಬ್ಯಾಂಡ್ ಎಂಬ ಕ್ರಿಶ್ಚಿಯನ್ ಸಂಘಟನೆಯಲ್ಲಿ ಪಾದ್ರಿಯಾಗಿ ಕೆಲಸ ಮಾಡುತ್ತಿದ್ದಾರೆ. “ನನ್ನ ಸಂಘಟನೆಯ ಸದಸ್ಯರು ನನ್ನನ್ನು ಬಂಧಿಸಲಾಗಿದೆಯೇ ಎಂದು ಕೇಳಿದರು. ನನ್ನ ಜಾಮೀನು ಪಡೆಯಲು ಎಫ್‌ಐಆರ್‌ ಪ್ರತಿಯನ್ನು ಕೇಳಿದ್ದರಿಂದ 24 ಗಂಟೆಗಳ ನಂತರ ನನ್ನನ್ನು ಬಿಡುಗಡೆ ಮಾಡಲಾಯಿತು” ಎಂದು ಪಾದ್ರಿ ತಿಳಿಸಿದ್ದಾರೆ.

ಕಥುವಾ ಎಸ್‌ಎಸ್‌ಪಿ ಅವರ ಆಪ್ತ ಸಹಾಯಕ ದಿ ವೈರ್‌ಗೆ ಪ್ರತಿಕ್ರಿಯಿಸಿದ್ದು, “ಮತಾಂತರದ ಆರೋಪದ ಮೇಲೆ ಯಾವುದೇ ಪಾದ್ರಿಯನ್ನು ಬಂಧಿಸಿಲ್ಲ” ಎಂದಿದ್ದಾರೆ. “ಹಿರಿಯ ಅಧಿಕಾರಿ ಕಚೇರಿಯಲ್ಲಿಲ್ಲ” ಎಂದು ಹೇಳಿರುವ ಅವರು, “ಕಥುವಾದಲ್ಲಿ ಇಂತಹ ಯಾವುದೇ ಪ್ರಕರಣ ನಡೆದಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ” ಎಂದಿದ್ದಾರೆ.


ಇದನ್ನೂ ಓದಿರಿ: ಹಂಸಲೇಖರ ಸಾಂಸ್ಕೃತಿಕ ಪ್ರತಿರೋಧಕ್ಕೆ ಸ್ವಾಗತಾರ್ಹ ಜನಸ್ಪಂದನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...