ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸಿಎಂ ಸ್ಥಾನಕ್ಕಾಗಿ ವಾರ್ ಮುಂದುವರೆದಿದೆ. ಎಲ್ಲ ಸರಿ ಹೋಯಿತು. ಬಿಜೆಪಿ ಮತ್ತು ಶಿವಸೇನೆ ಅಧಿಕಾರ ರಚಿಸಲಿವೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆಯೇ, ಯಾವುದೂ ಸರಿ ಹೋಗಿಲ್ಲ ಎನ್ನುವುದನ್ನು ಶಿವಸೇನೆ ಸಾಬೀತುಪಡಿಸಿದೆ.
೧೫ ದಿನಗಳಿಂದ ಅಧಿಕಾರ ರಚನೆಗೆ ಸರ್ಕಸ್ ನಡೆಸಿರುವ ಬಿಜೆಪಿ ಯಶಸ್ವಿಯಾಗದ ಕಾರಣ, ಶಿವಸೇನೆ ಬಿಜೆಪಿಯನ್ನು ಕೆಣಕಿದೆ. ಇವತ್ತು ಮಧ್ಯರಾತ್ರಿಗೆ ಪ್ರಸಕ್ತ ವಿಧಾನಸಭಾ ಅವಧಿ ಮುಕ್ತಾಯವಾಗಲಿದೆ. ಅಷ್ಟರೊಳಗೆ ಯಾವುದೇ ಪಕ್ಷ ಸರ್ಕಾರ ರಚನೆಗೆ ಮುಂದಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಲಿದೆ. ಅದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನೆ, `ಸಾಮಾನ್ಯವಾಗಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಪಕ್ಷಕ್ಕೆ ಸರ್ಕಾರ ರಚಿಸುವ ಹಕ್ಕು ಮಂಡನೆಯ ಅವಕಾಶವಿದೆ. ಅದರ ಪ್ರಕಾರ ಬಿಜೆಪಿ ರಾಜ್ಯಪಾಲರ ಮುಂದೆ ಹಕ್ಕು ಮಂಡಿಸಿ ಸರ್ಕಾರ ರಚಿಸಲಿ. ಆನಂತರ ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಲು ಹದಿನೈದು ದಿನ ಅಷ್ಟೆ ಯಾಕೆ, ಒಂದು ತಿಂಗಳನ್ನೇ ಟೈಮ್ ತೆಗೆದುಕೊಳ್ಳಲಿ’ ಎಂದಿರುವ ಶಿವಸೇನೆ ಸಂಸದ ಸಂಜಯ್ ರಾವತ್, ಬಿಜೆಪಿಗೆ ಸವಾಲು ಹಾಕಿದ್ದಾರೆ.
ಇದನ್ನೂ ಓದಿ: ಸಿಎಂ ಹುದ್ದೆಯನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವುದಿಲ್ಲ: ಇಟ್ಟ ಹೆಜ್ಜೆ ಹಿಂದಕ್ಕೆ ತೆಗೆಯಲ್ಲ- ಶಿವಸೇನೆ ಎಚ್ಚರಿಕೆ
ಚುನಾವಣಾ ಫಲಿತಾಂಶ ಬಂದು ೧೫ ದಿನಗಳು ಕಳೆದರೂ, ಮಹಾರಾಷ್ಟ್ರದಲ್ಲಿ ಯಾವೊಂದು ಪಕ್ಷಕ್ಕೂ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ. ೫೦:೫೦ ಸೂತ್ರದಂತೆ ನಡೆದುಕೊಳ್ಳದ ಬಿಜೆಪಿ ವಿರುದ್ಧ ಮುನಿಸಿಕೊಂಡಿರುವ ಶಿವಸೇನೆ, ತನ್ನ ಶಾಸಕರನ್ನು ಕುದುರೆ ವ್ಯಾಪಾರದಿಂದ ರಕ್ಷಿಸಲು ಮುಂಬೈನ ಹೋಟೆಲ್‌ಗೆ ಸ್ಥಳಾಂತರಿಸಿದೆ.
ಬಿಜೆಪಿ ಸರ್ಕಾರ ರಚನೆ ಮಾಡಿ, ಪ್ರಮಾಣವಚನ ಸ್ವೀಕರಿಸಿದರೆ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲೇಬೇಕು. ಒಂದುವೇಳೆ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದರೆ ಶಿವಸೇನೆಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕಾಗುತ್ತದೆ ಎಂದು ಹೇಳಿದ್ದಾರೆ ರಾವತ್.


