ಬಿಹಾರ ಪೊಲೀಸ್‌ನ ಹಿರಿಯ ಅಧಿಕಾರಿಯೊಬ್ಬರು ತಾವು ಪತ್ತೆ ಹಚ್ಚಿದ ಭಯೋತ್ಪಾದನಾ ಘಟಕದ ಕುರಿತು ಹೇಳಿಕೆ ನೀಡಿ ವಿವಾದಕ್ಕೆ ನಾಂದಿ ಹಾಡಿದ್ದಾರೆ. ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್‌ಐ)ವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದೊಂದಿಗೆ ಹೋಲಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ರಾಜ್ಯ ಪೊಲೀಸರು ಬುಧವಾರ ಪಾಟ್ನಾದಲ್ಲಿ ಶಂಕಿತ ಭಯೋತ್ಪಾದನಾ ಘಟಕವನ್ನು ಭೇದಿಸಿ, ಪಿಎಫ್‌ಐ ಜೊತೆ ಸಂಪರ್ಕ ಹೊಂದಿರುವ ಇಬ್ಬರನ್ನು ಬಂಧಿಸಿದ್ದಾರೆ.
“ಆರ್‌ಎಸ್‌ಎಸ್‌ನ ಶಾಖೆಗಳು ಮತ್ತು ತರಬೇತಿ ಇರುವಂತೆಯೇ, ದೈಹಿಕ ಶಿಕ್ಷಣದ ನೆಪದಲ್ಲಿ ಪಿಎಫ್‌ಐ ಯುವಕರನ್ನು ತಮ್ಮ ಕೇಂದ್ರಕ್ಕೆ ಕರೆದು ಅವರ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದೆ ಮತ್ತು ಅವರ ಬ್ರೈನ್‌ವಾಶ್ ಮಾಡಲು ಪ್ರಯತ್ನಿಸುತ್ತಿದೆ” ಎಂದು ಪಾಟ್ನಾದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾನವಜೀತ್ ಸಿಂಗ್ ಧಿಲ್ಲೋನ್ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಅವರ ಹೇಳಿಕೆಯನ್ನು ವಿರೋಧಿಸಿ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮುಂದಿನ 48 ಗಂಟೆಗಳ ಒಳಗೆ ಧಿಲ್ಲೋನ್ ಅವರಿಂದ ವಿವರಣೆಯನ್ನು ಪಡೆಯುವಂತೆ ಉನ್ನತ ಪೊಲೀಸ್ ಅಧಿಕಾರಿಗಳನ್ನು ಕೇಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
“ಪಾಟ್ನಾ ಎಸ್‌ಎಸ್‌ಪಿ ಇಂತಹ ಹೇಳಿಕೆಯನ್ನು ತಕ್ಷಣವೇ ಹಿಂಪಡೆದು, ಅದಕ್ಕಾಗಿ ಕ್ಷಮೆಯಾಚಿಸಬೇಕು” ಎಂದು ರಾಜ್ಯಸಭಾ ಸದಸ್ಯ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಟ್ವೀಟ್ ಮಾಡಿದ್ದಾರೆ.
“ಇದು ಎಸ್‌ಎಸ್‌ಪಿ ತನ್ನ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದೆ ಎಂದು ತೋರಿಸುತ್ತದೆ. ಆರ್‌ಎಸ್‌ಎಸ್‌ನಂತಹ ರಾಷ್ಟ್ರೀಯತಾವಾದಿ ಸಂಘಟನೆಯನ್ನು ನೀವು ಪಿಎಫ್‌ಐ ಜೊತೆ ಹೇಗೆ ಹೋಲಿಸುತ್ತೀರಿ?” ಎಂದು ಬಿಜೆಪಿ ಶಾಸಕ ಹರಿಭೂಷಣ್ ಠಾಕೂರ್ ಬಚೌಲ್ ಹೇಳಿದ್ದಾರೆ.
ಇದನ್ನೂ ಓದಿ: ಪಿಎಫ್‌ಐ ರ‍್ಯಾಲಿಯಲ್ಲಿ ‘ದ್ವೇಷ ಘೋಷಣೆ’ ಕೂಗಿದ ಅಪ್ರಾಪ್ತ ಬಾಲಕನ ತಂದೆ ವಶಕ್ಕೆ
ಆದರೆ ಜೀತನ್ ರಾಮ್ ಮಾಂಝಿ ಅವರ ಹಿಂದೂಸ್ತಾನ್ ಅವಾಮ್ ಮೋರ್ಚಾ ಪಕ್ಷವೂ ಪೊಲೀಸ್ ಅಧಿಕಾರಿಯನ್ನು ಬೆಂಬಲಿಸಿದ್ದು, ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯ ವಕ್ತಾರ ಡ್ಯಾನಿಶ್ ರಿಜ್ವಾನ್, ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ. “ಅವರು ಹೇಳಿದ್ದು, ಆರ್‌ಎಸ್‌ಎಸ್‌ನ ಶಾಖೆಗಳ ರೀತಿಯಲ್ಲಿ ಪಿಎಫ್‌ಐ ಕೂಡಾ ಮಾಡುತ್ತಿದೆ ಎಂದಾಗಿದೆ. ಅವರು ಆರ್‌ಎಸ್‌ಎಸ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಕರೆದಿಲ್ಲ” ಎಂದು ಹೇಳಿದ್ದಾರೆ.
ಪಿಎಫ್‌ಐ ಜೊತೆಗೆ ಸಂಪರ್ಕ ಹೊಂದಿರುವ ‘ಸಂಭಾವ್ಯ ಭಯೋತ್ಪಾದನಾ ಘಟಕ’ದ ಪತ್ತೆಯ ಕುರಿತು ಮಾಧ್ಯಮದೊಂದಿಗಿನ ಸಂವಾದದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯು ಈ ಹೇಳಿಕೆಯನ್ನು ನೀಡಿದ್ದಾರೆ. ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಪ್ರವಾಸದಲ್ಲಿದ್ದ ಪಾಟ್ನಾದಿಂದ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಗುಜರಾತ್: NEP ಮೂಲಕ 1ನೇ ತರಗತಿಯಿಂದಲೇ ಸಂಸ್ಕೃತ ಕಡ್ಡಾಯಕ್ಕೆ ಪ್ರಯತ್ನಿಸುತ್ತಿರುವ ಆರೆಸ್ಸೆಸ್
ಗುಂಪಿನ ಚಟುವಟಿಕೆಗಳು ಪ್ರಧಾನಿಯವರ ಭೇಟಿಯನ್ನು ಯಾವುದೇ ರೀತಿಯಲ್ಲಿ ಗುರಿಯಾಗಿಸಿಕೊಂಡಿವೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಿದ ಅವರು, “ಈ ಬಂಧನಗಳಿಗೂ ಪ್ರಧಾನಿ ಭೇಟಿಗೂ ಯಾವುದೇ ಸಂಬಂಧವಿಲ್ಲ. ಭೇಟಿಯ ಸಮಯದಲ್ಲಿ ಹೆಚ್ಚಿನ ಜಾಗರೂಕತೆಗಾಗಿ, ಸಾಮಾಜಿಕ ಮಾಧ್ಯಮಗಳ ಹೆಚ್ಚಿನ ನಿಗಾ ಸೇರಿದಂತೆ, ನಾವು PFI ಚಟುವಟಿಕೆಗಳನ್ನು ನೋಡಿದೆವು. ಅವರು ಭಾರತದ ಏಕತೆ ಮತ್ತು ಸಾರ್ವಭೌಮತೆಗೆ ವಿರುದ್ಧವಾದ ಮಾಹಿತಿಯನ್ನು ಹರಡುತ್ತಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ” ಎಂದು ಹೇಳಿದ್ದಾರೆ.


