ಮನೆ ಹಿರಿಯರಾದ ಅಜ್ಜ ಅಜ್ಜಿಯಂದಿರು ಮೊಮ್ಮಕ್ಕಳನ್ನೆಲ್ಲಾ ಕೂರಿಸಿಕೊಂಡು ಕತೆ ಹೇಳುತ್ತಿದ್ದ ಕಾಲವೊಂದಿತ್ತು. ದೂರದ ಬೆಟ್ಟದತ್ರ ಒಂದು ಪುಟ್ಟ ಊರಿತ್ತು. ಆ ಊರಿನಲ್ಲಿ ರಾಜಕುಮಾರಿಯೊಬ್ಬಳಿದ್ದಳು…. ಅಂತ ಕತೆ ಆರಂಭವಾಗುತ್ತಿತ್ತು. ಮಧ್ಯೆ ಮಧ್ಯೆ ಅಬ್ಬಾ ಹೀಗೆಲ್ಲಾ ಇತ್ತಾ? ಎನ್ನುವಷ್ಟು ಆಶ್ಚರ್ಯಪಡುವ ಸಂಗತಿಗಳನ್ನು ಅಜ್ಜಿ ಹೇಳುವಾಗ ಕಣ್ಣರಳಿಸಿ ಕೇಳುತ್ತದ್ದೆವು. ಅಲ್ಲಿ ರಾಜಕುಮಾರಿಯೇ ನಾಯಕಿಯಾಗಬೇಕಿರಲಿಲ್ಲ. ಕಾಗೆ, ಗುಬ್ಬಿ, ಬಡವ, ಕಸ ಗುಡಿಸೊ ಹುಡುಗಿ ಹೀಗೆ ಎಲ್ಲರೂ ಕತಾನಾಯಕರಾಗಿರುತ್ತಿದ್ದರು. ಕತೆಯಲ್ಲೊಂದು ಮೌಲ್ಯವಿರುತ್ತಿತ್ತು.
ಕಾಲ ಬದಲಾದಂತೆ ತಂತ್ರಜ್ಞಾನ ಎಲ್ಲವನ್ನು ತನ್ನದಾಗಿಸಿಕೊಳ್ಳುತ್ತಾ ಬಂದಿದೆ. ಅಜ್ಜಿ ಕತೆ ಹೇಳುವ-ಕೇಳುವ ವ್ಯವಧಾನ ಇಲ್ಲವಾಗಿದೆ. ದಿನವಿಡೀ ಓಡೂ, ಓಡೂ… ಎನ್ನುವಂತಾಗಿದೆ. ಇವತ್ತಿಗೆ ಅಜ್ಜಿ ಕತೆ ಹೇಳುತ್ತಿದ್ದ ಕಾಲವೊಂದಿತ್ತು ಅನ್ನೋದು ಮಾತ್ರ ಅಚ್ಚಳಿಯದ ನೆನಪಾಗಿ ಉಳಿದಿದೆ.
ಕೊರೊನಾ ಪಿಡುಗಿನಿಂದ ಬಿಡುವಿಲ್ಲದ ಕೆಲಸಗಳಿಗೆ ಬ್ರೇಕ್ ಹಾಕಿ ಮನೆಯಲ್ಲಿಯೇ ಇರುವಂತಾಗಿದೆ. ಮನೆಯವರೊಂದಿಗೆ ಮಾತನಾಡುತ್ತಾ, ಇಡೀ ಸಮಾಜದ ಆಗೂ ಹೋಗುಗಳ ಬಗ್ಗೆ ತಿಳಿಯುತ್ತಿರುವ ‘ಹೋಮ್ ಕ್ವಾರಂಟೈನ್’ ಸಂದರ್ಭದಲ್ಲಿ ಅಜ್ಜಿ ಕತೆಗಳ ಹಚ್ಚ ಹಸಿರಾದ ನೆನಪು ಮರುಕಳಿಸಿದ್ದು ‘ಕತೆ ಕೇಳೋಣ ಬನ್ನಿ’ ಕಾರ್ಯಕ್ರಮದಿಂದ. ಇಲ್ಲಿ ಅಜ್ಜಿ ಕತೆ ಹೇಳುವುದಿಲ್ಲ ಬದಲಾಗಿ ಕನ್ನಡದ ಹೆಸರಾಂತ ಕತೆಗಾರರು ತಾವು ಬರೆದ ಕತೆಗಳನ್ನು ಓದುತ್ತಾರೆ.

ಕನ್ನಡ ಸಾಹಿತ್ಯದ ಕುರಿತು ಮಾಹಿತಿ ನೀಡುವ ಇ-ತಾಣ ಬುಕ್ ಬ್ರಹ್ಮ ಕತೆ ಕೇಳುವ ಆಸಕ್ತರಿಗಾಗಿ ಕಳೆದ ಹದಿನೈದು ದಿನಗಳಿಂದ ಪ್ರತಿದಿನ ಸಂಜೆ 6.30ಕ್ಕೆ ’ಕತೆ ಕೇಳೋಣ ಬನ್ನಿ’ ಫೇಸ್‌ಬುಕ್ ಲೈವ್ ಅನ್ನು ನಡೆಸುತ್ತಿದೆ. ಮುವತ್ತು ಮಂದಿ ಕತೆಗಾರರು, ವಿವಿಧ ಭಾಷಾ ಶೈಲಿಯ ಕತೆಗಳನ್ನು ಈ ಲೈವ್‌ನಲ್ಲಿ ಪ್ರಸ್ತುತ ಪಡಿಸುತ್ತಿದ್ದಾರೆ. ಈವರೆಗೂ ವಿಕಾಸ್ ನೇಗಿಲೋಣಿ, ಗೀತಾ ವಸಂತ, ಹನುಮಂತ ಹಾಲಗೇರಿ, ದಯಾನಂದ, ಚಿದಾನಂದ ಸಾಲಿ, ಶ್ರೀಧರ ಬಳಗಾರ, ಕಪಿಲ ಹುಮನಬಾದೆ, ಮಹಂತೇಶ ನವಲಕಲ್, ಅಮರೇಶ ನುಗಡೋಣಿ ಸೇರಿದಂತೆ ಸುಮಾರು ಹದಿನೈದು ಕತೆಗಾರರು ಕತೆಯನ್ನು ಓದಿದ್ದಾರೆ.
ಮೂರನೇ ವಾರ ಅಂದರೆ ನಾಳೆಯಿಂದ ಕೇಶವ ಮಳಗಿ, ಕಲಿಗಣನಾಥ ಗುಡದೂರು, ಡಿ.ಎಸ್. ಚೌಗಲೆ, ಟಿ.ಎಸ್. ಗೊರವರ, ಶಿವಕುಮಾರ ಮಾವಲಿ, ಪದ್ಮಿನಿ ನಾಗರಾಜು ಅವರು ಕತೆ ಓದಲಿದ್ದಾರೆ. ಓದುಗರು ಕತೆಯೊಳಗೊಕ್ಕು ಪಾತ್ರವಾಗಿ ಓದುವುದು ಈ ಕಾರ್ಯಕ್ರಮದ ವಿಶೇಷ. ಇಲ್ಲಿನ ಪ್ರತಿ ಕತೆಯು ಭಿನ್ನವಾಗಿದೆ. ಚಿದಾನಂದ ಸಾಲಿಯವರ ಕತೆ ಹಳ್ಳಿ ಮುಗ್ದ ಜನರ ಬದುಕಿನ ಕುರಿತು ವಿವರಿಸಿದ್ದರೆ ದಯಾನಂದ ಅವರು ಇಂದಿನ ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ಕೆಲಸದ ಮೇಲೆ ಬೇರೆ ಕಡೆ ಹೋದಾಗ ಅಲ್ಲಿನ ಜೀವನ ಹೇಗಿರುತ್ತದೆ ಎಂಬುದರ ಕುರಿತು ಹೆಣೆಯಲಾಗಿದೆ.

ಇನ್ನು ಬರವಣಿಗೆಯ ಮೂಲಕ ನಮ್ಮನ್ನೆಲ್ಲಾ ಆಳವಾಗಿ ಚಿಂತಿಸುವಂತೆ ಮಾಡಿರುವ ಹನುಮಂತ ಹಾಲಗೇರಿಯವರು ಓದಿದ ಕತೆ ಸುಡುಗಾಡು ಸಿದ್ದರ ಬದುಕಿನ ಕುರಿತಾಗಿತ್ತು. ನಗರೀಕರಣ ಪ್ರಕ್ರಿಯೆಯಲ್ಲಿ ಮನುಷ್ಯರ ಕೆಲಸವನ್ನು ಯಂತ್ರಗಳು ಕಸಿದುಕೊಂಡದ್ದೇಗೆ ಎಂಬುದನ್ನು ಈ ಕತೆ ಚಿತ್ರಿಸಿದೆ. ಉತ್ತರ ಕರ್ನಾಟಕ ಶೈಲಿ, ಬಯಲು ಸೀಮೆ, ಪಕ್ಕ ಮಂಡ್ಯ ಭಾಷೆ ಕುಂದಾಪುರ ಕನ್ನಡ ಹೀಗೆ ವಿವಿಧ ಬಗೆಯ ಭಾಷಾ ಶೈಲಿ ಇಲ್ಲಿನ ಕತೆಗಳಲ್ಲಿವೆ.
ಕಾರ್ಯಕ್ರಮದ ಕುರಿತು ವಿವರಣೆ ನೀಡಿರುವ ಬುಕ್ ಬ್ರಹ್ಮ ‘ಇಂದು ಎಲ್ಲರಿಗೂ ಸಂಕಷ್ಟದ ದಿನಗಳು. ಒಂಟಿಯಾಗಿ ಕಾಲ ಕಳೆಯಬೇಕಾದ ಪರೀಕ್ಷೆಯ ದಿನಗಳಿವು. ಆತಂಕ ಎದುರಾದಾಗ ಸಾಹಿತ್ಯ ಸಾಂತ್ವನ ಹೇಳುವ ಕೆಲಸ ಮಾಡಬಲ್ಲದು. ಸಾಹಿತ್ಯದ ಸಾಂಗತ್ಯ ಮತ್ತು ಕತೆಯ ಒಡನಾಟವು ಈಗ ಎದುರಿಸುತ್ತಿರುವ ಸವಾಲನ್ನು ಇಲ್ಲವಾಗಿಸುವುದಿಲ್ಲ. ಆದರೆ, ಹತಾಶೆಗೆ ಸಮಾಧಾನ ಹೇಳಬಲ್ಲದು. ಆದ್ದರಿಂದ ’ಬುಕ್ ಬ್ರಹ್ಮ ವಾಚನ’ದ ಅಡಿಯಲ್ಲಿ ’ಕತೆ ಕೇಳೋಣ ಬನ್ನಿ’ ಎಂಬ ಕತೆಗಾರರು ಕತೆ ಓದುವ ಸರಣಿ ಆರಂಭಿಸಿದ್ದೇವೆ’ ಎಂದಿದ್ದಾರೆ.
ಪ್ರತಿದಿನ ಇಂಟರ್‌ನೆಟ್ ಬಳಸುತ್ತಾ, ಟಿ.ವಿ. ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಪುಸ್ತಕವನ್ನು ತಿರುವಿ ಹಾಕುವ ಕೆಲಸದ ನಡುವೆಯೂ ಸ್ವಲ್ಪ ಬಿಡುವಿಟ್ಟುಕೊಂಡು ಕತೆ ಕೇಳಿ, ನೋಡಿ. ಅಚ್ಚಳಿಯದೇ ಉಳಿದಿರುವ ಅಜ್ಜಿ ಕತೆಗಳನ್ನು ನೆನಪಿಸಿಕೊಳ್ಳಿ.
ಕತೆ ಕೇಳಲು ಫೇಸ್‌ಬುಕ್‌ನ ಪೇಜ್ ನೋಡಿ: Book Brahma


