ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ ಅವರು ಬುಧವಾರ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶ ಭಾರತ ‘ಹಿಂದೂ ರಾಷ್ಟ್ರ’ ಅಲ್ಲ ಎಂಬುವುದನ್ನು ನಿರೂಪಿಸಿದೆ ಎಂದಿದ್ದಾರೆ.
ಬುಧವಾರ ಸಂಜೆ ಅಮೆರಿಕದಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಸೇನ್, ಭಾರತವು ಜಾತ್ಯತೀತ ಸಂವಿಧಾನವನ್ನು ಹೊಂದಿರುವ ಜಾತ್ಯತೀತ ರಾಷ್ಟ್ರವಾಗಿರುವಾಗ ‘ಮುಕ್ತ ಮನಸ್ಸಿನ ರಾಜಕೀಯ’ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ಹಿಂದೆ (ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ) ಇದ್ದಂತೆ ವಿಚಾರಣೆಯಿಲ್ಲದೆ ಜನರನ್ನು ಜೈಲಿಗೆ ಹಾಕುವುದು ಮತ್ತು ಶ್ರೀಮಂತರು–ಬಡವರ ನಡುವಿನ ಅಂತರವನ್ನು ಹೆಚ್ಚಿಸುವಂತಹ ಕೆಲವು ಘಟನೆಗಳು ಇನ್ನೂ ಮುಂದುವರೆದಿದೆ. ಅದು ನಿಲ್ಲಬೇಕಿದೆ ಎಂದು ಸೇನ್ ಆಗ್ರಹಿಸಿದ್ದಾರೆ.
“ನಾನು ಚಿಕ್ಕವನಿದ್ದಾಗ, ಬ್ರಿಟಿಷರು ನನ್ನ ಚಿಕ್ಕಪ್ಪಂದಿರು ಮತ್ತು ಸೋದರ ಸಂಬಂಧಿಗಳನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಿದ್ದರು. ಇದರಿಂದ ಭಾರತ ಮುಕ್ತವಾಗಲಿದೆ ಎಂದು ಆಶಿಸಿದ್ದೆವು. ಆದರೆ, ಕಾಂಗ್ರೆಸ್ ಆಡಳಿತವಾಧಿಯಲ್ಲೂ ಅದು ಮುಂದುವರೆಯಿತು. ಪ್ರಸ್ತುತ ಸರ್ಕಾರದಲ್ಲಿ ಅದು ಅವ್ಯಾಹತವಾಗಿದೆ” ಎಂದು ಸೇನ್ ಹೇಳಿದ್ದಾರೆ.
ರಾಮ ಮಂದಿರ ನಿರ್ಮಾಣದ ಹೊರತಾಗಿಯೂ ಬಿಜೆಪಿ ಫೈಝಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಸೋಲನುಭವಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಸೇನ್ “ತುಂಬಾ ಹಣ ವ್ಯಯಿಸಿ ರಾಮಮಂದಿರ ನಿರ್ಮಿಸಲಾಯಿತು. ಭಾರತವನ್ನು ಹಿಂದೂ ರಾಷ್ಟ್ರ ಎಂದು ಬಿಂಬಿಸುವ ಪ್ರಯತ್ನ ಮಾಡಲಾಗಿತ್ತು. ಇದು ಮಹಾತ್ಮ ಗಾಂಧಿ, ರವೀಂದ್ರನಾಥ ಟ್ಯಾಗೋರ್ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ದೇಶದಲ್ಲಿ ನಡೆಯಬಾರದಿತ್ತು. ಭಾರತ ಜಾತ್ಯಾತೀತ ರಾಷ್ಟ್ರವಾಗಿದ್ದು, ಅದರ ನೈಜ ಗುರುತನ್ನು ಬದಲಾಯಿಸುವ ಯತ್ನಗಳು ನಡೆಯುತ್ತಿವೆ” ಎಂದಿದ್ದಾರೆ.
ಇದನ್ನೂ ಓದಿ : ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷರಾಗಿ ಸ್ಯಾಮ್ ಪಿತ್ರೋಡಾ ಮರು ನೇಮಕ


