Homeಕರ್ನಾಟಕಗ್ರಾಮೀಣ ಮೀಸಲಾತಿಯ ಮೋಸಗಳು!!

ಗ್ರಾಮೀಣ ಮೀಸಲಾತಿಯ ಮೋಸಗಳು!!

ಮೀಸಲು ನೀತಿಯಲ್ಲಿನ ಲೋಪ-ದೊಷ ಸರಿಪಡಿಸಿದರಷ್ಟೇ ಕನ್ನಡ ಮಾಧ್ಯಮದತ್ತ ವಿದ್ಯಾರ್ಥಿಗಳನ್ನು ಪಾಲಕರನ್ನು ಸೆಳೆಯಲು ಸಾಧ್ಯ.

- Advertisement -
- Advertisement -

ಕನ್ನಡದಲ್ಲಿ ಕಲಿತರೆ ಭವಿಷ್ಯವಿದೆ ಎಂಬ ಭರವಸೆಯೇ ಮೂಡದ ಈ ಬರಡು ಸಂದರ್ಭದಲ್ಲಿ ಸರ್ಕಾರ ಒದಗಿಸುತ್ತಿರುವ ಗ್ರಾಮೀಣ ಮೀಸಲಾತಿಯ ಹಿಂದೆ ದೊಡ್ಡ ಸಾಮಾಜಿಕ ಅನ್ಯಾಯ ಅಡಗಿದೆ. ಗ್ರಾಮೀಣ ಮೀಸಲಾತಿಯ ಪಿತಾಮಹರ ದೋಷದಿಂದಾಗಿ ಅರ್ಹ-ಅಬಲ ಗ್ರಾಮೀಣ ವಿದ್ಯಾರ್ಥಿಗಳ ಅವಕಾಶವನ್ನು ಬಲಾಢ್ಯ ನಗರವಾಸಿಗಳು ರಾಜಾರೋಷವಾಗಿ ಲಪಟಾಯಿಸುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಖಾಸಗಿ ಇಂಗ್ಲಿಷ್ ಮೀಡಿಯಂ ವಿದ್ಯಾರ್ಥಿಗಳೊಂದಿಗಿನ ಸಂಘರ್ಷದಲ್ಲಿ ಸೋಲುತ್ತಿದ್ದಾರೆ.

ರಾಜ್ಯ ಸರ್ಕಾರ ಶೇಕಡ 5ರಷ್ಟು ಕನ್ನಡ ಮಾಧ್ಯಮ ಹಾಗೂ ಶೇಕಡ 15ರಷ್ಟು ಗ್ರಾಮೀಣ ಸಮಾನಾಂತರ ಮೀಸಲಾತಿಯ ಶೈಕ್ಷಣಿಕ ಹಾಗೂ ಉದ್ಯೋಗ ನೇಮಕಾತಿಯಲ್ಲಿ ನಿಯಮ ಮಾಡಿ ಅದ್ಯಾವುದೋ ಕಾಲವಾಗಿದೆ. ಸದರಿ ಮೀಸಲಾತಿ ಮಾನದಂಡಗಳು ಮೀಸಲಾತಿ ಪರಿಕಲ್ಪನೆ ಹಾಗೂ ನೈಜ ಉದ್ದೇಶಕ್ಕೆ ವ್ಯತಿರಿಕ್ತವಾಗಿದೆ. ವಿರೋಧಾಭಾಸಗಳ ಈ ಮೀಸಲು ನಿಯಮ ಅರ್ಹರಿಗೆ-ದುರ್ಬಲರಿಗೆ ಅವಕಾಶದಿಂದ ವಂಚಿಸುತ್ತಿದೆ. ದುರಂತವೆಂದರೆ, ಬಲಾಢ್ಯ ಅನರ್ಹರು ಈ ಹುಚ್ಚು ನೀತಿಯ ದೌರ್ಬಲ್ಯ ಬಲಸಿಕೊಂಡು ಲಾಭ ಹೊಡೆಯುತ್ತಿದ್ದಾರೆ. ಸಮಾನತೆಯ ಆಶಯಕ್ಕೆ ಕನ್ನಡ ಮಾಧ್ಯಮ-ಗ್ರಾಮೀಣ ಮೀಸಲಾತಿ ಪದ್ಧತಿ ಆಘಾತಕಾರಿಯಾಗಿದೆ!!

ಈ ಮೀಸಲು ನಿಯಮಾವಳಿಯಲ್ಲಿ ಅಖಂಡ ಹತ್ತು ವರ್ಷ ಶಾಲೆಯಲ್ಲಿ ಕಲಿತವರಿಗಷ್ಟೇ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮೀಸಲಾತಿಯೆಂಬ ಷರತ್ತು ಹಾಕಲಾಗಿದೆ. ಇದು ಅವಾಸ್ತವಿಕವಷ್ಟೇ ಅಲ್ಲ ಅನ್ಯಾಯ ಕೂಡ. ಸರ್ಕಾರದ ನೀತಿ-ನಿಯಮ ಒಂದಕ್ಕೊಂದು ಪೂರಕವಾಗಿಲ್ಲ. ನಾನಾ ಕಾರಣಕ್ಕೆ ಶಾಲೆ ಸೇರಲಾಗದವರನ್ನು ಮತ್ತು ಶಾಲೆ ಬಿಟ್ಟವರನ್ನು ವಿದ್ಯಾಭ್ಯಾಸದೆಡೆ ಆಕರ್ಷಿಸಲಾಗುತ್ತಿದೆ. ಸರ್ಕಾರ ಅನೇಕ ರಿಯಾಯಿತಿ ಕೊಟ್ಟು ಶಿಕ್ಷಣದ ಅವಕಾಶ ಕಲ್ಪಿಸುತ್ತಿದೆ. ಶಿಕ್ಷಾಣಾರ್ಥಿಗಳ ಸಾಮರ್ಥ್ಯಕ್ಕೆ ತಕ್ಕಂತೆ ಅವರ ವಯಸ್ಸು ಪರಿಗಣಿಸಿ ಮೇಲ್ತರಗತಿಗಳಿಗೆ ಪ್ರವೇಶವೂ ಕೊಡುತ್ತಿದೆ. ದುರಂತವೆಂದರೆ, ಇಂಥ ಅಭ್ಯರ್ಥಿಗಳಿಗೆ ಕನ್ನಡ ಮಾಧ್ಯಮ ಗ್ರಾಮೀಣ ಮೀಸಲಾತಿ ದಕ್ಕುತ್ತಿಲ್ಲ! ಬಾಹ್ಯವಾಗಿ ಎಸ್‌ಎಸ್‌ಎಲ್‌ಸಿ ಮುಗಿಸಿದವರಿಗೂ ಈ ಮೀಸಲಾತಿಯಿಂದ ಲಾಭವೇನಿಲ್ಲ.

ಇಲ್ಲಿ ಘನಘೋರ ಎಡವಟ್ಟೊಂದಿದೆ ಹತ್ತು ವರ್ಷದ ಕಲಿಕಾ ಸರಣಿಯಲ್ಲಿ ಒಂದೇ ಒಂದು ವರ್ಷವೇನಾದರೂ ಪಟ್ಟಣ ಪ್ರದೇಶದಲ್ಲಿ ಕಲಿತರೆ ಗಂಡಾಂತರ ಖಂಡಿತ. ಈ ಗ್ರಾಮೀಣ ಅಭ್ಯರ್ಥಿಗಳೆಲ್ಲ ಸಾಮಾಜಿಕ ನ್ಯಾಯ ತತ್ವದಂತೆ ಮೀಸಲಾತಿ ಪರಿಕಲ್ಪನೆಯ ಸೌಲಭ್ಯಕ್ಕೆ ಅರ್ಹರು.

ಈ ಗ್ರಾಮೀಣ ಮೀಸಲಾತಿಗೆ ಹಳ್ಳಿಗಾಡಿನ ಹಿನ್ನಲೆ, ಸಂಸ್ಕೃತಿ, ಸಾಮಾಜಿಕ-ಅರ್ಥಿಕ ಸ್ಥಿತಿ-ಗತಿ ಮಾನದಂಡವಾಗಬೇಕಿತ್ತು. ಆದರೆ ಅಂದಿನಿಂದ ಆಳುವವರು ಮತ್ತವರ ಸಲಹೆಗಾರ ಪಂಡಿತ್ತೋತ್ತಮರು ಮೀಸಲು ನೀತಿ ನಿರೂಪಿಸುವಾಗ ಸರಳ, ಸಮಾಜಿಕ ನ್ಯಾಯ ತತ್ವವನ್ನೇ ಪಾಲಿಸಿಲ್ಲ. ವಿಚಿತ್ರವೆಂದರೆ, ಅಭ್ಯರ್ಥಿ ಕಲಿತ ಶಾಲಾ ಕಟ್ಟಡದ “ಭೌಗೋಳಿಕ ಅಸ್ತಿತ್ವ” ಮೀಸಲಾತಿ ಹಣೆಬರಹ ನಿರ್ಧರಿಸುತ್ತಿದೆ. ಮೀಸಲಾತಿ ಬಯಸುವವರ ಶಾಲೆ ಭೌಗೋಳಿಕವಾಗಿ ಹಳ್ಳಿಯಲ್ಲಿದೆಯೋ ಅಥವಾ ಪಟ್ಟಣದಲ್ಲಿದೆಯೆಂಬ ಆಧಾರದಲ್ಲಿ ಗ್ರಾಮೀಣ ಮೀಸಲಾತಿ ಪ್ರಮಾಣ ಪತ್ರ ಕೊಡಲಾಗುತ್ತಿದೆ. ಅಭ್ಯರ್ಥಿ ಬಾಳಿ-ಬದುಕಿದ ಪ್ರದೇಶಕ್ಕಿಂತಲೂ ಶಾಲೆಯ ಸ್ಥಾವರ ಸ್ಥಿತಿಗೆ ಪ್ರಾಧಾನ್ಯತೆ ಕೊಡಲಾಗಿದೆ.

ಇಂತಹ ಮೀಸಲಾತಿ ನಿರ್ಧರಿಸುವಿಕೆ ಗ್ರಾಮೀಣ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಶಾಲೆ-ಹೈಸ್ಕೂಲು ಇಲ್ಲದ ಕುಗ್ರಾಮಗಳ ಮಕ್ಕಳು ಪಟ್ಟಣದ ಹಾಸ್ಟೆಲುಗಳಲ್ಲಿ ಉಳಿದು ಪಟ್ಟಣದ ಶಾಲೆಯಲ್ಲಿ ಕಲಿತರೂ ಸಾಕು ಅವರಿಗೆಲ್ಲ ಮೀಸಲಾತಿ ಸವಲತ್ತು ಸಿಗಲಾರದು. ಆಧುನಿಕ ಸೌಕರ್ಯ, ಸಕಲ ಸೌಲಭ್ಯವಿರುವ ಖಾಸಗಿ ಶಾಲೆ ಸರ್ಕಾರಿ ದಾಖಲೆ ಪ್ರಕಾರ ಗ್ರಾಮ ಪಂಚಾಯತ್ ಪರಿಧಿಯಲ್ಲಿ ಬಂದರೆ ಅಲ್ಲಿ ಪಟ್ಟಣ ಪ್ರದೇಶದ ನಗರವಾಸಿಯೂ ತೀರಾ ಮುಂದುವರಿದ ಕುಟುಂಬದ ಅಭ್ಯರ್ಥಿ ಸಲೀಸಾಗಿ ಗ್ರಾಮೀಣ ಮೀಸಲಾತಿ ಸಿಂಧುತ್ವ ಪಡೆದುಕೊಳ್ಳುತ್ತಾನೆ. ರಾಜ್ಯದ ಹಲವು ಕಡೆಯಲ್ಲಿ ಇಂಥ ದೋಖಾ ಗ್ರಾಮೀಣ ಶಾಲೆಗಳ ಹಾವಳಿ ಜೋರಾಗಿದೆ.

ಸರ್ಕಾರದ ಯಾವ್ಯಾವುದೋ ನೀತಿ ಧೋರಣೆಯಿಂದಾಗಿ ನಗರ ಪಟ್ಟಣಗಳ ವ್ಯಾಪ್ತಿ ರಾತ್ರಿಬೆಳಗಾಗುವುದರಲ್ಲಿ ವಿಶಾಲವಾಗುವ ಕಾಲಮಾನವಿದು ಈ ನಗರ ಪಟ್ಟಣಗಳ ಉದರದಲ್ಲಿ ಹೊರಹೊಲಯದ ಹಳ್ಳಿಗಳು ಜೀರ್ಣವಾಗಿ ಗ್ರಾಮೀಣ ಮೀಸಲಾತಿ ವ್ಯಾಖ್ಯಾನದಿಂದ ಹೊರದಬ್ಬಲ್ಪಡುತ್ತಿವೆ. ಗ್ರಾಮ ಪಂಚಾಯ್ತಿಯೊಂದು ಪಟ್ಟಣ ಪಂಚಾಯ್ತಿಯಾಗಿ ಪೌರಾಡಳಿತದ ವ್ಯಾಪ್ತಿಗೆ ಬಂತೆಂದು ಇಟ್ಟುಕೊಳ್ಳಿ; ಆಗ ಅಪ್ಪಟ ಹಳ್ಳಿಗರಿಗೆ ಶಿಕ್ಷಣ, ಉದ್ಯೋಗದ ಸೌಲಭ್ಯ ದಕ್ಕದಂತೆ ಮಾಡಿ ಗ್ರಾಮೀಣ ಮೀಸಲಾತಿ ಷರತ್ತು ಸತಾಯಿಸಲು ಶುರುಮಾಡುತ್ತದೆ. ಹೊಸ ಪಟ್ಟಣ ಪಂಚಾಯ್ತಿ ಪರಿಸರದ ಶಾಲೆಯಲ್ಲಿ ಕಲಿತವರು, ಕಲಿಯುತ್ತಿರುವವರು ಗ್ರಾಮೀಣ ಮೀಸಲಾತಿಯಿಂದ ವಂಚಿತರಾಗುತ್ತಾರೆ. ಇಲ್ಲಾಗುವುದು ಜನ ಸಂಖ್ಯೆ ಹೆಚ್ಚಳದ ಬದಲಾವಣೆಯೊಂದೇ! ಸಾಮಾಜಿ, ಸಾಂಸ್ಕೃತಿಕ, ಆಧುನಿಕತೆ, ಅಭಿವೃದ್ಧಿ…- ಹೀಗೆ ಯಾವ ಕ್ಷೇತ್ರದಲ್ಲೂ ಉನ್ನತಿಯಾಗಿರುವುದಿಲ್ಲ. ಗ್ರಾಮೀಣ ಚಹರೆಯ ಊರು ಪಟ್ಟಣ ಪ್ರದೇಶವೆಂಬ ವ್ಯಾಖ್ಯಾನದಲ್ಲಿ ಸಿಕ್ಕಿಬಿದ್ದು ಅರ್ಹರಿಗೆ ಮೀಸಲಾತಿ ಸಿಗದಂತೆ ಮಾಡಿಬಿಡುತ್ತದೆ!

ಶಿಕ್ಷಣ ದಂಧೆಕೋರರಿಗೆ ಗ್ರಾಮೀಣ ಮೀಸಲಾತಿ ಆಧ್ವಾನಗಳು ವ್ಯಾವಹಾರಿಕ ತಂತ್ರಗಾರಿಕೆಯಾಗಿ ಅನುಕೂಲಕವಾಗಿದೆ. ಪಟ್ಟಣಗಳ ಸರಹದ್ದಿನಲ್ಲಿರುವ ಹಳ್ಳಿಗಳಲ್ಲಿ ಅತ್ಯಾಧುನಿಕ ಇಂಗ್ಲಿಷ್ ಮಾಧ್ಯಮ ಶಾಲೆ ತೆರೆದು ಗ್ರಾಮೀಣ ಮೀಸಲಾತಿಗೆ ಪಂಗನಾಮ ಹಾಕಲಾಗುತ್ತಿದೆ. ತಮ್ಮಲ್ಲಿ ಕಲಿತರೆ ಗ್ರಾಮೀಣ ಮೀಸಲಾತಿ ಭಾಗ್ಯ ಪಡೆಯಬಹುದೆಂಬ ಪ್ರಚಾರ ಮಾಡಿ ಖಾಸಗಿ ಲಾಬಿ ಮಾಡುತ್ತಿದೆ. ಹಳ್ಳಿಗಳಲ್ಲೀಗ ಅಂತಾರಾಷ್ಟ್ರೀಯ ಸೌಲಭ್ಯ-ಸೌಕರ್ಯ ಸವಲತ್ತಿನ ರೆಸಿಡೆನ್ಸಿಯಲ್ ಶಾಲೆಗಳೆಂದು ಹೇಳಿಕೊಳ್ಳುವ ಶೈಕ್ಷಣಿಕ ಸಂಸ್ಥೆಗಳು ಸ್ಥಾಪಿತವಾಗುತ್ತಿವೆ. ಇಲ್ಲಿ ಕಲಿಯುವ ಹೈಟೆಕ್ ನಗರಗಳ ಉಳ್ಳವರು ಮತ್ತು ಸಾಮಾಜಿಕವಾಗಿ ಮುಂದುವರೆದವರ ಮಕ್ಕಳಿಗೆ ಗ್ರಾಮೀಣ ಮೀಸಲಾತಿ ಪ್ರಯೋಜನ ಸಿಗುತ್ತದೆ. ಆದರೆ ಅದೇ ನಗರದ ಕೊಳಚೆ ಏರಿಯಾದ ಸರ್ಕಾರಿ ಕನ್ನಡ ಶಾಲೆಗಳಲ್ಲಿ ಕಲಿಯುವ ದುರ್ಬಲರಿಗೆ ಮೀಸಲಾತಿ ಬರೀ ಕನಸಷ್ಟೇ.

ಹೈಟೆಕ್ ರೆಸಿಡೆನ್ಸಿಯಲ್ ಶಾಲೆಗಳಲ್ಲಿ ಅಭ್ಯಾಸ ಮಾಡಿದ ಬಲಾಢ್ಯರೊಂದಿಗೆ ಸರ್ಕಾರಿ ಶಾಲೆಯಲ್ಲಿ ಕಲಿತ ‘ನತದೃಷ್ಟ’ರನ್ನು ಒಂದೇ ಮಾನದಂಡದಿಂದ ಅಳೆಯುವುದಿದೆಯಲ್ಲ, ಅದು ಬರ್ಬರ-ಘೋರ ಅನ್ಯಾಯ! ಖಾಸಗಿ ಶಾಲೆಯಲ್ಲಿ ಕಲಿತವರು ಶೈಕ್ಷಣಿಕ-ಔದ್ಯೋಗಿಕ ಪೈಪೋಟಿಯಲ್ಲಿ ಗೆಲ್ಲುತ್ತಿದ್ದಾರೆ; ಸರ್ಕಾರಿ ಶಾಲೆಯಲ್ಲಿ ಕಲಿತ ನಗರ-ಹಳ್ಳಿಗಳ ಮಕ್ಕಳೂ ಸ್ವಂತ ಪರಿಶ್ರಮ, ಪ್ರತಿಭೆಯಿಂದ ಸಾಧನೆ ಮಾಡಿರಲೂಬಹುದು. ಆದರಿಂದ ಪ್ರಮಾಣ ತೀರ ಕಮ್ಮಿ; ಈ ಹಳ್ಳಿಗರು ಜಾಗತಿಕ ಸ್ಫರ್ಧೆಯಲ್ಲಿ ಎಡವುತ್ತಿದ್ದಾರೆ. ಪ್ರತಿಭೆ ಹೊರಹೊಮ್ಮಲು ಪ್ರೋತ್ಸಾಹವಿಲ್ಲದಾಗಿದೆ. ಸರಿಯಾದ ಸೂರು, ಶಿಕ್ಷಕರಿಲ್ಲದ, ಶಿಕ್ಷಕರಿದ್ದರೂ ಕರ್ತವ್ಯ ಪ್ರಜ್ಞೆ ಇಲ್ಲದವರೇ ಹೆಚ್ಚಿರುವ ಸರ್ಕಾರಿ ಶಾಲೆಗಳ ಗೋಳು ಹೇಳತೀರದು.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಕನ್ನಡ ಕಲಿತರೆ ಬದುಕು ರೂಪಿಸಿಕೊಳ್ಳಲಾಗದೆಂಬ ಹತಾಶೆ ಮಡುಗಟ್ಟಿದೆ. ‘ಕನ್ನಡ ಶಾಲೆ’ಗಳೆಂದೇ ಜನಜನಿತವಾಗಿದ್ದ ನೆಚ್ಚಿನ ಸರ್ಕಾರಿ ಶಾಲೆಗಳೀಗ ಕಣ್ಮರೆಯಾಗುತ್ತಿವೆ. ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳೊಂದಿಗೆ ಪೈಪೋಟಿ ನಡೆಸುವುದಿರಲಿ, ಅಸ್ತಿತ್ವ ಉಳಿಸಿಕೊಳ್ಳಲಿಕ್ಕೆ ಒದ್ದಾಡಬೇಕಾಗಿದೆ. ಖಾಸಗಿ ಶಾಲೆಗಳು ಉತ್ತಮ ಫಲಿತಾಂಶ ಕೊಡುತ್ತಿವೆ. ಉತ್ಕೃಷ್ಟತೆ ಕಾಪಾಡಿಕೊಳ್ಳದಿದ್ದರೆ ನೆಲೆ-ಬೆಲೆ ಕುಸಿಯುವ ಭಯ ಖಾಸಗಿಯವರನ್ನು ನಿರಂತರ ಎಚ್ಚರ ಸ್ಥಿತಿಯಲ್ಲಿ ಇಟ್ಟಿರುತ್ತದೆ.

ಮೀಸಲು ನೀತಿಯಲ್ಲಿನ ಲೋಪ-ದೊಷ ಸರಿಪಡಿಸಿದರಷ್ಟೇ ಕನ್ನಡ ಮಾಧ್ಯಮದತ್ತ ವಿದ್ಯಾರ್ಥಿಗಳನ್ನು ಪಾಲಕರನ್ನು ಸೆಳೆಯಲು ಸಾಧ್ಯ. ಸರ್ಕಾರಿ ಶಾಲೆಗಳಲ್ಲಿ ವಿಶ್ವಾಸಾರ್ಹತೆ, ಲವಲವಿಕೆ, ಪ್ರೋತ್ಸಾಹ ಇಲ್ಲದಿದ್ದರೆ ಎಷ್ಟೆ ಆರ್ಥಿಕ ಸಂಕಷ್ಟವಿದ್ದರೂ ಸಾಲ-ಸೂಲ ಮಾಡಿಯಾದರೂ ಖಾಸಗಿ ಶಿಕ್ಷಣಕ್ಕೆ ಹಾತೊರೆಯುತ್ತಾರೆಂಬ ವಾಸ್ತವ ಸರ್ಕಾರಿ ಪಂಡಿತರಿಗೆ ಅರ್ಥವಾಗಬೇಕಿದೆ.

ನಿರಂತರ ಹತ್ತು ಶೈಕ್ಷಣಿಕ ವರ್ಷಗಳ ಅಧ್ಯಯನ ಬದಲಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಪಾಸು ಮಾಡಿದವರಿಗೆ ಕನಿಷ್ಠ ಶೇಕಡಾ 20ರಷ್ಟು ಸಮನಾಂತರ ಮೀಸಲಾತಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಒದಗಿಸಲು ಚಿಂತಿಸಬೇಕಿದೆ. ಇದರಿಂದ ಗ್ರಾಮೀಣ ಮತ್ತು ನಗರ ಎರಡೂ ಕಡೆಯ ಬಡ ಅಸಾಯಕರಿಗೆ ಅನುಕೂಲವಾಗುತ್ತದೆ. ಭೌಗೋಳಿಕ ನೆಪವೊಡ್ಡಿ ಗ್ರಾಮೀಣ ಮೀಸಲಾತಿಗೆ ಕನ್ನ ಕೊರೆಯುವವರಿಗೆ ಕಡಿವಾಣ ಬೀಳುತ್ತದೆ. ಭಾಷೆ ಮೇಲಿನ ಪ್ರೀತಿಯಿಂದ ಕನ್ನಡ ಮಾಧ್ಯಮದಲ್ಲಿ ಕಲಿಯುವ ಹೊರನಾಡ ಕನ್ನಡಿಗರಿಗೂ ಈ ಮೀಸಲು ಸೌಲಭ್ಯ ಸಿಗುವಂತಾಗಬೇಕು. ರಾಜ್ಯ ಕೋಟಾದಲ್ಲಿ ಸಾಮಾನ್ಯ ಪ್ರವೇಶಪರೀಕ್ಷೆ (ಸಿಇಟಿ) ಬರೆಯಲು ಕನಿಷ್ಠ ಏಳು ವರ್ಷ ಕರ್ನಾಟಕದಲ್ಲಿ ಕಲಿತಿರಬೇಕೆಂಬ ಹುಚ್ಚು ನಿಯಮದಿಂದಲೂ ವಿನಾಯಿತಿ ಹೊರನಾಡ ಕನ್ನಡಿಗರಿಗೆ ಕೊಡಬೇಕು. ಇದೆಲ್ಲ ಈಗಿನ ಅವಾಂತರಕಾರಿ ಕನ್ನಡ ಮಾಧ್ಯಮ ಗ್ರಾಮೀಣ ಮೀಸಲಾತಿ ಬದಲಾವಣೆಯಿಂದ ಮಾತ್ರ ಸಾಧ್ಯ!

  • ಶುದ್ದೋಧನ

ಇದನ್ನೂ ಓದಿ: ಇವು ಮೀಸಲಾತಿಯ ಅಡ್ಡಪರಿಣಾಮಗಳು: ಮೀಸಲಾತಿ ವಿರುದ್ಧ ಮಾತನಾಡಿದ ಕಂಗನಾ ರಾಣಾವತ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...