ಮಂಡ್ಯ: ಭೂಮಿ ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಮತ್ತು ಮಂಡ್ಯ ಜಿಲ್ಲಾ ಶ್ರಮಿಕ ನಗರ ನಿವಾಸಿಗಳ ಒಕ್ಕೂಟದ ನೇತೃತ್ವದಲ್ಲಿ ಮಂಡ್ಯದ ಜಿಲ್ಲಾಧಿಕಾರಿ ಎದುರು ನಡೆಯುತ್ತಿರುವ ‘ಅಹೋರಾತ್ರಿ ಪ್ರತಿಭಟನೆ’ಯು ಎಂಟನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾಡಳಿತದ ಗಮನ ಸೆಳೆದಿದೆ. ಪ್ರತಿಭಟನಾನಿರತರ ಬೇಡಿಕೆಗಳಿಗೆ ಸ್ಪಂದಿಸದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.
ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳ ಎಚ್ಚರಿಕೆ
ಮದ್ದೂರು ತಮಿಳು ಕಾಲೋನಿಯ ಜಾಗದ ವಿಚಾರವಾಗಿ ಕಳೆದ ಏಳು ದಿನಗಳಿಂದ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಭೇಟಿ ಮಾಡಲು (ಭಾನುವಾರ) ಬಂದಿದ್ದ ಜಿಲ್ಲಾಧಿಕಾರಿಗಳು, ಈ ಸಂದರ್ಭದಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳ ಗೈರುಹಾಜರಿ ಕಂಡು ಕೆಂಡಾಮಂಡಲರಾದರು. ಕರ್ತವ್ಯ ನಿರ್ಲಕ್ಷ್ಯ ತೋರಿದ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕಾರ್ಯನಿರ್ವಾಹಕ ಇಂಜಿನಿಯರ್ (EE) ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (AEE) ಅವರನ್ನು ಅವರ ಮನೆಗಳಿಂದಲೇ ತಕ್ಷಣವೇ ಪ್ರತಿಭಟನಾ ಸ್ಥಳಕ್ಕೆ ಕರೆಸಿ, ಸಮಸ್ಯೆಗಳನ್ನು ಪರಿಹರಿಸುವವರೆಗೂ ಜಾಗದಿಂದ ಕದಲಬಾರದೆಂದು ಖಡಕ್ ಆದೇಶ ನೀಡಿದರು.
ಜಿಲ್ಲಾಧಿಕಾರಿಗಳು ಸ್ವತಃ ಪ್ರತಿಭಟನಾಕಾರರ ಜೊತೆ ಸ್ಥಳದಲ್ಲೇ ಕುಳಿತುಕೊಂಡು ನಾಲ್ಕು ಗಂಟೆಗಳ ಕಾಲ ಸಮಸ್ಯೆಗಳ ಬಗ್ಗೆ ಚರ್ಚಿಸಿದರು. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಸಮಸ್ಯೆಯನ್ನು ಪರಿಹರಿಸಿದ ನಂತರವೇ ತಮ್ಮಿಂದ ಅನುಮತಿ ಪಡೆದು ಇಲ್ಲಿಂದ ತೆರಳಬೇಕೆಂದು ತಾಕೀತು ಮಾಡಿದರು. ಹೀಗಾಗಿ, ಸ್ಲಂ ಬೋರ್ಡ್ ಅಧಿಕಾರಿಗಳು ಸಂಜೆಯವರೆಗೆ ಪ್ರತಿಭಟನಾಕಾರರ ಮಧ್ಯೆಯೇ ಕುಳಿತುಕೊಳ್ಳಬೇಕಾಯಿತು. ಈ ಸಂದರ್ಭದಲ್ಲಿ ಹೋರಾಟಗಾರರು, ಅಧಿಕಾರಿಗಳು ಮಾಡಿರುವ ತಪ್ಪುಗಳ ಬಗ್ಗೆ ಪಾಠ ಹೇಳಿದರಲ್ಲದೆ, ಅವರನ್ನು ಒಂದು ರೀತಿಯ ದಿಗ್ಬಂಧನದಲ್ಲಿ ಇರಿಸಿದ್ದರು.
ಅಕ್ರಮ ಒತ್ತುವರಿ ತಡೆಗೆ ಕಾನೂನು ಕ್ರಮ
ಈ ನಡುವೆ, ಕೊಳಗೇರಿ ಅಭಿವೃದ್ಧಿ ಮಂಡಳಿಯ ಆಯುಕ್ತರು, ಮಂಡಳಿ ವಕೀಲರು ಮತ್ತು ಮದ್ದೂರು ತಹಸೀಲ್ದಾರ್ ಜೊತೆ ಮಾತುಕತೆ ನಡೆಸಿದ ಅಧಿಕಾರಿಗಳು, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆಂದು ಪ್ರತಿಭಟನಾಕಾರರಿಗೆ ತಿಳಿಸಿದರು.
ಈ ವಿಷಯಕ್ಕೆ ಸಂಬಂಧಿಸಿದಂತೆ, ಅಕ್ರಮ ಭೂಕಬಳಿಕೆದಾರರು ಮತ್ತು ರಿಯಲ್ ಎಸ್ಟೇಟ್ ಮಾಫಿಯಾಗಳ ವಿರುದ್ಧ ಹೋರಾಟಗಾರರು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಜಿಲ್ಲಾಡಳಿತ ನೀಡಿರುವ 3 ಎಕರೆ ಜಾಗವನ್ನು ರಕ್ಷಿಸಲು ತಕ್ಷಣದ ತಡೆಯಾಜ್ಞೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ, ಮೂರು ಇಲಾಖೆಗಳ ವತಿಯಿಂದ ಮಧ್ಯಂತರ ಅರ್ಜಿಯನ್ನು (IP) ಸಲ್ಲಿಸಲಾಗುತ್ತಿದೆ.
ಪ್ರತಿಭಟನಾಕಾರರ ಪರ ವಕೀಲರು, ಅಧಿಕಾರಿಗಳ ಪರ ವಕೀಲರ ಜೊತೆ ಚರ್ಚಿಸಿ, ಎರಡೂ ಕಡೆಯಿಂದಲೂ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಎಲ್ಲಾ ಕೆಲಸಗಳನ್ನು ಇಂದು ಸೋಮವಾರವೇ ಮಾಡಿ, ಜಿಲ್ಲಾಧಿಕಾರಿಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗುವುದು ಹಾಗೂ ಪ್ರತಿಭಟನಾ ಸ್ಥಳಕ್ಕೂ ಬಂದು ತಿಳಿಸುವುದಾಗಿ ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.
ಈ ಸಂದರ್ಭದಲ್ಲಿ, ಕರ್ನಾಟಕ ಜನಶಕ್ತಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸಿದ್ದರಾಜು, ಮುಖಂಡರಾದ ವೈದುನಾ, ಚಂದ್ರು, ಸೇಲ್ವಿ, ರಾಮು, ಲಕ್ಷ್ಮಿ, ಪ್ರಕಾಶ್ ಸೇರಿದಂತೆ ಮದ್ದೂರು ತಮಿಳು ಕಾಲೋನಿ ನಿವಾಸಿಗಳು ಉಪಸ್ಥಿತರಿದ್ದರು.