ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳು ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಎನ್ನಲಾಗಿದೆ.
ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯ ಗಂಗ್ರಾರ್ ಪ್ರದೇಶದಿಂದ ಬಂದು ಕಂಬಳಿ ಮಾರಾಟ ಮಾಡುವ ಮೂಲಕ ಜೀವನ ಸಾಗಿಸುತ್ತಿರುವ ದಿನೇಶ್ ಸಿಲಾವತ್ ಅವರು ಕೆಲವು ದಿನಗಳಿಂದ ನೀಮುಚ್‌ನ ಮಲ್ಖೇಡಾ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು.
ಬುಧವಾರ ಮಧ್ಯಾಹ್ನ 2.30ರ ಸುಮಾರಿಗೆ ಪತ್ನಿ ರಜನಿ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಅವರನ್ನು ರಿಕ್ಷಾದಲ್ಲಿ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ತನ್ನ ಪತ್ನಿಯನ್ನು ರಾಜಸ್ಥಾನದ ಉದಯಪುರಕ್ಕೆ ಕರೆದುಕೊಂಡು ಹೋಗುವಂತೆ ಹೇಳಿದರು ಎಂದು ಅವರು ವಿವರಿಸಿದರು.
“ನನ್ನ ನಿರಂತರ ವಿನಂತಿಗಳ ಹೊರತಾಗಿಯೂ, ಅವರು ಅಡ್ಮಿಟ್ ಮಾಡಿಕೊಳ್ಳಲು ಮನಸ್ಸು ಮಾಡಲಿಲ್ಲ. ಮಹಿಳಾ ಸಿಬ್ಬಂದಿ ನಮ್ಮನ್ನು ಆಸ್ಪತ್ರೆಯಿಂದ ತೊರೆಯುವಂತೆ ಹೇಳಿದರು. ನಾವು ಸಂಜೆ 4 ಗಂಟೆಯ ಸುಮಾರಿಗೆ ಆಸ್ಪತ್ರೆಯಿಂದ ಹೊರಬಂದಾಗ, ನನ್ನ ಹೆಂಡತಿ ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ” ಎಂದು ಸಿಲಾವತ್ ಹೇಳಿದರು.
“ಕೆಲವು ಒಳ್ಳೆಯ ಹೃದಯದ ಜನರು ನನ್ನ ಹೆಂಡತಿಗೆ ಹೆರಿಗೆ ಆಗುವಾಗ, ಆಕೆಗೆ ಸುತ್ತ ಪರದೆಗಳನ್ನು ಹಿಡಿದು ರಕ್ಷಣೆ ನೀಡಿದರು. ಆಸ್ಪತ್ರೆಯ ಸಿಬ್ಬಂದಿಗೆ ಹೆರಿಗೆಯ ಬಗ್ಗೆ ತಿಳಿದಾಗ, ಅವರು ಮಹಿಳೆ ಮತ್ತು ಆಕೆಯ ನವಜಾತ ಶಿಶುವನ್ನು ಆಸ್ಪತ್ರೆಗೆ ಸೇರಿಸಿದರು” ಎಂದು ಸಿಲಾವತ್ ಹೇಳಿದರು.
ಹೆರಿಗೆ ವಿಭಾಗದ ಮುಖ್ಯಸ್ಥ ಡಾ.ಲಾಡ್ ಧಾಕಡ್ ಮಾತನಾಡಿ, ಅರಿವಳಿಕೆ ತಜ್ಞರು ರಜೆಯಲ್ಲಿರುವುದರಿಂದ ಅಲ್ಲಿ ಸಿಸೇರಿಯನ್ ಹೆರಿಗೆ ಸಾಧ್ಯವಾಗಲಿಲ್ಲ. ಆಸ್ಪತ್ರೆಯಲ್ಲಿ ಸಾಮಾನ್ಯ ಕರ್ತವ್ಯಕ್ಕೂ ಸಾಕಷ್ಟು ವೈದ್ಯರಿಲ್ಲ ಎಂದು ಅವರು ಹೇಳಿದರು.
“ನನ್ನ ಡ್ಯೂಟಿ 2 ಗಂಟೆವರೆಗೆ ಇತ್ತು. ನಂತರ ಮಹಿಳೆಯನ್ನು ಆಸ್ಪತ್ರೆಗೆ ಕರೆತರಲಾಯಿತು. ಸಿಬ್ಬಂದಿ ನನಗೆ ತಿಳಿಸಿದಾಗ ನಾನು ಹೋಗಿ ನೋಡಿದೆ; ಆಕೆಯ ರಕ್ತದೊತ್ತಡ ಹೆಚ್ಚಾಗುತ್ತದೆ. ಕುಟುಂಬ ಸದಸ್ಯರಿಗೆ ಅವಳಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ಹೇಳಿ, ದೊಡ್ಡ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಲಾಯಿತು. ಆದರೆ, ಅಪಾಯವನ್ನು ತಪ್ಪಿಸಲು ನಾವು ಅಂತಹ ಗಂಭೀರ ರೋಗಿಗಳನ್ನು ಸೇರಿಸುವುದಿಲ್ಲ” ಎಂದು ಅವರು ಹೇಳಿದರು.
ಘಟನೆ ಬಗ್ಗೆ ತನಿಖೆಗೆ ಆದೇಶಿಸಿದ್ದು, ಯಾರಾದರೂ ತಪ್ಪಿತಸ್ಥರಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನೀಮಚ್ ಜಿಲ್ಲಾಧಿಕಾರಿ ದಿನೇಶ್ ಜೈನ್ ಹೇಳಿದ್ದಾರೆ.
ಇದನ್ನೂ ಓದಿ; ಬುಲ್ಡೋಝರ್ ಬಳಸಿ ಮನೆ ಧ್ವಂಸ ಪ್ರಕರಣ : ಐದು ಕುಟುಂಬಗಳಿಗೆ 30 ಲಕ್ಷ ರೂ. ಪರಿಹಾರ ನೀಡಿದ ಅಸ್ಸಾಂ ಸರ್ಕಾರ


