ಮಹಾರಾಷ್ಟ್ರದಲ್ಲಿ ನವೆಂಬರ್ 20ರಂದು ನಡೆಯುವ ವಿಧಾನಸಭಾ ಚುನಾವಣೆಯ ಮತದಾನದ ವೇಳೆ ರಾಜ್ಯದ ಸುಮಾರು 12 ಲಕ್ಷಕ್ಕೂ ಹೆಚ್ಚು ಕಬ್ಬು ಕಡಿಯುವ ವಲಸೆ ಕಾರ್ಮಿಕರು ಮತ ಚಲಾವಣೆಯಿಂದ ವಂಚಿತರಗುವ ಸಂಭವವಿದೆ ಎಂದು ವರದಿಗಳು ಉಲ್ಲೇಖಿಸಿದೆ. ಈ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿ ಮಹಾರಾಷ್ಟ್ರದ ಕಬ್ಬು ಕತ್ತರಿಸುವ ಮತ್ತು ಸಾರಿಗೆ ಅಸೋಸಿಯೇಷನ್ ಸಂಸ್ಥೆಯು ಔರಂಗಾಬಾದ್ ಹೈಕೋರ್ಟ್ ಪೀಠವನ್ನು ಸಂಪರ್ಕಿಸಿದೆ. ಮಹಾರಾಷ್ಟ್ರ
ವಲಸೆ ಕಾರ್ಮಿಕರು ಮತ ಚಲಾಯಿಸಲು ಮತ್ತು ಅವರ ಕೆಲಸದ ಸ್ಥಳಗಳಿಂದ ಮರಳಲು ಅನುವು ಮಾಡಿಕೊಡಬೇಕು. ಇಲ್ಲವೇ, ಅಂಚೆ ಮತಪತ್ರಗಳು ಅಥವಾ ಸಾರಿಗೆ ವ್ಯವಸ್ಥೆಯನ್ನು ಒದಗಿಸುವಂತಹ ಸೂಕ್ತ ವ್ಯವಸ್ಥೆಗಳನ್ನು ಮಾಡಲು ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಸಂಘವು ನ್ಯಾಯಾಲಯವನ್ನು ಕೋರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಮರಾಠವಾಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭದಿಂದ ಸುಮಾರು 12 ಲಕ್ಷಕ್ಕೂ ಹೆಚ್ಚು ಕಬ್ಬು ಕಡಿಯುವವರು ಮತ ಚಲಾಯಿಸುವ ಅವಕಾಶವನ್ನು ಕಳೆದುಕೊಳ್ಳಿದ್ದಾರೆ. ನವೆಂಬರ್ 15 ರಿಂದ ಕಬ್ಬು ಕತ್ತರಿಸುವ ಋತು ಪ್ರಾರಂಭವಾಗಲಿದೆ ಎಂದು ಸಂಘವು ಹೇಳಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಪಶ್ಚಿಮ ಮಹಾರಾಷ್ಟ್ರ ಮತ್ತು ಇತರ ಕಬ್ಬು ಬೆಳೆಯುವ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕಿನಿಂದ ವಂಚಿತರಾಗದಂತೆ ನೋಡಿಕೊಳ್ಳಲು ಚುನಾವಣಾ ಆಯೋಗಕ್ಕೆ ನಿರ್ದೇಶನಗಳನ್ನು ಕೋರಿ ಸಂಘವು ಪೀಠವನ್ನು ಸಂಪರ್ಕಿಸಿದೆ.
ಆದಾಗ್ಯೂ, ವೆಸ್ಟ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್, ನವೆಂಬರ್ 20 ರಂದು ಕಾರ್ಮಿಕರು ತಮ್ಮ ಊರುಗಳಿಗೆ ಕಳುಹಿಸಲು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿಕೊಂಡಿದೆ.
ಮರಾಠವಾಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭದಿಂದ 12-15 ಲಕ್ಷ ಜನರು ಪಶ್ಚಿಮ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕಬ್ಬು ಬೆಳೆಯುವ ಪ್ರದೇಶಗಳಿಗೆ ತೆರಳುತ್ತಾರೆ ಎಂದು ತಮ್ಮ ಅರ್ಜಿಯಲ್ಲಿ ಸಂಘದ ಅಧ್ಯಕ್ಷ ಜೀವನ್ ರಾಥೋಡ್ ಹೇಳಿದ್ದಾರೆ.
ಪ್ರಸ್ತುತ ಕಟಾವು ಋತುವಿನಲ್ಲಿ, ಗಮನಾರ್ಹ ಸಂಖ್ಯೆಯ ಕಬ್ಬು ಕತ್ತರಿಸುವವರು ಈಗಾಗಲೇ ತಮ್ಮ ಮನೆಗಳನ್ನು ತೊರೆದು ಕೆಲಸಕ್ಕಾಗಿ ವಲಸೆ ಹೋಗಿದ್ದಾರೆ. ಹೀಗೆ ವಲಸೆ ಹೋಗಿರುವ ಅವರು 2025ರ ಏಪ್ರಿಲ್ ಅಥವಾ ಮೇ ವರೆಗೆ ಹಿಂತಿರುಗುವುದಿಲ್ಲ. ಇಷ್ಟು ದೊಡ್ಡ ವರ್ಗವು ತಮ್ಮ ಮತ ಚಲಾಯಿಸಲುವಲ್ಲಿ ಗೈರುಹಾಜರಾದರೆ, ಅದು ಪ್ರಜಾಪ್ರಭುತ್ವದ ಉದ್ದೇಶಕ್ಕೆ ಸೋಲಾಗುತ್ತದೆ ಎಂದು ರಾಥೋಡ್ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಚುನಾವಣೆಯ ದಿನದಂದು ಈ ಕಾರ್ಮಿಕರಿಗೆ ರಜೆ ಘೋಷಿಸಲು ಮಹಾರಾಷ್ಟ್ರ ರಾಜ್ಯ ಸಹಕಾರಿ ಸಕ್ಕರೆ ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಲು ರಾಜ್ಯದ ಸಕ್ಕರೆ ಆಯುಕ್ತರಿಗೆ ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದಾರೆ.
ದೇಶದ ಅಗ್ರ ಸಕ್ಕರೆ ಉತ್ಪಾದಕ ರಾಜ್ಯವಾಗಿರುವ ಮಹಾರಾಷ್ಟ್ರವು 200ಕ್ಕೂ ಹೆಚ್ಚು ಖಾಸಗಿ ಮತ್ತು ಸಹಕಾರಿ ಕಾರ್ಖಾನೆ ಸಕ್ಕರೆ ಕಾರ್ಖಾನೆಗಳನ್ನು ಹೊಂದಿದೆ. ಕಳೆದ ವರ್ಷ ರಾಜ್ಯವು ಸುಮಾರು 110 ಲಕ್ಷ ಟನ್ ಸಕ್ಕರೆ ಉತ್ಪದಿಸಿದೆ.
ಮಹಾರಾಷ್ಟ್ರದ ಪ್ರಮುಖ ಪಕ್ಷವಾಗಿದ್ದ ಶಿವಸೇನೆ, ಎನ್‌ಸಿಪಿ ಈ ಬಾರಿ ವಿಭಜನೆ ಹೊಂದಿದ್ದರಿಂದ, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ, ಎನ್‌ಸಿಪಿ (ಅಜಿತ್ ಪವಾರ್), ಶಿವಸೇನೆ (ಶಿಂಧೆ), ಎನ್‌ಸಿಪಿ (ಶರದ್ ಪವಾರ್), ಶಿವಸೇನೆ (ಉದ್ಧವ್ ಠಾಕ್ರೆ) ಪಕ್ಷಗಳು ಸೇರಿ 6 ಪ್ರಮುಖ ಪಕ್ಷಗಳು ಹೊಂದಿದೆ. ಹಾಗಾಗಿ ಈ ಬಾರಿ ಅಭ್ಯರ್ಥಿಗಳ ಗೆಲುವಿನ ಅಂತರವು ತೀರಾ ತೆಳುವಾಗಿರುತ್ತದೆ. ಹಾಗಾಗಿಯೆ ಈ ವಲಸೆ ಕಾರ್ಮಿಕರ ಮತಗಳು ಬಹಳ ಪ್ರಮುಖವಾಗಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಡುತ್ತಾರೆ.
ಗಡಿ ಪ್ರದೇಶಗಳಲ್ಲಿ ನಿಯೋಜಿಸಲಾದ ಸೈನಿಕರು ಮತ್ತು ಸರಕಾರಿ ನೌಕರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಕೈಗೊಳ್ಳುವ ಕ್ರಮಗಳಂತೆ, ಕಬ್ಬು ಕಡಿಯುವ ವಲಸೆ ಕಾರ್ಮಿಕರಿಗೆ ಕೂಡಾ ವ್ಯವಸ್ಥೆಗಳನ್ನು ಮಾಡಬಹುದು ಎಂದು ರಾಥೋಡ್ ಅವರು ನ್ಯಾಯಾಲಯವನ್ನು ಕೋರಿದ್ದಾರೆ.
ಇದನ್ನೂ ಓದಿ: ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ


