ಮುಂಬೈ: ವಿಧಾನಸಭೆಯ ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಒಂದು ದಿನದ ಮೊದಲು ಮಹಾರಾಷ್ಟ್ರದಲ್ಲಿ ಮಹಾಯುತಿ ಸರಕಾರದ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭವು ಇಂದು ( ಭಾನುವಾರ) ಸಂಜೆ ನಾಗ್ಪುರದಲ್ಲಿ ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.
ನವೆಂಬರ್ 23 ರಂದು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಅದ್ಭುತ ವಿಜಯವನ್ನು ದಾಖಲಿಸಿದ ಮಹಾಯುತಿ ಮೈತ್ರಿಕೂಟದ ಪಾಲುದಾರರಾದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ನಡುವಿನ ವಾರಗಳ ತೀವ್ರ ಚರ್ಚೆಯ ನಂತರ ಈ ಘೋಷಣೆ ಹೊರಬಿದ್ದಿದೆ.
ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರದೊಳಗೆ ಸಚಿವ ಸ್ಥಾನಕ್ಕಾಗಿ ಪೈಪೋಟಿ ತೀವ್ರಗೊಂಡಿದ್ದು, ಶಿವಸೇನೆ ಮತ್ತು ಬಿಜೆಪಿಯ ಶಾಸಕರು ಹೊಸ ಸಂಪುಟ ಮತ್ತು ಸಚಿವ ಸಂಪುಟದಲ್ಲಿ ಸ್ಥಾನಗಳಿಗಾಗಿ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸರ್ಕಾರದಲ್ಲಿ ಮೊದಲ ಸಚಿವ ಸಂಪುಟದ ವಿಸ್ತರಣೆಯು ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಅವರೊಂದಿಗೆ ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಹಂಚಿಕೊಂಡು ಎರಡು ವಾರಗಳ ನಂತರ ನಡೆಯುತ್ತಿದೆ.
ವಿಸ್ತೃತ ಚರ್ಚೆಗಳು ಮತ್ತು ಹಿರಿಯ ನಾಯಕರ ನಡುವೆ ಹಲವಾರು ಸಭೆಗಳ ನಂತರ, ಪ್ರಮುಖ ಖಾತೆಗಳು ಮತ್ತು ಮೂರು ಸಮ್ಮಿಶ್ರ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯ ವ್ಯವಸ್ಥೆಗೆ ಸಂಬಂಧಿಸಿದಂತೆ ನಿರ್ಧಾರಕ್ಕೆ ಬರಲಾಗಿದೆ. ಹೊಸ ಸಚಿವರ ಸೇರ್ಪಡೆಗೆ ಹಾದಿಯನ್ನು ತೆರವುಗೊಳಿಸಲಾಗಿದೆ.
ಹೆಚ್ಚು ಸ್ಥಾನಗಳನ್ನು ಗೆದ್ದಿರುವ ಬಿಜೆಪಿ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಹೊಸ ಮುಖಗಳನ್ನು ಪರಿಚಯಿಸುವ ನಿರೀಕ್ಷೆಯಿದೆ. ಬಿಜೆಪಿ 20-21 ಸಚಿವ ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ, ನಂತರ ಶಿವಸೇನೆಗೆ 11-12 ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷಕ್ಕೆ 9-10 ಸಚಿವ ಸ್ಥಾನಗಳನ್ನು ನೀಡುವ ಸಾಧ್ಯತೆಯಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆದರೆ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯಲ್ಲೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಶುಕ್ರವಾರ ರಾತ್ರಿ, ಪ್ರಮುಖ ಶಾಸಕರಾದ ಸಂಜಯ್ ಶಿರ್ಸಾತ್, ಯೋಗೇಶ್ ಕದಂ, ವಿಜಯ್ ಶಿವತಾರೆ, ಭರತ್ ಗೋಗವಾಲೆ ಮತ್ತು ಬಾಲಾಜಿ ಕಿಣಿಕರ್ ಶಿಂಧೆ ಅವರನ್ನು ಭೇಟಿಯಾಗಿ ತಮ್ಮ ವಾದವನ್ನು ಮಂಡಿಸಿದರು. ಇಬ್ಬರು ಮಾಜಿ ಮಂತ್ರಿಗಳಾದ ದೀಪಕ್ ಕೇಸರ್ಕರ್ ಮತ್ತು ತಾನಾಜಿ ಸಾವಂತ್ ಅವರು ಐದು ಗಂಟೆಗಳ ಕಾಲ ಕಾಯುತ್ತಿದ್ದರೂ ಶಿಂಧೆ ಭೇಟಿ ಮಾಡಲು ಸಾಧ್ಯವಾಗಿಲ್ಲ.

ಕಳಂಕಿತ ಅಥವಾ ವಿವಾದಾತ್ಮಕ ಶಾಸಕರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸುವುದಿಲ್ಲ ಎಂಬ ತನ್ನ ನಿಲುವಿನಲ್ಲಿ ಬಿಜೆಪಿ ದೃಢವಾಗಿದೆ ಮತ್ತು ಶಿವಸೇನೆಯಿಂದ ಕೇಸರ್ಕರ್, ಸಾವಂತ್, ಅಬ್ದುಲ್ ಸತ್ತಾರ್ ಮತ್ತು ಸಂಜಯ್ ರಾಥೋಡ್ ಸೇರ್ಪಡೆಗೆ ಆಕ್ಷೇಪ ವ್ಯಕ್ತಪಡಿಸಿದೆ. ಕೇಸರ್ಕರ್ ಮತ್ತು ಸಾವಂತ್ ಅವರನ್ನು ಹೊರತುಪಡಿಸುವುದರಿಂದ ರಾಜಕೀಯವಾಗಿ ಶಿಂಧೆ ಅವರಿಗೆ ಹಾನಿಯಾಗುವ ಸಾಧ್ಯತೆಯಿಲ್ಲದಿದ್ದರೂ, ವಿದರ್ಭದ ಕೆಲವು ಭಾಗಗಳಲ್ಲಿ ಗಮನಾರ್ಹ ಅಸ್ತಿತ್ವವನ್ನು ಹೊಂದಿರುವ ಬಂಜಾರ ಸಮುದಾಯದಿಂದ ಬಂದಿರುವ ಸಂಜಯ್ ರಾಥೋಡ್ ಅವರ ಸೇರ್ಪಡೆ ಶಿಂಧೆ ಅವರ ಸಾಮಾಜಿಕ-ರಾಜಕೀಯ ಲೆಕ್ಕಾಚಾರಗಳಿಗೆ ನಿರ್ಣಾಯಕವಾಗಿದೆ.
ಪುಣೆಯಲ್ಲಿ ಯುವತಿಯ ಆತ್ಮಹತ್ಯೆಗೆ ಸಂಬಂಧಿಸಿ ರಾಥೋಡ್ ಅವರ ಹೆಸರು ಕೇಳಿ ಬಂದಿರುವುದರಿಂದ ಅವರನ್ನು ಸೇನೆಯ ಸಚಿವ ಸ್ಥಾನದ ಪಟ್ಟಿಯಿಂದ ಹೊರಗಿಡಬೇಕು ಎಂದು ಪಡ್ನವೀಸ್ ಸೂಚಿಸಿದ್ದಾರೆ ಎನ್ನಲಾಗಿದೆ.
ಅಬ್ದುಲ್ ಸತ್ತಾರ್ ವಿರುದ್ಧ ಸರ್ವಾಧಿಕಾರಿ ವರ್ತನೆಯ ದೂರುಗಳಿವೆ ಎಂದು ಮೂಲಗಳು ಸೂಚಿಸುತ್ತವೆ ಮತ್ತು ಆರೋಗ್ಯ ಸಚಿವರಾಗಿ ತಾನಾಜಿ ಸಾವಂತ್ ಅವರು ವಿವಿಧ ಆರೋಗ್ಯ ಕಾರ್ಯದರ್ಶಿಗಳೊಂದಿಗೆ ಆಗಾಗ್ಗೆ ದುರ್ನಡತೆ ತೋರಿದ್ದರು ಎನ್ನಲಾಗಿದೆ.
30-32 ಸಚಿವರು ಭಾನುವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಶುಕ್ರವಾರ ಪಿಟಿಐಗೆ ತಿಳಿಸಿದ್ದಾರೆ. ಇದರಲ್ಲಿ 20 ಬಿಜೆಪಿ ನಾಯಕರು ಮತ್ತು ಉಳಿದವರು ಶಿವಸೇನೆಯವರು ಸೇರಿದ್ದಾರೆ ಎಂದು ವರದಿಗಳು ಹೇಳುತ್ತವೆ. ಮಹಾರಾಷ್ಟ್ರದ ಸಚಿವ ಸಂಪುಟವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 43 ಸದಸ್ಯರನ್ನು ಹೊಂದಬಹುದಾಗಿದೆ.
ನವೆಂಬರ್ 20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಮಹಾಯುತಿಯು ರಾಜ್ಯದ 288 ಸ್ಥಾನಗಳಲ್ಲಿ 230 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿತು. ಇದರಲ್ಲಿ ಬಿಜೆಪಿ 132 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಶಿಂಧೆ ಅವರ ಶಿವಸೇನೆ 57 ಮತ್ತು ಪವಾರ್ ಅವರ ಎನ್‌ಸಿಪಿ 41 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದವು.
ಸರ್ಕಾರ ರಚನೆಯು ಈಗಾಗಲೇ ಹಲವು ತಿರುವುಗಳನ್ನು ಕಂಡಿದೆ. ಸರ್ಕಾರದ ಭಾಗವಾಗಲು ಇಚ್ಛಿಸದ ಮತ್ತು ಪಕ್ಷ ಸಂಘಟನೆಯತ್ತ ಗಮನ ಹರಿಸಲು ಉತ್ಸುಕರಾಗಿದ್ದ ಶಿಂಧೆ ಅವರನ್ನು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಮನವೊಲಿಸಲಾಗಿದೆ.
ಶಿವಸೇನೆಯು ಹಲವಾರು ಸಂದರ್ಭಗಳಲ್ಲಿ ಶಿಂಧೆಗೆ ಅವರ ಸ್ಥಾನಮಾನಕ್ಕೆ ತಕ್ಕ ಹುದ್ದೆಯಾದ ಗೃಹ ಖಾತೆಯನ್ನು ಕೇಳಿತ್ತು. ಇದಕ್ಕೆ ಬಿಜೆಪಿಯು ಒಪ್ಪಿಗೆ ನೀಡಲಿಲ್ಲ.
ಇದನ್ನೂ ಓದಿ…..ದಕ್ಷಿಣ ಕೊರಿಯಾ ಅಧ್ಯಕ್ಷರ ಪದಚ್ಯುತಿ: ಮಧ್ಯಂತರ ಅಧ್ಯಕ್ಷರಾಗಿ ಪ್ರಧಾನಿ ಹ್ಯಾನ್ ಡುಕ್


