ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ರಾಜೀನಾಮೆ ಘೋಷಿಸಿದ್ದಾರೆ. ಶಿವಸೇನಾ ಬಂಡಾಯ ನಾಯಕ ಏಕನಾಥ್ ಶಿಂಧೆ, ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತವಾಗಿದೆ. ಆದರೆ, ಈಗಾಗಲೇ ಖಾತೆ ಹಂಚಿಕೆ ಕುರಿತು ಒಳಜಗಳಗಳು ಶುರುವಾಗಿದೆ ಎನ್ನಲಾಗಿದೆ.
ಬಿಜೆಪಿ ಬೆಂಬಲದೊಂದಿಗೆ ಸರ್ಕಾರ ರಚನೆಗೂ ಮೊದಲೇ ಬಂಡಾಯಗಾರರಲ್ಲಿ ಸಚಿವ ಸ್ಥಾನ, ಖಾತೆ ಹಂಚಿಕೆಗಳ ಬಗ್ಗೆ ಹಗ್ಗಜಗ್ಗಾಟ ಕೇಳಿ ಬರುತ್ತಿರುವುದಕ್ಕೆ ಸ್ವತಃ ಬಂಡಾಯ ನಾಯಕ ಏಕನಾಥ್ ಶಿಂಧೆ ’ವದಂತಿಗಳನ್ನು ನಂಬಬೇಡಿ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ಅವರ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸುವವರೆಗೆ ಅವರನ್ನು ಹಂಗಾಮಿ ಮುಖ್ಯಮಂತ್ರಿಯಾಗಿ ನೇಮಿಸಿದ್ದಾರೆ.
ಇದನ್ನು ಓದಿ: ಮಹಾರಾಷ್ಟ್ರ:’ತಮ್ಮವರೇ ಬೆನ್ನಿಗೆ ಚೂರಿ ಹಾಕಿದರು’; ಚಿತ್ರವನ್ನು ಟ್ವೀಟ್ ಮಾಡಿದ ಸಂಜಯ್ ರಾವತ್
भाजपसोबत कोणती आणि किती मंत्रीपदे याबाबत अद्याप कोणतीही चर्चा झालेली नाही, लवकरच होईल. तोपर्यंत कृपया मंत्रिपदाच्या याद्या आणि याबाबत पसरलेल्या अफवा यावर विश्वास ठेवू नका.
— Eknath Shinde – एकनाथ शिंदे (@mieknathshinde) June 30, 2022
ಸಚಿವ ಸ್ಥಾನ ಹಂಚಿಕೆಗಳ ಬಗ್ಗೆ ಟ್ವೀಟ್ ಮಾಡಿರುವ ಏಕನಾಥ್ ಶಿಂಧೆ, “ಯಾವ ಯಾವ ಖಾತೆ ಮತ್ತು ಎಷ್ಟು ಸಚಿವ ಸ್ಥಾನಗಳು ಎಂಬ ಬಗ್ಗೆ ಬಿಜೆಪಿಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ, ಅದು ಶೀಘ್ರದಲ್ಲೇ ನಡೆಯಲಿದೆ. ಅಲ್ಲಿಯವರೆಗೂ ಸಚಿವರ ಪಟ್ಟಿ ಮತ್ತು ಆ ಕುರಿತ ವದಂತಿಗಳನ್ನು ನಂಬಬೇಡಿ” ಎಂದು ಅವರು ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ರಾಜ್ಯಪಾಲರ ಬಳಿಗೆ ತೆರಳುವ ಮುನ್ನ ತಮ್ಮ ಬಣದ ಶಾಸಕರನ್ನು ಭೇಟಿಯಾಗಿರುವ ಬಂಡಾಯ ಸೇನಾ ನಾಯಕ ಏಕನಾಥ್ ಶಿಂಧೆ, ಒಟ್ಟಾಗಿ ಹೊಸ ಸರ್ಕಾರ ರಚಿಸುವ ವೇಳೆ ಸಚಿವ ಸ್ಥಾನದ ವಿವರಗಳ ಬಗ್ಗೆ ಬಿಜೆಪಿಯೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.
ಶಿಂಧೆ ಅವರು ಇಂದು ರಾಜ್ಯಪಾಲರನ್ನು ಭೇಟಿಯಾಗಲಿದ್ದು, ಗೋವಾದ ಹೋಟೆಲ್ ತೊರೆದಿದ್ದಾರೆ ಮತ್ತು ಮಹಾರಾಷ್ಟ್ರದ ಬಿಜೆಪಿ ಶಾಸಕ ರವೀಂದ್ರ ಚವಾಣ್ ಅವರೊಂದಿಗೆ ಮುಂಬೈಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಉಳಿದ ಬಂಡಾಯ ಶಾಸಕರು ಗೋವಾದಲ್ಲೇ ಉಳಿದುಕೊಂಡಿದ್ದಾರೆ.
ಬಿಜೆಪಿ ನಾಯಕ ಗಿರೀಶ್ ಮಹಾಜನ್ ಅವರು 170 ಶಾಸಕರ ಬೆಂಬಲವನ್ನು ಹೊಂದಿದ್ದು, ಮುಂದಿನ ಮೂರು ದಿನಗಳಲ್ಲಿ ಸರ್ಕಾರ ರಚಿಸುವುದಾಗಿ ಹೇಳಿದ್ದಾರೆ.
ಹೊಸ ಸರ್ಕಾರ ರಚಿಸುವ ಮೊದಲು ಏಕನಾಥ್ ಶಿಂಧೆ ಆಶೀರ್ವಾದ ಪಡೆಯುವ ನಿರೀಕ್ಷೆಯಿರುವುದರಿಂದ ಸೇನಾ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಸ್ಮಾರಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪತ್ರಕರ್ತ ಜುಬೇರ್ ವಿರುದ್ಧ ದೂರು ನೀಡಿದ್ದ ಟ್ವಿಟರ್ ಅಕೌಂಟ್ ಡಿಲೀಟ್!


