ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಏಪ್ರಿಲ್ 16ರಂದು ಹೊರಡಿಸಲಾದ ಆದೇಶವನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಸಚಿವ ದಾದಾ ಭೂಸೆ ಮಂಗಳವಾರ ತಿಳಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
“ಕೇಂದ್ರವು ರಾಜ್ಯಗಳ ಮೇಲೆ ಹಿಂದಿ ಹೇರುತ್ತಿಲ್ಲ, ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) 2020ರ ನಿಬಂಧನೆಗಳನ್ನು ಮಾತ್ರ ಜಾರಿಗೆ ತರುತ್ತಿದೆ” ಎಂದು ಸಚಿವ ಭೂಸೆ ಸಮರ್ಥಿಸಿಕೊಂಡಿದ್ದಾರೆ.
ತ್ರಿಭಾಷಾ ನೀತಿ ಜಾರಿಯಲ್ಲಿದೆ, ಆದರೆ ವಿದ್ಯಾರ್ಥಿಗಳು ತಮ್ಮ ಮೂರನೇ ಭಾಷೆಯಾಗಿ ಹಿಂದಿಯನ್ನೇ ಕಲಿಯಬೇಕಾಗಿಲ್ಲ ಎಂದು ಸಚಿವ ಭೂಸೆ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ಉಲ್ಲೇಖಿಸಿದೆ.
ತ್ರಿಭಾಷಾ ಸೂತ್ರವು ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಹಿಂದಿ ಮತ್ತು ರಾಜ್ಯದ ಸ್ಥಳೀಯ ಭಾಷೆಯನ್ನು ಕಲಿಸುವುದನ್ನು ಸೂಚಿಸುತ್ತದೆ. ಇದನ್ನು 1968ರಲ್ಲಿ ಮೊದಲ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಪರಿಚಯಿಸಲಾಯಿತು ಮತ್ತು 2020ರಲ್ಲಿ ಪರಿಚಯಿಸಲಾದ ಹೊಸ ನೀತಿಯಲ್ಲಿ ಅದನ್ನು ಉಳಿಸಿಕೊಳ್ಳಲಾಯಿತು.
ಏಪ್ರಿಲ್ 16ರಂದು ಮಹಾರಾಷ್ಟ್ರ ರಾಜ್ಯ ಸರ್ಕಾರವು 2025-26ರ ಶೈಕ್ಷಣಿಕ ವರ್ಷದಿಂದ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ಯೋಜನೆಯನ್ನು ಘೋಷಿಸಿತ್ತು.
ಈ ಯೋಜನೆಯು ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಯ ವಿದ್ಯಾರ್ಥಿಗಳು ಮೂರನೇ ಭಾಷೆಯಾಗಿ ಹಿಂದಿಯನ್ನು ಕಲಿಯುವುದನ್ನು ಕಡ್ಡಾಯಗೊಳಿಸಿತ್ತು.
ಯೋಜನೆಯ ಹಂತ ಹಂತದ ಅನುಷ್ಠಾನವು 2025-26ರಲ್ಲಿ 1 ನೇ ತರಗತಿಯಿಂದ ಪ್ರಾರಂಭವಾಗಿ 2028-29 ರ ವೇಳೆಗೆ ಎಲ್ಲಾ ತರಗತಿಗಳನ್ನು ಒಳಗೊಳ್ಳಬೇಕಿತ್ತು.
ಪಹಲ್ಗಾಮ್ ದಾಳಿ ಖಂಡಿಸಿ ಇಂದು ‘ಕಾಶ್ಮೀರ ಬಂದ್’: ಆಡಳಿತ, ಪ್ರತಿಪಕ್ಷಗಳ ಬೆಂಬಲ


