ಪೆಗಾಸಸ್ ಗೂಢಚರ್ಯೆ ಹಗರಣದ ನಡುವೆಯೇ ಮಹಾರಾಷ್ಟ್ರ ಸರ್ಕಾರ ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಕಚೇರಿಗಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆಗೊಳಿಸುವಂತೆ ಮತ್ತು ಅಧಿಕೃತ ಲ್ಯಾಂಡ್‌ಲೈನ್ ಬಳಕೆ ಮಾಡುವಂತೆ ಮಾರ್ಗಸೂಚಿ ಹೊರಡಿಸಿದೆ.
ಜನರಲ್ ಅಡ್ಮಿನಿಸ್ಟ್ರೇಷನ್ ಡಿಪಾರ್ಟ್‌ಮೆಂಟ್ (General Administration Department ), ಪೆಗಾಸಸ್ ಹಗರಣದ ನಡುವೆ ಲ್ಯಾಂಡ್‌ಲೈನ್‌ಗಳು ಹೆಚ್ಚು ಯೋಗ್ಯವಾಗಿವೆ ಎಂದಿದೆ. ಅಧಿಕೃತ ಕೆಲಸಕ್ಕೆ ಅಗತ್ಯವಿದ್ದರೆ ಮಾತ್ರ ಮೊಬೈಲ್ ಫೋನ್ ಬಳಸಬೇಕು ಎಂದು ರಾಜ್ಯದ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರಿ ನೌಕರರಿಗೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮೊಬೈಲ್‌ನಲ್ಲಿ ಮಾತನಾಡುವಾಗ ಸಭ್ಯ ಭಾಷೆಯ ಬಳಕೆ ಮತ್ತು ಇತರರ ಉಪಸ್ಥಿತಿಯ ಬಗ್ಗೆ ಗಮನಗೊಡುವುದು ಮುಖ್ಯವೆಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. “ಮೊಬೈಲ್ ಫೋನ್‌ನಲ್ಲಿ ಮಾತನಾಡುವಾಗ, ಮೃದು ಧ್ವನಿಯಲ್ಲಿ ಮಾತನಾಡಬೇಕು, ವಾದ ಮಾಡಬಾರದು ಮತ್ತು ಅಸಂವಿಧಾನಿಕ ಭಾಷೆಯನ್ನು ಬಳಸಬಾರದು” ಎಂದು ಮಾರ್ಗಸೂಚಿಯಲ್ಲಿ ತಿಳಿಸಿರುವುದಾಗಿ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಜನರ ದನಿ ಅಡಗಿಸಲು ಪೆಗಾಸಸ್ ಆಯುಧ ಬಳಸಲಾಗುತ್ತಿದೆ : ರಾಹುಲ್ ಗಾಂಧಿ
ಕಚೇರಿ ಬಳಕೆಗಾಗಿ ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಸಮಯ ಮತ್ತು ಭಾಷೆಯತ್ತ ಗಮನಹರಿಸಲು ತಿಳಿಸಲಾಗಿದೆ. ಜೊತೆಗೆ ಸರ್ಕಾರದ ಅಧಿಕೃತ ಕೆಲಸಗಳಿಗೆ ಸಂಬಂಧಿಸಿದಂತೆ ಪಠ್ಯ ಸಂದೇಶಗಳನ್ನು (text messages) ಬಳಸಲು ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ಸೂಚನೆ ನೀಡಲಾಗಿದೆ.
ಅಧಿಕಾರಿಗಳು ಮತ್ತು ಉದ್ಯೋಗಿಗಳು ಮತ್ತೊಂದು ಕರೆಯಲ್ಲಿ ಕಾರ್ಯನಿರತವಾಗಿದ್ದಾಗ ಹಿರಿಯ ಅಧಿಕಾರಿಗಳು ಕರೆ ಮಾಡಿದರೆ ತ್ವರಿತವಾಗಿ ಸ್ಪಂದಿಸುವಂತೆ ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳ ವರ್ಚಸ್ಸಿಗೆ ಕಳಂಕವಾಗದಂತೆ ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ಉದ್ಯೋಗಿಗಳು ಈ ನಿಯಮಾವಳಿಗಳನ್ನು ಅನುಸರಿಸಲು ಬದ್ಧರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಅಧಿಕೃತ ಸಭೆಗಳಲ್ಲಿ ಅಥವಾ ಹಿರಿಯ ಅಧಿಕಾರಿಗಳ ಕೋಣೆಗಳ ಒಳಗೆ ಇರುವಾಗ ಮೊಬೈಲ್ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿಇಟ್ಟಿರಬೇಕು. ಅಂತೆಯೇ, ಇಂಟರ್‌ನೆಟ್ ಬ್ರೌಸ್ ಮಾಡುವುದು, ಸಂದೇಶಗಳನ್ನು ಪರಿಶೀಲಿಸುವುದು ಮತ್ತು ಇಯರ್‌ಫೋನ್‌ಗಳ ಬಳಕೆಯನ್ನು ಇಂತಹ ಸಂದರ್ಭಗಳಲ್ಲಿ ತಪ್ಪಿಸಬೇಕು ಎಂದು ಸರ್ಕಾರ ಸಲಹೆ ನೀಡಿದೆ.
ಇದನ್ನೂ ಓದಿ: ಪೆಗಾಸಸ್ ಕಣ್ಗಾವಲು ಪಟ್ಟಿಯಲ್ಲಿ ಮಾಜಿ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಮತ್ತು ಅನಿಲ್ ಅಂಬಾನಿ!


