ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿದ ಬೆನ್ನಲ್ಲೇ, ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಇಂದು ತಮ್ಮದೇ ಪಕ್ಷದ 50 ಶಾಸಕರು ಮತ್ತು ಸ್ವತಂತ್ರರ ಬೆಂಬಲ ನನಗಿದೆ. ನಾನು ಯಾವುದೇ ವಿಶ್ವಾಸಮತ ಯಾಚನೆಯಲ್ಲಿಯೂ ಗೆಲ್ಲುತ್ತೇನೆ ಎಂದು ಘೋಷಿಸಿದ್ದಾರೆ.
ಬುಧವಾರ ಗುವಾಹಟಿಯ ಕಾಮಾಕ್ಯಾ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಏಕನಾಥ್ ಶಿಂಧೆ, “ನಮ್ಮೊಂದಿಗೆ 50 ಶಾಸಕರಿದ್ದಾರೆ, ಮೂರನೇ ಎರಡರಷ್ಟು ಶಾಸಕರಿದ್ದಾರೆ. ನಾವು ಬಹುಮತ ಸಾಬೀತು ಬಗ್ಗೆ ಚಿಂತಿಸುವುದಿಲ್ಲ. ನಾವು ಅದರಲ್ಲಿ ಉತ್ತೀರ್ಣರಾಗುತ್ತೇವೆ ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರಕ್ಕೆ ನಾಳೆ (ಜೂನ್ 30) ವಿಧಾನಸಭೆಯಲ್ಲಿ ಬಹುಮತವನ್ನು ಸಾಬೀತುಪಡಿಸುವಂತೆ ಸೂಚಿಸಿದ್ದರು. ಆದರೆ, ಆದೇಶವನ್ನು ಪ್ರಶ್ನಿಸಿ ಉದ್ಧವ್ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದೆ.
ಇದನ್ನೂ ಓದಿ: ತಾಲಿಬಾನೀಕರಣ ಸಹಿಸುವುದಿಲ್ಲ: ಉದಯ್‌ಪುರ್ ಘಟನೆಗೆ ರಾಜಕಾರಣಿಗಳು, ಧಾರ್ಮಿಕ ಮುಖಂಡರ ತೀವ್ರ ವಿರೋಧ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಮತ್ತು ಬಹುಮತವು ಅತ್ಯಂತ ಮುಖ್ಯವಾದ ಕಾರಣ “ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ”. ಯಾರೂ ದೇಶದ ಸಂವಿಧಾನ ಮತ್ತು ಆಡಳಿತವನ್ನು ಮೀರಿ ಹೋಗಬೇಕಾಗಿಲ್ಲ, ಇದು ಮಹಾರಾಷ್ಟ್ರದ ಪ್ರಗತಿ ಮತ್ತು ಹಿಂದುತ್ವದ ಪ್ರಗತಿಗಾಗಿ, ಬಹುಮತವು ನಮ್ಮೊಂದಿಗಿದೆ” ಎಂದು ಬಂಡಾಯ ನಾಯಕ ಶಿಂಧೆ ಹೇಳಿದ್ದಾರೆ.
ಉದ್ಧವ್ ಠಾಕ್ರೆ ನೇತೃತ್ವದ ಅಸ್ತಿತ್ವದಲ್ಲಿರುವ ಸರ್ಕಾರಕ್ಕೆ ಪರ್ಯಾಯ ಸರ್ಕಾರವನ್ನು ರಚಿಸಲು ವಿರೋಧ ಪಕ್ಷ ಬಿಜೆಪಿಯನ್ನು ಬೆಂಬಲಿಸುತ್ತಾರೆಯೇ ಎಂದು ಕೇಳಿದಾಗ “ನಾಳೆ ಬಹುಮತ ಸಾಬೀತಿನ ಪರೀಕ್ಷೆಯ ನಂತರ, ನಮ್ಮ ಮುಂದಿನ ಕ್ರಮವನ್ನು ನಿರ್ಧರಿಸುತ್ತೇವೆ” ಎಂದು ಹೇಳಿದ್ದಾರೆ.
ಗುರುವಾರ ಬೆಳಗ್ಗೆ 11 ಗಂಟೆಗೆ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ಎಂವಿಎ ಸರ್ಕಾರಕ್ಕೆ ಸೂಚಿಸಿರುವ ನಿರ್ಧಾರವನ್ನು ಗಮನದಲ್ಲಿಟ್ಟುಕೊಂಡು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಹಿರಿಯ ವಕೀಲ ಎ.ಎಂ. ಸಿಂಘ್ವಿ ಅವರ ಮನವಿಯನ್ನು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆ.ಬಿ ಪಾರ್ದಿವಾಲಾ ಅವರ ರಜಾಕಾಲದ ಪೀಠ ಪರಿಗಣಿಸಿದೆ. ಬುಧವಾರ ಸಂಜೆ 5 ಗಂಟೆಗೆ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.
ಇದನ್ನೂ ಓದಿ: ಬಹುಮತ ಸಾಬೀತಿಗೆ ರಾಜ್ಯಪಾಲರ ಸೂಚನೆ: ಸುಪ್ರೀಂ ಮೆಟ್ಟಿಲೇರಿದ ಸಿಎಂ ಉದ್ಧವ್, ಸಂಜೆ 5ಕ್ಕೆ ವಿಚಾರಣೆ


