ಸುಮಾರು 1,400 ಬಳಕೆದಾರರ ವಾಟ್ಸಾಪ್ ಹ್ಯಾಕ್ ಮಾಡಿದಕ್ಕಾಗಿ ವಾಟ್ಸಾಪ್ ಸಂಸ್ಥೆಗೆ 167 ಮಿಲಿಯನ್ ಡಾಲರ್ ಪಾವತಿಸುವಂತೆ ಇಸ್ರೇಲ್‌ನ ಪೆಗಾಸಸ್ ಸ್ಪೈವೇರ್ ತಯಾರಿಕ ಸಂಸ್ಥೆ ಎನ್‌ಎಸ್‌ಒ ಗ್ರೂಪ್‌ಗೆ ಅಮೆರಿಕದ ಜ್ಯೂರಿ ಗ್ರೂಪ್ (ಕೋರ್ಟ್) ಆದೇಶಿಸಿದೆ ಎಂದು ವರದಿಯಾಗಿದೆ.
ಕಾನೂನು ಪ್ರಕರಣವೊಂದರಲ್ಲಿ ಸಾಕ್ಷ್ಯಗಳನ್ನು ಆಲಿಸಲು ಮತ್ತು ನ್ಯಾಯಾಲಯದಲ್ಲಿ ಪ್ರಸ್ತುತಪಡಿಸಲಾದ ಸಂಗತಿಗಳ ಆಧಾರದ ಮೇಲೆ ತೀರ್ಪು ನೀಡಲು ಆಯ್ಕೆಯಾದ ನಾಗರಿಕರ ಗುಂಪನ್ನು ಅಮೆರಿಕದ ಜ್ಯೂರಿ ಅಥವಾ ತೀರ್ಪುಗಾರರು ಎನ್ನಲಾಗುತ್ತದೆ.
ಡಿಸೆಂಬರ್ 2024 ರಲ್ಲಿ, ಅಮೆರಿಕದ ಕ್ಯಾಲಿಫೋರ್ನಿಯಾ ಜಿಲ್ಲಾ ನ್ಯಾಯಾಲಯವು, ಎನ್‌ಎಸ್‌ಒ ಗ್ರೂಪ್ ತನ್ನ ಜನಪ್ರಿಯ ಪೆಗಾಸಸ್ ಸ್ಪೈವೇರ್ ಅನ್ನು ಕ್ಲೈಂಟ್‌ಗಳಿಗೆ ಮಾರಾಟ ಮಾಡುವ ಮೂಲಕ ಯುಎಸ್ ಸೈಬರ್ ಭದ್ರತಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ದೋಷಿ ತೀರ್ಪು ನೀಡಿತ್ತು.
ತೀರ್ಪಿನ ನಂತರ, ಮಾರ್ಚ್ 2025ರಲ್ಲಿ ಎನ್‌ಎಸ್ ಗ್ರೂಪ್‌ನಿಂದ ಪರಿಹಾರ ಕೋರಿ ಮೆಟಾ ಅರ್ಜಿ ಸಲ್ಲಿಸಿತ್ತು. ಆ ಪರಿಹಾರದ ಅಥವಾ ದಂಡದ ಮೊತ್ತವನ್ನು ಮಂಗಳವಾರ (ಮೇ.6) ನಿರ್ಧರಿಸಲಾಗಿದೆ.
ಎನ್‌ಎಸ್‌ಒ ಗ್ರೂಪ್ ವಿರುದ್ಧ ಮೆಟಾ ನಡೆಸಿದ ಕಾನೂನು ಹೋರಾಟದ ಫಲಿತಾಂಶವು ಭಾರತಕ್ಕೆ ಸಂಭಾವ್ಯ ಪರಿಣಾಮಗಳನ್ನು ಬೀರಬಹುದು. ಏಕೆಂದರೆ 2019ರಲ್ಲಿ ಪೆಗಾಸಸ್ ಸ್ಪೈವೇರ್ ಬಳಸಿ ವಾಟ್ಸಾಪ್ ಹ್ಯಾಕಿಂಗ್‌ಗೆ ಅತಿ ಹೆಚ್ಚು ಗುರಿಯಾದ ಎರಡನೇ ದೇಶ ಭಾರತ, ಮೊದಲ ಸ್ಥಾನದಲ್ಲಿ ಮೆಕ್ಸಿಕೋ ಇತ್ತು.
2019ರಲ್ಲಿ 51 ದೇಶಗಳ ಒಟ್ಟು 1,223 ವ್ಯಕ್ತಿಗಳನ್ನು ಗುರಿಯಾಗಿಸಿಕೊಂಡು ಪೆಗಾಸಸ್ ಸ್ಪೈವೇರ್ ದಾಳಿ ನಡೆಸಲಾಗಿದೆ. ಈ ಪೈಕಿ 100ಕ್ಕೂ ಹೆಚ್ಚು ಭಾರತೀಯರು ಇದ್ದಾರೆ ಎಂದು ನ್ಯಾಯಾಲಯದ ದಾಖಲೆಗಳು ಬಹಿರಂಗಪಡಿಸಿವೆ. ಭಾರತದಲ್ಲಿ ಪತ್ರಕರ್ತರು, ವಕೀಲರು, ರಾಜಕಾರಣಿಗಳು ಮತ್ತು ಮಾನವ ಹಕ್ಕುಗಳ ಹೋರಾಟಗಾರರು ಸೇರಿದಂತೆ ಹಲವರನ್ನು ಗುರಿಯಾಗಿಸಿಕೊಂಡು ಪೆಗಾಸಸ್ ದಾಳಿ ಮಾಡಲಾಗಿದೆ ಎಂಬ ಆರೋಪದವಿದೆ. ಈ ಸಂಬಂಧ 2021ರಲ್ಲಿ ಸಲ್ಲಿಸಲಾದ ಅರ್ಜಿಗಳ ಗುಂಪನ್ನು ಸುಪ್ರೀಂ ಕೋರ್ಟ್ ಪೀಠ ವಿಚಾರಣೆ ನಡೆಸುತ್ತಿದೆ.
ಪೆಗಾಸಸ್ ಸ್ಪೈವೇರ್ ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ತಯಾರಿಸಿದ ಒಂದು ಕಣ್ಗಾವಲು ಸಾಫ್ಟ್‌ವೇರ್ ಆಗಿದೆ. ಇದನ್ನು ಮೊಬೈಲ್ ಫೋನ್‌ಗಳಲ್ಲಿ ದೂರದಿಂದಲೇ ಸ್ಥಾಪಿಸಬಹುದು. ಇತರ ವಿಷಯಗಳ ಜೊತೆಗೆ ಜನರ ಮೈಕ್ರೊಫೋನ್‌ಗಳು ಮತ್ತು ಕ್ಯಾಮರಾಗಳಿಗೆ ಇದರ ಮೂಲಕ ಪ್ರವೇಶಿಸಬಹುದು.
ಪೆಗಾಸಸ್ ಸ್ಪೈವೇರ್ ಮೂಲಕ ಪತ್ರಕರ್ತರು, ಹೋರಾಟಗಾರರು ಮತ್ತು ರಾಜಕೀಯ ವಿರೋಧಿಗಳ ಮೇಲೆ ಕಣ್ಗಾವಲು ಇಡಲು ಸರ್ವಾಧಿಕಾರಿ ಆಡಳಿತಗಳು ಸೇರಿದಂತೆ ಸರ್ಕಾರಗಳಿಗೆ ಎನ್‌ಎಸ್‌ಒ ಗ್ರೂಪ್ ಸಹಾಯ ಮಾಡಿದ ಆರೋಪವಿದೆ.
ವಾಟ್ಸಾಪ್‌ಗೆ ದಂಡ ಪಾವತಿಸುವಂತೆ ಎನ್‌ಎಸ್‌ಒಗೆ ಆದೇಶಿಸಿರುವುದು ‘ಅಕ್ರಮ ಸ್ಪೈವೇರ್ ಅಭಿವೃದ್ಧಿ ಮತ್ತು ಬಳಕೆಯ ವಿರುದ್ಧದ ಮೊದಲ ಗೆಲುವು’ ಎಂದು ವಾಟ್ಸಾಪ್ ಮಾತೃಸಂಸ್ಥೆ ಮೆಟಾ ಹೇಳಿದೆ.
ತೀರ್ಪಿನ ವಿವರಗಳನ್ನು ಪರಿಶೀಲಿಸಿ, ಮೇಲ್ಮನವಿ ಸೇರಿದಂತೆ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎನ್‌ಎಸ್‌ಒ ಗ್ರೂಪ್ ಹೇಳಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಎನ್‌ಎಸ್‌ಒ ಗ್ರೂಪ್ ವಿರುದ್ದ ವಾಟ್ಸಾಪ್ ರೀತಿಯ ಸ್ಮಾರ್ಟ್ ಫೋನ್ ಆಪ್ಲಿಕೇಶನ್‌ಗಳ ಮೂಲಕ ಜನರ ಮೇಲೆ ಕಣ್ಗಾವಲು ಇಡಲು ಸ್ಪೈವೇರ್ ದುರ್ಬಳಕೆ ಆರೋಪ ಮಾಡಿಕೊಂಡ ಭಾರತ ಸೇರಿದಂತೆ ಹಲವೆಡೆ ಕೇಳಿ ಬಂದಿದೆ. ಆದರೆ, ಮೊದಲ ಬಾರಿಗೆ ಎನ್‌ಎಸ್‌ಒ ಗ್ರೂಪ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ.
ಗಂಭೀರ ಅಪರಾಧಿಗಳು ಮತ್ತು ಭಯೋತ್ಪಾದಕರ ವಿರುದ್ಧ ಮಾತ್ರ ಸ್ಪೈವೇರ್ ಬಳಸಲು ಉದ್ದೇಶಿಸಲಾಗಿದೆ ಎಂದು ಎನ್‌ಎಸ್‌ಒ ಗ್ರೂಪ್ ಹೇಳುತ್ತದೆ. ಆದರೆ, ಕೆಲವು ದೇಶಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸುವ ಯಾರನ್ನಾದರೂ ಗುರಿಯಾಗಿಸಲು ಈ ತಂತ್ರಜ್ಞಾನವನ್ನು ಬಳಸುತ್ತಿವೆ ಎಂಬ ಆರೋಪಗಳಿವೆ.
2021ರಲ್ಲಿ ಹ್ಯಾಕಿಂಗ್‌ಗೆ ಬಲಿಯಾದ ಶಂಕಿತರ 50,000 ಫೋನ್ ನಂಬರ್‌ಗಳ ಪಟ್ಟಿ ಪ್ರಮುಖ ಮಾಧ್ಯಮಗಳಿಗೆ ಸೋರಿಕೆಯಾದಾಗ ಪೆಗಾಸಸ್ ಹಗರಣ ಬಯಲಿಗೆ ಬಂತು.
ಹ್ಯಾಂಕ್‌ಗೆ ಬಲಿಯಾದವರ ಪಟ್ಟಿಯಲ್ಲಿ ರಾಜಕಾರಣಿಗಳು, ರಾಷ್ಟ್ರಗಳ ಮುಖ್ಯಸ್ಥರು, ವ್ಯವಹಾರ ಕಾರ್ಯನಿರ್ವಾಹಕರು, ಹೋರಾಟಗಾರರು, ಹಲವಾರು ಅರಬ್ ರಾಜಮನೆತನದ ಸದಸ್ಯರು ಹಾಗೂ 180ಕ್ಕೂ ಹೆಚ್ಚು ಪತ್ರಕರ್ತರ ಫೋನ್ ಸಂಖ್ಯೆಗಳು ಇರುವುದನ್ನು ಜಾಗತಿಕ ಮಾಧ್ಯಮಗಳು ಗುರುತಿಸಿವೆ.
ಕೆನಡಾದ ಡೌನಿಂಗ್ ಸ್ಟ್ರೀಟ್ ಮತ್ತು ವಿದೇಶಾಂಗ ಕಚೇರಿ ಅಧಿಕಾರಿಗಳಿಗೆ ಸೇರಿದ ಸಾಧನಗಳಿಗೆ ಪೆಗಾಸಸ್ ಸ್ಪೈವೇರ್ ಸೋಂಕು ತಗುಲಿದೆ ಎಂದು ಕೆನಡಾದ ತನಿಖಾ ಗುಂಪು ದಿ ಸಿಟಿಜನ್ ಲ್ಯಾಬ್ ಶಂಕೆ ವ್ಯಕ್ತಪಡಿಸಿದೆ.
ಹ್ಯಾಕ್ ಮಾಡಲಾಗಿದೆ ಎಂದು ನಂಬಲಾದ ಇತರ ಪ್ರಮುಖ ವ್ಯಕ್ತಿಗಳಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಮತ್ತು 2018 ರ ಅಕ್ಟೋಬರ್‌ನಲ್ಲಿ ಇಸ್ತಾಂಬುಲ್‌ನ ಸೌದಿ ಕಾನ್ಸುಲೇಟ್‌ನಲ್ಲಿ ಹತ್ಯೆಗೀಡಾದ ಸೌದಿ ಅರೇಬಿಯಾ ಸರ್ಕಾರದ ವಿಮರ್ಶಕ ಜಮಾಲ್ ಖಶೋಗ್ಗಿ ಮತ್ತು ಅವರ ಸಂಬಂಧಿಗಳು ಸೇರಿದ್ದಾರೆ.
ಎನ್‌ಎಸ್‌ಒ ಗ್ರೂಪ್ ಮೆಟಾಗೆ 444,000 ಡಾಲರ್ (37 ಲಕ್ಷ ರೂ) ದಂಡ ಪಾವತಿಸಲೂ ಆದೇಶಿಸಲಾಗಿದೆ. ಎನ್‌ಎಸ್‌ಒ ಗ್ರೂಪ್ ಮತ್ತು ಮೆಟಾ ನಡುವಿನ 6 ವರ್ಷಗಳ ಕಾನೂನು ಸಮರದ ಬಳಿಕ ಈ ದಂಡ ಪಾವತಿಸಲು ಸೂಚಿಸಲಾಗಿದೆ.
ಅಮೆರಿಕನ್ ಕಂಪನಿಗಳನ್ನು ಗುರಿಯಾಗಿಸಿಕೊಂಡು ಎನ್‌ಎಸ್‌ಒ ಗ್ರೂಪ್ ನಡೆಸುತ್ತಿರುವ ಕಾನೂನುಬಾಹಿರ ಕೃತ್ಯಗಳಿಗೆ ಸಂಬಂಧಿಸಿದಂತೆ ದಂಡ ಪಾವತಿಸಲು ಆದೇಶಿಸಿ ಜ್ಯೂರಿ ನಿರ್ಧಾರವು ಅತ್ಯಂತ ಮಹತ್ವದ್ದು ಎಂದು ಮೆಟಾ ಹೇಳಿಕೊಂಡಿದೆ.
“ಗಂಭೀರ ಅಪರಾಧ ಮತ್ತು ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ನಮ್ಮ ತಂತ್ರಜ್ಞಾನವು ನಿರ್ಣಾಯಕ ಪಾತ್ರ ವಹಿಸುತ್ತದೆ. ಅಧಿಕೃತ ಸರ್ಕಾರಿ ಸಂಸ್ಥೆಗಳು ಜವಾಬ್ದಾರಿಯುತವಾಗಿ ನಮ್ಮ ತಂತ್ರಜ್ಞಾನವನ್ನು ಬಳಸುತ್ತಿವೆ ಎಂದು ನಾವು ದೃಢವಾಗಿ ನಂಬುತ್ತೇವೆ” ಎಂದು ಎನ್‌ಎಸ್‌ಒ ಗ್ರೂಪ್ ಹೇಳಿಕೆಯಲ್ಲಿ ತಿಳಿಸಿದೆ.
ವಾಟ್ಸಾಪ್‌ಗೆ ಸಂಬಂಧಿಸಿದೆ ಎನ್‌ಎಸ್‌ಒ ವಿರುದ್ದ ಜ್ಯೂರಿ ನೀಡಿರುವ ತೀರ್ಪು ಪೆಗಾಸಸ್ ಸ್ಪೈವೇರ್‌ಗೆ ಗುರಿಯಾಗಿರುವ ಇತರರಿಗೆ ಕಾನೂನು ಸಮರ ನಡೆಸಲು ಬೆಂಬಲ ನೀಡುತ್ತದೆ ಎಂದು ವರದಿಗಳು ಅಭಿಪ್ರಾಯಪಟ್ಟಿವೆ.
ಭಯೋತ್ಪಾದಕರ ವಿರುದ್ಧ ಸ್ಪೈವೇರ್ ಬಳಸುತ್ತಿದ್ದರೆ ತಪ್ಪೇನು? ಸುಪ್ರೀಂ ಕೋರ್ಟ್
“ದೇಶವು ಭಯೋತ್ಪಾದಕರ ವಿರುದ್ಧ ಸ್ಪೈವೇರ್ ಬಳಸುತ್ತಿದ್ದರೆ ತಪ್ಪೇನು? ಸ್ಪೈವೇರ್ ಹೊಂದಿರುವುದು ತಪ್ಪಲ್ಲ, ಅದನ್ನು ಯಾರ ವಿರುದ್ಧ ಬಳಸಾಗುತ್ತಿದೆ ಎಂಬುದು ಪ್ರಶ್ನೆ. ರಾಷ್ಟ್ರದ ಭದ್ರತೆಯೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನಾಗರಿಕರ ಗೌಪ್ಯತೆಯ ಹಕ್ಕನ್ನುಸಂವಿಧಾನದ ಅಡಿಯಲ್ಲಿ ರಕ್ಷಿಸಲಾಗುತ್ತದೆ” ಎಂದು ಭಾರತದ ಸುಪ್ರೀಂ ಕೋರ್ಟ್ ಏಪ್ರಿಲ್ 29ರಂದು ಹೇಳಿತ್ತು.
ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸಂಬಂಧಿಸಿದ ಯಾವುದೇ ವರದಿಯನ್ನು ಸಾರ್ವಜನಿಕಗೊಳಿಸುವುದಿಲ್ಲ ಎಂದಿದ್ದ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಎನ್. ಕೋಟಿಶ್ವರ್ ಸಿಂಗ್ ಅವರ ಪೀಠ, “ಗೌಪ್ಯತೆ ಉಲ್ಲಂಘನೆಯ ವೈಯಕ್ತಿಕ ಆತಂಕಗಳನ್ನು ಪರಿಹರಿಸಬಹುದು. ಆದರೆ,ತಾಂತ್ರಿಕ ಸಮಿತಿಯ ವರದಿಯ ಕುರಿತು ಬೀದಿಯಲ್ಲಿ ಚರ್ಚಿಸಲು ಅದು ಯಾವುದೇ ದಾಖಲೆಯಲ್ಲ” ಎಂದಿತ್ತು.
“ವ್ಯಕ್ತಿಗಳಿಗೆ ಸಂಬಂಧಿಸಿದ ಮಾಹಿತಿ ಬೇಕಿದ್ದರೆ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿ. ಇತ್ತೀಚಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಸನ್ನಿವೇಶದಲ್ಲಿ, ನಾವು ಸ್ವಲ್ಪ ಜವಾಬ್ದಾರಿಯುತವಾಗಿರೋಣ… ವರದಿಯನ್ನು ಎಷ್ಟರ ಮಟ್ಟಿಗೆ ಹಂಚಿಕೊಳ್ಳಬಹುದು ಎಂಬುದನ್ನು ನಾವು ನೋಡುತ್ತೇವೆ” ಎಂದು ಪೀಠ ಹೇಳಿತ್ತು.


