ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರಿದ್ದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಇತರ ಬಿಜೆಪಿ ನಾಯಕರು ಚುನಾವಣಾ ಪ್ರಚಾರಕ್ಕಾಗಿ ಬಂಗಾಳ ಪ್ರವಾಸ ಕೈಗೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದು, ಅವರನ್ನು “ದುರ್ಯೋಧನ ಮತ್ತು ದುಶ್ಯಾಶನ” ಎಂದು ಉಲ್ಲೇಖಿಸಿದ್ದಾರೆ. ತನ್ನ ಮಾಜಿ ಆಪ್ತ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಸುವೆಂದು ಅಧಿಕಾರಿಯನ್ನು “ಮಿರ್ ಜಾಫರ್” ಎಂದು ಕರೆದಿದ್ದಾರೆ.
“ಬಿಜೆಪಿಗೆ ವಿದಾಯ ಹೇಳಿ, ನಮಗೆ ಬಿಜೆಪಿ ಬೇಡ. ಮೋದಿಯವರ ಮುಖವನ್ನು ನೋಡಲು ನಾವು ಬಯಸುವುದಿಲ್ಲ. ಗಲಭೆಗಳು, ಲೂಟಿಕೋರರು, ದುರ್ಯೋಧನ, ದುಶ್ಯಾಶನ… ಮಿರ್ ಜಾಫರ್ ನಮಗೆ ಬೇಡ. ಮಾರ್ಚ್ 27 ರಂದು ‘ಖೇಲಾ ಹೊಬೆ’ (ಆಟ ಚಾಲೂ), ಬಿಜೆಪಿಯನ್ನು ಬೌಲ್ಡ್ ಮಾಡಬೇಕಾಗಿದೆ” ಎಂದು ಮಿಡ್ನಾಪೊರ್‌ನಲ್ಲಿ ಜರುಗಿದ ರ್‍ಯಾಲಿಯಲ್ಲಿ ಮುಖ್ಯಮಂತ್ರಿ ಹೇಳಿದ್ದಾರೆ.
ಇದನ್ನೂ ಓದಿ: ‘ಕೋರ್ಟುಗಳು ಮಹಿಳೆಯರ ಕುರಿತ ರೂಢಿಗತ ಅಪವಾದ ಪರಿಗಣಿಸಬಾರದು’: ಸುಪ್ರೀಂ ಕೋರ್ಟ್
ತಾನು ಪೂರ್ಣವಾಗಿ ನಂಬಿದ್ದ ಸುವೆಂದು ತನಗೆ ದ್ರೋಹ ಎಸಗಿದರು ಎಂದು ಮಮತಾ ಬ್ಯಾನರ್ಜಿ ಡಿಸೆಂಬರ್‌ನಲ್ಲಿ ಬಿಜೆಪಿಗೆ ಸೇರ್ಪಡೆಯಾದ ತನ್ನ ಮಾಜಿ ಆಪ್ತ ಸುವೆದು ಅಧಿಕಾರಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗುರುವಾರದಂದು ಪುರುಲಿಯಾದಲ್ಲಿ ಪ್ರಚಾರ ಮಾಡಿದ್ದ ಪ್ರಧಾನಿ ವಿರುದ್ದ ದಾಳಿ ಮಾಡಿದ ಮಮತಾ ಬ್ಯಾನರ್ಜಿ, ತನ್ನ ಘೋಷಣೆಯಾದ “ಖೇಲಾ ಹೊಬೆ” ಯನ್ನು ತನ್ನ ವಿರುದ್ದವೆ ಬಳಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನಿಯನ್ನು ಕಾಪಿ ಕ್ಯಾಟ್ ಎಂದು ಕರೆದ್ದಾರೆ.
“ಮೋದಿ ಟೆಲಿಪ್ರೊಂಪ್ಟರ್ ಬಳಸಿ ‘ಕೆಮನ್ ಆಚೊ ಬಾಂಗ್ಲಾ’ (ಹೇಗಿದ್ದಿ ಬಂಗಾಳ) ಎಂದು ಹೇಳುತ್ತಾರೆ, ನಾವು ‘ಬಾಂಗ್ಲಾ ಭಾಲೋ ಆಚೆ’ (ಬಂಗಾಳ ತುಂಬಾ ಚೆನ್ನಾಗಿದೆ) ಎಂದು ಹೇಳುತ್ತೇವೆ. ‘ಪೊರಿಬೋರ್ತನ್’ ನನ್ನ ಘೋಷಣೆಯಾಗಿದೆ. ಕಾಪಿಕ್ಯಾಟ್, ನನ್ನ ಘೋಷಣೆಯನ್ನು ನೀವು ಏಕೆ ಕದಿಯುತ್ತೀರಿ? ಎಂದು ಅವರು ಪ್ರಧಾನಿಯ ವಿರುದ್ದ ಹರಿಹಾಯ್ದಿದ್ದಾರೆ.
ಮಾರ್ಚ್ 27 ರಿಂದ ಪಶ್ಚಿಮ ಬಂಗಾಳದಲ್ಲಿ ಎಂಟು ಸುತ್ತಿನ ಮತದಾನ ಪ್ರಾರಂಭವಾಗಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
ಇದನ್ನೂ ಓದಿ: ನಾಳೆ ಶಿವಮೊಗ್ಗದಲ್ಲಿ ದಕ್ಷಿಣ ಭಾರತದ ಮೊದಲ ಐತಿಹಾಸಿಕ ರೈತ ಮಹಾಪಂಚಾಯತ್; ಸಿದ್ದತೆ ಹೇಗಿದೆ?



?